ʼನನಗೆ ಕೋವಿಡ್‌ ಬಂದಿದೆʼ ಎಂಬ ಕಂಗನಾ ರಣಾವತ್ ಪೋಸ್ಟ್ ಅಳಿಸಿ ಹಾಕಿದ ಇನ್ಸ್ಟಾಗ್ರಾಂ

Update: 2021-05-10 17:52 GMT

ಹೊಸದಿಲ್ಲಿ, ಮೇ 10: ಪಶ್ಚಿಮಂಗಾಳದ ಚುನಾವಣೋತ್ತರ ಹಿಂಸಾಚಾರದ ಕುರಿತು ಅಸೂಕ್ಷ್ಮ ಹೇಳಿಕೆ ನೀಡಿರುವುದಕ್ಕಾಗಿ ನಟಿ ಕಂಗನಾ ರಾಣಾವತ್ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಟ್ವಿಟ್ಟರ್ ಖಾಯಂ ರದ್ದುಗೊಳಿಸಿದ ದಿನಗಳ ಬಳಿಕ, ಕೊರೋನ ಸಾಂಕ್ರಾಮಿಕ ರೋಗದ ಕುರಿತು ಮಾತನಾಡಿದ ರಾಣಾವತ್ ಅವರ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಮ್ ಅಳಿಸಿ ಹಾಕಿದೆ.

ಎರಡು ದಿನಗಳ ಹಿಂದೆ ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಂನಲ್ಲಿ ತಾನು ಕೊರೋನ ಸೋಂಕಿಗೆ ಒಳಗಾಗಿದ್ದೇನೆ ಎಂದು ತನ್ನ ಬೆಂಬಲಿಗರಿಗೆ ಮಾಹಿತಿ ನೀಡಿದ್ದರು. ತನ್ನ ಭಾವಚಿತ್ರವನ್ನು ಹಂಚಿಕೊಂಡ ಅವರು, ‘‘ನಾನು ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ. ಈ ವೈರಸ್ ನನ್ನ ದೇಹ ಪ್ರವೇಶಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಈಗ ನನಗೆ ಅದನ್ನು ಹೇಗೆ ನಾಶಪಡಿಸಬೇಕು ಎಂಬುದು ತಿಳಿದಿದೆ. ಯಾವುದೇ ಶಕ್ತಿ ನಿಮ್ಮ ಮೇಲೆ ಪಾರಮ್ಯ ಮೆರೆಯಲು ಜನರು ಅವಕಾಶ ನೀಡಬಾರದು. ಒಂದು ವೇಳೆ ನೀವು ಭೀತರಾದರೆ, ಅದು ನಿಮ್ಮನ್ನು ಇನ್ನಷ್ಟು ಹೆದರಿಸುತ್ತದೆ. ಇದು ಅಲ್ಪಾವಧಿಯ ಜ್ವರವಲ್ಲದೆ ಬೇರೇನೂ ಅಲ್ಲ. ಆದರೆ ಮಾಧ್ಯಮಗಳು ವ್ಯಾಪಕವಾಗಿ ಸುದ್ದಿ ಮಾಡುತ್ತಿವೆ ಹಾಗೂ ಜನರನ್ನು ಭೀತಿಗೆ ಒಳಪಡಿಸುತ್ತಿವೆ. ಹರಹರ ಮಹಾದೇವ್’’ ಎಂದು ಅವರು ಹೇಳಿದ್ದರು.

ಇನ್ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಅಪ್ಲೋಡ್ ಮಾಡಿದ ಬಳಿಕ ಅವರು ತೀವ್ರ ಟೀಕೆ ಎದುರಿಸಬೇಕಾಯಿತು. ಕೊರೋನ ಸೋಂಕನ್ನು ಅಲ್ಪಾವಧಿಯ ಜ್ವರ ಎಂದು ಕರೆದಿರುವ ಅವರನ್ನು ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ಗಮನ ಸೆಳೆಯಲು ಪ್ರಯತ್ನಿ ಸಿದರು. ಕೊರೋನ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಸರಿ ಸುಮಾರು 3 ಲಕ್ಷ ಜನರು ಜೀವ ಕಳೆದುಕೊಂಡಿರುವುದರಿಂದ ಕಂಗನಾ ರಾಣಾವತ್ ಅವರದ್ದು ಅಸೂಕ್ಷ್ಮಹೇಳಿಕೆ ಎಂದು ಇನ್ಸ್ಟಾಗ್ರಾಂ ಖಾತೆದಾರರು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಇನ್ಸ್ಟ್ರಾಗ್ರಾಂ ಕಂಗನಾ ರಾಣಾವತ್ ಅವರ ಪೋಸ್ಟ್ ಅನ್ನು ಅಳಿಸಿತ್ತು. ಆದರೆ, ರವಿವಾರ ಕಂಗನಾ ರಾಣಾವತ್ ಇನ್ಸ್ಟಾಗ್ರಾಂನಲ್ಲಿ, ‘‘ಕೋವಿಡ್ ಅನ್ನು ನಾಶಮಾಡುತ್ತೇನೆ ಎಂದು ಹೇಳಿರುವುದು ಕೆಲವರಿಗೆ ನೋವು ಉಂಟು ಮಾಡಿದೆ. ಆದುದರಿಂದ ಇನ್ಸ್ಟಾಗ್ರಾಂ ನನ್ನ ಪೋಸ್ಟ್ ಅನ್ನು ಅಳಿಸಿದೆ. ಟ್ವಿಟ್ಟರ್ನಲ್ಲಿ ಭಯೋತ್ಪಾದಕರು ಹಾಗೂ ಕಮ್ಯೂನಿಸ್ಟ್ ಅನುಕಂಪೆ ಹೊಂದಿದವರು ಇದ್ದಾರೆ ಎಂದು ನಾನು ಕೇಳಿದ್ದೆ. ಆದರೆ, ಇಲ್ಲಿ ಕೋವಿಡ್ ಅಭಿಮಾನಿಗಳ ಸಂಘ ಅದ್ಭುತ. ನಾನು ಎರಡು ದಿನಗಳ ಕಾಲ ಇನ್ಸ್ಟಾಗ್ರಾಂನಲ್ಲಿ ಇದ್ದೆ. ಆದರೆ, ಒಂದು ವಾರಗಳಿಗಿಂತ ಹೆಚ್ಚು ಇರುವೆ ಎಂದು ನಾನು ಭಾವಿಸಲಾರೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News