ಕೊರೋನ ಸಮರ ಕಾಲದಲ್ಲಿ ಸರಕಾರದಿಂದ ಶಸ್ತ್ರಾಭ್ಯಾಸ

Update: 2021-05-12 07:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಸೋಂಕಿನಿಂದ ಸಾವಿನ ಪ್ರಮಾಣ ಅತ್ಯಲ್ಪ. ಅದು ಅತಿ ಬೇಗ ಇನ್ನೊಬ್ಬರಿಗೆ ಹರಡುವ ರೋಗವೇ ಹೊರತು, ಅತಿ ಮಾರಣಾಂತಿಕ ರೋಗವಲ್ಲ ಎಂದು ವೈದ್ಯಕೀಯ ತಜ್ಞರೇ ವಿವರಿಸಿದ ಬಳಿಕವೂ ದೊಡ್ಡ ಪ್ರಮಾಣದ ಸಾವು ನೋವುಗಳಿಗೆ ಭಾರತ ಸಾಕ್ಷಿಯಾಗುತ್ತಿದೆ. ಸರಕಾರ ಆರೋಗ್ಯ ಕ್ಷೇತ್ರದ ಕುರಿತಂತೆ ಕಳೆದ ಹತ್ತು ವರ್ಷಗಳಲ್ಲಿ ತೋರಿಸಿದ ದಿವ್ಯ ನಿರ್ಲಕ್ಷದ ಫಲವನ್ನು ದೇಶ ಈ ಕೊರೋನ ಕಾಲದಲ್ಲಿ ಉಣ್ಣುತ್ತಿದೆ. ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೇ ಕೊರೋನ ಸೋಂಕಿತರನ್ನು ಸಾವಿನ ದವಡೆಗೆ ತಳ್ಳುತ್ತಿದೆ ಎನ್ನುವುದು ಬಟಾ ಬಯಲಾಗಿದೆ.

ಇಂದು ಆಕ್ಸಿಜನ್ ಮತ್ತು ಬೆಡ್‌ಗಳ ಕೊರತೆ ದೇಶಾದ್ಯಂತ ಚರ್ಚೆಯಲ್ಲಿದೆ. ಆದರೆ ಇದೇ ಸಂದರ್ಭದಲ್ಲಿ, ವೈದ್ಯರು ಮತ್ತು ದಾದಿಯರ ಕೊರತೆಯೂ ಆಸ್ಪತ್ರೆಯ ಅವ್ಯವಸ್ಥೆಗೆ ಮುಖ್ಯ ಕಾರಣವಾಗಿದೆ ಎನ್ನುವುದನ್ನು ಸರಕಾರ ಮರೆತು ಬಿಟ್ಟಿದೆ. ಜೂನ್ 2020ರಿಂದೀಚೆಗೆ ದೇಶಾದ್ಯಂತ ಸರಕಾರಿ ಆಸ್ಪತ್ರೆಗಳಿಗೆ 2,206 ತಜ್ಞ ವೈದ್ಯರು, 485 ವೈದ್ಯಕೀಯ ಅಧಿಕಾರಿಗಳು ಹಾಗೂ 25,593 ಸ್ಟಾಫ್ ನರ್ಸ್‌ಗಳನ್ನು ರಾಷ್ಟ್ರೀಯ ಆರೋಗ್ಯ ಮಿಶನ್ ಕಾರ್ಯಕ್ರಮದಡಿ ನೇಮಕಗೊಳಿಸಿರುವುದಾಗಿ ಕೇಂದ್ರ ಸರಕಾರ ಹೇಳಿಕೊಂಡಿದೆ. ಆದರೆ ಈ ನೇಮಕಾತಿಗಳೂ ದೇಶದ ಅಗತ್ಯವನ್ನು ತುಂಬುವುದಿಲ್ಲ ಎನ್ನುವುದು ಇನ್ನೊಂದು ವಾಸ್ತವ. ಬಿಹಾರದಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಕಾರ್ಯಕರ್ತರ ಶೇ.30-40ರಷ್ಟು ಹುದ್ದೆಗಳು ಈಗಲೂ ಭರ್ತಿಯಾಗದೆ ಉಳಿದಿರುವುದಾಗಿ ಆ ರಾಜ್ಯದ ಆರೋಗ್ಯ ಸೇವೆಗಳ ಅಸೋಶಿಯೇಶನ್ ತಿಳಿಸಿದೆ. ಎಪ್ರಿಲ್ 24ರಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆದೇಶ ಹೊರಡಿಸಿ ಬಾಕಿಯುಳಿದಿರುವ ಆರೋಗ್ಯ ಕಾರ್ಯಕರ್ತರ ನೇಮಕಾತಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಆದರೆ ಆರೋಗ್ಯ ಸಿಬ್ಬಂದಿಯ ನೇಮಕವನ್ನು ವಿಳಂಬ ಮಾಡಿರುವುದು ಬಿಹಾರವೊಂದೇ ಅಲ್ಲ, ಉಳಿದ ರಾಜ್ಯಗಳು ಕೂಡಾ ಅದೇ ಸಾಲಿನಲ್ಲಿವೆ

ಗುಜರಾತ್‌ನಲ್ಲಿ ಸರಕಾರಿ ಆಸ್ಪತ್ರೆಗಳು ತಮ್ಮಲ್ಲಿ ಇನ್ನೂ ಭರ್ತಿಯಾಗದೆ ಉಳಿದಿರುವ ನೂರಾರು ವೈದ್ಯಕೀಯ ಹುದ್ದೆಗಳಿಗಾಗಿ ಇದೀಗ ತುರ್ತು ನೇರ ಸಂದರ್ಶನವನ್ನು ನಡೆಸುತ್ತಿವೆ. ಉದಾಹರಣೆಗೆ ಸೂರತ್ ಸರಕಾರಿ ಆಸ್ಪತ್ರೆಯು 400 ನರ್ಸ್‌ಗಳು, 20 ತಜ್ಞ ವೈದ್ಯರು ಹಾಗೂ 4ನೇ ದರ್ಜೆ ಆರೋಗ್ಯ ಕಾರ್ಯಕರ್ತರ 600 ಹುದ್ದೆಗಳ ನೇಮಕಾತಿಗಾಗಿ ಕಳೆದ ತಿಂಗಳು ಸಂದರ್ಶನ ನಡೆಸಿತ್ತು. ಆದರೆ ಈ ಸಂದರ್ಶನಗಳಿಗೆ ಕೇವಲ 10 ನರ್ಸ್‌ಗಳು, ನಾಲ್ವರು ವೈದ್ಯರು ಹಾಗೂ 50 ದರ್ಜೆ -4ರ ಉದ್ಯೋಗಾಕಾಂಕ್ಷಿಗಳಷ್ಟೇ ಆಗಮಿಸಿದ್ದರು. ಬಹುತೇಕ ಮಂದಿ ಈ ಹುದ್ದೆಗಳಿಗೆ ನಿರಾಸಕ್ತಿ ತೋರಿರುವುದಕ್ಕೆ ಸರಕಾರದ ನೇಮಕಾತಿ ನೀತಿಯೇ ಕಾರಣವೆಂದು ಗುಜರಾತ್‌ನ ನರ್ಸಿಂಗ್ ಯೂನಿಯನ್‌ನ ಅಧ್ಯಕ್ಷ ವಿಪುಲ್‌ಸಿನ್ಹಾ ಚಾವ್ಡಾ ಹೇಳುತ್ತಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂರು ತಿಂಗಳ ಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವುದರಿಂದ ಜನರು ಆ ಹುದ್ದೆಗಳಿಗೆ ಸೇರ್ಪಡೆಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಅವರು ಅಭಿಪ್ರಾಯಿಸುತ್ತಾರೆ.

ಕೋವಿಡ್ ಹಾವಳಿಗೆ ಮುನ್ನ ಹಲವಾರು ಸ್ಥಳಗಳಲ್ಲಿ ನರ್ಸ್‌ಗಳನ್ನು ಐದು ವರ್ಷಗಳ ಗುತ್ತಿಗೆಗೆ ನೇಮಕಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಕೋವಿಡ್ ಕೊನೆಯಾಗುವವರೆಗೆ ಕೆಲವೇ ತಿಂಗಳುಗಳ ಅವಧಿಯವರೆಗಷ್ಟೇ ಅವರನ್ನು ನೇಮಿಸಿಕೊಳ್ಳಲು ಸರಕಾರ ಬಯಸುತ್ತಿದೆ. ಕೊರೋನ ಸಾಂಕ್ರಾಮಿಕದ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವಂತಹ ಇಂತಹ ಉದ್ಯೋಗವನ್ನು ಈಗ ಯಾರು ಬಯಸುತ್ತಾರೆ ಎಂದು ಚಾವ್ಡಾ ಪ್ರಶ್ನಿಸುತ್ತಾರೆ.ಮುಂಬೈನಲ್ಲಿ ಐದು ನೂತನ ಕೋವಿಡ್-19 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೇವಲ ಒಂದು ತಿಂಗಳ ಗುತ್ತಿಗೆಯಾಧಾರದಲ್ಲಿ ನರ್ಸ್‌ಗಳ ನೇಮಕಾತಿ ಮಾಡಲಾಗುತ್ತಿದ್ದು, ಅದನ್ನು ಅಗತ್ಯವಿದ್ದರೆ ಮಾತ್ರ ವಿಸ್ತರಿಸಬಹುದಾಗಿದೆ. ಇಂತಹ ಅಭದ್ರತೆಯ ಉದ್ಯೋಗದಲ್ಲಿರುವುದಕ್ಕಿಂತ ನಿರುದ್ಯೋಗಿಗಳಾಗಿಯೇ ಉಳಿಯಲು ನರ್ಸ್‌ಗಳು ಬಯಸುವುದರಲ್ಲಿ ಅಚ್ಚರಿಯೇನೂ ಇಲ್ಲ.

ಜಿಲ್ಲಾ ಆಸ್ಪತ್ರೆಗಳಲ್ಲಿ ಹೊಚ್ಚ ಹೊಸ ವೆಂಟಿಲೇಟರ್‌ಗಳಿದ್ದರೂ, ಅವುಗಳನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿಯಿಲ್ಲವೆಂಬ ಕಾರಣದಿಂದಾಗಿ ಹಲವಾರು ರೋಗಿಗಳು ಪ್ರಾಣವಾಯುವಿಗಾಗಿ ಹಂಬಲಿಸುತ್ತಾ ಕೊನೆಯುಸಿರೆಳೆದಿದ್ದಾರೆ. ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಗುತ್ತಿಗೆಯ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆಯಾದರೂ, ಅನುಭವದ ಕೊರತೆಯ ಕಾರಣದಿಂದ ಆಸ್ಪತ್ರೆಗಳು ಗೊಂದಲದ ಗೂಡಾಗಿವೆ. ಇದೊಂದು ರೀತಿಯಲ್ಲಿ, ‘ಸಮರ ಕಾಲೇ ಶಸ್ತ್ರಾಭ್ಯಾಸ’ ಸಂಸ್ಕೃತ ಗಾದೆಯಂತಿದೆ. ಯುದ್ಧ ಕಾಲದಲ್ಲಿ ಸರಕಾರ ಸಮರಾಭ್ಯಾಸ ಮಾಡಲು ಹೊರಟಿದೆ.

2019ರಲ್ಲಿ ಛತ್ತೀಸ್‌ಗಡದ ಆರೋಗ್ಯ ಇಲಾಖೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿದ ಆರೋಗ್ಯ ಕಾರ್ಮಿಕ ಮಾರುಕಟ್ಟೆ ವಿಶ್ಲೇಷಣೆಯು, ಆ ರಾಜ್ಯದಲ್ಲಿ 25 ಸಾವಿರದಿಂದ 27 ಸಾವಿರ ಅರ್ಹ ಹಾಗೂ ನೋಂದಾಯಿತ ನರ್ಸ್‌ಗಳ ಕೊರತೆಯಿರುವುದನ್ನು ಬಹಿರಂಗಪಡಿಸಿತ್ತು. ಆ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್‌ಗಳ 3 ಸಾವಿರ ಹುದ್ದೆಗಳು ಖಾಲಿಯಿದ್ದರೂ ಶೇ.20ರಷ್ಟು ನರ್ಸ್‌ಗಳನ್ನು ನೇಮಕಗೊಳಿಸಲಾಗಿತ್ತು. ಇನ್ನೂ ಶೇ.20-30ರಷ್ಟು ನರ್ಸ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿ ನೇಮಕಗೊಂಡಿದ್ದರು.ಈ ವರದಿ ಪ್ರಕಟಗೊಂಡ ಆನಂತರ ಛತ್ತೀಸ್‌ಗಡ ಸರಕಾರವು ಕೋವಿಡ್ ವಿಪತ್ತು ಪರಿಹಾರ ನಿಧಿಯನ್ನು ಬಳಸಿಕೊಂಡು ಸುಮಾರು 1 ಸಾವಿರ ಸ್ಟಾಫ್ ನರ್ಸ್‌ಗಳ ಹುದ್ದೆಗಳನ್ನು ಭರ್ತಿ ಮಾಡಿತು. ಆದರೆ ಛತ್ತೀಸ್‌ಗಡಕ್ಕೆ ಇನ್ನೂ 2 ಸಾವಿರ ನರ್ಸ್‌ಗಳ ಅಗತ್ಯವಿದೆ. ಅಲ್ಲದೆ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಚೆನ್ನಾಗಿ ತರಬೇತುಗೊಂಡ ನರ್ಸ್‌ಗಳಿದ್ದು, ಅವರನ್ನು ಕೂಡಲೇ ಸರಕಾರ ನೇಮಿಸಿಕೊಳ್ಳಬಹುದಾಗಿದೆ.

ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಭಾರತದ ಪ್ರಾಚೀನ ವೈದ್ಯಕೀಯವೆನ್ನುವ ಭ್ರಮೆಯ ಬೆನ್ನು ಹತ್ತಿ, ಸಾರ್ವಜನಿಕ ಆಸ್ಪತ್ರೆಗಳನ್ನು ಕುಲಗೆಡಿಸಿತು. ಸೆಗಣಿ, ಮೂತ್ರಗಳಿಂದ ಔಷಧಿ ಹುಡುಕುವ ಪ್ರಯತ್ನ ನಡೆಸಿತು. ಹಿಂದೂಧರ್ಮದ ಶ್ರೇಷ್ಠತೆಯನ್ನು ಹರಡುವ ರಾಜಕೀಯದ ಭಾಗವಾಗಿ, ವೈದ್ಯಕೀಯ ಕ್ಷೇತ್ರವನ್ನು ಹಂತಹಂತವಾಗಿ ನಾಶ ಪಡಿಸಿತು. ಇದರ ಲಾಭವನ್ನು ಪತಂಜಲಿಯಂತಹ ಸಂಸ್ಥೆಗಳು ತನ್ನದಾಗಿಸಿಕೊಂಡವು. ಬಾಬಾ ರಾಮ್‌ದೇವ್ ಇಂದು ಜಗತ್ತಿನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿ ಕಂಗೊಳಿಸುತ್ತಿರುವುದು ಇದೇ ಕಾರಣಕ್ಕೆೆ. ಆಯುಷ್‌ನ ಹೆಸರಿನಲ್ಲಿ ಸಾಕಷ್ಟು ದುಡ್ಡನ್ನು ಕಂಡಕಂಡವರು ಕಬಳಿಸಿದರು. ಇಂದು ಕೊರೋನ ಕಾಲದಲ್ಲಿ ಈ ಪತಂಜಲಿ ಬಾಬಾಗಳು ಮೂಲೆ ಸೇರಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳ ವೈದ್ಯರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ದುಡಿಯುತ್ತಿದ್ದಾರೆ. ಕೊರೋನ ಭಾರತದ ಹಿಂದುತ್ವ ರಾಜಕೀಯಕ್ಕೆ ಅತಿ ದೊಡ್ಡ ಪಾಠವಾಗಿದೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರವನ್ನು ಭಾವನಾತ್ಮಕ ರಾಜಕೀಯಕ್ಕೆ ಬಳಸಿದರೆ ಅದು ಅಂತಿಮವಾಗಿ ಈ ದೇಶವನ್ನು ಸರ್ವನಾಶದೆಡೆಗೆ ಒಯ್ಯುವುದಲ್ಲದೆ, ಇನ್ನಾವುದೇ ರೀತಿಯ ಒಳಿತನ್ನು ಮಾಡಲಾರದು ಎನ್ನುವುದನ್ನು ನಮ್ಮ ನಾಯಕರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News