ಬಂಧಿತ ದಿಲ್ಲಿ ವಿವಿ ಪ್ರೊಫೆಸರ್ ಹನಿ ಬಾಬುಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ; ಕುಟುಂಬದ ಅಳಲು

Update: 2021-05-12 08:38 GMT
photo: twitter

ಮುಂಬೈ: ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಮುಂಬೈಯ ತಲೋಜಾ ಜೈಲಿನಲ್ಲಿರುವ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಹನಿ ಬಾಬು ಎಂ.ಟಿ ಅವರಿಗೆ ಮೇ 3ರಿಂದ ಕಣ್ಣಿನ ಸೋಂಕಿನಿಂದಾಗಿ ತೀವ್ರ ನೋವು ಹಾಗೂ ದೃಷ್ಟಿ ದೋಷವುಂಟಾಗುತ್ತಿದ್ದರೂ ಅವರಿಗೆ  ಜೈಲಿನ ಅಧಿಕಾರಿಗಳು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಂಡಿಲ್ಲ ಎಂದು ಹನಿ ಬಾಬು ಅವರ ಕುಟುಂಬ ಸದಸ್ಯರು ಮತ್ತು ವಕೀಲರು ಆರೋಪಿಸಿದ್ದಾರೆ.

ಬಾಬು ಅವರ ಜತೆ ಮಾತನಾಡಲು ಅವಕಾಶ ಕೋರಿ ಕುಟುಂಬ ಹಾಗೂ ವಕೀಲರು ಜೈಲಿನ ಅಧಿಕಾರಿಗಳನ್ನು ಸತತ ಕೋರಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರ ಪತ್ನಿ, ಮಿರಾಂಡ ಹೌಸ್‍ನಲ್ಲಿ ಶಿಕ್ಷಕಿಯಾಗಿರುವ ಜೆನ್ನಿ ರೊವೆನಾ ಆರೋಪಿಸಿದ್ದಾರೆ.

"ಮೇ 3ರಂದು ಅವರ ಕಣ್ಣು ಊದಿಕೊಂಡಿತ್ತು. ಆಗ ಆಂಟಿಬಯೋಟಿಕ್ಸ್ ನೀಡಲಾಗಿತ್ತಾದರೂ ಅದು ಫಲ ನೀಡಿಲ್ಲ, ಇದೀಗ ಸೋಂಕು ಅವರ ಮುಖಕ್ಕೆ ಹರಡಿ ದೃಷ್ಟಿ ದೋಷವುಂಟಾಗುತ್ತಿದೆ, ಅವರ ಕಿವಿ, ಕೆನ್ನೆ ಹಾಗೂ ಹಣೆಯ ಭಾಗಕ್ಕೆ ಕೂಡ ಸೋಂಕು ಹರಡಿದೆ, ತಕ್ಷಣ ಚಿಕಿತ್ಸೆ ದೊರೆಯದೇ ಇದ್ದರೆ ಸೋಂಕು ಅವರ ಮೆದುಳನ್ನು ಬಾಧಿಸಬಹುದೆಂಬ ಭಯವಿದೆ" ಎಂದು ಅವರು ಹೇಳಿದ್ದಾರೆ.

ಐವತ್ತೈದು ವರ್ಷದ ಬಾಬು ಅವರನ್ನು ಕಳೆದ ವರ್ಷದ ಜುಲೈ 28ರಂದು ಎನ್‍ಐಎ ಬಂಧಿಸಿತ್ತು. ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಬಂಧಿತ 16 ಮಂದಿಯಲ್ಲಿ ಇವರೂ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News