ದೇಶಕ್ಕೇ ಮಾದರಿ ಐಪಿಎಸ್ ಅಧಿಕಾರಿಗೆ ಗೌರವ ಸಲ್ಲಿಸಲು ರಾಜ್ಯ ಸರಕಾರದ ಮೀನಮೇಷ ಏಕೆ ?

Update: 2021-05-12 09:05 GMT

ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸ್ಮರಣಾರ್ಥ ಹೈದರಾಬಾದ್‌ನ ಸರ್ದಾರ್ ವಲ್ಲಭಬಾಯ್ ಪಟೇಲ್ ನ್ಯಾಶನಲ್ ಪೊಲೀಸ್‌ ಅಕಾಡಮಿ ಇದರ ಹಾಲ್ ನಂ.106ಕ್ಕೆ 'ಮಧುಕರ್ ಶೆಟ್ಟಿ' ಹೆಸರನ್ನು ಇಡಲಾಗಿದೆ. ತಾನು ಕರ್ತವ್ಯ ನಿರ್ವಹಿಸಿದ ಎಲ್ಲ ಕಡೆಗಳಲ್ಲಿ ಅತ್ಯಂತ ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿ ಎಂದೇ ವ್ಯಾಪಕ ಮನ್ನಣೆ ಪಡೆದಿದ್ದ ಮಧುಕರ್ ಶೆಟ್ಟಿ ಅವರ ಬದ್ಧತೆ, ಸಮರ್ಪಣೆಯನ್ನು ಗೌರವಿಸಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳಿಗೆ ಅವರು ಮಾದರಿ ಎಂಬ ಕಾರಣಕ್ಕಾಗಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಅಕಾಡೆಮಿಯ ಸಹಾಯಕ ನಿರ್ದೇಶಕ ಡಾ. ಕೆಪಿಎ ಇಲ್ಯಾಸ್ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಆದರೆ ಸೇವೆಯಲ್ಲಿರುವಾಗಲೇ ನಿಧನರಾಗಿ ಮೂರು ವರ್ಷವಾಗುತ್ತಾ ಬಂದರೂ ಅವರ ತವರು ಹಾಗೂ ಅವರು ಸೇವೆ ಸಲ್ಲಿಸಿದ ರಾಜ್ಯ ಕರ್ನಾಟಕ ಮಾತ್ರ ಅವರ ಸೇವೆಯನ್ನು ಗೌರವಿಸುವ ಯಾವುದೇ ಕ್ರಮ ಈವರೆಗೂ ಯಾಕೆ ತೆಗೆದುಕೊಂಡಿಲ್ಲ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. 

ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ,1999ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಎಎಸ್ಪಿ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗು ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು.

ಐಜಿಪಿಯಾಗಿ ಕೆಲ ಕಾಲ ಪೊಲೀಸ್‌ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ 2018ರ ಡಿಸೆಂಬರ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮಧುಕರ್ ಶೆಟ್ಟಿ ಅವರು ಚಿಕ್ಕಮಗಳೂರು ಎಸ್ಪಿ ಆಗಿ ಬರುವುದಕ್ಕೂ ಮುನ್ನ ಎಎನ್ಎಫ್ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿಂದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಬಳಿಕ ಅವರು ಜಿಲ್ಲೆಯಲ್ಲಿದ್ದಷ್ಟು ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಲ್ಲದೇ, ಜಿಲ್ಲೆಯಾದ್ಯಂತ ಬಡವರು, ಶೋಷಿತರ ಪ್ರತೀ ಸಮಸ್ಯೆಗೆ  ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆ ಬಗೆಹರಿಸುತ್ತಿದ್ದರು.

ಮಧುಕರ್ ಶೆಟ್ಟಿ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು (2005 ಆಗಸ್ಟ್ ನಿಂದ 2006 ಏಪ್ರಿಲ್ ವರೆಗೆ) ಕೇವಲ 9 ತಿಂಗಳು ಮಾತ್ರ. ಇದ್ದ ಈ ಕಡಿಮೆ ಅವಧಿಯಲ್ಲಿ ಜಿಲ್ಲೆಯ ಜನ ಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತಹ ಕೆಲಸವನ್ನೇ ಅವರು ಮಾಡಿದ್ದರು. ಭ್ರಷ್ಟರ ಹೆಡೆಮುರಿ ಕಟ್ಟಿ, ಬಡಜನರ ಪಾಲಿಗೆ ಆಶಾಗೋಪುರವಾಗಿ ನಿಂತರು.

'ಗುಪ್ತಶೆಟ್ಟಿ ಹಳ್ಳಿ'ಯ ಗೌರವ 

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿ ಗುಪ್ತಶೆಟ್ಟಿ ಎಂಬ 32 ಕುಟುಂಬಗಳಿರುವ ಗ್ರಾಮವಿದೆ. ಈ ಗ್ರಾಮಕ್ಕೆ ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣವಾದ ಘಟನೆಯ ಹಿಂದೆ ಎಸ್ಪಿ ಮಧುಕರ್ ಶೆಟ್ಟಿ ಅವರ ಮಾನವೀಯತೆ, ಬಡವರ ಬಗೆಗಿನ ಕಾಳಜಿಯ ಕಾರ್ಯವೈಖರಿಯ ಇತಿಹಾಸವಿದೆ. ಕೇವಲ ಸಿನೆಮಾಗಳಲ್ಲಿ ಮಾತ್ರ ಕಾಣ ಸಿಗುವ ಇಂತಹ ಘಟನೆ ಎಸ್ಪಿ ಮಧುಕರ್ ಶೆಟ್ಟಿ ತಮ್ಮ ಸೇವೆಯ ಮೂಲಕ ನಿಜ ಮಾಡಿದ್ದಾರೆ.

ಅದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಹುಲ್ಲೆಮನೆ ಗ್ರಾಮ. 2006ರಲ್ಲಿ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ವಾಸವಿದ್ದ 32 ದಲಿತ ಕುಟುಂಬಗಳನ್ನು ಸರ್ಕಾರ ಒಕ್ಕಲೆಬ್ಬಿಸಿತು. ನೆಲೆ ಕಳೆದುಕೊಂಡು ಕಂಗೆಟ್ಟ ಆ ಜನರಿಗೆ ಮುಂದೇನು ಮಾಡಬೇಕೆಂಬ ದಿಕ್ಕೇ ತೋಚಲಿಲ್ಲ. ಇದೇ ಕೊರಗಿನಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮನೆ, ನೆಲ ಎಲ್ಲವನ್ನೂ ಕಳೆದುಕೊಂಡ ಜನರು ಕೊನೆಗೆ ಶವದೊಂದಿಗೆ ಪ್ರತಿಭಟನೆ ಆರಂಭಿಸಿದರು. ಆಗ ಹರ್ಷಗುಪ್ತಾ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದರು ಮತ್ತು ಮಧುಕರ್ ಶೆಟ್ಟಿ ಎಸ್ಪಿ ಆಗಿದ್ದರು. ಬಡ ಕುಟುಂಬಗಳ ಪರಿಸ್ಥಿತಿಯನ್ನು ಕಂಡ ಇಬ್ಬರು ಅಧಿಕಾರಿಗಳು ಅವರಿಗೆ ನೆಲೆ ಕಲ್ಪಿಸಿಕೊಡುವ ಆಶ್ವಾಸನೆ ನೀಡಿದರು.

ಅದರಂತೆ ಅದೇ ಭಾಗದಲ್ಲಿ ಬೈರೇಗೌಡ ಎಂಬ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದ 243 ಎಕರೆ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ, ನೆಲೆ ಕಳೆದುಕೊಂಡು ಅಲೆಮಾರಿಗಳಾಗಿದ್ದ 32 ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಒಟ್ಟು 64 ಎಕರೆ ಭೂಮಿಯನ್ನು ಹಂಚಿಕೆ ಮಾಡಿದರು. ಹಣ ಬಲ, ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳ ಒತ್ತಡ ಬಂದರೂ ಕ್ಯಾರೆ ಅನ್ನದೇ ಕಾನೂನಿಗೆ ಮಾನವೀಯತೆಯ ಸ್ಪರ್ಶನೀಡಿ ನೂರಾರು ಎಕರೆ ಒತ್ತುವರಿಯನ್ನು ಖುಲ್ಲಾ ಮಾಡಿಸಿರುವುದು ಅಂದು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ ಘಟನೆಯಾಗಿತ್ತು. 

ಈ ಘಟನೆ ಜಿಲ್ಲೆಯಲ್ಲಲ್ಲದೇ ರಾಜ್ಯದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಅಂದಿನ ಸಮ್ಮಿಶ್ರ ಸರಕಾರದ ಸಿಎಂ ಆಗಿದ್ದ ಕುಮಾರಸ್ವಾಮಿವರೆಗೂ ಭೂ ಮಾಲಕರು ದೂರು ಕೊಂಡೊಯ್ದಿದ್ದರು. ಆದರೆ ಯಾವ ಒತ್ತಡಗಳಿಗೂ ಮಣಿಯದ ಎಸ್ಪಿ ಮತ್ತು ಡಿಸಿ ಕಾನೂನಿನ ನೆಲೆಗಟ್ಟಿನಡಿಯಲ್ಲಿ ಮಾನವೀಯತೆ ಮೆರೆದು ಮನೆ ಮಾತಾದರು. ಇವರು ಮಾಡಿದ ಸಹಾಯಕ್ಕಾಗಿ ಆ ಜನರು ತಮ್ಮ ಹಳ್ಳಿಗೆ ಈ ಇಬ್ಬರು ಅಧಿಕಾರಿಗಳ ಹೆಸರನ್ನು ಸೇರಿಸಿ, 'ಗುಪ್ತಶೆಟ್ಟಿ ಹಳ್ಳಿ' ಎಂದು ಹೆಸರಿಟ್ಟರು. ಇಂದಿಗೂ ಆ ಊರು ಇದೇ ಹೆಸರಿನಿಂದ ಗುರುತಿಸಲ್ಪಡುತ್ತಿದೆ.

ದಕ್ಷತೆ, ಪ್ರಾಮಾಣಿಕತೆ, ಮಾನವೀಯತೆಯ ಪ್ರತಿರೂಪ

ಎಸ್ಪಿ ಮಧುಕರ್ ಶೆಟ್ಟಿ ಅವರು ಖಡಕ್ ಐಪಿಎಸ್ ಅಧಿಕಾರಿಯಾಗಿದ್ದರು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಯಾವುದಾದರೂ ಠಾಣಾಧಿಕಾರಿ ಲಂಚ ಸ್ವೀಕರಿಸಿದ ಬಗ್ಗೆ ಖಚಿತ ಮಾಹಿತಿ ಗೊತ್ತಾದರೆ ಅಲ್ಲಿಗೆ ದಿಢೀರ್ ಭೇಟಿ ನೀಡುತ್ತಿದ್ದ ಅವರು, ಠಾಣಾಧಿಕಾರಿ ಜೇಬಿಗೆ ಕೈ ಹಾಕಿ ಈ ಹಣ ಎಲ್ಲಿಂದ ಬಂತು ಎಂದು ತರಾಟೆಗೆ ತೆಗೆಯುತ್ತಿದ್ದರು. ಅವರ ಅವಧಿಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿರುವ ಬಗ್ಗೆ ಸ್ವತಃ ಪೊಲೀಸರೇ ಮಾಹಿತಿ ನೀಡುತ್ತಾರೆ.

ಸಮಾಜ ಸೇವಾ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದ ಅವರು ಆ ಬಗ್ಗೆ ಎಲ್ಲೂ ಪ್ರಚಾರ ಪಡೆಯುತ್ತಿರಲಿಲ್ಲ. ತಮ್ಮ ಪೊಲೀಸ್ ವಾಹನಗಳಲ್ಲಿ ಹೋಗುವ ವೇಳೆ ರಸ್ತೆ ಬದಿಗಳಲ್ಲಿ ಭಿಕ್ಷುಕರು, ಅನಾಥರನ್ನು ಕಂಡಲ್ಲಿ ಅಂತವರನ್ನು ಪೊಲೀಸ್ ವಾಹನದಲ್ಲೇ ಕರೆ ತಂದು ಸಿಬ್ಬಂದಿ ನೆರವಿನಿಂದ ಸ್ನಾನ, ತಲೆ ಕೂದಲು ಕತ್ತರಿಸಿ ಬೆಂಗಳೂರಿನ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳಿಸುತ್ತಿದ್ದರು. ಇನ್ನು ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಅವರು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತಮ್ಮ ಸಂಬಳದಲ್ಲಿ ಸಹಾಯ ಮಾಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಜನಪ್ರತಿನಿಧಿಗಳನ್ನೇ ಜೈಲಿಗಟ್ಟಿದ್ದರು

ಮಧುಕರ್ ಶೆಟ್ಟಿ 2009ರಲ್ಲಿ ಲೋಕಾಯುಕ್ತ ಎಸ್ಪಿ ನೇಮಕಗೊಂಡರು. ಆ ಬಳಿಕ ಮಧುಕರ್ ಶೆಟ್ಟಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದರು. ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳು ಲಂಚ ಸ್ವೀಕರಿಸುವಾಗ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಜೈಲಿಗೆ ಅಟ್ಟಿದ್ದರು. 

ಬಿಜೆಪಿ ಶಾಸಕ ವೈ.ಸಂಪಂಗಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಹಿಡಿದು ಅವರನ್ನೂ ಜೈಲಿಗೆ ಕಳುಹಿಸಿದ ಕೀರ್ತಿ ಮಧುಕರ್ ಶೆಟ್ಟಿಗೆ ಅವರಿಗೆ ಸಲ್ಲುತ್ತದೆ. ಈ ಮೂಲಕ ಮೊದಲ ಬಾರಿಗೆ ಶಾಸಕರ ಭವನಕ್ಕೆ ನುಗ್ಗಿ ಓರ್ವ ಶಾಸಕನನ್ನು ಬಂಧಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಲಂಚಕ್ಕೆ ಬೇಡಿಕೆ ಇಟ್ಟು ಚೆಕ್ ಪಡೆಯುವಾಗ ದಾಳಿ ನಡೆಸಿ, ಬಂಧಿಸುವ ಮೂಲಕ ರಾಜಕಾರಣಿಗಳಿಗೆ ಶಾಕ್ ನೀಡಿದ್ದರು. 

ಬಿಬಿಎಂಪಿ ಸದಸ್ಯ ಗೋವಿಂದರಾಜು ಬಂಧನ, ಕೆಐಎಡಿಬಿ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಲ್ಲಿ ಮತ್ತು ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಸಹಚರರು ನಡೆಸುತ್ತಿದ್ದ ಬಹುಕೋಟಿ ಗಣಿ ಅಕ್ರಮವನ್ನು ಬಯಲಿಗೆಳೆಯುವಲ್ಲಿ ಮಧುಕರ್ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು.

ವೃತ್ತಕ್ಕೆ ಹೆಸರಿಡಲು ಒಪ್ಪಿಗೆ ನೀಡದ ಸರಕಾರ

ಹೀಗೆ ಮಧುಕರ್ ಶೆಟ್ಟಿ ಕರ್ತವ್ಯ ನಿರ್ವಹಿಸಿದ ಎಲ್ಲ ಕಡೆಗಳಲ್ಲಿ ಅತ್ಯಂತ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ವ್ಯಾಪಕ ಮನ್ನಣೆ ಪಡೆದವರು. ಆದರೆ ಅವರ ನಿಧನದ ಬಳಿಕ ಅವರ ಹೆಸರನ್ನು ಯಾವುದಾದರೂ ರಸ್ತೆಗೆ ಅಥವಾ ಪ್ರಮುಖ ಸ್ಥಳಕ್ಕೆ ಇಟ್ಟು ಗೌರವಿಸುವ ವಿಷಯದಲ್ಲೂ ರಾಜಕೀಯ ನುಸುಳಿತು. ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ವರ್ತೂರು ಕೊಡಿ ವೃತ್ತಕ್ಕೆ ಅವರ ಹೆಸರಿಡಲು ಬಿಬಿಎಂಪಿ ನಿರ್ಧರಿಸಿದರೂ ಸರಕಾರ ಅದಕ್ಕೆ ಒಪ್ಪಿಗೆ ನೀಡಲಿಲ್ಲ.

2019ರಲ್ಲಿ ಮಧುಕರ್ ಶೆಟ್ಟಿಯವರ ಹೆಸರನ್ನು ವೃತ್ತಕ್ಕೆ ಇಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಬಳಿಕ ವೈಟ್ ಫೀಲ್ಡಿನ ಆಗಿನ ಡಿಸಿಪಿ ಅಬ್ದುಲ್ ಅಹದ್ ಹಾಗೂ ಇನ್ನಿತರ ಸಹೋದ್ಯೋಗಿಗಳು ಮನವಿ ಮಾಡಿದ ಬಳಿಕ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡುವುದಾಗಿ ಬಿಬಿಎಂಪಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಬಿಬಿಎಂಪಿ ಪ್ರಸ್ತಾವವನ್ನು ರಾಜ್ಯ ಸರಕಾರ ತಿರಸ್ಕರಿಸಿತ್ತು.

ಶಂಕರ್ ಬಿದರಿ ಅಸಮಾಧಾನ

ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿಯವರ ಹೆಸರಿಡಬೇಕು ಎಂಬ ಪ್ರಸ್ತಾವ ರಾಜ್ಯ ಸರಕಾರ ತಿರಸ್ಕರಿಸಿದ್ದಕ್ಕೆ ರಾಜ್ಯದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದರು. 'ಓರ್ವ ನಿಷ್ಠಾವಂತ ಮತ್ತು ಪ್ರಾಮಾಣಿಕ ಹಾಗೂ ತನ್ನ ವೃತ್ತಿ ಜೀವನದುದ್ದಕ್ಕೂ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬಂದ ಅಧಿಕಾರಿಯ ಸ್ಮರಣೆಗಾಗಿ ವೃತ್ತಕ್ಕೆ ಅವರ ಹೆಸರಿಡುವ ಪ್ರಸ್ತಾವವನ್ನು ತಿರಸ್ಕರಿಸಿರುವದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

“ಮಧುಕರ್ ಶೆಟ್ಟಿ ಯಾವ ಲಾಭಿಗೂ ಮಣಿಯದ ವ್ಯಕ್ತಿ. ಯಾವ ರಾಜಕಾರಣಿಗೂ ಮಣಿಯುತ್ತಿರಲಿಲ್ಲ. ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡುವುದನ್ನು ಸರಕಾರ ತಿರಸ್ಕರಿಸಿರುವುದು ಅವರಿಗೆ ಮಾಡಿದ ಅವಮಾನವಾಗಿದೆ ಎಂದು ಶಂಕರ್ ಬಿದರಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಚಿಕ್ಕಮಗಳೂರಿನಲ್ಲಿ ಪೊಲೀಸ್ ವೃತ್ತಕ್ಕೆ ಹೆಸರಿಡಲು ಚಿಂತನೆ

ಚಿಕ್ಕಮಗಳೂರು ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಿರ್ಮಿಸಲಾಗುತ್ತಿರುವ ಪೊಲೀಸ್ ವೃತ್ತಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರಿಡುವ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಿಎಂಸಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಇತ್ತೀಚಿಗೆ ಎಸ್ಪಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.

ಎಸ್ಪಿ ಕಚೇರಿ ಎದುರು ನಿರ್ಮಿಸಲಾಗುತ್ತಿರುವ ಪೊಲೀಸ್ ವೃತ್ತಕ್ಕೆ ದಿವಂಗತ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರಿಡಬೇಕೆಂದು ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ನಗರಸಭೆಯ ಸಿಎಂಸಿ ಸಭೆಯಲ್ಲಿ ಚರ್ಚಿಸಬೇಕಿದೆ. ಚರ್ಚೆಯ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದು ಕೈಗೂಡಲಿದೆಯೇ ಎಂಬುವುದೇ ಈಗಿರುವ ಪ್ರಶ್ನೆ.

ಮಧುಕರ್ ಶೆಟ್ಟಿ ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಖಡಕ್, ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ವ್ಯಾಪಕ ಮನ್ನಣೆ ಪಡೆದರೂ ಕೂಡಾ ಅವರ ನಿಧನದ ಬಳಿಕ ಅವರಿಗೆ ಸರಿಯಾದ ಗೌರವ ಸೂಚಿಸಲೂ ರಾಜ್ಯ ಸರಕಾರ ಮುಂದಾಗಿಲ್ಲ. ಅವರ ಹೆಸರನ್ನು ಯಾವುದಾದರೂ ರಸ್ತೆಗೆ ಅಥವಾ ಪ್ರಮುಖ ಸ್ಥಳಕ್ಕೆ ಇಟ್ಟು ಗೌರವಿಸುವ ವಿಷಯದಲ್ಲೂ ರಾಜಕೀಯ ಮಾಡುವಲ್ಲಿ ಜನಪ್ರತಿನಿಧಿಗಳು ಯಶಸ್ವಿಯಾಗಿದ್ದಾರೆ.

ಇದೀಗ ಮಧುಕರ್ ಶೆಟ್ಟಿ ಅವರ ಸ್ಮರಣಾರ್ಥ ಹೈದರಾಬಾದ್‌ನ ಸರ್ದಾರ್ ವಲ್ಲಭಬಾಯ್ ಪಟೇಲ್ ನ್ಯಾಶನಲ್ ಪೊಲೀಸ್‌ ಅಕಾಡಮಿ ಇದರ ಹಾಲ್ ನಂ.106ಕ್ಕೆ 'ಮಧುಕರ್ ಶೆಟ್ಟಿ' ಹೆಸರನ್ನು ಇಡಲಾಗಿದೆ. ಆದರೆ ಆದರೆ ಸೇವೆಯಲ್ಲಿರುವಾಗಲೇ ನಿಧನರಾಗಿ ಮೂರು ವರ್ಷವಾಗುತ್ತಾ ಬಂದರೂ ಅವರ ತವರು ಹಾಗೂ ಅವರು ಸೇವೆ ಸಲ್ಲಿಸಿದ ರಾಜ್ಯ ಕರ್ನಾಟಕ ಮಾತ್ರ ಅವರ ಸೇವೆಯನ್ನು ಗೌರವಿಸುವ ಯಾವುದೇ ಕ್ರಮ ಈವರೆಗೂ ತೆಗೆದುಕೊಂಡಿಲ್ಲ.

ಓರ್ವ ಐಪಿಎಸ್ ಅಧಿಕಾರಿಯಾಗಿ ತಮ್ಮ ಕಾರ್ಯವೈಖರಿಯಿಂದ ಮನೆ ಮಾತಾಗಿದ್ದ, ಪೊಲೀಸ್ ಅಧಿಕಾರಿ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದ ಮಧುಕರ್ ಶೆಟ್ಟಿಯನ್ನು ಕೇಂದ್ರ ಸರಕಾರದ ಸಂಸ್ಥೆಯೇ ಗೌರವಿಸಿದರೂ ರಾಜ್ಯ ಸರಕಾರ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಮಾತ್ರ ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News