ಉತ್ತರಪ್ರದೇಶ: ಕೊರೋನದಿಂದ ಮೃತಪಟ್ಟ ಚುನಾವಣಾಧಿಕಾರಿಗಳಿಗೆ ಕನಿಷ್ಠ 1 ಕೋಟಿ ರೂ. ಪರಿಹಾರ ನೀಡಿ; ಹೈಕೋರ್ಟ್
ಹೊಸದಿಲ್ಲಿ, ಮೇ 12: ಪಂಚಾಯತ್ ಚುನಾವಣೆಗಳ ಸಂದರ್ಭ ಕೋವಿಡ್ ಸೋಂಕಿನಿಂದ ಮೃತಪಟ್ಟ ಚುನಾವಣಾ ಅಧಿಕಾರಿಗಳ ಕುಟುಂಬಕ್ಕೆ ನೀಡುವ ಪರಿಹಾರ ಧನದ ಬಗ್ಗೆ ಮರು ಚಿಂತಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಉತ್ತರಪ್ರದೇಶ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಈ ಪರಿಹಾರ ಮೊತ್ತ ಕನಿಷ್ಠ 1 ಕೋಟಿ ರೂಪಾಯಿಯಾಗಿರಬೇಕು ಎಂದು ಉಚ್ಚ ನ್ಯಾಯಾಲಯ ಹೇಳಿದೆ. ರಾಜ್ಯದಲ್ಲಿ ಹರಡುತ್ತಿರುವ ಕೊರೋನ ಸಾಂಕ್ರಾಮಿಕ ರೋಗ ಹಾಗೂ ಕ್ವಾರಂಟೈನ್ ಸೆಂಟರ್ಗಳ ಪರಿಸ್ಥಿತಿ ಕುರಿತ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಹಾಗೂ ಅಜಿತ್ ಕುಮಾರ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೃತಪಟ್ಟವರು ಕುಟುಂಬದ ಆಧಾರಸ್ತಂಭವಾಗಿರುವುದರಿಂದ ಹಾಗೂ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡದೆ ಬಲವಂತವಾಗಿ ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಹಾಗೂ ರಾಜ್ಯ ಚುನಾವಣಾ ಆಯೋಗ ಒತ್ತಾಯ ಹೇರಿರುವುದರಿಂದ ಅವರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಪರಿಹಾರದ ಮೊತ್ತದ ಬಗ್ಗೆ ರಾಜ್ಯ ಚುನಾವಣಾ ಆಯೋಗ ಹಾಗೂ ಸರಕಾರ ಪುನರ್ ಪರಿಶೀಲಿಸಿ ನಿಗದಿಪಡಿಸಲಾದ ಮುಂದಿನ ದಿನಾಂಕದಂದು ನಮ್ಮ ಮುಂದೆ ಬರುತ್ತೀರಿ ಎಂಬ ಭರವಸೆ ಇದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ಮೀರತ್ನ ಆಸ್ಪತ್ರೆಯಲ್ಲಿ ಸಂಭವಿಸಿದ 20 ಮಂದಿ ರೋಗಿಗಳ ಸಾವಿನ ಕುರಿತಂತೆ ನ್ಯಾಯಾಲಯ, ಒಂದು ವೇಳೆ ಇದು ಕೋವಿಡ್ ಶಂಕಿತ ಸಾವಿನ ಪ್ರಕರಣವಾಗಿದ್ದರೂ ಈ ಎಲ್ಲಾ ಸಾವಿನ ಪ್ರಕರಣವನ್ನು ಕೋವಿಡ್ನಿಂದಾದ ಸಾವಿನ ಪ್ರಕರಣ ಎಂದು ಪರಿಗಣಿಸಬೇಕು. ಕೋವಿಡ್ನಿಂದಾದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಯಾವುದೇ ಆಸ್ಪತ್ರೆಯೂ ಇದು ಕೋವಿಡ್ ಪ್ರಕರಣ ಅಲ್ಲ ಎಂದು ಪರಿಗಣಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.