ಸ್ಕಾಟ್ಲ್ಯಾಂಡ್: 8 ಗಂಟೆ ಪ್ರತಿಭಟಿಸಿ ಭಾರತೀಯರ ಬಂಧನ ತಪ್ಪಿಸಿದ ಸ್ಥಳೀಯರು

Update: 2021-05-14 16:04 GMT
photo: https://twitter.com

ಲಂಡನ್, ಮೇ 14: ಶಂಕಿತ ವಲಸೆ ಅಪರಾಧಗಳನ್ನು ಮಾಡಿದರೆನ್ನಲಾದ ಇಬ್ಬರು ಭಾರತೀಯರನ್ನು ಅಧಿಕಾರಿಗಳು ಬಂಧನ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಯತ್ನಿಸಿದಾಗ, ಸ್ಥಳೀಯರು ವಾಹನಕ್ಕೆ 8 ಗಂಟೆಗಳ ಕಾಲ ಮುತ್ತಿಗೆ ಹಾಕಿ ಅವರನ್ನು ಬಿಡಿಸಿಕೊಂಡಿರುವ ಘಟನೆ ಸ್ಕಾಟ್ಲ್ಯಾಂಡ್ ರಾಜಧಾನಿ ಗ್ಲಾಸ್ಗೋದಿಂದ ವರದಿಯಾಗಿದೆ.

ಬಾಣಸಿಗ ಸುಮಿತ್ ಸಚ್ದೇವ್ ಮತ್ತು ಮೆಕ್ಯಾನಿಕ್ ಲಖ್ವೀರ್ ಸಿಂಗ್ ಬಂಧನದಿಂದ ತಪ್ಪಿಸಿಕೊಂಡವರು. ಅವರು ಸುಮಾರು 10 ವರ್ಷಗಳಿಂದ ಬ್ರಿಟನ್ನಲ್ಲಿ ವಾಸಿಸುತ್ತಿದ್ದಾರೆ.

ಗುರುವಾರ ಬ್ರಿಟನ್ ವಲಸೆ ಜಾರಿ ಇಲಾಖೆಯ ಆರು ಅಧಿಕಾರಿಗಳು ಪೊಲೀಸ್ ಸ್ಕಾಟ್ಲ್ಯಾಂಡ್ ನೆರವಿನೊಂದಿಗೆ ಗ್ಲಾಸ್ಗೋದ ಪೊಲಾಕ್ಶೀಲ್ಡ್ ದೇಶದಲ್ಲಿರುವ ಮನೆಯಿಂದ ಅವರನ್ನು ಕರೆದುಕೊಂಡು ಹೋದರು. ಬಳಿಕ ಅವರನ್ನು ಬಂಧನ ಕೇಂದ್ರಕ್ಕೆ ಕರೆದುಕೊಂಡು ಹೋಗುವ ವ್ಯಾನ್ನಲ್ಲಿ ಕುಳ್ಳಿರಿಸಿದರು.

ಆದರೆ ತಕ್ಷಣ ಸ್ಥಳೀಯರ ಬೃಹತ್ ಗುಂಪೊಂದು ಅಲ್ಲಿಗೆ ಧಾವಿಸಿ ಬಂದು ವಾಹನವನ್ನು ತಡೆಯಿತು. ಬಳಿಕ ಮಾನವಹಕ್ಕು ವಕೀಲರೊಬ್ಬರು ಮಧ್ಯಪ್ರವೇಶಿಸಿ ಭಾರತೀಯರನ್ನು ಪೊಲೀಸರಿಂದ ಬಿಡಿಸಿಕೊಂಡರು.

ಇದು ಈದ್ ದಿನದಂದು ಗೃಹ ಕಚೇರಿಯು ನಡೆಸುತ್ತಿರುವ ಪ್ರಚೋದನಾತ್ಮಕ ಕೃತ್ಯವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರಿಗೆ ಈ ಜನರ ಜೀವಗಳ ಬಗ್ಗೆ ಕಾಳಜಿಯಿಲ್ಲ. ಆದರೆ, ಗ್ಲಾಸ್ಗೋದ ಜನರಿಗಿದೆ ಎಂದು ಪಾಕಿಸ್ತಾನ ಮೂಲದ ಮಾನವಹಕ್ಕುಗಳ ವಕೀಲ ಆಮಿರ್ ಅನ್ವರ್ ಐಟಿವಿ ನ್ಯೂಸ್ಗೆ ಹೇಳಿದರು.

ಈ ನಗರವು ನಿರಾಶ್ರಿತರ ಶ್ರಮದಿಂದ ನಿರ್ಮಾಣವಾಗಿದೆ. ಈ ನಗರ ನಿರ್ಮಾಣಕ್ಕೆ ನಿರಾಶ್ರಿತರು ತಮ್ಮ ರಕ್ತ, ಬೆವರು ಮತ್ತು ಕಣ್ಣೀರನ್ನು ಕೊಟ್ಟಿದ್ದಾರೆ. ಇವರೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಅವರು ಹೇಳಿದರು. ಬಿಡುಗಡೆಗೊಂಡ ಈ ಭಾರತೀಯರು ಬಳಿಕ ನೂರಾರು ಮಂದಿ ಸ್ಥಳೀಯರೊಂದಿಗೆ ಸ್ಥಳೀಯ ಮಸೀದಿಯತ್ತ ನಡೆದರು.
ನಿರಾಶ್ರಿತರಿಗೆ ಸ್ವಾಗತ, ನಮ್ಮ ನೆರೆಯವರನ್ನು ಬಿಟ್ಟು ಬಿಡಿ, ಅವರು ಹೋಗಲಿ ಮತ್ತು ಪೊಲೀಸರೇ ನೀವು ಮನೆಗೆ ಹೋಗಿ ಎಂಬ ಫಲಕಗಳನ್ನು ಪ್ರತಿಭಟನಕಾರರು ಹಿಡಿದುಕೊಂಡಿದ್ದರು.

ಭಾರತೀಯರಿಗೆ ಜಾಮೀನು: ಪೊಲೀಸ್ ಸ್ಕಾಟ್ಲ್ಯಾಂಡ್


ಸುರಕ್ಷತೆ, ಸಾರ್ವಜನಿಕ ಆರೋಗ್ಯ ಮತ್ತು ಕ್ಷೇಮವನ್ನು ಖಾತರಿಪಡಿಸುವುದಕ್ಕಾಗಿ ಪೊಲೀಸರು ವಾಸ್ತವಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಯಿತು ಎಂದು ಬಳಿಕ ಪೊಲೀಸ್ ಸ್ಕಾಟ್ಲ್ಯಾಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇಬ್ಬರು ಭಾರತೀಯರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಹಾಗೂ ಅವರು ತಮ್ಮ ಮನೆಗಳಿಗೆ ಮರಳಿದರು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News