ಅಜಿತ್ ಸಿಂಗ್: ಜಾತ್ಯತೀತ ಸಿದ್ಧಾಂತವನ್ನು ಎಂದಿಗೂ ಬಲಿಗೊಡದ ಧೀಮಂತ ನಾಯಕ

Update: 2021-05-14 19:30 GMT

ಚೌಧುರಿ ಅಜಿತ್ ಸಿಂಗ್ ಕೇವಲ ಓರ್ವ ಸಾಮಾನ್ಯ ರಾಜಕಾರಣಿಯಲ್ಲ, ಅವರೊಬ್ಬ ವಿವಿಧ ರಾಜ್ಯಗಳಲ್ಲಿ ರೈತ ರಾಜಕಾರಣದಲ್ಲಿ ಯುವಜನರಿಗೆ ತರಬೇತಿ ನೀಡಿದಂತಹ ಒಂದು ಸಂಸ್ಥೆಯೇ ಆಗಿದ್ದರು. ಚೌಧುರಿ ಗರಡಿಯಲ್ಲಿ ಪಳಗಿದ ಈ ಯುವಜನರು ಈಗ ವಿವಿಧ ಸ್ತರಗಳಲ್ಲಿ ರೈತರ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಅಜಿತ್ ಸಿಂಗ್ ಅವರ ನಿಧನವು ವ್ಯಕ್ತಿಗತ ನಷ್ಟ ಮಾತ್ರವಲ್ಲದೆ, ದೇಶದಲ್ಲಿ ಎಂದಿಗೂ ತುಂಬಲಾಗದಂತಹ ಶೂನ್ಯವು ಆವರಿಸಿದೆ.

  ಅಜಿತ್ ಸಿಂಗ್ ಜೊತೆಗಿನ ಮೊದಲ ಒಡನಾಟದ ನೆನಪುಗಳು ನನ್ನ ಮನದಲ್ಲಿ ಈಗಲೂ ಹಸಿರಾಗಿವೆ. 1989ರಲ್ಲಿ ಮೀರತ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ನಾವು ಆಗ ಕೈಗಾರಿಕಾ ಸಚಿವರಾಗಿದ್ದ ಅವರನ್ನು ಭೇಟಿಯಾಗಲು ಹೋಗಿದ್ದೆವು. ನಾಗರಿಕ ಸೇವಾ ಪರೀಕ್ಷೆಗಳಿಗೆ ಬರೆಯಲು ಇರುವ ಗರಿಷ್ಠ ವಯೋಮಿತಿಯನ್ನು 26 ವರ್ಷಗಳಿಂದ 28 ವರ್ಷಗಳಿಗೆ ಹೆಚ್ಚಿಸಬೇಕು. ಹಾಗೆ ಮಾಡುವುದರಿಂದ ಗ್ರಾಮೀಣ ಹಿನ್ನೆಲೆಯ ಯುವಜನರು ಐಎಎಸ್, ಐಪಿಎಸ್ ಹಾಗೂ ಇತರ ಕೇಂದ್ರೀಯ ಸೇವಾ ಪರೀಕ್ಷೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ನಾವು ಅವರಿಗೆ ಮನವಿ ಮಾಡಿದ್ದೆವು. ಅವರು ನಮ್ಮ ಮನವಿಗೆ ಸಮ್ಮತಿಸಿದರು ಮಾತ್ರವಲ್ಲದೆ ಆಗಿನ ಪ್ರಧಾನಿ ವಿ. ಪಿ. ಸಿಂಗ್ ಅವರ ಮನವೊಲಿಸಿ ಆ ವರ್ಷವೇ ನಾಗರಿಕ ಸೇವಾ ಪರೀಕ್ಷೆಗಳಿಗೆ ಬರೆಯುವವರ ಪರಿಷ್ಕೃತ ವಯೋಮಿತಿಯ ನಿಯಮ ಜಾರಿಗೊಳ್ಳುವಂತೆ ಮಾಡುವಲ್ಲಿ ಸಫಲರಾದರು.

ಇತರ ಸಮಕಾಲೀನ ರಾಜಕಾರಣಿಗಳಿಂದ ತೀರಾ ವಿಭಿನ್ನವಾದಂತಹ ಅವರ ಕಾರ್ಯನಿರ್ವಹಣಾ ಶೈಲಿಯನ್ನು ನಾವು ಅಪಾರವಾಗಿ ಮೆಚ್ಟಿಕೊಂಡಿದ್ದೆವು. ಅವರ ಜೊತೆಗಿನ ಚೊಚ್ಚಲ ಭೇಟಿ ಜೀವನಪೂರ್ತಿ ಬಾಂಧವ್ಯಕ್ಕೆ ಕಾರಣ ವಾಯಿತು. ಆನಂತರ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆವು ಮತ್ತು ಕೃಷಿ, ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ಬಗ್ಗೆ ಸುದೀರ್ಘ ಸಂಭಾಷಣೆಗಳನ್ನು ನಡೆಸುತ್ತಿದ್ದೆವು. ಅವರು ವಯಸ್ಸಿನ ಹಂಗಿಲ್ಲದೆ ಜೀವಮಾನವಿಡೀ ಸಕ್ರಿಯರಾಗಿದ್ದರು ಹಾಗೂ ಕೋವಿಡ್-19 ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗುವವರೆಗೂ ಅವರು ಸದಾ ಹರ್ಷಚಿತ್ತರಾಗಿಯೇ ಇದ್ದರು.
 ಅಜಿತ್ ಸಿಂಗ್ ಅವರ ರಾಜಕೀಯ ಪಯಣವಿಡೀ ತಿರುವುಮುರುವುಗಳಿಂದ ಕೂಡಿತ್ತು. ಅವರ ನಾಯಕತ್ವದ ರಾಷ್ಟ್ರೀಯ ಲೋಕ ದಳವು (ಆರ್‌ಎಲ್‌ಡಿ) ಇತರ ರಾಜಕೀಯ ಪಕ್ಷಗಳ ಹಾಗೆಯೇ ಹಲವಾರು ಏಳು ಬೀಳುಗಳನ್ನು ಕಂಡಿತ್ತು. ರಾಷ್ಟ್ರೀಯ ಲೋಕದಳವು ಇತರ ದೊಡ್ಡ ಪಕ್ಷಗಳೊಂದಿಗೆ ಮೈತ್ರಿಯನ್ನು ಏರ್ಪಡಿಸಿಕೊಂಡಿತ್ತಾದರೂ ಸಿಂಗ್ ಅವರು ಯಾವತ್ತೂ ತನ್ನ ಜಾತ್ಯತೀತ ಸಿದ್ಧಾಂತವನ್ನಾಗಲಿ ಅಥವಾ ರೈತರ ಹಿತಾಸಕ್ತಿಗಳನ್ನಾಗಲಿ ಬಲಿಗೊಡಲಿಲ್ಲ.

ಬಹುಶಃ 2013ನೇ ಇಸವಿಯು ಅವರ ವ್ಯಕ್ತಿತ್ವಕ್ಕೆ ಸತ್ವ ಪರೀಕ್ಷೆಯಾಗಿತ್ತು. ಆಗ ಕೋಮುವಾದಿ ರಾಜಕೀಯವು ಪೂರ್ಣಮಟ್ಟದಲ್ಲಿ ಶಕ್ತಿಯುತವಾಗಿತ್ತು. ಇಂತಹ ಸನ್ನಿವೇಶದಲ್ಲಿ ಅವರು ಒಂದೋ ಜಾಟರು ಇಲ್ಲವೇ ಮುಸ್ಲಿಮರು ಇವರಿಬ್ಬರಲ್ಲಿ ಒಂದು ಸಮುದಾಯದ ಪರ ವಹಿಸಬೇಕಾದ ಇಕ್ಕಟ್ಟಿನ ಪರಿಸ್ಥಿತಿ ಅವರಿಗೆ ಎದುರಾಗಿತ್ತು. 2017ರಲ್ಲಿ ಅವರು ಭಾರೀ ರಾಜಕೀಯ ನಷ್ಟವನ್ನು ಎದುರಿಸಬೇಕಾಯಿತು. ಭಾಗಪತ್ ಹೊರತುಪಡಿಸಿ ಉಳಿದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ಪಕ್ಷ ಸೋಲನುಭವಿಸಿತು. ಆದರೂ ಧೃತಿಗೆಡದ ಅಜಿತ್, ತನ್ನ ಜಾತ್ಯತೀತ ಸಿದ್ಧಾಂತವನ್ನು ಕಾಪಾಡಿಕೊಳ್ಳುತ್ತಲೇ ಬಂದಿದ್ದರು. ದಿಲ್ಲಿಯಲ್ಲಿ ರೈತರ ಪ್ರತಿಭಟನೆ ಆರಂಭಗೊಂಡ ಬಳಿಕ ರೈತ ರಾಜಕಾರಣದ ಡೈನಾಮಿಕ್ಸ್ (ಚಲನಾತ್ಮಕತೆ) ಬದಲಾಯಿತು. ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹಾಗೂ ಇತರ ಪ್ರತಿಭಟನಾ ನಿರತ ರೈತರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯ ಸಂದರ್ಭ ಅಜಿತ್ ಮಧ್ಯಪ್ರವೇಶಿಸಿದುದು ಅವರನ್ನು ಮತ್ತೊಮ್ಮೆ ನಾಯಕರನ್ನಾಗಿ ಮಾಡಿತು. ನೂತನ ಕೃಷಿ ಕಾನೂನುಗಳ ವಿರುದ್ಧ ಮುಝಫ್ಫರ್ ನಗರದಲ್ಲಿ ನಡೆದ ಸಭೆಯು ಅವರನ್ನು ಮತ್ತೊಮ್ಮೆ ನಾಯಕರಾಗುವಂತೆ ಮಾಡಿತು. ಮುಝಫ್ಫರ್ ನಗರದ ಸಭೆಗಳಲ್ಲಿ ಬಿಕೆಯು ಅಧ್ಯಕ್ಷ ಚೌಧುರಿ ನರೇಶ್ ಟಿಕಾಯತ್ ಅಲ್ಲದೆ ಇತರ ಹಲವಾರು ರೈತ ನಾಯಕರು ಬಹಿರಂಗವಾಗಿ ಪಶ್ಚಿಮ ಉತ್ತರಪ್ರದೇಶದ ರಾಜಕಾರಣದಲ್ಲಿ ಜಾತ್ಯತೀತತೆ ಕುರಿತಾಗಿ ಅಜಿತ್‌ಸಿಂಗ್ ಹೊಂದಿದ್ದ ನಿಲುವನ್ನು ಬೆಂಬಲಿಸಿದರು.

ಮುಝಫ್ಫರ್ ನಗರ ಲೋಕಸಭಾ ಚುನಾವಣೆಯಲ್ಲಿಯೂ ಅಜಿತ್ ಸಿಂಗ್ ಸ್ಪರ್ಧಿಸಿದ್ದರು. ಪಶ್ಚಿಮ ಉತ್ತರಪ್ರದೇಶದ ರಾಜಕೀಯದಲ್ಲಿ ಅಳವಾಗಿ ಬೇರೂರಿರುವ ಕೋಮುವಾದಿ ಭಾವನೆಗಳಿಗೆ ತಣ್ಣೀರೆರಚುವ ಉದ್ದೇಶಕ್ಕಾಗಿಯೇ ಅವರು ಕಣಕ್ಕಿಳಿದಿದ್ದರು. ಅಜಿತ್‌ಸಿಂಗ್ ಅವರ ರಾಜಕೀಯ ಮತ್ತೆ ಖುಲಾಯಿಸತೊಡಗಿತು. 2022ರ ಉತ್ತರಪ್ರದೇಶದ ಚುನಾವಣೆಯನ್ನು ಎದುರಿಸಲು ಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟದ ರಚನೆಯಿಂದ ಇದು ಸ್ಪಷ್ಟವಾಗಿತ್ತು. ಈ ಮಧ್ಯೆ ಚೌಧುರಿ ಅಜಿತ್ ಸಿಂಗ್ ಅವರಿಗೆ ರಾಜ್ಯಸಭಾ ಸ್ಥಾನ ನೀಡುವ ಕುರಿತಾಗಿ ಬಹಿರಂಗ ಘೋಷಣೆಯನ್ನು ಕೂಡ ಮಾಡಲಾಗಿತ್ತು.

ಅವರ ರಾಜಕೀಯ ಭವಿಷ್ಯವು ಮತ್ತೊಮ್ಮೆ ಮೇಲಕ್ಕೇರುವುದನ್ನು ಕಾಣಲು ಎಲ್ಲರೂ ಕಾತರಾಗಿದ್ದಂತೆಯೇ, ಮೃತ್ಯು ಅವರನ್ನು ಅವರ ಕುಟುಂಬದಂತಿದ್ದ ಲಕ್ಷಾಂತರ ರೈತ ಅಭಿಮಾನಿಗಳಿಂದ ಕಿತ್ತುಕೊಂಡಿತು. ರೈತರು ಹಾಗೂ ಗ್ರಾಮೀಣ ಭಾರತದ ಸುತ್ತಲೂ ಕೇಂದ್ರೀಕೃತವಾಗಿದ್ದ ಒಂದು ಸುಸಂಸ್ಕೃತ ಜಂಟಲ್‌ಮ್ಯಾನ್ ರಾಜಕಾರಣದ ಶ್ರೀಮಂತ ಪರಂಪರೆಯನ್ನು ಅವರು ನಮ್ಮಾಂದಿಗೆ ಬಿಟ್ಟು ಹೋಗಿದ್ದಾರೆ. ಪುತ್ರ ಜಯಂತ್ ಚೌಧುರಿ ನಾಯಕತ್ವದಲ್ಲಿ ಪಕ್ಷವು ಅಜಿತ್‌ಸಿಂಗ್ ಅವರ ಪರಂಪರೆ ಮತ್ತು ದೂರದೃಷ್ಟಿಯನ್ನು ಮುಂದಕ್ಕೊಯ್ಯಲಿದೆ ಎಂಬುದಾಗಿ ಆಶಿಸೋಣ.

ಕೃಪೆ: outlookindia.com

Writer - ಸುಧೀರ್ ಪನ್ವಾರ್

contributor

Editor - ಸುಧೀರ್ ಪನ್ವಾರ್

contributor

Similar News