ತವರಿಗೆ ಪ್ರಯಾಣಿಸಿದ ಭಾರತದಲ್ಲಿದ್ದ ಆಸ್ಟ್ರೇಲಿಯನ್ನರು: ಟಿಕೆಟ್ ಖರೀದಿಸಿದವರ ಪೈಕಿ 72 ಮಂದಿಗೆ ನಿಷೇಧ

Update: 2021-05-15 15:48 GMT

ಡಾರ್ವಿನ್ (ಆಸ್ಟ್ರೇಲಿಯ), ಮೇ 15: 70ಕ್ಕೂ ಹೆಚ್ಚು ಆಸ್ಟ್ರೇಲಿಯನ್ನರನ್ನು ಹೊತ್ತು ಭಾರತದಿಂದ ಹೊರಟ ವಿಮಾನವೊಂದು ಶನಿವಾರ ಆಸ್ಟ್ರೇಲಿಯದಲ್ಲಿ ಭೂಸ್ಪರ್ಶ ಮಾಡಿದೆ. ಭಾರತದಲ್ಲಿರುವ ಆಸ್ಟ್ರೇಲಿಯ ಪ್ರಜೆಗಳು ಸ್ವದೇಶಕ್ಕೆ ಮರಳುವುದನ್ನು ನಿಷೇಧಿಸುವ ವಿವಾದಾಸ್ಪದ ಆದೇಶ ತೆರವುಗೊಂಡ ಬಳಿಕ ಭಾರತದಿಂದ ಆ ದೇಶಕ್ಕೆ ಹಾರಿದ ಮೊದಲ ವಿಮಾನ ಇದಾಗಿದೆ.

‌ಹೊಸದಿಲ್ಲಿಯಿಂದ ಹೊರಟ ವಿಮಾನವು ಡಾರ್ವಿನ್ ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಭೂಸ್ಪರ್ಶ ಮಾಡಿದೆ. ಆದರೆ, ಟಿಕೆಟ್ ಕಾದಿರಿಸಿದ ಪ್ರಯಾಣಿಕರ ಪೈಕಿ 72 ಮಂದಿಗೆ ವಿಮಾನ ಏರಲು ಅವಕಾಶ ನೀಡಲಾಗಿಲ್ಲ. ಈ ಪೈಕಿ 48 ಮಂದಿಗೆ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಹಾಗೂ ಇತರರು ಅವರ ನಿಕಟ ಸಂಪರ್ಕದಲ್ಲಿದ್ದವರೆಂದು ಭಾವಿಸಲಾಗಿದೆ.

ಒಟ್ಟು 150 ಮಂದಿ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಖರೀದಿಸಿದ್ದರು. ಅವರ ಪೈಕಿ ಅರ್ಧದಷ್ಟು ಮಂದಿಗೆ ಮಾತ್ರ ವಿಮಾನ ಏರಲು ಅವಕಾಶ ನೀಡಲಾಯಿತು ಎಂದು ನಾರ್ದರ್ನ್ ಟೆರಿಟರಿ ಆರೋಗ್ಯ ಇಲಾಖೆಯ ವಕ್ತಾರರೋರ್ವರು ತಿಳಿಸಿದರು.

ಕೊರೋನ ವೈರಸ್ ಎರಡನೇ ಅಲೆಯ ತೀವ್ರ ದಾಳಿಗೆ ಒಳಗಾಗಿರುವ ಭಾರತದಿಂದ ತನ್ನ ಪ್ರಜೆಗಳೂ ಸೇರಿ ಯಾರೂ ಆಸ್ಟ್ರೇಲಿಯಕ್ಕೆ ಬರುವುದನ್ನು ಈ ತಿಂಗಳ ಆದಿ ಭಾಗದಲ್ಲಿ ಆಸ್ಟ್ರೇಲಿಯ ನಿಷೇಧಿಸಿತ್ತು. ಈ ಆದೇಶವನ್ನು ಯಾರಾದರೂ ಉಲ್ಲಂಸಿದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಅದು ಬೆದರಿಸಿತ್ತು. ಈಗ ನಿಷೇಧವು ಶುಕ್ರವಾರ ಮಧ್ಯರಾತ್ರಿ ಮುಕ್ತಾಯಗೊಂಡಿದೆ. ಸುಮಾರು 9,000 ಆಸ್ಟ್ರೇಲಿಯನ್ನರು ಭಾರತದಲ್ಲಿದ್ದಾರೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News