ಲ್ಯಾಬ್ ನಿಂದ ಕೊರೋನ ವೈರಸ್ ಸೋರಿಕೆ ಸಿದ್ಧಾಂತದ ಗಂಭೀರ ಪರಿಗಣನೆ ಅಗತ್ಯ: ವಿಜ್ಞಾನಿಗಳು

Update: 2021-05-15 15:54 GMT

ಲಂಡನ್, ಮೇ 15: ನೋವೆಲ್ ಕೊರೋನ ವೈರಸ್ನ ಮೂಲ ಇನ್ನೂ ನಿಗೂಢವಾಗಿದೆ, ಹಾಗಾಗಿ ವೈರಸ್ ಪ್ರಯೋಗಾಲಯವೊಂದರಿಂದ ಸೋರಿಕೆಯಾಯಿತು ಎಂಬ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ವಿಜ್ಞಾನಿಗಳ ಗುಂಪೊಂದು ಹೇಳಿದೆ.

2019ರ ಕೊನೆಭಾಗದಲ್ಲಿ ಚೀನಾದಲ್ಲಿ ಅವತರಿಸಿದ ಕೋವಿಡ್-19 ಈವರೆಗೆ ಜಗತ್ತಿನಾದ್ಯಂತ ಸುಮಾರು 33.4 ಲಕ್ಷ ಮಂದಿಯನ್ನು ಕೊಂದಿದೆ. ಬೃಹತ್ ಪ್ರಮಾಣದ ಜನರ ವರಮಾನ ನಷ್ಟವಾಗಿದೆ ಹಾಗೂ ನೂರಾರು ಕೋಟಿ ಜನರ ಬದುಕು ಜರ್ಝರಿತಗೊಂಡಿದೆ.
ಸಾಂಕ್ರಾಮಿಕದ ಮೂಲವನ್ನು ನಿರ್ಧರಿಸಲು ಈಗಲೂ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು 18 ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ವಿಜ್ಞಾನಿಗಳಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಕ್ಲಿನಿಕಲ್ ಮೈಕ್ರೋಬಯಾಲಜಿಸ್ಟ್ ರವೀಂದ್ರ ಗುಪ್ತ ಮತ್ತು ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ನಲ್ಲಿ ವೈರಸ್ಗಳ ವಿಕಾಸದ ಬಗ್ಗೆ ಅಧ್ಯಯನ ನಡೆಸುತ್ತಿರುವ ಜೆಸ್ಸಿ ಬ್ಲೂಮ್ ಸೇರಿದ್ದಾರೆ.

ವೈರಸ್ ಪ್ರಯೋಗಾಲಯವೊಂದರಿಂದ ಆಕಸ್ಮಿಕವಾಗಿ ಸೋರಿಕೆಯಾಯಿತು ಹಾಗೂ ವೈರಸ್ ಒಂದು ಆತಿಥೇಯ ಪ್ರಾಣಿಯಿಂದ ಹೊಸ ಆತಿಥೇಯ ಪ್ರಾಣಿಯ ದೇಹಕ್ಕೆ ನೆಗೆಯಿತು ಎಂಬ ಈ ಎರಡೂ ಸಿದ್ಧಾಂತಗಳು ಪ್ರಸ್ತುತವಾಗಿವೆ ಎಂದು ಸಯನ್ಸ್ ಪತ್ರಿಕೆಗೆ ಬರೆದ ಪತ್ರವೊಂದರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೋಬಯಾಲಜಿ ಪ್ರೊಫೆಸರ್ ಆಗಿರುವ ಡೇವಿಡ್ ರೆಲ್ಮನ್ ಸೇರಿದಂತೆ ವಿಜ್ಞಾನಿಗಳು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News