ಮಂಗಳನ ನೆಲದ ಮೇಲಿಳಿದ ಚೀನಾದ ಶೋಧಕ ನೌಕೆ

Update: 2021-05-15 15:59 GMT

ಬೀಜಿಂಗ್ (ಚೀನಾ), ಮೇ 15: ಮಂಗಳ ಗ್ರಹಕ್ಕೆ ಚೀನಾ ಕಳುಹಿಸಿರುವ ಶೋಧಕ ನೌಕೆಯು ಶನಿವಾರ ಮುಂಜಾನೆ ಕೆಂಪು ಗ್ರಹದ ಮೇಲಿಳಿಯಿತು ಹಾಗೂ ಝುರೊಂಗ್ ರೋವರನ್ನು ಮಂಗಳನ ನೆಲದ ಮೇಲೆ ಬಿಟ್ಟಿತು ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ಝುರೊಂಗ್ ಅನ್ನು ಹೊತ್ತ ಲ್ಯಾಂಡರ್ ಮಂಗಳನ ವಾತಾವರಣದಲ್ಲಿ ಪ್ಯಾರಾಶೂಟನ್ನು ಬಳಸಿ ನೆಲವನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾಯಿತು. ಈ ಪ್ರಕ್ರಿಯೆಯಲ್ಲಿ ಅದು ಏಳು ನಿಮಿಷಗಳ ಭಯಾನಕ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಿತು.

ಪೂರ್ವ ನಿಗದಿತ ಸ್ಥಳದಲ್ಲಿ ಲ್ಯಾಂಡರ್ ಯಶಸ್ವಿಯಾಗಿ ಇಳಿಯಿತು ಎಂದು ಸರಕಾರಿ ಟಿವಿ ಸಿಸಿಟಿವಿ ವರದಿ ಮಾಡಿದೆ.

ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತಿದ, ಭೂಸ್ಪರ್ಶ ಮಾಡಿದ ಹಾಗೂ ನೆಲದಲ್ಲಿ ಶೋಧ ಕಾರ್ಯಾಚರಣೆ ನಿರ್ವಹಿಸಿದ ಮೊದಲ ಮಂಗಳ ಕಾರ್ಯಕ್ರಮ ಇದಾಗಿದೆ. ಈವರೆಗೆ ಅಮೆರಿಕ ಮತ್ತು ರಶ್ಯಗಳು ಕೆಂಪು ಗ್ರಹವನ್ನು ತಲುಪಿವೆಯಾದರೂ, ಈ ಸಾಧನೆಯನ್ನು ಮಾಡುವುದಕ್ಕೆ ಅವುಗಳಿಂದ ಸಾಧ್ಯವಾಗಿಲ್ಲ.

ಆರು ಚಕ್ರಗಳ, ಸೌರಶಕ್ತಿ ಚಾಲಿತ 240 ಕಿಲೋಗ್ರಾಮ್ ತೂಗುವ ಝುರೊಂಗ್ ಮಂಗಳನ ನೆಲದ ಕಲ್ಲು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಿದೆ. ಅಮೆರಿಕದ ಪರ್ಸಿವರೆನ್ಸ್ ಶೋಧಕ ನೌಕೆಯು ಈಗಾಗಲೇ ಮಂಗಳನ ನೆಲದಲ್ಲಿ ಚಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News