10-12 ವರ್ಷಗಳ ಕಾಲ ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆ: ಸಚಿನ್ ತೆಂಡುಲ್ಕರ್

Update: 2021-05-16 15:16 GMT

ಮುಂಬೈ: ಪಂದ್ಯ ಪೂರ್ವದ ತಯಾರಿಯು ಪ್ರಮುಖ ಭಾಗವೆಂದು ಅರಿತುಕೊಳ್ಳುವ ಮೊದಲು  ತಮ್ಮ 24 ವರ್ಷಗಳ ವೃತ್ತಿಜೀವನದ ಹೆಚ್ಚಿನ ಸಮಯ ನಾನು  ಆತಂಕದ ಕ್ಷಣವನ್ನು ಎದುರಿಸಿದ್ದೆ. ಹಲವು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಅತ್ಯಂತ ಮುಖ್ಯವಾಗಿರುವ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ತೆಂಡುಲ್ಕರ್ ಸ್ವೀಕಾರಾರ್ಹತೆಯೇ ಮುಖ್ಯ ಎಂದು ಹೇಳಿದರು.

"ಪಂದ್ಯಕ್ಕೆ ದೈಹಿಕವಾಗಿ ತಯಾರಿ ಮಾಡುವುದರ ಜೊತೆಗೆ  ನೀವು ಮಾನಸಿಕವಾಗಿ ಸಹ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂಬುದನ್ನು  ಕಾಲಕ್ರಮೇಣ ನಾನು ಅರಿತುಕೊಂಡೆ. ನನ್ನ ಪ್ರಕಾರ ಪಂದ್ಯವು ಮೈದಾನಕ್ಕೆ ಪ್ರವೇಶಿಸುವ ಮೊದಲೇ ಆರಂಭವಾಗುತ್ತದೆ. ಆತಂಕದ ಮಟ್ಟಗಳು ತುಂಬಾ ಹೆಚ್ಚಾಗಿರುತ್ತವೆ" ಎಂದು ಅನಾಕಾಡೆಮಿ ಆಯೋಜಿಸಿದ ಸಂವಾದದಲ್ಲಿ ಸಚಿನ್ ಹೇಳಿದರು.

"ನಾನು 10-12 ವರ್ಷಗಳಿಂದ ಆತಂಕವನ್ನು ಅನುಭವಿಸಿದ್ದೆ, ಪಂದ್ಯಕ್ಕೆ ಮೊದಲು ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆ. ನಂತರ ಅದು ನನ್ನ ತಯಾರಿಯ ಭಾಗವೆಂದು ನಾನು ಒಪ್ಪಿಕೊಳ್ಳಲು ಆರಂಭಿಸಿದೆ. ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗದ ಸಮಯಗಳೊಂದಿಗೆ ನಾನು ಸಮಾಧಾನ ಮಾಡಿಕೊಂಡೆ. ನನ್ನ ಮನಸ್ಸನ್ನು ಹಾಯಾಗಿಡಲು ಏನಾದರೂ ಮಾಡಲು ಆರಂಭಿಸಿದೆ’’ ಎಂದರು.

"ಚಹಾ ತಯಾರಿಸುವುದು, ನನ್ನ ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಕೂಡ ಪಂದ್ಯದ ತಯಾರಿಗೆ  ನನಗೆ ಸಹಾಯ ಮಾಡಿತು. ಆಟದ ಹಿಂದಿನ ದಿನ ನಾನು ನನ್ನ ಬ್ಯಾಗ್ ಅನ್ನು ಪ್ಯಾಕ್ ಮಾಡುತ್ತಿದ್ದೆ, ನನ್ನ ಸಹೋದರ ನನಗೆ ಎಲ್ಲವನ್ನೂ ಕಲಿಸಿದ್ದ . ಅದು ನನಗೆ ಅಭ್ಯಾಸವಾಯಿತು. ಭಾರತದ ಪರ ಆಡಿದ ಕೊನೆಯ ಪಂದ್ಯದಲ್ಲೂ ನಾನು ಅದೇ ಅಭ್ಯಾಸ  ಅನುಸರಿಸಿದೆ’’  ಎಂದು 48 ವರ್ಷದ, 2013 ರಲ್ಲಿ ತನ್ನ 200 ನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ ನಿವೃತ್ತರಾಗಿರುವ ತೆಂಡುಲ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News