ಸೌಲಭ್ಯಗಳ ಕೊರತೆಯಿಂದ ಮರದಲ್ಲೇ 11 ದಿನ ಐಸೋಲೇಷನ್ ಗೆ ಒಳಗಾದ ವಿದ್ಯಾರ್ಥಿ‌

Update: 2021-05-16 16:34 GMT

ಹೈದರಾಬಾದ್, ಮೇ 16: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತೆಲಂಗಾಣದ ನಲಂಗೊಂಡ ಜಿಲ್ಲೆಯ ಜನರು ಕೇವಲ ಆರೋಗ್ಯ ಕೇಂದ್ರ, ಚಿಕಿತ್ಸೆ ಹಾಗೂ ಲಸಿಕೆ ಲಭ್ಯತೆಯ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ. ಬದಲಾಗಿ, ಮನೆಯಲ್ಲಿ ಐಸೋಲೇಶನ್ಗೆ ಒಳಗಾಗಲು ಸ್ಥಳದ ಅಭಾವದ ಸವಾಲನ್ನು ಕೂಡ ಎದುರಿಸುತ್ತಿದ್ದಾರೆ.

ಇಲ್ಲಿನ ಹಲವು ಕುಟುಂಬಗಳು ಅಡುಗು ಕೋಣೆ ಸೇರಿದಂತೆ ಒಂದೇ ಕೊಠಡಿಯಲ್ಲಿ ಜೀವಿಸುತ್ತಿದ್ದಾರೆ. ಇಲ್ಲಿ ಕೊರೋನ ಸೋಂಕಿಗೆ ಒಳಗಾದರೆ ಐಸೋಲೇಷನ್ಗೆ ಒಳಗಾಗಲು ಯಾವುದೇ ಸೌಲಭ್ಯ ಇಲ್ಲ.

ಇದನ್ನು ಅರಿತು 18 ವರ್ಷದ ವಿದ್ಯಾರ್ಥಿ ಶಿವ ತನ್ನ ನಿವಾಸದ ಕಂಪೌಂಡ್ನಲ್ಲಿರುವ ಮರದ ಕೊಂಬೆಗಳ ಮೇಲೆ ಬಿದಿರಿನಿಂದ ಕೋವಿಡ್ ‘ವಾರ್ಡ್’ ನಿರ್ಮಿಸಿದ್ದಾನೆ ಹಾಗೂ ಅಲ್ಲೇ 11 ದಿನಗಳ ಕಾಲ ಐಸೋಲೇಷನ್ಗೆ ಒಳಗಾಗಿದ್ದಾನೆ.

ನಲಗೊಂಡ ಜಿಲ್ಲೆಯ ಬುಡಕಟ್ಟು ಕುಗ್ರಾಮ ಕೊತ್ತನಂದಿಕೊಂಡದಲ್ಲಿ ವಾಸಿಸುತಿರುವ ಶಿವ ಅವರಿಗೆ ಮೇ 4ರಂದು ಕೊರೋನ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಇರುವಂತೆ ಹಾಗೂ ಕುಟುಂಬದಿಂದ ಪ್ರತ್ಯೇಕವಾಗಿ ಇರುವಂತೆ ಗ್ರಾಮದ ಸ್ವಯಂ ಸೇವಕರು ಶಿವನಿಗೆ ಸೂಚಿಸಿದ್ದರು. ಆದರೆ, ಮನೆಯಲ್ಲಿ ಅಥವಾ ಗ್ರಾಮದಲ್ಲಿ ಐಸೋಲೇಶನ್ಗೆ ಒಳಗಾಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಆದುದರಿಂದ ಶಿವ ಮರದ ಮೇಲೆ ಐಸೋಲೇಶನ್ ವ್ಯವಸ್ಥೆ ರೂಪಿಸಲು ನಿರ್ಧರಿಸಿದರು.

ಕೊತ್ತನಂದಿಕೊಂಡದಲ್ಲಿ 350 ಕುಟುಂಬಗಳು ವಾಸಿಸುತ್ತಿವೆ. ಜಿಲ್ಲೆಯ ಅಡವಿದೇವುಲಪಲ್ಲಿ ಮಂಡಳದ ಅಡಿಯಲ್ಲಿ ಬರುವ ಹಲವು ಬುಡಕಟ್ಟು ಕುಗ್ರಾಮಗಳಲ್ಲಿ ಇದು ಕೂಡ ಒಂದು. ಈ ಗ್ರಾಮಕ್ಕೆ ಸಮೀಪ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ 5 ಕಿ.ಮೀ. ದೂರದಲ್ಲಿದೆ. ವೈದ್ಯಕೀಯ ತುರ್ತು ಸಂದರ್ಭ ಇಲ್ಲಿನ ಜನರು ಆಸ್ಪತ್ರೆಗೆ ಇಲ್ಲಿಂದ ಸುಮಾರು 30 ಕಿ.ಮೀ. ಪ್ರಯಾಣಿಸಬೇಕು.

ರಾಜ್ಯದ ಗ್ರಾಮೀಣ ಭಾಗದಲ್ಲಿ ಕೂಡ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೇ 13ರಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಸ್ಟೆಲ್ ಅನ್ನು ಐಸೋಲೇಶನ್ ಕೇಂದ್ರವಾಗಿ ಪರಿವರ್ತಿಸಿತ್ತು.

‘‘ಇಲ್ಲಿ ಐಸೋಲೇಶನ್ ಕೇಂದ್ರಗಳಿಲ್ಲ. ಎರಡು ದಿನಗಳ ಹಿಂದೆ ಎಸ್ಟಿ ಹಾಸ್ಟೆಲ್ ಅನ್ನು ಐಸೋಲೇಶನ್ ಕೇಂದ್ರವಾಗಿ ಪರಿವರ್ತಿಸಲಾಯಿತು. ಇತರ ಗ್ರಾಮಗಳಲ್ಲಿ ಇಂತಹ ಕೇಂದ್ರಗಳು ಇವೆಯೇ ಎಂದು ನನಗೆ ತಿಳಿದಿಲ್ಲ. ನನಗೆ ಹಾಗೆ ಭಾವಿಸಲು ಸಾಧ್ಯವಿಲ್ಲ. ನಾನು ಇನ್ನೇನು ಮಾಡಬಹುದು?’’ ಎಂದು ಶಿವ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News