ಗೋವಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಗೆ ಸುವ್ಯವಸ್ಥಿತ ಕ್ರಮ: ರಾಜ್ಯ ಸರಕಾರ

Update: 2021-05-16 17:03 GMT

ಪಣಜಿ, ಮೇ 16: ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೂತನ ಆಮ್ಲಜನಕ ಟ್ಯಾಂಕ್ ನಿಯೋಜಿಸುವುದರೊಂದಿಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ರಾಜ್ಯ ಸರಕಾರದ ಅಧೀನದಲ್ಲಿರುವ ಈ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಕಳೆದು ಮುಂಜಾವಿನ ಅವಧಿಯಲ್ಲಿ (ಬೆಳಿಗ್ಗೆ 2 ಗಂಟೆಯಿಂದ 6 ಗಂಟೆಯ ಮಧ್ಯೆ) ಆಮ್ಲಜನಕದ ಪೂರೈಕೆಯಲ್ಲಿ ಆದ ವ್ಯತ್ಯಯದಿಂದಾಗಿ ಶನಿವಾರದವರೆಗೆ 83 ಕೊರೋನ ಸೋಂಕಿತರು ಮೃತರಾಗಿದ್ದಾರೆ.

ಶನಿವಾರ ಆಸ್ಪತ್ರೆಯಲ್ಲಿ 20,000 ಕಿಲೋ ಲೀಟರ್ ಸಾಮಥ್ರ್ಯದ ಆಮ್ಲಜನಕ ಟ್ಯಾಂಕ್ ಸ್ಥಾಪಿಸಲಾಗಿದೆ. ಇನ್ನು ಮುಂದೆ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರದು. ಇದರೊಂದಿಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಸರಳ ಮತ್ತು ಸರಾಗವಾಗಿದೆ ಎಂದು ಸಚಿವ ರಾಣೆ ಹೇಳಿದ್ದಾರೆ.

ಬಿಚೊಲಿಂ ಕೈಗಾರಿಕಾ ಪ್ರಾಂಗಣದಲ್ಲಿದ್ದ ಈ ಟ್ಯಾಂಕ್ ಅನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಆಮ್ಲಜನಕದ ಕೊರತೆಯ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ಹೇಳಿದ್ದರು. ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆಯಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಆತಂಕ ಸೂಚಿಸಿದ್ದ ಗೋವಾ ಹೈಕೋರ್ಟ್, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News