ತೌಕ್ತೆ ಅಬ್ಬರ: ಸಾವಿರಾರು ಕುಟುಂಬಗಳ ಸ್ಥಳಾಂತರ

Update: 2021-05-17 03:44 GMT

ಅಹ್ಮದಾಬಾದ್, ಮೇ 17: ಕಳೆದ ಮೂರು ದಿನಗಳಿಂದ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕನಿಷ್ಠ ಆರು ಮಂದಿಯ ಜೀವ ಬಲಿ ಪಡೆದು ವ್ಯಾಪಕ ಕಷ್ಟನಷ್ಟಗಳಿಗೆ ಕಾರಣವಾಗಿರುವ ಪ್ರಬಲ ತೌಕ್ತೆ ಚಂಡಮಾರುತ ಮಂಗಳವಾರ ಬೆಳಗ್ಗೆ ಗುಜರಾತ್ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಸಾವಿರಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತ ಈಗಾಗಲೇ ಪಶ್ಚಿಮ ಹಾಗೂ ದಕ್ಷಿಣ ಭಾರತದಲ್ಲಿ ವ್ಯಾಪಕ ಹಾನಿ ಮಾಡಿದೆ. ವ್ಯಾಪಕ ಮಳೆ, ಗಾಳಿಯಿಂದಾಗಿ ಮನೆಗಳು ಧ್ವಂಸವಾಗಿದ್ದು, ಮರಗಳು ಬುಡಮೇಲಾಗಿವೆ.

"ಮುಂದಿನ 24 ಗಂಟೆಗಳಲ್ಲಿ ಇದು ಮತ್ತಷ್ಟು ತೀವ್ರ ಸ್ವರೂಪ ಪಡೆದು ಉತ್ತರ- ವಾಯವ್ಯ ದಿಕ್ಕಿನಲ್ಲಿ ಚಲಿಸಿ 17ರಂದು ಗುಜರಾತ್ ಕರಾವಳಿಯನ್ನು ತಲುಪುವ ನಿರೀಕ್ಷೆ ಇದೆ" ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸುಮಾರು 175 ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿ ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

ತಗ್ಗು ಪ್ರದೇಶ ಮತ್ತು ಕರಾವಳಿ ಭಾಗದಿಂದ ಸುಮಾರು 1.5 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ರವಿವಾರ ಸಂಜೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News