"ಬಿ.ವಿ ಶ್ರೀನಿವಾಸ್, ಇತರ ನಾಯಕರ ಬಳಿ ಕೋವಿಡ್ ಔಷಧಿ, ಆಕ್ಸಿಜನ್ ಅಕ್ರಮ ಶೇಖರಣೆ ಪತ್ತೆಯಾಗಿಲ್ಲ"

Update: 2021-05-17 11:52 GMT

ಹೊಸದಿಲ್ಲಿ: ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಔಷಧಿ, ಆಕ್ಸಿಜನ್ ಮತ್ತಿತರ ವಸ್ತುಗಳ ಅಕ್ರಮ ಶೇಖರಣೆ  ಆರೋಪಗಳ ಹಿನ್ನೆಲೆಯಲ್ಲಿ  ವಿವಿಧ ಪಕ್ಷಗಳ ರಾಜಕೀಯ ನಾಯಕರನ್ನು  ಪ್ರಶ್ನಿಸಲಾಗಿದೆ ಆದರೆ ಇಲ್ಲಿಯ ತನಕದ ವಿಚಾರಣೆಯಲ್ಲಿ  ಯಾವುದೇ ಅಗತ್ಯ ಔಷಧಿಗಳ ಅಕ್ರಮ ಸಂಗ್ರಹ ಕಂಡು ಬಂದಿಲ್ಲ ಎಂದು ದಿಲ್ಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ದಿಲ್ಲಿ ಹೈಕೋರ್ಟಿಗೆ ಸಲ್ಲಿಸಿದ ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.

"ರಾಜಕೀಯ ನಾಯಕರು ಜನರಿಗೆ ಅಗತ್ಯ ಔಷಧಿಗಳು, ಆಕ್ಸಿಜನ್ ದೊರೆಯುವಂತಾಗಲು ನಿಜವಾಗಿಯೂ  ಸಹಾಯ ಮಾಡಿದ್ದಾರೆ, ಅವರು ಯಾರಿಂದಲೂ ಶುಲ್ಕ ಸಂಗ್ರಹಿಸಲಾಗಿಲ್ಲ, ಮೋಸ ನಡೆದಿಲ್ಲ" ಎಂದು ಪೊಲೀಸರು ಹೈಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಆದರೆ ರಾಜಕೀಯ ನಾಯಕರು ನೀಡಿದ ಹೇಳಿಕೆಗಳ ಕುರಿತಾದ ತನ್ನ ತನಿಖೆಯನ್ನು ಪೂರ್ಣಗೊಳಿಸಲು ಆರು ವಾರಗಳ ಸಮಯವನ್ನು ಕ್ರೈಂ ಬ್ರ್ಯಾಂಚ್ ಕೇಳಿದೆ.

ಕಳೆದೊಂದು ವಾರದ ಅವಧಿಯಲ್ಲಿ ಕ್ರೈಂ ಬ್ರ್ಯಾಂಚ್‍ನ ಪೊಲೀಸರು ಹರೀಶ್ ಖುರಾನ, ಬಿಜೆಪಿ ಸಂಸದ ಗೌತಮ್ ಗಂಭೀರ್, ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿ ವಿ, ಕಾಂಗ್ರೆಸ್ ಪಕ್ಷದ ಅಲಿ ಮೆಹ್ದಿ, ಮುಕೇಶ್ ಶರ್ಮ, ಅಶೋಕ್ ಬಾಘೇಲ್, ಚೌಧುರಿ ಅನಿಲ್ ಕುಮಾರ್, ಆಪ್‍ನ ದಿಲೀಪ್ ಪಾಂಡೆ ಹಾಗೂ ಮಾಜಿ ಸಂಸದ ಶಾಹಿದ್ ಸಿದ್ದೀಖಿ ಅವರನ್ನು ಪ್ರಶ್ನಿಸಿದ್ದರು.

ಹೆಚ್ಚಿನ  ನಾಯಕರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಾವು ಜನರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು.

ಆದರೆ ಬಿಜೆಪಿ ಸಂಸದ ಗೌತಮ್ ಗಂಭೀರ್ ತಾವು  ಎಜಿಸಿಆರ್ ಆಸ್ಪತ್ರೆಯ ಡಾ ಸಂಜಯ್ ಗರ್ಗ್ ಅವರು ಎಪ್ರಿಲ್ 18ರಂದು ನೀಡಿದ್ದ ಒಂದೇ ಪ್ರಿಸ್ಕ್ರಿಪ್ಶನ್ ಬಳಸಿ 2628 ಫ್ಯಾಬಿಫ್ಲೂ ಸ್ಟ್ರಿಪ್‍ಗಳನ್ನು ಪಡೆದಿದ್ದಾಗ ವಿಚಾರಣೆ ವೇಳೆ ತಿಳಿಸಿದ್ದರು. ಈ ಔಷಧಿಯನ್ನು ಗಂಭೀರ್ ಅವರ ಗೌತಮ್ ಗಂಭೀರ್ ಫೌಂಡೇಶನ್ ಆಯೋಜಿಸಿದ್ದ ವೈದ್ಯಕೀಯ ಶಿಬಿರದಲ್ಲಿ ವಿತರಿಸಲಾಗಿತ್ತಲ್ಲದೆ ನಂತರ ಶಿಬಿರ ನಡೆಸಿದ್ದ ವೈದ್ಯರ ಬಳಿ  ಕೇವಲ 285 ಸ್ಟ್ರಿಪ್ ಉಳಿದಿರುವುದಾಗಿಯೂ ಮಾಹಿತಿ ನೀಡಲಾಗಿತ್ತು.

ಇತರ ನಾಯಕರು ತಾವು ಯಾವುದೇ ಔಷಧಿ ಅಥವಾ ಸಾಧನಗಳನ್ನು  ದೊಡ್ಡ  ಸಂಖ್ಯೆಯಲ್ಲಿ ಖರಿದಿಸಿರುವುದನ್ನು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News