ಸುವೇಂದು ಅಧಿಕಾರಿಗೂ ಹಣ ನೀಡಿದ್ದೆ,ಅವರನ್ನೇಕೆ ಬಂಧಿಸಿಲ್ಲ?: ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್

Update: 2021-05-17 14:23 GMT

  ಹೊಸದಿಲ್ಲಿ,ಮೇ 17: ತಾನು ನಡೆಸಿದ್ದ ಕುಟುಕು ಕಾರ್ಯಾಚರಣೆಯ ಆಧಾರದಲ್ಲಿ ಸಿಬಿಐ ಟಿಎಂಸಿ ನಾಯಕರಾದ ಸುಬ್ರತಾ ಮುಖರ್ಜಿ ಮತ್ತು ಫರ್ಹಾದ್ ಹಕೀಂ ಸೇರಿದಂತೆ ನಾಲ್ವರು ರಾಜಕಾರಣಿಗಳನ್ನು ಬಂಧಿಸಿರುವ ಬಗ್ಗೆ ಹಿರಿಯ ಪತ್ರಕರ್ತ ಹಾಗೂ ದೂರುದಾರ ಮ್ಯಾಥ್ಯೂ ಸ್ಯಾಮ್ಯುವೆಲ್ ಅವರು ಸೋಮವಾರ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಪ್ರಕರಣದಲ್ಲಿ ಸಾಕ್ಷಾಧಾರಗಳಿದ್ದರೂ ಬಿಜೆಪಿ ನಾಯಕ ಸುವೇಂದು ಅಧಿಕಾರಿಯಂತಹ ಇತರರನ್ನೇಕೆ ಬಂಧಿಲಾಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ವರ್ಷಗಳಿಂದಲೂ ಈ ದಿನಕ್ಕಾಗಿ ಕಾಯುತ್ತಿದ್ದೆ. 2016ರಲ್ಲಿಯೇ ಕುಟುಕು ಕಾರ್ಯಾಚರಣೆಯ ಟೇಪ್ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಸಿಬಿಐ ಮೂರು ವರ್ಷಗಳ ಹಿಂದೆಯೇ ದೋಷಾರೋಪಣ ಪಟ್ಟಿ ಸಿದ್ಧಪಡಿಸಿತ್ತಾದರೂ ಅದು ರಾಜಕಾರಣಿಗಳನ್ನು ಮುಟ್ಟುವಂತಿರಲಿಲ್ಲ ಎಂದು ತನಿಖಾ ಪತ್ರಕರ್ತ ಹಾಗೂ ನಾರದ ನ್ಯೂಸ್ನ ಸ್ಥಾಪಕರೂ ಆಗಿರುವ ಸ್ಯಾಮ್ಯುಯೆಲ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಕೆಲವು ಕೆಲಸಗಳನ್ನು ಮಾಡಿಕೊಡಲು ವಿವಿಧ ತೃಣಮೂಲ ನಾಯಕರು ಹಣವನ್ನು ಸ್ವೀಕರಿಸಿದ್ದ ವಿಡಿಯೊ ರೆಕಾರ್ಡಿಂಗ್ಗಳನ್ನು 2016ರ ಪ.ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಾರದ ನ್ಯೂಸ್ ಬಿಡುಗಡೆಗೊಳಿಸಿತ್ತು. ಇವು ಬಳಿಕ ನಾರದ ಟೇಪ್ಗಳು ಎಂದೇ ಹೆಸರಾಗಿದ್ದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರಾದ ಮುಖರ್ಜಿ ಮತ್ತು ಹಕೀಂ,ಟಿಎಂಸಿ ಶಾಸಕ ಮದನ ಮಿತ್ರಾ ಮತ್ತು ಪಕ್ಷದ ಮಾಜಿ ಶಾಸಕ ಸೋವನ್ ಚಟರ್ಜಿ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ.

ನಾರದ ಟೇಪ್ಸ್ ಬಯಲಿಗೆಳೆದಿದ್ದ ಇತರ ಕೆಲವು ಗಣ್ಯರಲ್ಲಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮಾಜಿ ನಿಕಟವರ್ತಿಗಳಾದ ಮುಕುಲ ರಾಯ್ ಮತ್ತು ಸುವೇಂದು ಅಧಿಕಾರಿ ಅವರೂ ಸೇರಿದ್ದಾರೆ. ಇವರಿಬ್ಬರೂ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇವರ ವಿರುದ್ಧ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಯಾಮ್ಯುಯೆಲ್ ನಿರಾಶೆ ವ್ಯಕ್ತಪಡಿಸಿದ್ದಾರೆ.

‘ನಾನು ಅಧಿಕಾರಿ ಕಚೇರಿಗೆ ತೆರಳಿ ಅವರಿಗೆ ಹಣ ನೀಡಿದ್ದೆ. ಅವರ ಹೆಸರು ಪಟ್ಟಿಯಲ್ಲಿಲ್ಲ,ಏಕೆ? ವಿಧಿವಿಜ್ಞಾನ ಪರೀಕ್ಷೆಯೂ ಅವರು ಹಣ ಪಡೆದಿದ್ದನ್ನು ಸಾಬೀತುಗೊಳಿಸಿತ್ತು. ಸಿಬಿಐ ನನ್ನಿಂದಲೂ ಹೇಳಿಕೆಯನ್ನು ಪಡೆದುಕೊಂಡಿತ್ತು. ನನ್ನಿಂದ ಹಣ ಸ್ವೀಕರಿಸಿದ್ದನ್ನು ಅಧಿಕಾರಿ ಒಪ್ಪಿಕೊಂಡಿದ್ದೂ ನನಗೆ ಗೊತ್ತಿದೆ ’ಎಂದು ಸ್ಯಾಮ್ಯುಯೆಲ್ ತಿಳಿಸಿದ್ದಾರೆ.

ಅಧಿಕಾರಿ ಮತ್ತು ಇತರರ ವಿರುದ್ಧ ಕ್ರಮ ಜರುಗಿಸಲು ಅನುಮತಿಗಾಗಿ ಕಾಯುತ್ತಿರುವುದಾಗಿ ಸಿಬಿಐ ಸುದ್ದಿಸಂಸ್ಥೆಗೆ ತಿಳಿಸಿದೆ. ಅಧಿಕಾರಿ ಆಗ ಲೋಕಸಭಾ ಸದಸ್ಯರಾಗಿದ್ದರಿಂದ ಅವರ ವಿರುದ್ಧ ಕ್ರಮಕ್ಕೆ ಸ್ಪೀಕರ್ ಅನುಮತಿ ಕೋರಿ ಸಿಬಿಐ 2019,ಎ.6ರಂದು ಅರ್ಜಿಯನ್ನು ಸಲ್ಲಿಸಿತ್ತು.

ಟೇಪ್ಗಳಲ್ಲಿ ಕಂಡಿರುವುದು ಹಗರಣದ ಸಣ್ಣ ಭಾಗ ಮಾತ್ರವಾಗಿದೆ ಎಂದು ಹೇಳಿರುವ ಸ್ಯಾಮ್ಯುಯೆಲ್,ತನಿಖೆಯು ನ್ಯಾಯಯುತವಾಗಿ ನಡೆಯಬೇಕು ಎಂದು ಒತ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News