ಉ.ಪ್ರ.ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಕೋವಿಡ್‌ನಿಂದ 1,621 ಶಿಕ್ಷಕರ ಸಾವು

Update: 2021-05-18 13:24 GMT
ಸಾಂದರ್ಭಿಕ ಚಿತ್ರ

ಲಕ್ನೋ,ಮೇ 18:ಕೋವಿಡ್-19 ಎರಡನೇ ಅಲೆಯ ನಡುವೆಯೇ ರಾಜ್ಯದಲ್ಲಿ ನಡೆದಿದ್ದ ಪಂಚಾಯತ್ ಚುನಾವಣೆಗಳಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳ ಪೈಕಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,621ಕ್ಕೇರಿದೆ ಎಂದು ಉತ್ತರ ಪ್ರದೇಶ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಹೇಳಿದೆ.

ಅನಾರೋಗ್ಯಪೀಡಿತ ಶಿಕ್ಷಕರು ಮತ್ತು ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮತಎಣಿಕೆಯ ಮುನ್ನಾ ದಿನ,ಮೇ 1ರಂದು ಭರವಸೆ ನೀಡಿದ್ದರಾದರೂ,ಕಾಯಿಲೆಪೀಡಿತರಾಗಿ ಮತ ಎಣಿಕೆಯ ದಿನ ಮತ್ತು ಮತದಾನದ ದಿನಗಳಲ್ಲಿ ಗೈರುಹಾಜರಾಗಿದ್ದವರು ಸೇವೆಯಿಂದ ಅಮಾನತು ಮತ್ತು ವೇತನ ಕಡಿತ ಕ್ರಮಗಳಿಗೆ ಒಳಗಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ದಿನೇಶಚಂದ್ರ ಶರ್ಮಾ ಆರೋಪಿಸಿದ್ದಾರೆ.

ಅಲ್ಲದೆ ಹೃದಯ ಕಾಯಿಲೆಗಳಿಂದ ನರಳುತ್ತಿದ್ದ ಹಲವಾರು ಶಿಕ್ಷಕರು ಮತ್ತು ಸಿಬ್ಬಂದಿಗಳು ಒತ್ತಡ ಮತ್ತು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದರು.

ಜಿಲ್ಲಾಡಳಿತವು ಪಂಚಾಯತ್ ಚುನಾವಣೆಗಳ ಮತಎಣಿಕೆ ಕೇಂದ್ರಗಳಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸಿರಲಿಲ್ಲ ಎಂದು ಆಪಾದಿಸಿದ ಶರ್ಮಾ,ಇಷ್ಟೆಲ್ಲ ಸಾವುಗಳು ಸಂಭವಿಸಿದ್ದರೂ ಅಧಿಕಾರಿಗಳು ಶಿಕ್ಷಕರಿಗೆ ಕಿರುಕುಳ ನೀಡುತ್ತಿರುವುದು ಕಳವಳವನ್ನು ಸೃಷ್ಟಿಸಿದೆ ಎಂದರು.

ಚುನಾವಣಾ ಕರ್ತವ್ಯದ ಸಂದರ್ಭದಲ್ಲಿ ಸಾವನ್ನಪ್ಪಿದ ಶಿಕ್ಷಕರು ಮತ್ತು ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ಒಂದು ಕೋ.ರೂ.ಪರಿಹಾರವನ್ನು ನೀಡುವಂತೆ,ಶಿಕ್ಷಕರ ವಿರುದ್ಧದ ದಂಡನಾ ಕ್ರಮಗಳನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಮೃತರು ಸೇರಿದಂತೆ ಎಲ್ಲ ಶಿಕ್ಷಕರನ್ನು ಕೊರೋನ ಯೋಧರೆಂದು ಘೋಷಿಸುವಂತೆ ಸಂಘವು ಸರಕಾರವನ್ನು ಆಗ್ರಹಿಸಿದೆ.

ಆರ್‌ಟಿಪಿಸಿಆರ್ ಪರೀಕ್ಷೆಯ ಸೌಲಭ್ಯ ಒದಗಿಸದೆ,ಬಲವಂತದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟು ಮೃತಪಟ್ಟಿರುವ ಚುನಾವಣಾ ಅಧಿಕಾರಿಗಳ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರದ ಮೊತ್ತವು ಅತ್ಯಲ್ಪವಾಗಿದ್ದು,ಅದು ಕನಿಷ್ಠ ಒಂದು ಕೋಟಿ ರೂ.ಇರಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಮೇ 11ರಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News