ವಿಸ್ತಾ ಯೋಜನೆ: ದೇಹಕ್ಕಿಂತ ಭಾರವಾಗಿರುವ ಕಿರೀಟ ?

Update: 2021-05-19 04:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಬ್ಬ ಮಧ್ಯಮವರ್ಗದ ಕುಟುಂಬದ ಯಜಮಾನನನ್ನೇ ತೆಗೆದುಕೊಳ್ಳೋಣ. ಅವನು ಮನೆಗೆ ಬಣ್ಣ ಸುಣ್ಣ ಬಳಿಯಬೇಕು ಎಂದು ಹಣ ಎತ್ತಿಟ್ಟಿರುತ್ತಾನೆ. ಆದರೆ ಪತ್ನಿ ಭೀಕರವಾದ ಕಾಯಿಲೆಗೆ ಬೀಳುತ್ತಾಳೆ. ಜೊತೆಗೆ ಮನೆಯ ಯಜಮಾನ ಕೆಲಸ ಕಳೆದುಕೊಳ್ಳುತ್ತಾನೆ. ಆರ್ಥಿಕವಾಗಿ ತೀರಾ ಬಿಕ್ಕಟ್ಟು. ಅನಿವಾರ್ಯವಾಗಿ ಮನೆಯ ಯಜಮಾನ ಸುಣ್ಣ ಬಣ್ಣ ಬಳಿಯಲು ಎತ್ತಿಟ್ಟ ಹಣವನ್ನು ಪತ್ನಿಯ ಕಾಯಿಲೆಗೆ, ಮಕ್ಕಳ ಇನ್ನಿತರ ವೆಚ್ಚಗಳಿಗೆ ಬಳಸುತ್ತಾನೆ. ಎಲ್ಲವೂ ಸರಿಯಾದರೆ ಇನ್ನೊಮ್ಮೆ ಸುಣ್ಣ ಬಣ್ಣ ಬಳಿಯಬಹುದು ಎಂದು ಸಹಜವಾಗಿ ಯೋಚಿಸುತ್ತಾನೆ. ಒಬ್ಬ ಮಧ್ಯಮ ವರ್ಗದ ಕುಟುಂಬದ ಯಜಮಾನನಿಗಿರುವಷ್ಟು ವಿವೇಕ, ದೂರದೃಷ್ಟಿ ಈ ದೇಶದ ಪ್ರಧಾನಿಗೆ ಇದ್ದಿದ್ದರೆ, ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಸಂಪೂರ್ಣ ತತ್ತರಿಸಿ ಕೂತಿರುವ ಈ ಹೊತ್ತಿನಲ್ಲಿ, ಕೇಂದ್ರ ವಿಸ್ತಾ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದರು.

ಆ ಹಣವನ್ನು ದೇಶದ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗೆ ಮೀಸಲಿಡುತ್ತಿದ್ದರು. ಹಾಗೆ ನೋಡಿದರೆ ಕೇಂದ್ರ ವಿಸ್ತಾ ಯೋಜನೆ ಮೋದಿಯವರಿಂದ ಕುಡಿ ಯೊಡೆದಿರುವುದೇನೂ ಅಲ್ಲ. ಜೊತೆಗೆ ಈಗಿರುವ ಸಂಸತ್ ಭವನವು ಸುರಕ್ಷಿತವಲ್ಲವೆಂಬುದನ್ನು ಹೇಳಿದವರಲ್ಲಿ ಮೋದಿ ಸರಕಾರವೇ ಮೊದಲಿನದ್ದಲ್ಲ. ‘ಈಗ ಇರುವ ಸ್ಥಳವು ಸಂದರ್ಶಕರಿಗೆ ಹಿತಕರವಾಗಿಲ್ಲ, ಅಲ್ಲಿರುವ ಹಸಿರು ಪ್ರದೇಶಗಳನ್ನು ಕಾರು ಮತ್ತಿತರ ವಾಹನಗಳು ಪಾರ್ಕಿಂಗ್‌ಗಾಗಿ ಅತಿಕ್ರಮಿಸಿಕೊಂಡಿವೆ ಮತ್ತು ಮುಖ್ಯ ಪ್ರದೇಶವನ್ನು ಕಳಪೆಯಾಗಿ ಉಪಯೋಗಿಸಲಾಗುತ್ತಿದೆ. ಅಲ್ಲಿ ಈಗಿರುವ ‘ಭವನ’ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದರೂ ಅವು ದುರಸ್ತಿ ಕಾಣದೆ ಉಳಿದಿವೆ.

ಸಂಸತ್‌ಭವನ, ಕಚೇರಿಗಳ ನೆಲಗಳು ಹಲವು ದಶಕಗಳಿಂದ ಜನ ಓಡಾಟದಿಂದಾಗಿ ಶಿಥಿಲಗೊಂಡಿವೆ. ಅಲ್ಲಿನ ಬಾಗಿಲುಗಳು ಹಾಗೂ ಕಿಟಕಿಗಳು ತಮಗೆ ವಯಸ್ಸಾಗಿರುವುದನ್ನು ತೋರಿಸಿಕೊಡುತ್ತವೆ. ಶೌಚಾಲಯಗಳು ಕೂಡಾ ಕೆಲವೊಮ್ಮೆ ಗಬ್ಬೆದ್ದು ನಾರುತ್ತಿರುತ್ತವೆ. ಸಂಸತ್‌ಭವನದಲ್ಲ್ಲಿ ಬಹುತೇಕವಾಗಿ ಸೆಂಟ್ರಲೈಸ್ಡ್ ಹವಾನಿಯಂತ್ರಿತ ವ್ಯವಸ್ಥೆ ಕೂಡಾ ಇರುವುದಿಲ್ಲ. ಭದ್ರತಾ ವ್ಯವಸ್ಥೆ ಕೂಡಾ ಅಸಮರ್ಪಕವಾಗಿದೆ’ ಮೊದಲಾದ ಗೊಣಗಾಟಗಳು ಆರಂಭವಾಗಿ ಹಲವು ದಶಕಗಳು ಕಳೆದಿವೆ. ನೂತನ ವಿಸ್ತಾ ಯೋಜನೆಯು ನಿವೇಶನದ ಸದ್ಬಳಕೆಯ ಭರವಸೆ ನೀಡುತ್ತದೆ. ಕಟ್ಟಡಗಳ ನಡುವೆ ಉತ್ತಮ ಸಂಪರ್ಕಶೀಲತೆಯನ್ನು, ಅಂಡರ್‌ಗ್ರೌಂಡ್ ಪಾರ್ಕಿಂಗ್ ಹಾಗೂ ಸೆಂಟ್ರಲ್ ಏರ್‌ಕಂಡಿಶನಿಂಗ್ ಸೌಲಭ್ಯದ ಗುರಿಯನ್ನು ಹೊಂದಿದೆ. ದೂರದೃಷ್ಟಿಯ ಕಾರಣಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸಂಸತ್ ಭವನದ ಅಗತ್ಯವಿದೆ ಎಂದು ಹಲವರು ಪ್ರತಿಪಾದಿಸಿದ್ದಾರೆ. ಆದರೆ ಇದಷ್ಟೇ ಕಾರಣಕ್ಕೆ ಈಗಿರುವ ಐತಿಹಾಸಿಕ ಹಿನ್ನೆಲೆಯಿರುವ ಸಂಸತ್ ಭವನವನ್ನು ಸಾರಾಸಗಟಾಗಿ ತಿರಸ್ಕರಿಸುವುದು ಎಷ್ಟು ಸರಿ?

ಪುರಾತನ ಕಾಲದ ಐತಿಹಾಸಿಕ ಕಟ್ಟಡಗಳನ್ನು ಅವುಗಳ ಬಾಹ್ಯ ಸ್ವರೂಪದಲ್ಲಿ ಹೆಚ್ಚು ಬದಲಾವಣೆ ಮಾಡದೆಯೇ ಅಧುನಿಕ ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ನವೀಕರಿಸಬಹುದಾಗಿದೆ ಮತ್ತು ಸುಭದ್ರಗೊಳಿಸಬಹುದಾಗಿದೆ. ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನ, ಜರ್ಮನಿಯ ಸಂಸತ್‌ಭವನವಾದ ಬುಂಡೆನ್‌ಸ್ಟಾಗ್ ಸೇರಿದಂತೆ ಹಲವು ದೇಶಗಳ ಸಂಸತ್ ಕಟ್ಟಡಗಳು ಹೊಸದಿಲ್ಲಿಯ ಸಂಸತ್‌ಭವನಕ್ಕಿಂತಲೂ ಹೆಚ್ಚು ಹಳೆಯದಾಗಿವೆ. ಈಗಿರುವ ಲೋಕಸಭಾ ಭವನದಲ್ಲಿ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಸದಸ್ಯರಿಗೆ ಸ್ಥಳಾವಕಾಶದಲ್ಲಿ ಕೊರತೆಯಾಗಲಿದೆ ಎನ್ನುವುದಾದರೆ ಈಗ ಇರುವ ಸೆಂಟ್ರಲ್ ಹಾಲ್ ಅನ್ನು ಅಚ್ಚುಕಟ್ಟಾದ ಲೋಕಸಭೆಯ ಸದನವಾಗಿ ಪರಿವರ್ತಿಸಬಹುದಾಗಿದೆ.

ದ್ವಿತೀಯ ಜಾಗತಿಕ ಮಹಾಯುದ್ಧದ ಕಾಲದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೈನಿಕರ ಬ್ಯಾರಾಕ್‌ಗಳನ್ನು ವಾಹನ ಪಾರ್ಕಿಂಗ್ ತಾಣಗಳಾಗಿ ಪರಿವರ್ತಿಸಬಹುದು. ಆ ಮೂಲಕ ಈಗ ಸಂಸತ್‌ಭವನ ಪ್ರದೇಶವನ್ನು ಕಾಡುತ್ತಿರುವ ಪಾರ್ಕಿಂಗ್ ಗೊಂದಲವನ್ನು ನಿವಾರಿಸಬಹುದಾಗಿದೆ ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ. ಹಾಗೆಯೇ, ಎಲ್ಲಾ ಸರಕಾರಿ ಕಾರ್ಯಾಲಯಗಳು ಪರಸ್ಪರ ಸಮೀಪದಲ್ಲಿರಬೇಕೆಂದು ಅಪೇಕ್ಷಿಸುವುದರಲ್ಲಿ ಯಾವುದೇ ಹುರುಳಿಲ್ಲ. ಇಂತಹ ವ್ಯವಸ್ಥೆಯು ಭದ್ರತೆಯ ದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ. ಈಗಿನ ನೂತನ ಸೇನಾ ಮುಖ್ಯ ಕಾರ್ಯಾಲಯವು ಕಂಟೈನ್ಮೆಂಟ್ ವಲಯದಲ್ಲಿದ್ದರೆ, ವಾಯುಪಡೆಯ ಮುಖ್ಯ ಕಾರ್ಯಾಲಯವು ಅವು ಹಿಂದೆ ಇದ್ದ ಸ್ಥಳದಿಂದಲೇ ಕಾರ್ಯಾಚರಿಸುತ್ತಿವೆ.ಆದರೂ ಅವುಗಳು ಪರಸ್ಪರ ಸಮನ್ವಯತೆ ಮತ್ತು ಯೋಜನೆಯೊಂದಿಗೆ ಸುಸೂತ್ರವಾಗಿ ಕಾರ್ಯಾಚರಿಸುತ್ತವೆ. ದೇಶದ ಎಲ್ಲಾ ಆಡಳಿತ ಕಟ್ಟಡಗಳು ಒಂದೇ ರೀತಿಯ ರೂಪವನ್ನು ಹೊಂದಿರುವುದು ಪ್ರತಿಷ್ಠೆಯ ವಿಷಯವೇನಲ್ಲ. ಅಮೆರಿಕದ ರಾಜಧಾನಿ ವಾಶಿಂಗ್ಟನ್‌ನಲ್ಲಿರುವ ಆಡಳಿತ ಕಚೇರಿಗಳು ವೈವಿಧ್ಯಮಯವಾದ ವಾಸ್ತು ವಿನ್ಯಾಸವನ್ನು ಹೊಂದಿರುವುದನ್ನು ಗಮನಿಸಬೇಕಾಗಿದೆ.

ನಾರ್ತ್ ಬ್ಲಾಕ್ ಹಾಗೂ ದಕ್ಷಿಣ ಬ್ಲಾಕ್ ಅಸುರಕ್ಷಿತವೆಂದು ಹೇಳುತ್ತಿರುವ ಸರಕಾರವು ಭವಿಷ್ಯದಲ್ಲಿ ಅದನ್ನು ರಾಷ್ಟ್ರೀಯ ಮ್ಯೂಸಿಯಂ ಹಾಗೂ ರಾಷ್ಟ್ರೀಯ ಪತ್ರಾಗಾರ (ನ್ಯಾಶನಲ್ ಆರ್ಕೈವ್ಸ್)ದಿಂದ ಲಕ್ಷಾಂತರ ಕಲಾಕೃತಿ ಹಾಗೂ ಸಂಗ್ರಹಗಳನ್ನು ಅಲ್ಲಿಗೆ ವರ್ಗಾಯಿಸಲಿದೆಯಂತೆ. ಒಂದು ವೇಳೆ ನಾರ್ತ್ ಬ್ಲಾಕ್ ಹಾಗೂ ಸೌತ್ ಬ್ಲಾಕ್ ಕಟ್ಟಡಗಳು ಅಸುರಕ್ಷಿತವಾಗಿದ್ದಲ್ಲಿ ಅವುಗಳನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವ ನಿರ್ಧಾರವನ್ನು ಸರಕಾರ ಹೇಗೆ ಕೈಗೊಂಡಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.ಇದಕ್ಕಿಂತಲೂ ಮುಖ್ಯವಾಗಿ, ವಿಸ್ತಾದಂತಹ ಬೃಹತ್ ಮಟ್ಟದ ಮಹತ್ವದ ಯೋಜನೆಯ ವಿವರಗಳನ್ನು ಯಾಕೆ ರಹಸ್ಯವಾಗಿಡಲಾಗುತ್ತಿದೆ ಎಂಬುದು ಕುತೂಹಲಕರವಾಗಿದೆ.

ಸೆಂಟ್ರಲ್ ವಿಸ್ತಾ ಯೋಜನೆಯ ವಿವರಗಳನ್ನು ಕೆಲವು ಆಯ್ದ ಸಣ್ಣ ಗುಂಪುಗಳೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತಿದೆ ಮತ್ತು ಸಾರ್ವಜನಿಕವಾಗಿ ಮಾಹಿತಿಗಳನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪಗಳಿವೆ. ಕೊರೋನ ಸಾಂಕ್ರಾಮಿಕವು ತಾಂಡವವಾಡುತ್ತಿರುವ ಈ ಸಮಯದಲ್ಲಿ ಕೇಂದ್ರದ ಬೊಕ್ಕಸದಲ್ಲಿ ಉಳಿತಾಯದ ಪ್ರತಿಯೊಂದು ರೂಪಾಯಿಯನ್ನು ದೇಶದ ವೈದ್ಯಕೀಯ ವ್ಯವಸ್ಥೆಯ ಸುಧಾರಣೆಗೆ ಬಳಸಿಕೊಳ್ಳಬೇಕಾದ ಈ ಸಂದರ್ಭದಲ್ಲಿ ಹಿಂದುಮುಂದೆ ಯೋಚಿಸದೆ ಸರಕಾರವು ದುಬಾರಿ ವಿಸ್ತಾ ಯೋಜನೆಯ ಕಾಮಗಾರಿ ಆರಂಭಿಸಿರುವುದು ಪರಿಸ್ಥಿತಿಯ ವಿಡಂಬನೆಯಾಗಿದೆ. ಕನಿಷ್ಠ ಕೊರೋನ ವಿಪತ್ತಿನಿಂದ ದೇಶ ಪಾರಾಗುವವರೆಗೆ ಈ ಯೋಜನೆಯನ್ನು ಮುಂದೂಡುವ ಅವಕಾಶ ಕೇಂದ್ರಕ್ಕಿತ್ತು. ಆದರೆ ದೇಶದ ಹಾಹಾಕಾರ ಪ್ರಧಾನಿಯ ಕಿವಿಗೆ ಬೀಳುತ್ತಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದ ಕಾಲದಲ್ಲಿ ಜುಟ್ಟಿಗಾಗಿ ಮಲ್ಲಿಗೆ ಪೋಣಿಸುತ್ತಿರುವ ಪ್ರಧಾನಿ, ರೋಮ್ ಉರಿಯುತ್ತಿದ್ದಾಗ ಪಿಟೀಲು ಬಾರಿಸಿದ್ದ ನೀರೋ ಆಗುವ ಪ್ರಯತ್ನದಲ್ಲಿದ್ದಾರೆ. ತನ್ನ ದೇಹಕ್ಕಿಂತ ಭಾರವಾದ ಈ ಕಿರೀಟವನ್ನು ಈ ದೇಶ ಅದು ಹೇಗೆ ತಾಳಿಕೊಳ್ಳುವುದು ಎನ್ನುವುದನ್ನು ಕಾಲವೇ ಹೇಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News