ʼಒಂದು ದೇಶ, ಎಲ್ಲಾ ಅವಮಾನʼ: ಪ್ರಧಾನಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಮತಾ ಬ್ಯಾನರ್ಜಿ ಹೇಳಿಕೆ

Update: 2021-05-20 11:23 GMT

ಕೊಲ್ಕತ್ತಾ: "ಇದು ಏಕ-ಮುಖ ಸಂವಹನವಾಗಿರಲಿಲ್ಲ... ಇದು ಏಕ ಮುಖ ಅವಮಾನ.... ಒಂದು ದೇಶ, ಎಲ್ಲಾ ಅವಮಾನ (ಒನ್ ನೇಷನ್ ಆಲ್ ಹ್ಯುಮಿಲಿಯೇಶನ್)" ಎಂದು ಇಂದು ಪ್ರಧಾನಿ ಜತೆ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.

"ಪ್ರಧಾನಿ ಯಾವುದೇ  ಆರ್ಥಿಕ ಬೆಂಬಲ ಘೋಷಿಸಿಲ್ಲ ಹಾಗೂ ಯಾವುದೇ ಮುಖ್ಯಮಂತ್ರಿಗೆ ಮಾತನಾಡಲೂ ಅವಕಾಶ ನೀಡಲಿಲ್ಲ" ಎಂದು ಮಮತಾ ದೂರಿದರು.

"ಮುಖ್ಯಮಂತ್ರಿಗಳ ಮಾತುಗಳನ್ನು  ಕೇಳದೇ ಇರಲು ಪ್ರಧಾನಿ ಅಷ್ಟೊಂದು ಅಭದ್ರತೆಯ ಅನುಭವ ಹೊಂದಿದ್ದಾರೆಯೇ? ಅವರಿಗೇಕೆ ಇಷ್ಟೊಂದು ಭಯ? ಅವರು ಸಿಎಂಗಳ ಮಾತುಗಳನ್ನು ಕೇಳಬಯಸದೇ ಇದ್ದರೆ ನಮ್ಮನ್ನೇಕೆ ಕರೆದಿದ್ದರು? ಅವರು ಕೆಲ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಮಾತನಾಡಲು ಅವಕಾಶ ನೀಡಿದರು, ಆದರೆ ಮುಖ್ಯಮಂತ್ರಿಗಳನ್ನು ಅವಮಾನಿಸಿದರು" ಎಂದು ಹೇಳಿದರು.

"ಬೆಡ್, ಲಸಿಕೆ ಅಥವಾ ಆಕ್ಸಿಜನ್ ಲಭ್ಯತೆ ಬಗ್ಗೆ  ಅಥವಾ ಕೋವಿಡ್ ಸೋಂಕಿತರನ್ನು ಬಾಧಿಸುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕಿನ ಕುರಿತು ಅವರು ಕೇಳಲಿಲ್ಲ. ನಮಗೆ ಮುಜುಗರವಾಯಿತು, ಅವಮಾನವಾಯಿತು" ಎಂದು ಹೇಳಿದ ಮಮತಾ, ಹಲವಾರು ವಿಚಾರಗಳನ್ನು ಎತ್ತಬೇಕೆಂಬ ಉದ್ದೇಶದಿಂದ ಸಭೆಯಲ್ಲಿ ಭಾಗವಹಿಸಿದ್ದಾಗಿ ಹೇಳಿದರು.

"ನಾನೇನು ಎಲ್ಲಾ ಸೀಎಂಗಳ ಪರ ಮಾತನಾಡುತ್ತಿಲ್ಲ, ಆದರೆ ನಡೆಯುತ್ತಿರುವುದು ಸರ್ವಾಧಿಕಾರತ್ವ," ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News