ದಿಲ್ಲಿ,ಮುಂಬೈನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕುಸಿತ ಆದರೆ,ಸಾವುಗಳು ಇನ್ನೂ ಕಳವಳಕಾರಿ:ವೈದ್ಯರು
ಹೊಸದಿಲ್ಲಿ: ಕೋವಿಡ್-19 ಪ್ರಕರಣಗಳು ಇಳಿಮುಖವಾಗಲಾರಂಭಿಸಿದರೂ, ಕೋವಿಡ್ ನಿಂದ ತೀವ್ರವಾಗಿ ಪೀಡಿತ ನಗರಗಳಲ್ಲಿ ಸಾವು ಇನ್ನೂ ಹೆಚ್ಚಾಗಿದೆ. ಏಕೆಂದರೆ ತೀವ್ರ ನಿಗಾ ಘಟಕಗಳಲ್ಲಿ ಅಥವಾ ಐಸಿಯುಗಳಲ್ಲಿರುವ ಅನೇಕರು ಇನ್ನೂ ರೋಗಕ್ಕೆ ತುತ್ತಾಗುತ್ತಿದ್ದಾರೆ.
ದಿಲ್ಲಿಯಲ್ಲಿ, ಕಳೆದ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳು ಶೇಕಡಾ 75 ರಷ್ಟು ಕಡಿಮೆಯಾಗಿದೆ ಆದರೆ ಸಾವುಗಳು ಕೇವಲ 27 ಶೇ.ದಷ್ಟು ಕಡಿಮೆಯಾಗಿದೆ. ಮೇ 10 ರಂದು 12,651 ಪ್ರಕರಣಗಳು ಹಾಗೂ 319 ಸಾವುಗಳು ಸಂಭವಿಸಿವೆ. ಇಂದು, 10 ದಿನಗಳ ನಂತರ, 3,231 ಪ್ರಕರಣಗಳು ಹಾಗೂ 233 ಸಾವುಗಳು ವರದಿಯಾಗಿವೆ.
ದಿಲ್ಲಿಯ ಅತಿದೊಡ್ಡ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಆಸ್ಪತ್ರೆಗಳಲ್ಲಿ, ಎಪ್ರಿಲ್ ಮೊದಲ ವಾರದಿಂದ ಕೊರೋನ ಎರಡನೇ ಅಲೆಯಲ್ಲಿ 30,000 ಕ್ಕೂ ಹೆಚ್ಚು ರೋಗಿಗಳನ್ನು ದಾಖಲಿಸಲಾಗಿದೆ.
"ಕಳೆದ ಕೊರೋನ ಅಲೆಗಿಂತ ತದ್ವಿರುದ್ಧವಾದ ವ್ಯತ್ಯಾಸವಿದೆ. ಕಳೆದ ಬಾರಿ ನಾವು ಪ್ರತಿ ತಿಂಗಳು 6 ಪ್ರತಿಶತದಷ್ಟು ಮರಣ ಪ್ರಮಾಣವನ್ನು ಹೊಂದಿದ್ದೆವು. ಈ ಬಾರಿ ಅದು ಶೇಕಡಾ 7.6 ರಷ್ಟಿದೆ, ವಿಶೇಷವಾಗಿ 45 ವರ್ಷಕಿಂತ ಕಡಿಮೆ ವಯಸ್ಸಿನವರು ಆಸ್ಪತ್ರೆಗೆ ದಾಖಲಾದ ಶೇಕಡಾವಾರು ಪ್ರಮಾಣವು ಕಳೆದ ವರ್ಷ 28 ರಷ್ಟಿತ್ತು. ಆದರೆ ಅವರ ಮರಣ ಪ್ರಮಾಣವು ಈ ಬಾರಿ ಶೇಕಡಾ 2 ರಿಂದ 4 ಕ್ಕೆ ಏರಿದೆ. 45 ವಯೋಮಾನದವರಲ್ಲಿ ಈ ಬಾರಿ ಮರಣ ಪ್ರಮಾಣವು 7-9 ಶೇಕಡಾದಿಂದ 9-11 ಕ್ಕೆ ಏರಿದೆ’’ ಎಂದು ಮ್ಯಾಕ್ಸ್ ಹೆಲ್ತ್‌ಕೇರ್‌ನ ವೈದ್ಯಕೀಯ ನಿರ್ದೇಶಕ ಡಾ. ಸಂದೀಪ್ ಬುಧಿರಾಜ NDTVಗೆ ತಿಳಿಸಿದ್ದಾರೆ.
“ಅನೇಕ ರೋಗಿಗಳು ಆಸ್ಪತ್ರೆಗಳಿಗೆ ಹೋಗುವ ಬದಲು ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸಿ ಕೊನೆಯ ಹಂತದವರೆಗೆ ಮನೆಯಲ್ಲಿಯೇ ಇರುತ್ತಾರೆ. ಆಸ್ಪತ್ರೆಗೆ ದಾಖಲಾಗುವುದು ತಡವಾಗುತ್ತದೆ. ಅದು ಹೆಚ್ಚಿನ ಸಾವಿಗೆ ಕಾರಣವಾಯಿತು"ಎಂದು ಎಲ್ಎನ್‌ಜೆಪಿ ಆಸ್ಪತ್ರೆಯ ತುರ್ತು ವಿಭಾಗದ ಮುಖ್ಯಸ್ಥ ಡಾ.ರುತು ಸಕ್ಸೇನಾ ಹೇಳಿದರು.
ಮುಂಬೈಯಲ್ಲಿ ಕಳೆದ 10 ದಿನಗಳಲ್ಲಿ ಪ್ರಕರಣಗಳು ಶೇಕಡಾ 25 ರಷ್ಟು ಕಡಿಮೆಯಾಗಿವೆ ಹಾಗೂ ಸಾವುಗಳೂ ಶೇಕಡಾ 23 ರಷ್ಟು ಕಡಿಮೆಯಾಗಿದೆ. ಮೇ 10 ರಂದು ಮುಂಬೈನಲ್ಲಿ 1,794 ಪ್ರಕರಣಗಳು ಮತ್ತು 74 ಸಾವುಗಳು ಸಂಭವಿಸಿವೆ. ಇಂದು 1,425 ಪ್ರಕರಣಗಳು ಹಾಗೂ 59 ಸಾವುಗಳು ಸಂಭವಿಸಿವೆ.
"ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಗಣನೀಯ ಸಂಖ್ಯೆಯ ಜನರು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ನಾವು ನೋಡುತ್ತಿದ್ದೇವೆ. ಯುವ ಮತ್ತು ಆರೋಗ್ಯವಂತ ಜನರು ಚೇತರಿಸಿಕೊಳ್ಳಲು ಮೂರು ವಾರಗಳನ್ನು ತೆಗೆದುಕೊಳ್ಳತ್ತಾರೆ. ಹೆಚ್ಚಿನವರು 10-14 ದಿನಗಳವರೆಗೆ ವೆಂಟಿಲೇಟರ್‌ನಲ್ಲಿದ್ದಾರೆ. ಈ ಬಾರಿಯ ರೋಗದ ತೀವ್ರತೆಯು ಇದಕ್ಕೆ ಮುಖ್ಯ ಕಾರಣ"ಎಂದು ಮುಂಬೈನ ಫೋರ್ಟಿಸ್ ಆಸ್ಪತ್ರೆಗಳ ಕ್ರಿಟಿಕಲ್ ಕೇರ್ ನಿರ್ದೇಶಕ ಡಾ.ರಾಹುಲ್ ಪಂಡಿತ್ ಹೇಳಿದ್ದಾರೆ.