ಮೋದಿ ಜನಪ್ರಿಯತೆ: ಕರಗುತ್ತಿರುವ ಬಣ್ಣ...

Update: 2021-05-21 14:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಪ್ರಧಾನಿ ಮೋದಿಯವರ ನೇತೃತ್ವದ ಸರಕಾರಕ್ಕೆ ಇನ್ನೇನೂ ಏಳು ವರ್ಷ ತುಂಬಲಿದೆ. ಈ ಅವಧಿಯಲ್ಲಿ ಗಂಗೆಯಲ್ಲಿ ಸಾಕಷ್ಟು ನೀರು ಮಾತ್ರ ಹರಿದದ್ದಲ್ಲ, ನೀರಿನ ಜೊತೆಗೆ ಹೆಣಗಳೂ ತೇಲುತ್ತಿವೆ. ಗುಜರಾತ್ ಹತ್ಯಾಕಾಂಡದ ಹೆಣಗಳಿಂದ-ಕೊರೋನದ ಹೆಣಗಳವರೆಗಿನ ಪ್ರಧಾನಿ ಮೋದಿಯವರ ರಾಜಕೀಯ ಬೆಳವಣಿಗೆಗಳ ಏಳು ಬೀಳುಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೊಳಗಾಗುತ್ತಿವೆ. ಕೊರೋನದ ಈ ಸಂದರ್ಭದಲ್ಲಿ, ಮೋದಿಯವರ ಜನಪ್ರಿಯತೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಭಾರತದ ಸಿವೋಟರ್ ಮತ್ತು ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ನಡೆಸಿರುವ ಸಮೀಕ್ಷೆಗಳು ಹೇಳಿವೆ. ಕಳೆದ ವರ್ಷ ಶೇ. 65ರಷ್ಟು ಜನರು ಮೋದಿಯ ಆಡಳಿತದಿಂದ ತೃಪ್ತಿಯಾಗಿದೆ ಎಂದು ಉತ್ತರಿಸಿದ್ದರೆ, ಒಂದೇ ವರ್ಷದಲ್ಲಿ ಅವರ ಸಂಖ್ಯೆ ಶೇ. 37ಕ್ಕೆ ಇಳಿದಿದೆ.

ಇಷ್ಟಕ್ಕೂ ಮೋದಿಯ ಕುರಿತಂತೆ ಇದ್ದ ‘ಜನಪ್ರಿಯತೆ’ ಇಳಿಕೆಯಾಗಿದೆಯೇ? ಅಥವಾ ಮೋದಿಯ ಕುರಿತಂತೆ ಹೊಂದಿದ್ದ ಭ್ರಮೆಯಿಂದ ಜನರು ಹೊರಬರುತ್ತಿದ್ದಾರೆಯೇ? ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕು. ಯಾಕೆಂದರೆ, ಮೋದಿಯವರು ಯಾವ ಕಾರಣಕ್ಕಾಗಿ ದೇಶಾದ್ಯಂತ ಜನಪ್ರಿಯರಾಗಿದ್ದರು? ದೇಶದ ನಾಯಕತ್ವ ವಹಿಸಿದ ಬಳಿಕ ಅವರು ದೇಶವನ್ನು ಮುನ್ನಡೆಸುವ ಮುನ್ನವೇ ಜನರು ಅವರ ಕುರಿತಂತೆ ಅಪಾರ ಭರವಸೆಯನ್ನು ಹೊಂದಿದ್ದರು. ಈ ಭರವಸೆ, ಮೋದಿಯ ‘ಗುಜರಾತ್ ಅಭಿವೃದ್ಧಿ’ಯ ಕುರಿತಂತೆ ಮಾಧ್ಯಮಗಳು ಕಟ್ಟಿದ ಭ್ರಮೆಯಿಂದಾಗಿ ಹುಟ್ಟಿಕೊಂಡದ್ದಾಗಿತ್ತು. ಮೋದಿಯವರು, ದೇಶಕ್ಕೆ ಪರಿಚಯವಾಗಿದ್ದು ‘ಗುಜರಾತ್ ಹತ್ಯಾಕಾಂಡ’ದ ಮೂಲಕ. ಆಗ ಬಾಲಿವುಡ್‌ನಲ್ಲಿ ‘ಆ್ಯಂಟಿ ಹೀರೋ’ಗಳು ವಿಜೃಂಭಿಸುತ್ತಿದ್ದ ಕಾಲ.

ನಾಯಕರಿಗಿಂತ, ನಾಯಕನಿಗೆ ಸರಿಸಮನಾಗಿ ನಿಲ್ಲುವ ಖಳನಾಯಕರೇ ಸಿನೆಮಾಗಳಲ್ಲಿ ಜನರನ್ನು ಆಕರ್ಷಿಸುತ್ತಿದ್ದರು. ಶಾರುಕ್‌ಖಾನ್‌ನಂತಹ ಸೂಪರ್ ಸ್ಟಾರ್‌ಗಳು ಹುಟ್ಟಿದ್ದು ಇಂತಹ ಆ್ಯಂಟಿ ಹೀರೋ ಪಾತ್ರಗಳ ಮೂಲಕ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ದೇಶ, ವಿದೇಶಗಳಲ್ಲಿ ನರೇಂದ್ರ ಮೋದಿಯವರು ಕುಖ್ಯಾತಿಯನ್ನು ಪಡೆಯತೊಡಗಿದರು. ಅವರ ವಿರುದ್ಧ ಟೀಕೆಗಳು ಹೆಚ್ಚಾಗುತ್ತಾ ಹೋದಂತೆಯೇ ಅವರು ಹೆಚ್ಚು ಹೆಚ್ಚು ಜನಪ್ರಿಯರಾಗುತ್ತಾ ಹೋದರು ಎನ್ನುವುದು ಕಹಿ ಸತ್ಯ. ಅವರ ಋಣಾತ್ಮಕ ಜನಪ್ರಿಯತೆಯನ್ನು ತಮಗೆ ಪೂರಕವಾಗಿ ಬಳಸುವುದಕ್ಕೆ ಸಂಘಪರಿವಾರ ಮತ್ತು ಕಾರ್ಪೊರೇಟ್ ಶಕ್ತಿಗಳು ಜೊತೆಯಾಗಿ ಶ್ರಮಿಸಿದವು. ‘ಗುಜರಾತ್ ಹತ್ಯಾಕಾಂಡ’ವನ್ನು ‘ಸಾಂಸ್ಕೃತಿಕ ಪುನರುತ್ಥಾನ’ ಎಂದೆಲ್ಲ ಬಣ್ಣಿಸಲಾಯಿತಾದರೂ, ದೇಶವನ್ನು ಮುನ್ನಡೆಸಬಲ್ಲ ಒಬ್ಬ ನಾಯಕನನ್ನು ಒಂದು ಹಿಂಸಾಕಾಂಡದ ಆಧಾರದಲ್ಲಿ ಘೋಷಿಸುವುದಕ್ಕಾಗುವುದಿಲ್ಲ.

ಆದುದರಿಂದಲೇ ‘ಗುಜರಾತ್ ಅಭಿವೃದ್ಧಿ’ ಎನ್ನುವಂತಹ ಭ್ರಮೆಯೊಂದನ್ನು ಮಾಧ್ಯಮಗಳ ಮೂಲಕ ಈ ಶಕ್ತಿಗಳು ಸೃಷ್ಟಿಸಿದವು. ‘ಗುಜರಾತ್ ಮಾದರಿ’ ಎಂದು ಪದೇ ಪದೇ ಘೋಷಿಸುತ್ತಾ,ಜನರ ಎದೆಗೆ ಆಳವಾಗಿ ಇಳಿಸಲಾಯಿತು. ‘ಗುಜರಾತ್‌ನಲ್ಲಿ ಪವರ್ ಕಟ್ ಇಲ್ಲವೇ ಇಲ್ಲ’ ‘ಗುಜರಾತ್‌ನ ಎಲ್ಲ ಆಸ್ಪತ್ರೆಗಳನ್ನು ಮೋದಿಯವರು ಇಂಟರ್‌ನೆಟ್ ಮೂಲಕ ವೀಕ್ಷಿಸುತ್ತಾರೆ...’ ‘ಗುಜರಾತ್‌ನ ಬಸ್ ನಿಲ್ದಾಣ ವಿಮಾನ ನಿಲ್ದಾಣದಂತಿದೆ’‘ಗುಜರಾತ್‌ನಲ್ಲಿ ಭ್ರಷ್ಟಾಚಾರವೇ ಇಲ್ಲ’ ಮೊದಲಾದ ಹಸಿ ಸುಳ್ಳುಗಳ ಮೂಲಕ ‘ಗುಜರಾತ್ ಮಾದರಿ’ಯೊಂದನ್ನು ಕಟ್ಟಿಕೊಡಲಾಯಿತು. ಮತ್ತು ಈ ಅಭಿವೃದ್ಧಿ ಮೋದಿಯಿಂದಾಗಿ ಸಾಧ್ಯವಾಯಿತು, ಮೋದಿಯವರನ್ನು ದೇಶದ ನಾಯಕರನ್ನಾಗಿಸಿದರೆ, ಈ ದೇಶವೂ ಮುಂದೊಂದು ದಿನ, ಅದೇ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮಾಧ್ಯಮಗಳನ್ನು ಬಳಸಿಕೊಂಡು ಜನರ ಮೆದುಳಲ್ಲಿ ತುಂಬಲಾಯಿತು. ಇದಕ್ಕೆ ಹೊರತಾದ ಯಾವ ಹಿನ್ನೆಲೆಯೂ ಮೋದಿಯ ಜನಪ್ರಿಯತೆಯ ಹಿಂದೆ ಇದ್ದಿರಲಿಲ್ಲ ಎನ್ನುವುದು ವಾಸ್ತವ. ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದ ಜನರು, ಮೋದಿಯ ಮೂಲಕ ‘ವಿಶ್ವಗುರು’ವಾಗಲಿರುವ ಭಾರತವೊಂದನ್ನು ಕನಸತೊಡಗಿದರು.

ಮೋದಿಯವರು ಪ್ರಧಾನಿಯಾದಾಗ ‘ಅಚ್ಛೇ ದಿನ್ ಆನೇ ವಾಲಾ ಹೇ’ ಎಂದು ಘೋಷಿಸಿದರು. ಜನರು ಆ ಘೋಷಣೆಯನ್ನೇ ಸಂಭ್ರಮಿಸಿದರು. ಮೋದಿಯವರ ವಿದೇಶ ಪ್ರವಾಸಗಳನ್ನು, ಅಲ್ಲಿನ ಭಾಷಣಗಳನ್ನು ವೈಭವೀಕರಿಸಲಾಯಿತು. ಮೋದಿ ‘ದೇಶಕ್ಕಾಗಿ ಏನನ್ನೋ ಮಾಡುತ್ತಿದ್ದಾರೆ...’ ಎಂದು ಜನರು ಭ್ರಮಿಸತೊಡಗಿದರು. ‘ಮೋದಿಯವರು ನಿದ್ರಿಸುವುದೇ ಇಲ್ಲ’ ಎನ್ನುವುದು ಅವರ ಸಾಧನೆಯಾಯಿತು. ನಿದ್ರಿಸದೇ ಅವರು ಈ ದೇಶಕ್ಕೆ ನೀಡಿದ್ದಾದರೂ ಏನು? ಎಂಬ ಪ್ರಶ್ನೆಗಳನ್ನು ಯಾರೂ ಕೇಳಲಿಲ್ಲ. ಸಾಧಾರಣವಾಗಿ ಒಬ್ಬ ನಾಯಕ ಜನಪ್ರಿಯನಾಗುವುದು ತನ್ನ ನಿರ್ಧಾರಗಳು ಮತ್ತು ಯೋಜನೆಗಳ ಮೂಲಕ. ಯಾವುದೇ ಯೋಜನೆಗಳನ್ನು ಘೋಷಿಸದೆ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಭವಿಷ್ಯದಲ್ಲಿ ಈ ದೇಶಕ್ಕೆ ಅದೇನೋ ಮಾಡುತ್ತಾರೆ ಎಂಬ ಭರವಸೆಯ ಮೇಲೆ ಜನಪ್ರಿಯ ನಾಯಕರಾಗಿದ್ದು ನರೇಂದ್ರ ಮೋದಿ ಮಾತ್ರ. ಕೃತಕವಾಗಿ ಕಟ್ಟಿ ನಿಲ್ಲಿಸಲ್ಪಟ್ಟ ಮೋದಿಯವರ ಪ್ರತಿಮೆ ಈಗ ಜೋರಾದ ಮಳೆಗೆ ಕರಗತೊಡಗಿವೆ. ಕೊರೋನದಿಂದ ತತ್ತರಿಸಿರುವ ಜನರು ‘ಮೋದಿಯವರು ಏನನ್ನಾದರೂ ಮಾಡಿಯೇ ಮಾಡುತ್ತಾರೆ’ ‘ಇನ್ನೇನೂ ಹೊಸ ಯೋಜನೆಗಳನ್ನು ಘೋಷಿಸುತ್ತಾರೆ’ ಎಂದು ಸಾವಿನ ಮನೆಯೆಡೆಗೆ ತಲೆ ಹಾಕಿ ಮಲಗಿದ್ದಾಗಲೂ ನಂಬಿದ್ದರು. ಅವರಿಗೆಲ್ಲ ಗಾಢ ನಿರಾಶೆಯಾಗಿದೆ. ಇದನ್ನು ಮೋದಿಯ ಜನಪ್ರಿಯತೆ ಕುಗ್ಗಿದೆ ಎನ್ನುವುದಕ್ಕಿಂತ, ಮೋದಿಯ ಕುರಿತಂತೆ ಜನರು ಕಟ್ಟಿಕೊಂಡ ಭ್ರಮೆಗಳು ಕರಗತೊಡಗಿವೆೆ ಎನ್ನುವುದೇ ಸರಿಯಾದ ಕ್ರಮ.

ಪ್ರಧಾನಿಯಾದ ಬಳಿಕ ಕೆಲವು ಕಠಿಣ ಮತ್ತು ಮಹತ್ವದ ನಿರ್ಧಾರಗಳನ್ನು ಮೋದಿಯವರು ತೆಗೆದುಕೊಂಡರು ಎನ್ನುವುದು ಸತ್ಯ. ಈ ನಿರ್ಧಾರಗಳು ಈ ದೇಶದ ಭವಿಷ್ಯಕ್ಕೆ ಒಳಿತನ್ನು ಮಾಡುತ್ತದೆ ಎಂದೂ ಜನರು ನಂಬಿದ್ದರು. ಅಂತಹ ನಿರ್ಧಾರಗಳಲ್ಲಿ ಒಂದು, ನಮಾಮಿ ಗಂಗಾ ಯೋಜನೆ. ಸುಮಾರು 20,000 ಕೋಟಿ ರೂ.ಯ ಯೋಜನೆಯ ಮೂಲಕ ಗಂಗೆಯನ್ನು ಶುದ್ಧೀಕರಣಗೊಳಿಸುವುದಕ್ಕೆ ಮೋದಿ ಸರಕಾರ ನಿರ್ಧರಿಸಿತು. ಆದರೆ ಈ ಯೋಜನೆ ಇದೀಗ ಸಂಪೂರ್ಣ ನೀರಲ್ಲಿ ಕೊಚ್ಚಿ ಹೋಗಿದೆ ಮಾತ್ರವಲ್ಲ, ಈ ಯೋಜನೆಯನ್ನು ಅಣಕಿಸುವಂತೆ ನೂರಾರು ಹೆಣಗಳು ಗಂಗಾ ನದಿಯಲ್ಲಿ ತೇಲುತ್ತಿವೆ. ಈ ದೇಶದ ಕಪ್ಪುಹಣವನ್ನೆಲ್ಲ ಖಜಾನೆಗೆ ತುಂಬಿಸುವ ಭಾಗವಾಗಿ ‘ನೋಟು ನಿಷೇಧ’ ಎನ್ನುವ ಇನ್ನೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಈ ನಿರ್ಧಾರ ದೇಶದ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಿತು. ಅಷ್ಟೇ ಅಲ್ಲ, ನಿರೀಕ್ಷೆಯಂತೆ ಕಪ್ಪು ಹಣ ಪತ್ತೆಯಾಗಲೇ ಇಲ್ಲ. ಸಾವಿರಾರು ಕೋಟಿ ಕಪ್ಪು ಹಣಗಳು ಈ ಸಂದರ್ಭದಲ್ಲಿ ಬಿಳಿಯಾದವು. ಇದಾದ ಬಳಿಕ ಜಿಎಸ್‌ಟಿ ಇನ್ನೊಂದು ಮಹತ್ವದ ನಿರ್ಧಾರ.

ಈ ಮೂಲಕ ವ್ಯಾಪಾರ ವಹಿವಾಟು ಸುಲಭವಾಗಲಿದೆ ಎಂದು ಮೋದಿ ಸರಕಾರ ಹೇಳಿಕೊಂಡಿತು. ಇಂದು ಜಿಎಸ್‌ಟಿ ವ್ಯಾಪಾರವನ್ನು ಇನ್ನಷ್ಟು ಜಟಿಲಗೊಳಿಸಿದೆ ಮಾತ್ರವಲ್ಲ, ರಾಜ್ಯಗಳ ಸಾವಿರಾರು ಕೋಟಿ ಪರಿಹಾರ ಹಣವನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ. ಇತ್ತ ಸರಕಾರದ ಬೇಜವಾಬ್ದಾರಿಯೇ ವಿದೇಶದಿಂದ ಕೊರೋನಾವನ್ನು ಆಹ್ವಾನಿಸಿತು ಮತ್ತು ಅದನ್ನು ಭಾರತದಲ್ಲಿ ಇನ್ನಷ್ಟು ಭೀಕರಗೊಳಿಸಲಾಯಿತು. ಲಾಕ್‌ಡೌನ್‌ನಿಂದಾಗಿ ಅಳಿದುಳಿದ ಆರ್ಥಿಕತೆಯೂ ನೆಲಕಚ್ಚಿತ್ತು. ಸರಕಾರದ ಬೇಜವಾಬ್ದಾರಿಗೆ ಭಾರತ ಭಾರೀ ಬೆಲೆಯನ್ನು ತೆತ್ತಿತು. ಮೋದಿಯವರ ಕೈಯಲ್ಲಿ ಭಾಷಣಗಳಲ್ಲದೆ, ಇನ್ನಾವ ಯೋಜನೆಗಳೂ ಇಲ್ಲ. ಕೊರೋನ ನಿರ್ವಹಣೆಯ ಹೊಣೆಯನ್ನು ಆಯಾ ರಾಜ್ಯಗಳ ತಲೆಗೆ ಕಟ್ಟಿ ವೌನದ ಮೊರೆ ಹೋಗಿದ್ದಾರೆ.

ಇಂದು ದೇಶದ ಜನತೆ ಪಾಕಿಸ್ತಾನದ ವಿರುದ್ಧದ ಎರಡು ‘ಅಗೋಚರ ಸರ್ಜಿಕಲ್ ಸ್ಟ್ರೈಕ್’ನಿಂದ ಸಂತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಉಳಿದಂತೆ ಕಾಶ್ಮೀರದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಚೀನಾದ ಮುಂದೆ ದೇಶಕ್ಕೆ ಮುಜುಗರವಾಗಿದೆ. ನಮ್ಮ ಸೈನಿಕರು ಕಳೆದ ಏಳುವರ್ಷಗಳಲ್ಲಿ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಉಗ್ರರಿಗೆ ಬಲಿಯಾಗಿದ್ದಾರೆ. ಈ ಏಳು ವರ್ಷಗಳಲ್ಲಿ ಮೋದಿಯವರು ಇಂದಿಗೂ ಗುಜರಾತಿನ ಪ್ರಧಾನಿಯಾಗಿಯಷ್ಟೇ ಗುರುತಿಸಲ್ಪಡುತ್ತಿದ್ದಾರೆ. ಸಮಗ್ರ ಭಾರತವನ್ನು ಪ್ರಧಾನಿಯಾಗಿ ಪ್ರತಿನಿಧಿಸುವುದಕ್ಕೆ ಅವರಿಂದ ಸಾಧ್ಯವಾಗಿಲ್ಲ. ತೌಕ್ತೆ ಚಂಡಮಾರುತಕ್ಕೆ ತತ್ತರಿಸಲ್ಪಟ್ಟ ಗುಜರಾತ್‌ಗೆ ಒಂದು ಸಾವಿರ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ ಮೋದಿಯವರು, ಇತರ ರಾಜ್ಯಗಳನ್ನು ಸಂಪೂರ್ಣ ಮರೆತಿದ್ದಾರೆ. ಆಕ್ಸಿಜನ್ ಪೂರೈಕೆಯಲ್ಲೂ ಇಂತಹದೇ ಭೇದವನ್ನು ತಳೆಯುವ ಮೂಲಕ, ದೇಶ ದ ಒಕ್ಕೂಟ ವ್ಯವಸ್ಥೆಗೆ ದ್ರೋಹ ಬಗೆದಿದ್ದಾರೆ. ಇಂದು ಜನರು, ಏಳು ವರ್ಷಗಳ ಹಿಂದಿದ್ದ ಬುರೇ ದಿನ್‌ನ್ನು ವಾಪಸ್ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಆ ಬುರೇ ದಿನವನ್ನು ಮರಳಿಸುವ ಶಕ್ತಿಯೂ ಮೋದಿಯವರ ಆಡಳಿತಕ್ಕಿಲ್ಲ ಎನ್ನುವುದು ಜನರಿಗೆ ಸ್ಪಷ್ಟವಾಗತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News