ನ್ಯೂಯಾರ್ಕ್: ಫೆಲೆಸ್ತೀನ್-ಇಸ್ರೇಲ್ ಬೆಂಬಲಿಗರ ನಡುವೆ ಘರ್ಷಣೆ

Update: 2021-05-21 17:49 GMT
ಸಾಂದರ್ಭಿಕ ಚಿತ್ರ

 ನ್ಯೂಯಾರ್ಕ್,ಮೇ 21: ಅಮೆರಿಕದ ನ್ಯೂಯಾರ್ಕ್ ನಗರದ ಹೃದಯಭಾಗವಾದ ಟೈಮ್ಸ್ ಸ್ಕ್ವೇರ್ ನಲ್ಲಿ ಇಸ್ರೇಲ್ ಪರ ಹಾಗೂ ಫೆಲೆಸ್ತೀನ್ ಪರ ಪ್ರತಿಭಟನಕಾರರ ನಡುವೆ ಗುರುವಾರ ಹಿಂಸಾತ್ಮಕ ಘರ್ಷಣೆಗಳು ನಡೆದಿರುವುದಾಗಿ ವರದಿಯಾಗಿದೆ.

 ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವೆ ಕಳೆದ ಹತ್ತು ದಿನಗಳ ಭೀಕರ ಸಂಘರ್ಷದ ಬಳಿಕ ಇಸ್ರೇಲ್ ಹಾಗೂ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ನಡುವೆ ಶಾಂತಿ ಒಪ್ಪಂದವೇರ್ಪಟ್ಟ ಕೆಲವೇ ತಾಸುಗಳ ಬಳಿಕ ಟೈಮ್ಸ್ ವೃತ್ತದಲ್ಲಿ ಘರ್ಷಣೆಗಳು ನಡೆದಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಮ್ಯಾನ್‌ ಹಟ್ಟನ್ ನಲ್ಲಿ ಕಾರೊಂದರಿಂದ ಸುಡುಮದ್ದನ್ನು ಜನರ ಗುಂಪಿನ ಮೇಲೆ ದುಷ್ಕರ್ಮಿಗಳು ಎಸೆದಿದ್ದು, ಘಟನೆಯಲ್ಲಿ ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆಯೆಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಈ ಮಧ್ಯೆ ಟೈಮ್ಸ್ ವೃತ್ತದ ಮಧ್ಯಭಾಗದಲ್ಲಿ ಫೆಲೆಸ್ತೀನ್ ಪರ ಹಾಗೂ ಇಸ್ರೇಲ್ ಪರ ಪ್ರತಿಭಟನಕಾರರ ನಡುವೆ ಮಾರಾಮಾರಿ ನಡೆದಿದ್ದು, ಅವರನ್ನು ಚದುರಿಸಲು ಪೊಲೀಸರು ಬಲಪ್ರಯೋಗಿಸಿದರು.
 
ಗಾಝಾ ಪಟ್ಟಿಯುದ್ದಕ್ಕೂ ಇಸ್ರೇಲ್ ದಾಳಿಯನ್ನು ವಿರೋಧಿಸಿ ಕಳೆದ ಹತ್ತು ದಿನಗಳಿಂದೀಚೆಗೆ ಅಮೆರಿಕದ ಬೃಹತ್ ನಗರಗಳಲ್ಲಿ ಫೆಲೆಸ್ತೀನ್ ಪರ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಮಂಗಳವಾರದಂದು ನ್ಯೂಯಾರ್ಕ್ ನಗರದ ಮ್ಯಾನ್‌ಹಟ್ಟನ್ ನಲ್ಲಿ ಸಾವಿರಾರು ಪ್ರತಿಭಟನಕಾರರು ಕಾಲ್ನಡಿಗೆ ಜಾಥಾ ನಡೆಸಿದ್ದು ಕೆಲವು ತಾಸುಗಳವರೆಗೆ ಸಂಚಾರಸ್ತಬ್ಧಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News