ಬೆತ್ತಲಾಗಿದ್ದು ವ್ಯವಸ್ಥೆ ಮಾತ್ರ ಅಲ್ಲ, ಸಮಾಜವ್ಯಾಧಿ ಕೂಡ..!

Update: 2021-05-21 19:30 GMT

ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಮನೋಭಾವವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಮೊದಲಿನಿಂದಲೂ ಎರಡನೇ ಅಲೆಯನ್ನು ನಿರ್ಲಕ್ಷಿಸಿದ್ದೇ ಮೊದಲನೇ ತಪ್ಪು. ಇದರೊಂದಿಗೆ ಪ್ರಶ್ನಿಸುವುದರಿಂದ ವ್ಯವಸ್ಥೆಯ ಹುಳುಕುಗಳು ಹೊರಬರುತ್ತವೆ ಅಂದುಕೊಳ್ಳುವುದೇ ದೊಡ್ಡ ತಪ್ಪು. ಕೊರೋನ ಒಂದು ದೊಡ್ಡ ಮಹಾಮಾರಿ ಆಗಿರುವುದರಿಂದ ಅದರ ನಿಯಂತ್ರಣದಲ್ಲಿ ಸಾಕಷ್ಟು ಲೋಪಗಳು ಆಗಿರಬಹುದು. ಅಂದ ಮಾತ್ರಕ್ಕೆ ಅವುಗಳನ್ನು ಪ್ರಶ್ನಿಸಲೇಬಾರದು ಅನ್ನುವುದು ತಪ್ಪಾಗುತ್ತದೆ.


ಡಾ. ಡಿ.ಸಿ ನಂಜುಂಡ ಇದು ನಮ್ಮ ದುರಾದೃಷ್ಟವಲ್ಲದೆ ಇನ್ನೇನೂ ಅಲ್ಲ. ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೂ ರಾಜಕೀಯ ಮತ್ತು ಸಾಮಾಜಿಕ ಸೋಂಕು ಖಂಡಿತವಾಗಿ ಇರುತ್ತದೆ. ಹಾಗಾಗಿ ಕೊರೋನ ವೈರಸ್ ನಿರ್ವಹಣೆ ಕಳೆದ ವರ್ಷದಿಂದ ರಾಜಕೀಯ ಮತ್ತು ಸಾಮಾಜಿಕ ಆಯಾಮಗಳನ್ನು ರೋಚಕವಾಗಿ ಪಡೆದುಕೊಳ್ಳುತ್ತಿದೆ. ಈ ದೇಶದಲ್ಲಿ ಏನೇ ನಡೆದರೂ ಅದು ರಾಜಕೀಯ ಮತ್ತು ಸಾಮಾಜಿಕ ಆಯಾಮಗಳನ್ನು ಮೊದಲು ಪಡೆದುಕೊಳ್ಳುತ್ತದೆ. ಅದರೊಂದಿಗೆ ತಮ್ಮ ಮೆದುಳನ್ನು ಹಲವಾರು ವರ್ಷಗಳಿಂದ ರಾಜಕೀಯ ನಾಯಕರಿಗೆ ಗುತ್ತಿಗೆ ನೀಡಿರುವ ಕೆಲವು ಅರೆಬೆಂದ ಮನಸ್ಥಿತಿಯ ಪ್ರಜೆಗಳು ಹಿಂದೆಮುಂದೆ ಯೋಚಿಸದೆ ಯಾವುದೋ ಒಂದು ಸಿದ್ಧಾಂತಕ್ಕೆ ಜೋತುಬಿದ್ದು ಸಮಾಜ ವ್ಯಾಧಿಯನ್ನು ಎಲ್ಲೆಡೆಗೆ ಕೊರೋನಕ್ಕಿಂತ ವೇಗವಾಗಿ ಹರಡುತ್ತಾರೆ. ಒಂದು ರೀತಿಯಲ್ಲಿ ಇವರು ಕೊರೋನ ವೈರಸ್‌ಗಿಂತಲೂ ಬಹಳ ಅಪಾಯಕಾರಿ.

ದೇಶದಲ್ಲಿ ಏನೇ ಒಳ್ಳೆಯದು ಅಥವಾ ಕೆಟ್ಟದು ನಡೆದರೂ ತಾರ್ಕಿಕವಾಗಿ ಚಿಂತಿಸದೆ, ದೇಶದ ಹಿತದೃಷ್ಟಿಯನ್ನು ಯೋಚಿಸದೆ ತಕ್ಷಣ ಏನೋ ಒಂದು ಮನಸ್ಸಿಗೆ ಬಂದಿದ್ದನ್ನು ಪ್ರತಿಕ್ರಿಯಿಸುವುದು ದೇಶದ ಕೆಲವು ಪ್ರಜೆಗಳಿಗೆ ಬಹಳ ಹಿಂದಿನಿಂದಲೂ ಅಂಟಿಕೊಂಡಿರುವ ಕಾಯಿಲೆ. ದೇಶದ ಅಭಿವೃದ್ಧಿಗೆ ಸಕಾರಾತ್ಮಕ ಟೀಕೆಗಳು ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕಾಗುತ್ತದೆ. ಆದರೆ ಆ ಸಕಾರಾತ್ಮಕ ಟೀಕೆಗಳಿಗೆ ಯಾವುದೇ ರಾಜಕೀಯ ಅಥವಾ ಸಿದ್ಧಾಂತಗಳ ಸೋಂಕು ಇರಬಾರದು. ಅದು ಇದ್ದಾಗಲೇ ಅದನ್ನು ಜನರು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ದೇಶವನ್ನಾವರಿಸಿರುವ ಮಹಾಮಾರಿ ಕೊರೋನ ವಿಚಾರದಲ್ಲಿ ಸಹ ಅದೇ ರೀತಿಯಾಗಿದೆ.

ಅಸಂಘಟಿತ ವಲಯದ ಕಾರ್ಮಿಕರು, ಸರಕಾರದ ಮಾತನ್ನು ನಿರ್ಲಕ್ಷಿಸುವ ಜನರೇ ಹೆಚ್ಚಾಗಿ ತುಂಬಿಕೊಂಡಿರುವ ಈ ದೇಶದಲ್ಲಿ ಕೊರೋನದಂತಹ ಮಹಾಮಾರಿ ಕಾಣಿಸಿಕೊಂಡರೆ ಅದನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಬಹಳಷ್ಟು ವರ್ಷಗಳಿಂದ ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗುತ್ತಿದೆ. ಬೇರೆ ದೇಶಗಳು ತಮ್ಮ ಒಟ್ಟು ಆದಾಯದಲ್ಲಿ ಶೇ. ನಾಲ್ಕರಿಂದ 5ರಷ್ಟು ಜಿಡಿಪಿಯನ್ನು ಆರೋಗ್ಯಕ್ಷೇತ್ರಕ್ಕೆ ನೀಡಿದರೆ ನಮ್ಮ ದೇಶದಲ್ಲಿ ಇದರ ಪ್ರಮಾಣ ಕೇವಲ ಶೇ. 1.2 ಅಷ್ಟೇ. ಹಾಗಾಗಿ ಭಾರತದ ಯಾವ ರಾಜ್ಯದಲ್ಲೂ ಹೇಳಿಕೊಳ್ಳುವಷ್ಟು ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಇರುವುದರಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸ್ವಲ್ಪಉತ್ತಮ ಎನ್ನಬಹುದು. ಹಾಗಾಗಿ ಇಡೀ ದೇಶವೇ ಒಟ್ಟಾಗಿ ಸೇರಿ ಎದುರಿಸಬೇಕಾಗಿದ್ದ ಈ ಮಹಾಮಾರಿಯನ್ನು ರಾಜಕೀಯವಾಗಿ ಎದುರಿಸಲು ಆರಂಭಿಸಿದ್ದೇ ಮಾಡಿದ ಮೊದಲ ತಪ್ಪು. ಇಂತಹ ಸಮಯದಲ್ಲಿ ಸರಕಾರವನ್ನು ಟೀಕಿಸುವುದರ ಬದಲಾಗಿ ಪರಸ್ಪರ ಹೊಂದಾಣಿಕೆಯ ಮೇಲೆ ಕಾರ್ಯನಿರ್ವಹಿಸಬೇಕಾಗುತ್ತದೆ. ಏಕೆಂದರೆ ಇಲ್ಲಿ ಪ್ರತಿಪಕ್ಷ ಆಡಳಿತಪಕ್ಷ ಅನ್ನೋದಕ್ಕಿಂತ ಜನರ ಪಕ್ಷ ವಹಿಸುವುದು ಬಹಳ ಮುಖ್ಯ. ಆದರೆ ಅದು ನಮ್ಮಲ್ಲಿ ನಡೆಯಲಿಲ್ಲ.

ಪರಸ್ಪರ ಕೆಸರು ಎರಚಿಕೊಂಡೇ ಕೊರೋನ ವೈರಸ್ ಎದುರಿಸಲು ನಿಂತರು. ಇದರ ನಡುವೆ ಲಸಿಕೆಗಳು ಬಂದವು. ಅವುಗಳ ಬಗ್ಗೆಯೂ ಸಾಕಷ್ಟು ಗೊಂದಲಗಳು ಸೃಷ್ಟಿಯಾದವು. ಮೊದಲು ದೇಶವಾಸಿಗಳಿಗೆ ಲಸಿಕೆಯನ್ನು ನೀಡುವುದರ ಬದಲಾಗಿ ಕೇಂದ್ರ ಸರಕಾರವು ರಾತೋರಾತ್ರಿ ಶೇ. 60ರಿಂದ 70 ಲಸಿಕೆಗಳನ್ನು ಬೇರೆ ದೇಶಗಳಿಗೆ ನೀಡಲಾರಂಭಿಸಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಾಯಕರು ವರ್ಚಸ್ಸು ನಿರ್ವಹಣೆ ಮಾಡಲು ಹೋಗಿ ಕೊನೆಗೆ ಭಾರತೀಯರೇ ಲಸಿಕೆಗೆ ಪರದಾಡಬೇಕಾದ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಇಂತಹ ನಾಟಕಗಳು ನಮಗೆ ಬೇಕಿತ್ತೇ? ದೇಶದ ನಾಯಕರಿಗೆ ದೂರದೃಷ್ಟಿ ಕೊರತೆಯಿಂದ ಇಂದು ನಾವು ವಿಶ್ವದ ಮುಂದೆ ಆಮ್ಲಜನಕಕ್ಕಾಗಿ ಬೇಡಬೇಕಾದ ಸ್ಥಿತಿ ಬಂದಿದೆ. ಆರಂಭಿಕ ದಿನಗಳಲ್ಲಿ ಲಸಿಕೆ ಬಂದಾಗ ಹೆದರಿಕೆಯಿಂದಾಗಿ ಪಡೆಯಲು ಮುಂದಾಗದ ನಮ್ಮ ಪ್ರಜೆಗಳು ಈಗ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ.

ಇದು ಒಂದೆಡೆಯಾದರೆ ನಮ್ಮ ವ್ಯಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದ ನಕಲಿ ಅಧ್ಯಾಪಕರಿಂದ ಇನ್ನೊಂದು ರೀತಿ ಹಾವಳಿ ಆರಂಭವಾಯಿತು. ಯಾವುದೇ ವೈದ್ಯಕೀಯ ಜ್ಞಾನವಿಲ್ಲದ ಇಂತಹವರು ಕೊರೋನ ವೈರಸ್ ಬಗ್ಗೆ ಮತ್ತು ಅದರ ಸದ್ಯದ ನಿರ್ವಹಣೆಯ ಬಗ್ಗೆ ಸಿಕ್ಕಸಿಕ್ಕಂತೆ ಟ್ರೋಲ್ ಮಾಡಲಾರಂಭಿಸಿದರು. ವ್ಯಾಟ್ಸ್‌ಆ್ಯಪ್‌ಗೆ ಬರುವ ಮಾಹಿತಿ ಸರಿ ಇದೆಯೇ, ತಪ್ಪಿದೆಯೇ? ಇತ್ಯಾದಿ ಕುರಿತು ಯಾವುದನ್ನೂ ಯೋಚಿಸದೆ ಎಲ್ಲೆಡೆ ಹರಿಬಿಡಲಾರಂಭಿಸಿದರು. ದಿನಪೂರ್ತಿ ಮೊಬೈಲ್‌ನಲ್ಲಿ ಬೇಡದ ವಿಚಾರಗಳ ಕುರಿತು ಮಾಹಿತಿಗಳು ಬರಲಾರಂಭಿಸಿದವು. ಇದು ಕೊರೋನವನ್ನು ಧನಾತ್ಮಕವಾಗಿ ಎದುರಿಸುವ ಬದಲಾಗಿ ಇಡೀ ಸಮುದಾಯದಲ್ಲಿ ಒಂದು ರೀತಿಯ ಅವ್ಯಕ್ತ ಭಯ ಮೂಡಲು ಆರಂಭವಾಯಿತು. ಜನಸಾಮಾನ್ಯರಿಗೆ ಯಾವುದು ಸರಿಯಾದ ಮಾಹಿತಿ? ಯಾವುದು ತಪ್ಪುಮಾಹಿತಿ? ಎಂಬ ವಿಚಾರದಲ್ಲಿ ಬಹಳ ದೊಡ್ಡ ಗೊಂದಲ ಉಂಟಾಯಿತು. ಅನವಶ್ಯಕವಾಗಿ ಕೆಲವು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಮಾಡಿಕೊಂಡು ತಪ್ಪುಮಾಹಿತಿಯನ್ನು ಎಲ್ಲೆಡೆ ಹರಡಲು ಆರಂಭಿಸಿದರು. ಸಮುದಾಯಗಳ ಮಧ್ಯೆ ಅಪನಂಬಿಕೆ ಬರುವಂತೆ ಕೆಲಸಗಳು ಸಹ ಬಹಳ ವ್ಯವಸ್ಥಿತವಾಗಿ ದೇಶದಲ್ಲಿ ನಡೆದವು.

ದೇಶದಲ್ಲಿನ ವ್ಯವಸ್ಥೆಯ ವೈಫಲ್ಯವನ್ನು ಕಂಡಂತಹ ದೇಶದ ನ್ಯಾಯಾಲಯಗಳು ಈಗ ಕಾರ್ಯಪ್ರವೃತ್ತವಾಗಿವೆ. ಸರಕಾರವನ್ನು ನಂಬಿ ಕೂತರೆ ಪ್ರಜೆಗಳ ಪ್ರಾಣ ಹೋಗುವುದು ಖಂಡಿತ ಎಂಬ ಅಭಿಪ್ರಾಯಗಳು ಬಂದಾಗ ತಕ್ಷಣವೇ ದೇಶದ ಹಲವಾರು ನ್ಯಾಯಾಲಯಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮತ್ತು ಕೆಲವು ಸಂದರ್ಭಗಳಲ್ಲಿ ‘ಸು-ಮೋಟೋ’ ಅಧಿಕಾರವನ್ನು ಬಳಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಚಾಟಿ ಬೀಸಲಾರಂಭಿಸಿದವು. ಆಮ್ಲಜನಕ, ವೆಂಟಿಲೇಟರ್ ಮತ್ತು ಆಸ್ಪತ್ರೆಗಳ ವಿಚಾರದಲ್ಲಿ ಸರಕಾರಗಳಿಗೆ ನ್ಯಾಯಾಲಯಗಳು ಕಟುವಾದ ಶಬ್ದಗಳಲ್ಲಿ ಟೀಕಿಸುವುದರೊಂದಿಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಲಾರಂಭಿಸಿವೆ. ಸುಪ್ರೀಂಕೋರ್ಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಿತು ಹಾಗೂ ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಇದನ್ನು ಧನಾತ್ಮಕವಾಗಿ ಸ್ವೀಕರಿಸುವ ಬದಲಾಗಿ ನ್ಯಾಯಾಲಯದ ವಿರುದ್ಧವೇ ಆಡಳಿತ ಪಕ್ಷದ ಸದಸ್ಯರು ಟೀಕೆ ಮಾಡಲಾರಂಭಿಸಿದರು. ಲಸಿಕೆಯ ಬೆಲೆಯ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶವನ್ನು ಮಾಧ್ಯಮಗಳಲ್ಲಿ ನಿಂದಿಸಲಾರಂಭಿಸಿದರು. ನ್ಯಾಯಾಂಗದ ಕ್ರಿಯಾಶೀಲತೆಯನ್ನೇ ತುಳಿಯುವ ಯತ್ನ ನಡೆಯಿತು.

ಈ ಮಧ್ಯೆ ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಕೆಲವರು ಸ್ವತಃ ತಾವೇ ನಗೆಪಾಟಲಿಗೀಡಾಗುವ ಸ್ಥಿತಿ ತಂದುಕೊಂಡರು. ಹಿಂದೆ-ಮುಂದೆ ನೋಡದೆ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ಕುಟುಕು ಕಾರ್ಯಾಚರಣೆ ಮೂಲಕ ಏನೋ ಮಾಡಲು ಹೋಗಿ ಏನೋ ಮಾಡಿಕೊಂಡರು. ಮಾಧ್ಯಮಗಳ ಮುಂದೆ ಒಂದೇ ಸಮುದಾಯದ ಸುಮಾರು 17 ಮಂದಿ ಹೆಸರನ್ನು ಹೇಳಿ ಕೊನೆಗೆ ತಮ್ಮ ಮುಖಕ್ಕೇ ತಾವೇ ಮಸಿ ಬಳಿದು ಕೊಂಡರು. ಒಂದೆಡೆ ಅಂತ್ಯಸಂಸ್ಕಾರಕ್ಕೆ ಧರ್ಮದ ಗಡಿ ಇಲ್ಲದೆ ಎಲ್ಲಾ ಸಮುದಾಯದವರು ಕೈಜೋಡಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಇದು ಸಮಾಜದಲ್ಲಿ ಅನವಶ್ಯಕವಾಗಿ ಸಮುದಾಯಗಳ ಮಧ್ಯೆ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಕೊನೆಗೆ ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಆಡಳಿತ ಪಕ್ಷದವರ ಕೈವಾಡ ಮುಖ್ಯವಾಗಿದೆ ಎಂಬ ಆರೋಪ ಬಂತು. ಇಂತಹ ಬೃಹತ್ ಪ್ರಮಾಣದ ಬೆಡ್ ಬ್ಲಾಕಿಂಗ್ ಕೆಲಸಗಳನ್ನು ದೊಡ್ಡವರ ಕೃಪಾಕಟಾಕ್ಷ ಇಲ್ಲದೆ ಯಾರೂ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಭಾಗವಹಿಸಿರುವ ತಿಮಿಂಗಿಲಗಳನ್ನು ಹಿಡಿಯುವುದು ಅಸಾಧ್ಯದ ಕೆಲಸವೇ?.

ಉತ್ತರದ ಕೆಲವು ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ನೂರಾರು ಸಂಖ್ಯೆಯಲ್ಲಿ ಶವಗಳನ್ನು ನೇರವಾಗಿ ನದಿಗೆ ಎಸೆಯುವ ಸ್ಥಿತಿ ಬಂದೊದಗಿದೆ. ಗಂಗಾ ಮತ್ತು ಯಮುನಾ ನದಿಯ ತಟದಲ್ಲಿ ನಾಯಿ ಮತ್ತು ಹದ್ದುಗಳು ಶವಗಳನ್ನು ತಿನ್ನುತ್ತಿವೆ. ಅಷ್ಟೊಂದು ಪ್ರಮಾಣದಲ್ಲಿ ಕೆಲವು ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಏರುತ್ತಿದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದರ ಬದಲಾಗಿ ಅಲ್ಲಿನ ಜನರ ಶವಗಳನ್ನು ನೇರವಾಗಿ ಎಸೆಯುವ ಜಲಸಮಾಧಿ ಸಂಸ್ಕೃತಿಯ ಕುರಿತು ಮಾತನಾಡುತ್ತಾ ಅದನ್ನು ಮುಚ್ಚಿ ಹಾಕಲು ಸರಕಾರ ಯತ್ನಿಸುತ್ತಿದೆ. ಇಷ್ಟು ವರ್ಷ ಇಲ್ಲದ ಜಲಸಮಾಧಿ ಸಂಸ್ಕೃತಿ ಈಗ ದಿಢೀರ್ ಎಂದು ಬಂದಿದ್ದು ಹೇಗೆ? ಅದಕ್ಕಿಂತ ಈಗ ಬರುತ್ತಿರುವ ಸುದ್ದಿ ಎಂದರೆ ಗುಜರಾತ್ ರಾಜ್ಯದಲ್ಲಿ ಕಳೆದ ನಾಲ್ಕೈದು ತಿಂಗಳಲ್ಲಿ ಹೆಚ್ಚು ಕಡಿಮೆ 1,25,000ಕ್ಕಿಂತಲೂ ಹೆಚ್ಚಿನ ಮರಣ ಪ್ರಮಾಣ ಪತ್ರವನ್ನು ಸರಕಾರ ಹಂಚಿದೆ. ಅಂದರೆ ಅಲ್ಲಿ ಸೋಂಕಿನಿಂದ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆಯಲ್ಲವೇ? ಇಂದಿಗೂ ಕೊರೋನ ವಿಷಯದಲ್ಲಿ ಎಷ್ಟೋ ವಿಚಾರಗಳು ನಿಗೂಢವಾಗಿ ಉಳಿದುಕೊಂಡಿವೆ.

ಇದರೊಂದಿಗೆ ಈ ಎಲ್ಲದರ ಕುರಿತು ಪ್ರಶ್ನಿಸುವ ಮನೋಭಾವ ಇರುವಂತಹ ಜನರನ್ನು ವಿನಾಕಾರಣ ಕೆಲವು ಪ್ರಕರಣಗಳಲ್ಲಿ ಸಿಕ್ಕಿ ಹಾಕಿಸುವ ಘಟನೆಗಳು ದೇಶಾದ್ಯಂತ ನಡೆದಿವೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಮನೋಭಾವವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಮೊದಲಿನಿಂದಲೂ ಎರಡನೇ ಅಲೆಯನ್ನು ನಿರ್ಲಕ್ಷಿಸಿದ್ದೇ ಮೊದಲನೇ ತಪ್ಪು. ಇದರೊಂದಿಗೆ ಪ್ರಶ್ನಿಸುವುದರಿಂದ ವ್ಯವಸ್ಥೆಯ ಹುಳುಕುಗಳು ಹೊರಬರುತ್ತವೆ ಅಂದುಕೊಳ್ಳುವುದೇ ದೊಡ್ಡ ತಪ್ಪು. ಕೊರೋನ ಒಂದು ದೊಡ್ಡ ಮಹಾಮಾರಿ ಆಗಿರುವುದರಿಂದ ಅದರ ನಿಯಂತ್ರಣದಲ್ಲಿ ಸಾಕಷ್ಟು ಲೋಪಗಳು ಆಗಿರಬಹುದು. ಅಂದ ಮಾತ್ರಕ್ಕೆ ಅವುಗಳನ್ನು ಪ್ರಶ್ನಿಸಲೇಬಾರದು ಅನ್ನುವುದು ತಪ್ಪಾಗುತ್ತದೆ. ಪ್ರಶ್ನಿಸುವ ಮನೋಭಾವದಲ್ಲಿ ಯಾವುದೇ ಸಿದ್ಧಾಂತಗಳ ಸೋಂಕು ಇರಬಾರದು. ಮುಖ್ಯವಾಗಿ ವ್ಯವಸ್ಥೆಯು ಇಂತಹ ವಿಚಾರಗಳಲ್ಲಿ ಬಹಳ ಪಾರದರ್ಶಕವಾಗಿ ವರ್ತಿಸಬೇಕಾಗುತ್ತದೆ. ಪ್ರಶ್ನಿಸುವ ಎಲ್ಲರನ್ನೂ ಜೈಲಿಗೆ ಹಾಕಲು ಹೋದರೆ ಭಾರತದಲ್ಲಿ ಸೆರೆಮನೆಗಳ ಸಂಖ್ಯೆ ಸಾಲುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News