ವಿದೇಶಗಳಿಗೆ ರಫ್ತಾಗುತ್ತಿರುವ ಭಾರತದ ಜಾತಿ ವ್ಯವಸ್ಥೆ

Update: 2021-05-24 04:46 GMT

ವರ್ಣಭೇದ ನೀತಿಯ ವಿರುದ್ಧ ಅಮೆರಿಕ ಹಲವು ದಶಕಗಳಿಂದ ತೀವ್ರ ಹೋರಾಟ ನಡೆಸುತ್ತಾ ಬಂದಿದೆಯಾದರೂ, ಆ ಹೋರಾಟಗಳೆಲ್ಲವನ್ನೂ ಮೀರಿ ಅಮೆರಿಕದಲ್ಲಿ ಜನಾಂಗೀಯ ವಾದಿಗಳ ಸಂಖ್ಯೆ ಹೆಚ್ಚುತ್ತಿವೆ. ಅಮೆರಿಕದ ನೇತೃತ್ವವನ್ನು ಡೊನಾಲ್ಡ್ ಟ್ರಂಪ್ ಕೈಗೆ ಒಪ್ಪಿಸುವಲ್ಲಿ ಈ ಜನಾಂಗೀಯವಾದಿಗಳ ಪಾತ್ರ ಬಹುದೊಡ್ಡದಿದೆ. ಅದಕ್ಕಾಗಿ ಅಮೆರಿಕ ಈಗಾಗಲೇ ಭಾರೀ ಬೆಲೆಯನ್ನೂ ತೆತ್ತಿದೆ. ಕಳೆದ ಚುನಾವಣೆಯಲ್ಲಿ ಟ್ರಂಪ್ ಸೋಲನ್ನು ಅಮೆರಿಕದ ಜನಾಂಗೀಯವಾದಿಗಳ ಸೋಲಾಗಿ ಜಗತ್ತು ಪರಿಗಣಿಸಿದೆ. ಆ ಸೋಲು ಜಗತ್ತಿನ ಪಾಲಿಗೆ ಒಂದು ಸಣ್ಣ ಆಶಾಕಿರಣವೂ ಹೌದು. ವಿಪರ್ಯಾಸವೆಂದರೆ, ಜನಾಂಗೀಯವಾದದ ಪ್ರತಿನಿಧಿಯೆಂದೇ ಗುರುತಿಸಲ್ಪಟ್ಟ ಟ್ರಂಪ್‌ರನ್ನು ಬಹಿರಂಗವಾಗಿ ಬೆಂಬಲಿಸಲು ಮುಂದಾದ ಭಾರತ, ಜಗತ್ತಿನ ಮುಂದೆ ನಗೆಪಾಟಲಿಗೀಡಾಯಿತು. ಭಾರತವನ್ನು ಇಂತಹದೊಂದು ದಯನೀಯ ಸ್ಥಿತಿಗೆ ದೂಡಿದ್ದು, ಪ್ರಧಾನಿ ಮೋದಿ ಸರಕಾರದ ಬಿಳಿಯರೊಂದಿಗಿನ ಗುಲಾಮಿ ಮನಸ್ಥಿತಿಯಾಗಿತ್ತು. ಈ ಬೆಂಬಲ ಆಕಸ್ಮಿಕವೇನೂ ಅಲ್ಲ.

ಇಂದು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದವರು, ಅಮೆರಿಕದಲ್ಲಿ ನೆಲೆಯೂರಿ ಜನಾಂಗೀಯವಾದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಾ ಬರುತ್ತಿದ್ದಾರೆ. ಮೇಲ್ವರ್ಣೀಯರ ಅಮೆರಿಕ ವಲಸೆಯ ಜೊತೆ ಜೊತೆಗೆ, ಈ ದೇಶವನ್ನು ಶತಮಾನಗಳಿಂದ ಶೋಷಣೆಗೀಡು ಮಾಡುತ್ತಿದ್ದ ಜಾತೀಯತೆಯೂ ರಫ್ತಾಗುತ್ತಿದೆ. ಪರಿಣಾಮವಾಗಿ ಅಮೆರಿಕ ತನ್ನದೇ ನೆಲದ ವರ್ಣಭೇದದ ಜೊತೆಗೆ ಭಾರತದಿಂದ ರಫ್ತಾಗುತ್ತಿರುವ ಜಾತಿ ವ್ಯವಸ್ಥೆಯ ವಿರುದ್ಧವೂ ಹೋರಾಟ ನಡೆಸಬೇಕಾದಂತಹ ಸ್ಥಿತಿಯಲ್ಲಿದೆ. ಇತ್ತೀಚೆಗೆ ಅಮೆರಿಕನ್ ಅಧಿಕಾರಿಗಳು ನ್ಯೂಜೆರ್ಸಿಯಲ್ಲಿರುವ ಬೃಹತ್ ಹಾಗೂ ಜನಪ್ರಿಯ ಸ್ವಾಮಿ ನಾರಾಯಣ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ್ದರು.

ಈ ದೇವಾಲಯದ ಆಡಳಿತವು ದಲಿತ ಕಾರ್ಮಿಕರನ್ನು ಶೋಷಿಸುತ್ತಿದೆಯೆಂಬ ಆಪಾದನೆಯೇ ದಾಳಿಗೆ ಕಾರಣ. ಈ ದಲಿತ ಕಾರ್ಮಿಕರನ್ನು ಎಮಿಗ್ರೇಶನ್ ಉದ್ದೇಶಕ್ಕಾಗಿ ‘ಪರಿಣಿತರಲ್ಲದ ಧಾರ್ಮಿಕ ಕೆಲಸಗಾರರು’ ಎಂಬ ಶ್ರೇಣಿಯಲ್ಲಿ ಅಮೆರಿಕಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ ಅವರನ್ನು ಕಠಿಣವಾದ ದೈಹಿಕ ಪರಿಶ್ರಮದ ಕೆಲಸಗಳಿಗಾಗಿ ತಾಸಿಗೆ 1 ಡಾಲರ್‌ನಂತೆ ವೇತನ ನೀಡಿ ದುಡಿಸಿಕೊಳ್ಳಲಾಗುತ್ತಿತ್ತು. ಈ ಪ್ರಕರಣದಲ್ಲಿ ಜಾತಿ ಹಾಗೂ ಜನಾಂಗ ತಾರತಮ್ಯವಾದವಿರುವುದನ್ನು ಗುರುತಿಸುವಂತೆ ಮಾನವಹಕ್ಕು ಹೋರಾಟಗಾರರು ಅಲ್ಲಿನ ಸರಕಾರವನ್ನು ಆಗ್ರಹಿಸಿದ್ದಾರೆ. ಅಮೆರಿಕದಲ್ಲಿ ಇದು ಅಪರೂಪದ ಪ್ರಕರಣವೇನಲ್ಲ. ಕಳೆದ ವರ್ಷದಿಂದೀಚೆಗೆ ಕ್ಯಾಲಿಫೋರ್ನಿಯಾ ರಾಜ್ಯವು ವಿವಿಧ ಸಂಸ್ಥೆಗಳಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ಹತ್ತಿಕ್ಕಲು ಯತ್ನಿಸುತ್ತಾ ಬಂದಿದೆ. 2018ರ ಸಮೀಕ್ಷೆಯ ಪ್ರಕಾರ ಮೂರನೇ ಎರಡರಷ್ಟು ಅಮೆರಿಕನ್ ದಲಿತರನ್ನು ಜಾತಿಯ ಕಾರಣಕ್ಕಾಗಿ ಅವರನ್ನು ಕೆಲಸದ ಸ್ಥಳದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.

ಜಗತ್ತಿಗೆ ಭಾರತದ ನೀಡಿದ ಅತ್ಯಂತ ಕೆಟ್ಟ ಕೊಡುಗೆ ಜಾತಿತಾರತಮ್ಯ. ಅದೀಗ ಜಗತ್ತಿನ ಅರ್ಧದಷ್ಟು ಭಾಗವನ್ನು ಆವರಿಸಿಕೊಂಡಿದೆ. ಜಗತ್ತಿನೆಲ್ಲೆಡೆಯ ದೇಶಗಳಲ್ಲಿ ದಕ್ಷಿಣ ಏಶ್ಯನ್ನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ತಮ್ಮನ್ನು ಸ್ವೀಕರಿಸಿದ ದೇಶಗಳಲ್ಲಿ ಅವರು ಉನ್ನತ ಸ್ಥಾನಮಾನಕ್ಕೇರುತ್ತಿದ್ದಾರೆ. ಇದರಿಂದಾಗಿ ಅವರಿಗೆ ಅಧಿಕಾರದ ಬಲ ದೊರೆತಿದೆ. ಈ ಬಲದೊಂದಿಗೆ ಅವರಿಗೆ ತಾರತಮ್ಯದ ಸಾಮರ್ಥ್ಯವೂ ಕೂಡಾ ಲಭ್ಯವಾಗಿದೆ.ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ ಸ್ಥಳೀಯ ಸಿಖ್ಖರು ಹಾಗೂ ಸಂಘಪರಿವಾರದ ಸಂಘಟನೆಗಳ ಬೆಂಬಲಿಗರ ನಡುವೆ ಉದ್ವಿಗ್ನತೆಯುಂಟಾಗಿ, ಸಿಖ್ಖರ ಮೇಲೆ ನಡುರಸ್ತೆಯಲ್ಲೇ ದಾಳಿ ನಡೆಸಲಾಗಿತ್ತು. ಇತ್ತ ಅಮೆರಿಕದಲ್ಲಿ ಕಂಪ್ಯೂಟರ್, ಐಟಿ ತಂತ್ರಜ್ಞಾನದ ಕೇಂದ್ರವಾದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ಅಮೆರಿಕನ್ ಇಂಜಿನಿಯರ್ ಒಬ್ಬಾಕೆ, ಆ್ಯಪಲ್ ಸಂಸ್ಥೆಯ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದು, ತಾನು ದಕ್ಷಿಣ ಏಶ್ಯದ ಮಹಿಳೆಯೆಂಬ ಕಾರಣಕ್ಕಾಗಿ, ಭಾರತೀಯ ಮೂಲದವರೇ ಆದ ತನ್ನ ಕೆಲವು ಮೇಲಧಿಕಾರಿಗಳು ತನ್ನ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.

ಜಾತಿ ವ್ಯವಸ್ಥೆಯನ್ನು ಮಾನವ ಹಕ್ಕಿನ ಉಲ್ಲಂಘನೆ ಎಂದು ವಿಶ್ವಸಂಸ್ಥೆ ಹಲವು ಬಾರಿ ಉಲ್ಲೇಖಿಸಿದೆಯಾದರೂ, ವಿವಿಧ ದೇಶಗಳಲ್ಲಿ ಈ ಜಾತೀಯತೆಯನ್ನು ಎದುರಿಸಲು ಅಗತ್ಯವುಳ್ಳ ಕಾನೂನುಗಳಿಲ್ಲ. ಜಾತಿಯನ್ನು ಭಾರತ ಅರ್ಥಮಾಡಿಕೊಂಡಷ್ಟು ಸುಲಭವಾಗಿ ವಿದೇಶೀಯರು ಅರ್ಥಮಾಡಿಕೊಳ್ಳುವುದು ಕಷ್ಟ. ಆದುದರಿಂದಲೇ, ಭಾರತೀಯ ಮೂಲದ ಶೋಷಿತ ಸಮುದಾಯವನ್ನು ಗುರುತಿಸಿ ಅವರ ಹಕ್ಕುಗಳನ್ನು ಕಾಪಾಡುವಲ್ಲಿ ಬಹಳಷ್ಟು ವಿದೇಶಿ ಸಂಸ್ಥೆಗಳು ವಿಫಲವಾಗಿವೆ. ಕರಿಯ-ಬಿಳಿಯರ ನಡುವಿನ ವರ್ಗೀಕರಣದಷ್ಟು ಜಾತೀಯತೆ ಸರಳವಾಗಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಭಾರತದ ತಲೆತಲಾಂತರದ ಇತಿಹಾಸವನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ, ಭಾರತದಿಂದ ರಫ್ತಾಗುತ್ತಿರುವ ಜಾತಿ ವ್ಯವಸ್ಥೆಯನ್ನು ಯಾವ ರೀತಿಯಲ್ಲಿ ಪರಿಗಣಿಸಬೇಕು ಎನ್ನುವುದರ ಕುರಿತಂತೆ ಅಲ್ಲಿನ ಸರಕಾರಗಳು ಇನ್ನೂ ಗೊಂದಲದಲ್ಲಿವೆ. ಅಮೆರಿಕದಂತಹ ದೇಶಗಳಲ್ಲಿ ಜಾತಿತಾರತಮ್ಯದ ವಿರುದ್ಧ ಹೋರಾಡುವುದು ಸುಲಭವೇನಲ್ಲ. ಇಂತಹ ಭೇದಭಾವಗಳ ವಿರುದ್ಧ ಯಾರಾದರೂ ಜಾಗೃತಿ ಮೂಡಿಸಲು ಯತ್ನಿಸಿದಲ್ಲಿ ಅದಕ್ಕೆ ಕೆಲವು ಭಾರತೀಯ ಅಮೆರಿಕನ್ನರಿಂದ ಬಲವಾದ ಪ್ರತಿರೋಧ ವ್ಯಕ್ತವಾಗುತ್ತದೆ.

ಅಮೆರಿಕದಲ್ಲಿನ ಭಾರತೀಯ ಸಮುದಾಯದಲ್ಲಿ ಜಾತಿ ವ್ಯವಸ್ಥೆಯ ಉನ್ನತ ಶ್ರೇಣಿಗೆ ಸೇರಿದವರೇ ಪ್ರಾಬಲ್ಯವನ್ನು ಹೊಂದಿದ್ದಾರೆ. ಅವರು ಅಲ್ಲಿ ಈಗಾಗಲೇ ಆಳವಾಗಿ ಬೇರೂರಿದ್ದಾರೆ. ಅಮೆರಿಕದ ಭಾರತೀಯ ಸಮುದಾಯದ ಮೇಲೆ ಭಾರತದಲ್ಲಿನ ಹಿಂದೂ ರಾಷ್ಟ್ರವಾದಿ ರಾಜಕಾರಣಿಗಳ ಪ್ರಭಾವವು ಹೆಚ್ಚುತ್ತಿದೆ. ಜಾತಿ ಶೋಷಣೆ ಬಗ್ಗೆ ಮಾತನಾಡುವುದನ್ನು ಅಪಮಾನಕರವೆಂಬಂತೆ ಕಾಣುತ್ತಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಹಿಂದೂಧರ್ಮದ ಕುರಿತ ಸಂವಾದವನ್ನು ‘ಶುದ್ಧೀಕರಣ’ಗೊಳಿಸಲು ಹಾಗೂ ನಿರ್ದಿಷ್ಟವಾಗಿ ಜಾತಿ ಪದ್ಧತಿಯ ಉಲ್ಲೇಖವನ್ನು ತೆಗೆದುಹಾಕುವಂತೆ ಕೆಲವು ಕೇಸರಿ ಸಂಘಟನೆಗಳು ಹಲವು ದಶಕಗಳ ಕಾಲ ಜಗ್ಗಾಟ ನಡೆಸಿದ್ದವು.

ಆದರೆ ಸಿಲಿಕಾನ್ ವ್ಯಾಲಿಯನ್ನು ನಿರ್ಮಿಸುವಲ್ಲಿ ನೆರವಾದ ಭಾರತೀಯ ಮೂಲದ ಇಂಜಿನಿಯರ್‌ಗಳ ವರ್ಚಸ್ಸಿಗೆ ಜಾತೀಯತೆಯ ಕಳಂಕ ಬರುತ್ತಿರುವುದು ಭಾರತೀಯರಿಗೆ ನೋವುಂಟು ಮಾಡುವುದೇನೋ ಹೌದು. ಜಾತಿ ಮನಸ್ಥಿತಿಗೆ ಶಿಕ್ಷಣದ ಕೊರತೆ ಕಾರಣ ಅಲ್ಲ ಎನ್ನುವುದನ್ನು ಅಮೆರಿಕದ ವಿದ್ಯಾವಂತ ಮೇಲ್ವರ್ಣೀಯರೇ ಜಗತ್ತಿಗೆ ಸಾಬೀತು ಪಡಿಸುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ನೆಲೆಸಲು ಹಂಬಲಿಸುವ ಹಲವು ಭಾರತೀಯ ಇಂಜಿನಿಯರ್‌ಗಳು ಶಿಕ್ಷಣ ಪಡೆದಿರುವಂತಹ ಭಾರತದ ಪ್ರತಿಷ್ಠಿತ ಕಾಲೇಜುಗಳಲ್ಲಿ ‘ಕೆಳಜಾತಿಗಳ’ ವಿರುದ್ಧ ನಡೆಯುತ್ತಿರುವ ತಾರತಮ್ಯವನ್ನು ಅಮೆರಿಕ ಆಡಳಿತವು ಗಂಭೀರವಾಗಿ ಗಣಿಸುವ ಸಾಧ್ಯತೆಯಿದೆ. ಅದೇ ರೀತಿ ಜಾತಿ ತಾರತಮ್ಯವು ತನ್ನ ನೆಲದಲ್ಲೂ ಬೇರುಬಿಡದಂತೆ ಮಾಡಲು ಅಮೆರಿಕವು ನೂತನ ನಾಗರಿಕ ಹಕ್ಕುಗಳ ಮಾನದಂಡಗಳನ್ನು ರೂಪಿಸುವ ಮೂಲಕ ಜಗತ್ತಿಗೆ ಉಪಕಾರ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News