ಪಂಚಾಯತ್ ಚುನಾವಣೆಯಲ್ಲಿ ಬೆಂಬಲಿಸದ ವ್ಯಕ್ತಿಯ ಕುಟುಂಬದ ಮೇಲೆ ಬಜರಂಗ ದಳದ ನಾಯಕನಿಂದ ಹಲ್ಲೆ

Update: 2021-05-23 17:58 GMT

ಬುಲಂದ್ಶಹರ್, ಮೇ 23: ಇತ್ತೀಚೆಗೆ ಕೊನೆಗೊಂಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತನಗೆ ಮತ ಚಲಾಯಿಸದ ಕುಟುಂಬವೊಂದರ ಸದಸ್ಯರಿಗೆ ಥಳಿಸಿದ ಆರೋಪದಲ್ಲಿ 2018ರ ಬುಲಂದ್ಶಹರ್ ಹಿಂಸಾಚಾರ ಪಕರಣದ ಪ್ರಧಾನ ಆರೋಪಿ ಹಾಗೂ ಬಜರಂಗ ದಳದ ನಾಯಕ ಯೋಗೇಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಾಮೀನಿನಲ್ಲಿ ಜೈಲಿನಿಂದ ಹೊರಗೆ ಬಂದಿರುವ ಯೋಗೇಶ್ ರಾಜ್ ಜಿಲ್ಲಾ ಪಂಚಾಯತ್ ಸದಸ್ಯರ ಚುನಾವಣೆಯಲ್ಲಿ ಜಯ ಗಳಿಸಿದ್ದರು. ವೀಡಿಯೊವೊಂದರಲ್ಲಿ ಯೋಗೇಶ್ ರಾಜ್ ತನಗೆ ಮತ ನೀಡದ ಗ್ರಾಮ ನಿವಾಸಿ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿರುವುದು ದಾಖಲಾಗಿದೆ. ಈ ಘಟನೆ ನಯಾಬಾನ್ಸ್ ಗ್ರಾಮದಲ್ಲಿ ನಡೆದಿದೆ.

ಯೋಗೇಶ್ ಹಾಗೂ ಆತನ ಸಹವರ್ತಿಗಳು ದಿನೇಶ್ ಕುಮಾರ್ ಅವರ ಮನೆಗೆ ನುಗ್ಗಿದ್ದಾರೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಥಳಿಸಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯೋಗೇಶ್ ಹಾಗೂ ಅವರ ಆರು ಮಂದಿ ಸಹವರ್ತಿಗಳ ವಿರುದ್ಧ ದಂಡನೀಯವಲ್ಲದ ನರ ಹತ್ಯೆ, ಅಕ್ರಮ ಮನೆ ಪ್ರವೇಶ, ಗಲಬೆ ಹಾಗೂ ಸ್ವಂಯಪ್ರೇರಣೆಯಿಂದ ನೋವು ಉಂಟು ಮಾಡಿದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ದಿನೇಶ್ ಕುಮಾರ್, ‘‘ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬೆಂಬಲಿಸದೇ ಇರುವುದಕ್ಕೆ ಯೋಗೇಶ್ ರಾಜ್ ನನ್ನ ವಿರುದ್ಧ ದ್ವೇಷ ಸಾಧಿಸುತ್ತಾ ಬಂದಿದಾನೆ. ಹಗೆ ಸಾಧಿಸುವ ಉದ್ದೇಶದಿಂದ ಅವರು ಸಹವರ್ತಿಗಳೊದಿಗೆ ಹರಿತವಾದ ಆಯುಧ ಹಾಗೂ ದೊಣ್ಣೆ ಹಿಡಿದುಕೊಂಡು ಬುಧವಾರ ಸಂಜೆ ನಮ್ಮ ಮನೆಗೆ ಆಗಮಿಸಿದರು ಹಾಗೂ ನಮಗೆ ಥಳಿಸಿದರು. ಅವರು ಮಹಿಳೆಯರನ್ನು ಕೂಡ ಬಿಡಲಿಲ್ಲ. ಥಳಿತದಿಂದ ನನ್ನ ಸಂಬಂಧಿಕನೋರ್ವನ ತಲೆಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News