×
Ad

ಕೋವಿಡ್-19 ಅಭಿಯಾನದ ವೇಳೆ ಧರ್ಮ ಪ್ರಚಾರಕ್ಕಿಳಿದ ವೈದ್ಯೆ

Update: 2021-05-24 10:31 IST

ರತ್ಲಂ (ಮಧ್ಯಪ್ರದೇಶ): ರಾಜ್ಯ ಸರ್ಕಾರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದ ವೈದ್ಯೆಯೊಬ್ಬರು, ಕೋವಿಡ್-19 ಜಾಗೃತಿ ಅಭಿಯಾನದ ವೇಳೆ ಕೊರೋನ ವೈರಸ್ ಸೋಂಕಿನಿಂದ ಮುಕ್ತರಾಗಲು ಜನತೆ ನಿರ್ದಿಷ್ಟ ಧರ್ಮದ ದೇವರನ್ನು ಪ್ರಾರ್ಥಿಸಬೇಕು ಎಂದು ಒತ್ತಾಯಪಡಿಸಿದ ಘಟನೆ ವೀಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊ ವಿವಾದಕ್ಕೆ ಕಾರಣವಾಗಿದೆ.

ರತ್ಲಂ ಜಿಲ್ಲೆಯ ಬಜನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಗುತ್ತಿಗೆ ವೈದ್ಯೆಯೊಬ್ಬರು ಗ್ರಾಮದಲ್ಲಿ ’ಕಿಲ್ ಕೊರೋನ’ ಅಭಿಯಾನದ ವೇಳೆ ಗ್ರಾಮದಲ್ಲಿ ಕ್ರೈಸ್ತಧರ್ಮ ಪ್ರಚಾರ ಮಾಡುತ್ತಿದ್ದ ಬಗ್ಗೆ ದೂರು ಬಂದಿದೆ ಎಂದು ತಹಶೀಲ್ದಾರ್ ಬಿ.ಎಸ್.ಠಾಕೂರ್ ಹೇಳಿದ್ದಾರೆ.

ವೈದ್ಯೆ ಬಳಿ ಧಾರ್ಮಿಕ ಕರಪತ್ರಗಳು ಕೂಡಾ ಪತ್ತೆಯಾಗಿವೆ. ಈ ಸಂಬಂಧ ವರದಿ ಸಿದ್ಧಪಡಿಸಲಾಗಿದ್ದು, ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದ್ದಾರೆ.

ಮಾಸ್ಕ್ ಧರಿಸಿದ್ದ ವೈದ್ಯೆ, ವ್ಯಕ್ತಿಯೊಬ್ಬರ ಜತೆ ಮಾತನಾಡುವ ವೇಲೆ ಆ ವ್ಯಕ್ತಿಯೇ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. "ಏಸುವನ್ನು ಪ್ರಾರ್ಥಿಸುವುದರಿಂದ ಕೊರೋನದಿಂದ ಮುಕ್ತರಾಗುತ್ತೀರಿ ಎಂದು ಏಕೆ ಹೇಳುತ್ತಿದ್ದೀರಿ" ಎಂದು ವ್ಯಕ್ತಿ ಪ್ರಶ್ನಿಸಿದ್ದಾರೆ. ಜತೆಗೆ ಜನತೆ ತಮ್ಮ ಧರ್ಮಕ್ಕೆ ಅನುಸಾರವಾಗಿ ಏಕೆ ಪ್ರಾರ್ಥಿಸಬಾರದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ವೈದ್ಯೆ, "ಏಸುವನ್ನು ಪ್ರಾರ್ಥಿಸಿದ ಮಂದಿ ಗುಣಮುಖರಾಗುತ್ತಿದ್ದಾರೆ" ಎಂದು ಪ್ರತಿಕ್ರಿಯಿಸುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಭೋಪಾಲ್ ಹುಝೂರ್ ಶಾಸಕ ರಾಮೇಶ್ವರ್ ಶರ್ಮಾ ಸೇರಿದಂತೆ ಹಲವು ಮಂದಿ ಈ ವೀಡಿಯೊ ಟ್ವೀಟ್ ಮಾಡಿದ್ದಾರೆ. ಈ ವೈದ್ಯೆಯನ್ನು ಸೇವೆಯಿಂದ ವಜಾ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭಾಕರ ನಾನಾವರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News