ನಾರದ ಭ್ರಷ್ಟಾಚಾರ ಹಗರಣ: ಬಂಧಿತ ರಾಜಕೀಯ ನಾಯಕರ ಗೃಹಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಿಬಿಐ
Update: 2021-05-24 12:33 IST
ಹೊಸದಿಲ್ಲಿ: ನಾರದ ಭ್ರಷ್ಟಾಚಾರ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಸೇರಿದಂತೆ ನಾಲ್ಕು ಮಂದಿ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲು ಅನುಮತಿಸಿದ ಕೊಲ್ಕತ್ತಾ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಿಬಿಐ ಇಂದು ಸುಪ್ರೀಂ ಕೋರ್ಟಿನ ಕದ ತಟ್ಟಿದೆ.
ಗೃಹ ಬಂಧನದಲ್ಲಿರುವ ನಾಲ್ಕು ಮಂದಿಯ ಜಾಮೀನು ಅರ್ಜಿ ಇಂದು ಕೊಲ್ಕತ್ತಾ ಹೈಕೋರ್ಟಿನ ಮುಂದೆ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಇಂದಿನ ಹೈಕೋರ್ಟ್ ವಿಚಾರಣೆಯನ್ನು ರದ್ದುಗೊಳಿಸಬೇಕೆಂದೂ ಸಿಬಿಐ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.
ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸಚಿವರಾಗಿರುವ ಫಿರ್ಹದ್ ಹಕೀಂ, ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರ ಹಾಗೂ ತೃಣಮೂಲ ತ್ಯಜಿಸಿ ಬಿಜೆಪಿ ಸೇರಿರುವ ಸೋವನ್ ಮಿತ್ರಾ ಅವರನ್ನು ಪ್ರಕರಣದಲ್ಲಿ ಬಂಧಿಸಲಾಗಿದ್ದು ಹೈಕೋರ್ಟ್ ನಾಲ್ಕು ಮಂದಿಗೂ ಕಳೆದ ಶುಕ್ರವಾರ ಮಧ್ಯಂತರ ಜಾಮೀನು ನಿರಾಕರಿಸಿತ್ತು.