ಕ್ವಾರಂಟೈನ್ ಗೆ ಒಳಗಾಗುವಂತೆ ಭಾರತೀಯ ದೂತಾವಾಸದ 12 ಅಧಿಕಾರಿಗಳಿಗೆ ಪಾಕ್ ಸೂಚನೆ

Update: 2021-05-24 18:04 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಮೇ 24: ಕುಟುಂಬ ಸದಸ್ಯರು ಮತ್ತು ಚಾಲಕರೊಂದಿಗೆ ಕ್ವಾರಂಟೈನ್ನಲ್ಲಿರುವಂತೆ ಭಾರತೀಯ ಹೈಕಮಿಶನ್ನ 12 ಅಧಿಕಾರಿಗಳಿಗೆ ಪಾಕಿಸ್ತಾನ ಸೂಚಿಸಿದೆ. ಈ ಅಧಿಕಾರಿಗಳು ಕಳೆದ ವಾರ ಭಾರತದಿಂದ ಆಗಮಿಸಿದ ಬಳಿಕ, ಅವರ ಪೈಕಿ ಒಬ್ಬರು ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ ಎಂದು ಪಾಕಿಸ್ತಾನದ ವಿದೇಶ ಕಚೇರಿ ತಿಳಿಸಿದೆ.

12 ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಶನಿವಾರ ವಾಘಾ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಬಂದಿದ್ದರು ಎಂದು ವಿದೇಶ ಕಚೇರಿ ವಕ್ತಾರ ಝಾಹಿದ್ ಹಫೀಝ್ ಚೌಧರಿ ರವಿವಾರ ತಿಳಿಸಿದರು.

ಎಲ್ಲ 12 ಮಂದಿ ಅಧಿಕಾರಿಗಳು ಕೋವಿಡ್-19 ನೆಗೆಟಿವ್ ವರದಿಗಳನ್ನು ತಂದಿದ್ದರು. ಆದರೆ, ಅವರನ್ನು ಪಾಕಿಸ್ತಾನದಲ್ಲಿರುವ ನಿಯಮಗಳಂತೆ ಮತ್ತೆ ಕೋವಿಡ್-19 ಸೋಂಕಿನ ಪರೀಕ್ಷೆಗೆ ಗುರಿಪಡಿಸಲಾಯಿತು.

ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಅಧಿಕಾರಿಯೊಬ್ಬರ ಪತ್ನಿಯೊಬ್ಬರು ಸೋಂಕಿಗೆ ಒಳಗಾಗಿರುವುದು ಪತ್ತೆಯಾಯಿತು ಎಂದು ವಕ್ತಾರರು ಹೇಳಿದರು.

ಈ ಪ್ರಕರಣವನ್ನು ಮರುಪರಿಶೀಲಿಸಿದ ಪಾಕಿಸ್ತಾನದ ಸಾಂಕ್ರಾಮಿಕ ರೋಗಗಳ ಅತ್ಯುನ್ನತ ಸಂಸ್ಥೆ ನ್ಯಾಶನಲ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಎನ್ಸಿಒಸಿ), ಕಡ್ಡಾಯ ಕ್ವಾರಂಟೈನ್ಗೆ ಒಳಗಾಗುವಂತೆ ಎಲ್ಲಾ 12 ಅಧಿಕಾರಿಗಳು, ಅವರ ಕುಟುಂಬ ಸದಸ್ಯರು ಮತ್ತು ಚಾಲಕರಿಗೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News