ರಾಜಕೀಯ ವಿರೋಧಿಗಳ ಬಗ್ಗೆ ಅಸಹನೆ ಬೇಡ

Update: 2021-05-25 07:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್ ಸೋಂಕಿನಿಂದ ಇಡೀ ಭಾರತವೇ ತತ್ತರಿಸಿ ಹೋಗಿದೆ. ಕಳೆದ ಒಂದು ವರ್ಷದಿಂದ ಜಗತ್ತಿನ ಬಹುತೇಕ ದೇಶಗಳ ಜನರಂತೆ ನಾವು ಕೂಡ ಕಣ್ಣಿಗೆ ಕಾಣದ ಈ ವೈರಾಣುವಿನ ಪರಿಣಾಮವಾಗಿ ಚೇತರಿಸಲು ಸಾಧ್ಯವಾಗುತ್ತಲೇ ಇಲ್ಲ. ಮೊದಲನೇ ಅಲೆ ಮೂರು ತಿಂಗಳ ವಿರಾಮ ನೀಡಿದ ನಂತರ ಅದಕ್ಕಿಂತಲೂ ಬಿರುಸಾಗಿ ಅಪ್ಪಳಿಸಿದ ಎರಡನೇ ಅಲೆ ಈಗಾಗಲೇ ರಾಜ್ಯದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪಕ್ಷಭೇದ ಬದಿಗೊತ್ತಿ ನಾವೆಲ್ಲ ಒಂದಾಗಿ ಇದನ್ನು ಎದುರಿಸಬೇಕಾಗಿದೆ. ಆದರೆ ವಿಷಾದದ ಸಂಗತಿಯೆಂದರೆ ಎಲ್ಲ ಭಿನ್ನಾಭಿಪ್ರಾಯ ಮರೆತು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕಾದ ಕೇಂದ್ರ ಸರಕಾರ, ಅಂದರೆ ಕೇಂದ್ರದ ಅಧಿಕಾರ ಸೂತ್ರ ಹಿಡಿದ ಏಕವ್ಯಕ್ತಿ ಪ್ರಾಬಲ್ಯದ ಆದರೆ ಸಂವಿಧಾನೇತರ ಸಂಸ್ಥೆಯೊಂದರಿಂದ ನಿಯಂತ್ರಿಸಲ್ಪಡುವ ಈ ಸರಕಾರ ಇಂತಹ ಸಂದರ್ಭದಲ್ಲೂ ಪಕ್ಷ ರಾಜಕಾರಣಕ್ಕಿಳಿದು ರಾಜಕೀಯ ಭಿನ್ನಮತವನ್ನು ಹತ್ತಿಕ್ಕಲು ಮುಂದಾಗಿದೆ. ಇದಕ್ಕಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಎದುರಿಸುತ್ತಿದೆ.

ಬಿಜೆಪಿ ಮತ್ತು ಸಂಘಪರಿವಾರದ ನೀತಿ ಧೋರಣೆಗಳನ್ನು ವಿರೋಧಿಸುವ ಜನಪರ ಹೋರಾಟಗಾರರು ಮತ್ತು ಚಿಂತಕರ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಿ ಎರಡು ವರ್ಷಗಳು ಗತಿಸಿದವು. ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಜೈಲು ಪಾಲಾಗಿದ್ದಾರೆ. ಇವರ ಪೈಕಿ ಕವಿ ವರವರರಾವ್ ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ಷರತ್ತುಬದ್ಧ ಜಾಮೀನು ಪಡೆದು ಮುಂಬೈ ಬಿಟ್ಟು ಹೊರಗೆಲ್ಲೂ ಹೋಗದಂತೆ ಬಿಡುಗಡೆಯಾಗಿ ಬಂದು ಒಂದು ವಿಧದ ಗೃಹಬಂಧನದಲ್ಲಿದ್ದಾರೆ. ಇದು ಹೋರಾಟಗಾರರ ಕತೆಯಾದರೆ ಬಿಜೆಪಿಯನ್ನು ವಿರೋಧಿಸುವ ರಾಜಕೀಯ ವಿರೋಧಿಗಳ ವ್ಯಥೆ ಇದಕ್ಕಿಂತ ಭಿನ್ನವಲ್ಲ. ಪಶ್ಚಿಮ ಬಂಗಾಳದ ಚುನಾವಣಾ ಸೋಲಿನಿಂದ ಹತಾಶೆಗೊಂಡ ಬಿಜೆಪಿ ಕೇಂದ್ರದಲ್ಲಿರುವ ಅಧಿಕಾರ ಬಳಸಿಕೊಂಡು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮೇಲೆ ಸೇಡು ತೀರಿಸಿಕೊಳ್ಳಲು ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐಯನ್ನು ಮನ ಬಂದಂತೆ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಸೋಲು ಗೆಲುವುಗಳು ಸಹಜ. ಇದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಆದರೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ರಾಜಕೀಯ ದ್ವೇಷ ಸಾಧನೆಗೆ ಮುಂದಾಗಿದೆ.

 ಕೇಂದ್ರ ಭದ್ರತಾ ಪಡೆಗಳ ಜೊತೆಗೆ ಬಂದ ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳದ ನೂತನ ಸಚಿವರಾದ ಸುಬ್ರತಾ ಮುಖರ್ಜಿ ಮತ್ತು ಪಿರ್ಹಾದ್ ಹಕೀಮ್‌ಹಾಗೂ ಶಾಸಕ ಮದನ ಮಿತ್ರಾ, ಟಿಎಂಸಿ ನಾಯಕ ಸೋವನ್ ಚಟರ್ಜಿಯವರನ್ನು ಹಳೆಯ ಶಾರದಾ ಪ್ರಕರಣದ ನೆಪದಲ್ಲಿ ಬಂಧಿಸಿದ್ದಾರೆ. ವಾಸ್ತವವಾಗಿ ಇದು 1914ರ ಪ್ರಕರಣ. ಶಾರದಾ ಸುದ್ದಿ ಫೊರ್ಟಲ್‌ನ ಪತ್ರಕರ್ತರೊಬ್ಬರು ಕೈಗಾರಿಕೋದ್ಯಮಿಯ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ದಿಲ್ಲಿಯಿಂದ ಕೋಲ್ಕತಾಗೆ ಬಂದ ಉದ್ಯಮಿ ಪಶ್ಚಿಮ ಬಂಗಾಳದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕೋರಿ ಹಿಂದಿನ ಸರಕಾರದ ನಾಲ್ಕು ಮಂದಿ ಸಚಿವರು, ಒಬ್ಬ ಶಾಸಕ ಹಾಗೂ ಒಬ್ಬ ಪೊಲೀಸ್ ಅಧಿಕಾರಿಗೆ ರೂ. 4 ಲಕ್ಷದಿಂದ 5 ಲಕ್ಷದವರೆಗೆ ಲಂಚ ನೀಡಿದ್ದರು ಎಂದು ಆರೋಪಿಸಲಾದ ಪ್ರಕರಣವಿದು. ಲಂಚ ಸ್ವೀಕರಿಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. 2016ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ವೀಡಿಯೊ ಬಿಡುಗಡೆ ಯಾಗಿತ್ತು. ಹೀಗಾಗಿ ಈ ಕಾರ್ಯಾಚರಣೆಯ ಹಿಂದೆ ರಾಜಕೀಯ ಇದೆ ಎಂದು ಆಗ ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುವಂತೆ ಕೋಲ್ಕತಾ ಹೈಕೋರ್ಟ್ 2017ರಲ್ಲಿ ಆದೇಶ ನೀಡಿದ್ದು ನಿಜ. ಅಗ ಬಂಧಿಸಲಾಗಿರುವ ನಾಲ್ವರಿಗೂ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಸಿಬಿಐ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ. ಇದರಿಂದ ರೋಸಿ ಹೋದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕೋಲ್ಕತಾ ಕಚೇರಿಯ ಮುಂದೆ ಧರಣಿ ಮಾಡಿದ ಘಟನೆಯೂ ನಡೆಯಿತು.

ಈ ಪ್ರಕರಣದಲ್ಲಿ ಸಿಬಿಐ ನಿಷ್ಪಕ್ಷವಾಗಿ ನಡೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಇದೇ ಪ್ರಕರಣದಲ್ಲಿ ಕೆಲ ತಿಂಗಳ ಹಿಂದೆ ಬಿಜೆಪಿ ಸೇರಿದ ಮುಕುಲ್‌ರಾಯ್ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿಯವರ ಹೆಸರುಗಳು ಎಫ್‌ಐಆರ್‌ನಲ್ಲಿ ಇದ್ದರೂ ಅವರನ್ನು ಬಂಧಿಸಿಲ್ಲ ಹಾಗೂ ತನಿಖೆಗೂ ಒಳಪಡಿಸಿಲ್ಲ. ಇದರಿಂದ ಎಂಥದೇ ಅಪರಾಧ ಮಾಡಿದರೂ ಬಿಜೆಪಿ ಸೇರಿದರೆ ರಕ್ಷಣೆ ಸಿಗುತ್ತದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಬಿಜೆಪಿ ಸೇರಿದವರನ್ನು ಬಿಟ್ಟು ತೃಣಮೂಲ ಕಾಂಗ್ರೆಸ್‌ನಲ್ಲಿ ಉಳಿದವರನ್ನು ಬಂಧಿಸುವುದು ರಾಜಕೀಯ ದುರುದ್ದೇಶದ ಸೇಡಿನ ಕ್ರಮವಲ್ಲದೆ ಬೇರೇನೂ ಅಲ್ಲ.

ಇದೊಂದೇ ಪ್ರಕರಣವಲ್ಲ. ಈ ಹಿಂದೆ ನಡೆದ ಹಲವಾರು ಘಟನೆಗಳಲ್ಲೂ ಸಿಬಿಐ ನಡೆ ಪಾರದರ್ಶಕವಾಗಿರಲಿಲ್ಲ. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬಂಧನ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ನಡೆದ ದಾಳಿ, ಹರ್ಯಾಣದ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಹಾಕಿದ ಖಟ್ಲೆ, ಉತ್ತರ ಪ್ರದೇಶದಲ್ಲಿ 2019ರ ಲೋಕಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಮೈತ್ರಿಗೆ ಮುಂದಾದಾಗ ಅದನ್ನು ವಿಫಲಗೊಳಿಸಲು ನಡೆದ ಸಿಬಿಐ ಕಾರ್ಯಾಚರಣೆ ಹೀಗೆ ಹಲವಾರು ಪ್ರಕರಣಗಳಲ್ಲಿ ಸಿಬಿಐ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಸೂತ್ರದ ಗೊಂಬೆಯಂತೆ ನಡೆದುಕೊಂಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಇದರಿಂದಾಗಿ ಕೇಂದ್ರೀಯ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆ ಪಾತಾಳಕ್ಕೆ ಕುಸಿದಿದೆ.

 ಕೇಂದ್ರದ ಬಿಜೆಪಿ ಸರಕಾರ ಕೋವಿಡ್ ಎಂಬ ಮಾರಕ ಸೋಂಕು ನಿಭಾಯಿಸುವಲ್ಲಿ ಸಂಪೂರ್ಣ ವಿಫಲಗೊಂಡಿರುವುದು ಹಗಲಿನಷ್ಟು ನಿಚ್ಚಳವಾಗಿದೆ. ಇಡೀ ದೇಶ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಈ ದಿನಗಳಲ್ಲಿ ಕೇಂದ್ರ ಸರಕಾರ ರಾಜಕೀಯ ವಿರೋಧಿಗಳ ಮೇಲೆ ದಮನ ಸತ್ರ ನಡೆಸುವ ಸೇಡಿನ ಕ್ರಮಗಳನ್ನು ಕೈ ಬಿಡಬೇಕು. ಸುಳ್ಳು ಆರೋಪಗಳ ಮೇಲೆ ಬಂಧಿಸಲ್ಪಟ್ಟಿರುವ ಚಿಂತಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೋನ ವಿಪತ್ತನ್ನು ಎದುರಿಸಬೇಕು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ರಾಷ್ಟ್ರೀಯ ಸರಕಾರವೊಂದರ ರಚನೆಯ ಚಿಂತನೆ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News