×
Ad

ಇಂದಿನಿಂದ ಸಿಪ್ಲಾದ ಕೋವಿಡ್-19 ತ್ವರಿತ ಪರೀಕ್ಷಾ ಕಿಟ್ ಲಭ್ಯ

Update: 2021-05-25 09:51 IST

ಮುಂಬೈ : ದೇಶದ ಪ್ರಮುಖ ಫಾರ್ಮಸ್ಯೂಟಿಕಲ್ ಕಂಪನಿಯಾದ ಸಿಪ್ಲಾ ಕಳೆದ ವಾರ ಬಿಡುಗಡೆ ಮಾಡಿದ ತ್ವರಿತ ಕೊರೋನ ವೈರಸ್ ರೋಗ ಪತ್ತೆಯ ಪರೀಕ್ಷಾ ಕಿಟ್ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ಪ್ರಕಟಿಸಿದೆ.

ಈ ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ಗೆ ’ವಿರಾ ಜೆನ್’ ಎಂದು ಹೆಸರಿಸಲಾಗಿದೆ. ಇದನ್ನು ಭಾರತಕ್ಕಾಗಿಯೇ ವಿಶೇಷವಾಗಿ ಯುಬಿಯೊ ಬಯೋಟೆಕ್ನಾಲಜಿ ಸಿಸ್ಟಮ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

"ಈ ವಿನೂತನ ಸಾಧನದ ಬಿಡುಗಡೆಯಿಂದಾಗಿ ಪ್ರಸ್ತುತ ಇರುವ ಪರೀಕ್ಷೆ ಸೇವಾ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಪರೀಕ್ಷಾ ಸಾಮರ್ಥ್ಯ ಕೂಡಾ ಗಣನೀಯವಾಗಿ ಹೆಚ್ಚಲಿದೆ" ಎಂದು ಸಂಸ್ಥೆ ಹೇಳಿಕೆ ನೀಡಿದೆ. ಈ ಕೋವಿಡ್-19 ಪತ್ತೆ ಕಿಟ್‌ಗೆ ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮೋದನೆ ನೀಡಿದ್ದು, ಇದು ಮಲ್ಟಿಪ್ಲೆಕ್ಸ್ ಪಿಸಿಆರ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

"ಇದು ಐಸಿಎಂಆರ್ ಮಾದರಿ ಪರೀಕ್ಷೆಗೆ ಹೋಲಿಸಿದರೆ, ಎಸ್‌ಎಆರ್‌ಎಸ್ ಕೋವ್-2 ಜೀನ್ ಮತ್ತು ಓಆರ್‌ಎಫ್ ಲ್ಯಾಬ್ ಜೀನ್‌ಗಳನ್ನು ಶೇಕಡ 98.6 ಸಂವೇದನೆಯಲ್ಲಿ ಮತ್ತು 98.8ರಷ್ಟು ನಿಖರತೆಯಲ್ಲಿ ಪತ್ತೆ ಮಾಡುತ್ತದೆ" ಎಂದು ಬಯೋಸ್ಪೆಕ್ಟ್ರಮ್ ನಿಯತಕಾಲಿಕದ ವೆಬ್‌ಸೈಟ್ ವಿವರ ನಿಡಿದೆ.

"ಶಂಕಿತ ಕೋವಿಡ್-19 ಸೋಂಕಿತರ ಉಸಿರಾಟದ ನಾಳದಲ್ಲಿರುವ ಸಾರ್ಸ್-ಕೋವ್-2 ವೈರಾಣುವಿನ ನ್ಯೂಕ್ಲಿಕ್‌ಗಳನ್ನು ಗುಣಾತ್ಮಕವಾಗಿ ಪತ್ತೆ ಮಾಡುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಕಂಪನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News