ಸಿಬಿಐ ಮುಖ್ಯಸ್ಥರ ಆಯ್ಕೆ ಕುರಿತು ನಿಯಮ ಉಲ್ಲೇಖಿಸಿದ ಸಿಜೆಐ ರಮಣ: ಸರ್ಕಾರದ ಪ್ರಾಶಸ್ತ್ಯದ ಇಬ್ಬರು ಪಟ್ಟಿಯಿಂದ ಹೊರಗೆ

Update: 2021-05-25 07:37 GMT

ಹೊಸದಿಲ್ಲಿ : ಹೊಸ ಸಿಬಿಐ ಮುಖ್ಯಸ್ಥರನ್ನು ಆರಿಸುವ ಉದ್ದೇಶದಿಂದ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ  ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ನಿಯಮವೊಂದನ್ನು ಉಲ್ಲೇಖಿಸಿದ ಪರಿಣಾಮ ಸರಕಾರದ ಮುಂದಿದ್ದ ಆಯ್ಕೆಗಳ ಪೈಕಿ ಕನಿಷ್ಠ ಎರಡು ಹೆಸರುಗಳು ಪಟ್ಟಿಯಿಂದ ಹೊರಬಿದ್ದಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮೂಲಗಳ ಪ್ರಕಾರ ಮಾತುಕತೆಗಳ ವೇಳೆ ಸಿಜೆಐ ರಮಣ ಅವರು `ಆರು ತಿಂಗಳ ನಿಯಮ'ವನ್ನು ಉಲ್ಲೇಖಿಸಿದ್ದರೆನ್ನಲಾಗಿದ್ದು  ಸಿಬಿಐ ಮುಖ್ಯಸ್ಥರ ಆಯ್ಕೆ ವೇಳೆ ಈ ಹಿಂದೆ ಯಾವತ್ತೂ ಈ ನಿಯಮವನ್ನು ಉಲ್ಲೇಖಿಸಲಾಗಿರಲಿಲ್ಲ ಎನ್ನಲಾಗಿದೆ. ಆಯ್ಕೆ ಸಮಿತಿ ಕಾನೂನಿಗೆ ಬದ್ಧವಾಗಿರಬೇಕಿದೆ ಎಂದೂ ಅವರು ಹೇಳಿದರಎನ್ನಲಾಗಿದೆ.

ಈ ಸಮಿತಿಯಲ್ಲಿದ್ದ ವಿಪಕ್ಷ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಕೂಡ ಇದೇ ನಿಯಮವನ್ನು ಬೆಂಬಲಿಸಿದ್ದರಿಂದ ತ್ರಿಸದಸ್ಯ ಸಮಿತಿಯಲ್ಲಿ  ಇದಕ್ಕೆ ಬಹುಸಂಖ್ಯಾತ ಬೆಂಬಲ ದೊರಕಿದೆ.

ಸೇವೆಯಿಂದ ನಿವೃತ್ತರಾಗಲು ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಸಮಯ ಹೊಂದಿರುವ ಅಧಿಕಾರಿಗಳನ್ನು ಪೊಲೀಸ್ ಮುಖ್ಯಸ್ಥರ ಹುದ್ದೆಗಳಿಗೆ ಪರಿಗಣಿಸಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಜಸ್ಟಿಸ್ ರಮಣ ಉಲ್ಲೇಖಿಸಿದ್ದರೆನ್ನಲಾಗಿದೆ.

ಇದರಿಂದಾಗಿ  ಆಗಸ್ಟ್ 31ರಂದು ನಿವೃತ್ತರಾಗಲಿರುವ ಬಿಎಸ್‍ಎಫ್ ಮುಖ್ಯಸ್ಥ ರಾಕೇಶ್ ಆಸ್ಥಾನ ಹಾಗೂ ಮೇ 31ರಂದು ನಿವೃತ್ತರಾಗಲಿರುವ ಎನ್‍ಐಎ ಮುಖ್ಯಸ್ಥ ವೈ ಸಿ ಮೋದಿ ಅವರ ಹೆಸರುಗಳು ಅನರ್ಹವಾಗಿವೆ. ಇಲ್ಲಿ ಉಲ್ಲೇಖಿಸಬೇಕಾದ ಅಂಶಗಳೆಂದರೆ ಸರಕಾರದ ಪಟ್ಟಿಯಲ್ಲಿ ಈ ಎರಡು ಹೆಸರುಗಳೇ ಮೇಲ್ಪಂಕ್ತಿಯಲ್ಲಿದ್ದವು.

ಸುಮಾರು ನಾಲ್ಕು ತಿಂಗಳ ವಿಳಂಬದ ನಂತರ ಸಭೆ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಸೋಮವಾರ ಸಂಜೆ ನಡೆದಿದೆ.

ಸುಮಾರು 90 ನಿಮಿಷಗಳ ತನಕ ನಡೆದ ಸಭೆಯ ನಂತರ ಪ್ರಧಾನಿ ಮೋದಿ, ಸಿಜೆಐ ಎನ್ ವಿ ರಮಣ ಹಾಗೂ ವಿಪಕ್ಷ ನಾಯಕ ಚೌಧುರಿ ಅವರನ್ನೊಳಗೊಂಡ ಉನ್ನತಾಧಿಕಾರ ಆಯ್ಕೆ ಸಮಿತಿ ಮೂರು ಹೆಸರುಗಳನ್ನು ಅಂತಿಮಗೊಳಿಸಿದೆ. 

ಮಹಾರಾಷ್ಟ್ರದ ಮಾಜಿ ಡಿಜಿಪಿ ಸುಬೋಧ್ ಕುಮಾರ್ ಜೈಸ್ವಾಲ್,  ಸಶಸ್ತ್ರ ಸೀಮಾ ಬಲ್ ಇದರ  ಮಹಾನಿರ್ದೇಶಕ ಕೆ ಆರ್ ಚಂದ್ರ ಹಾಗೂ  ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ವಿ ಎಸ್ ಕೆ ಕೌಮುದಿ ಅವರ ಹೆಸರುಗಳು ಅಂತಿಮ ಪಟ್ಟಿಯಲ್ಲಿದ್ದು ಇವರ ಪೈಕಿ ಅತ್ಯಂತ ಹಿರಿಯರಾಗಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರು ಸಿಬಿಐ ಮುಖ್ಯಸ್ಥರಾಗುವ ಸಂಭಾವ್ಯತೆ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News