ಗಂಗಾನದಿ ದಡದಲ್ಲಿ ಹೂತಿದ್ದ ಮೃತದೇಹಗಳ ಗುರುತಿಸಲು ನೆಟ್ಟ ಕೋಲು, ಹೊದಿಕೆಗಳನ್ನು ತೆಗೆದು ಹಾಕಿದ ಉತ್ತರಪ್ರದೇಶ ಸರಕಾರ

Update: 2021-05-25 11:58 GMT

ಲಕ್ನೋ: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲಾಡಳಿತವು ಕೋವಿಡ್-19 ಸೋಂಕಿತರನ್ನು  ಹೂಳಲಾಗಿದ್ದ ಸ್ಥಳಗಳನ್ನು ಗುರುತು ಮಾಡಲು  ನಿಲ್ಲಿಸಲಾಗಿದ್ದ ಬಿದಿರಿನ ಕೋಲುಗಳು ಹಾಗೂ ಹೊದಿಕೆಗಳನ್ನು ಗಂಗಾ ನದಿಯ ತಟದ ಕನಿಷ್ಠ ಎರಡು ಘಾಟ್‍ಗಳಲ್ಲಿ ತೆಗೆದು ಹಾಕಿದೆ ಎಂದು ಸ್ಥಳೀಯ ದೈನಿಕಗಳು ವರದಿ ಮಾಡಿವೆ.

ರವಿವಾರ ರಾತ್ರಿ ಪ್ರಯಾಗರಾಜ್‍ನ ಶೃಂಗ್ವೆರ್ಪುರ್ ಘಾಟ್ ನಲ್ಲಿ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ಸುಮಾರು ಒಂದು ಕಿಮೀ ವ್ಯಾಪ್ತಿಯಲ್ಲಿ ಈ ಕೆಲಸ ಮಾಡಲಾಗಿದ್ದು ಸೋಮವಾರ ಫಫಮವು ಘಾಟ್‍ನಲ್ಲೂ ಇದೇ ರೀತಿಯ ಕೆಲಸ ಮಾಡಲಾಗಿದೆ.

ಗಂಗಾ ನದಿಯ ತಟದಲ್ಲಿ ಹಲವಾರು ಕೋವಿಡ್ ಶಂಕಿತರ ಮೃತದೇಹಗಳು ಇತ್ತೀಚೆಗೆ  ಪತ್ತೆಯಾಗಿರುವುದು ಹಾಗೂ ನದಿಯಲ್ಲೂ ಹಲವು ಮೃತದೇಹಗಳು ತೇಲುತ್ತಿದ್ದುದರಿಂದ  ಜಿಲ್ಲಾಡಳಿತ ಇಂತಹ ಒಂದು ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಎರಡು ಜೆಸಿಬಿ ಹಾಗೂ ಸುಮಾರು 2 ಡಜನ್ ಕಾರ್ಮಿಕರು ಕೆಲಸ ಮಾಡಿದ್ದು ನಂತರ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿ ಸುಡಲಾಗಿದೆ ಎಂದು  ತಿಳಿದು ಬಂದಿದೆ.

ಆದರೆ ಸಮಾಧಿಗಳ ಮೇಲೆ ಹೊದಿಸಲಾಗಿದ್ದ ಕವರ್‍ಗಳನ್ನು ತೆಗೆದು ಹಾಕಲಾಗಿದೆ ಎಂಬುದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ಈ ಕುರಿತು ತನಿಖೆ ನಡೆಸುವುದಾಗಿ ಪ್ರಯಾಗರಾಜ್ ಎಸ್‍ಪಿ ಧವಲ್ ಜೈಸ್ವಾಲ್ ಹೇಳಿದ್ದಾರೆ.

ಗಂಗಾ ನದಿಯ ತಟದಲ್ಲಿ ಸುಮಾರು 1,140 ಕಿಮೀ ಪ್ರದೇಶದಲ್ಲಿ 2000 ದೇಹಗಳನ್ನು ಹೂಳಲಾಗಿದೆ ಎಂದು ದೈನಿಕ್ ಭಾಸ್ಕರ್ ಮೇ 14ರಂದು ವರದಿ ಮಾಡಿತ್ತು. ಶುಕ್ಲಗುಂಜ್ ಘಾಟ್ ಸಮೀಪ 900 ಕಳೇಬರಗಳು ಹಾಗೂ ಸೀರೇಶ್ವರ್ ಘಾಟ್ ಸಮೀಪ 400 ಕಳೇಬರಗಳು ಪತ್ತೆ ಯಾಗಿದ್ದವು ಹಾಗೂ ಈ ವಿಚಾರ ತಿಳಿದ ನಂತರ ಪೊಲೀಸರು ಅವುಗಳನ್ನು ಹೂತರೆಂದು  ಪತ್ರಿಕೆ ವರದಿ ಮಾಡಿತ್ತು. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News