ಲಕ್ಷದ್ವೀಪವೆನ್ನುವ ಸ್ವರ್ಗಕ್ಕೆ ಕಿಚ್ಚಿಡಲು ಹೊರಟವರು

Update: 2021-05-26 06:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭೂಮಿ, ಕಾಡು, ಸಮುದ್ರ ಇವೆಲ್ಲವೂ ಇರುವುದು ಖಾಸಗಿಯವರಿಗೆ ಮಾರಾಟ ಮಾಡುವುದಕ್ಕೆ ಎಂದು ಬಲವಾಗಿ ನಂಬಿರುವ ಕೇಂದ್ರ ಸರಕಾರದ ಕಣ್ಣು ಇದೀಗ ಲಕ್ಷದ್ವೀಪದ ಮೇಲೆ ಬಿದ್ದಿದೆ. ನಗರಗಳ ಭೋಗ ವಿಲಾಸಗಳಿಂದ ದೂರವಿದ್ದು ಕಡಲು, ಮೀನು, ವ್ಯಾಪಾರ ಎಂದು ತಮ್ಮ ಪಾಡಿಗೆ ನೆಮ್ಮದಿಯ ಬದುಕನ್ನು ಬದುಕುತ್ತಾ ಬಂದಿರುವ ಲಕ್ಷದ್ವೀಪದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ, ವಿವಿಧ ಕಾನೂನುಗಳನ್ನು ಜಾರಿಗೊಳಿಸಿ ಅವರ ಕೈಯಿಂದ ಅವರ ಭೂಮಿ, ಕಡಲು, ವ್ಯಾಪಾರ, ಆಹಾರಗಳನ್ನು ಕಸಿದುಕೊಳ್ಳುವ ಕೇಂದ್ರ ಸರಕಾರದ ಪ್ರಯತ್ನದ ವಿರುದ್ಧ ಈಗಾಗಲೇ ಕೇರಳದಾದ್ಯಂತ ತೀವ್ರ ಪ್ರತಿಭಟನೆಗಳು ಎದ್ದಿವೆ. ವಿವಿಧ ಚಿಂತಕರು, ಸಿನೆಮಾ ನಟರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡತೊಡಗಿದ್ದು, ಲಕ್ಷದ್ವೀಪದ ಜನರ ಶಾಂತ ಬದುಕನ್ನು ಕಲಕದಿರಿ ಎಂದು ಮನವಿ ಮಾಡತೊಡಗಿದ್ದಾರೆ. ಆದರೆ ಸರಕಾರವೆಂಬ ಹಸಿದ ರಣಹದ್ದಿಗೆ ಲಕ್ಷದ್ವೀಪವೆನ್ನುವುದು ಮಾಂಸದ ತುಣುಕುಗಳಂತೆ ಕಾಣುತ್ತಿದೆ. ಅಲ್ಲಿ ಶತಶತಮಾನಗಳಿಂದ ಬದುಕು ಕಟ್ಟಿಕೊಂಡ ಸಹಸ್ರಾರು ಜನರ ಕುರಿತಂತೆ ಯಾವ ಕಾಳಜಿಯನ್ನೂ ಹೊಂದದ ಸರಕಾರ, ಆ ದ್ವೀಪದ ಬೌಗೋಳಿಕ ಸಂಪತ್ತಿನ ಮೇಲಷ್ಟೇ ಕಣ್ಣಿಟ್ಟಿದೆ. ಅಷ್ಟೇ ಅಲ್ಲ, ಅವರ ಸಂಸ್ಕೃತಿ, ಆಹಾರ ವೈವಿಧ್ಯಗಳಲ್ಲೂ ಹಸ್ತ ಕ್ಷೇಪ ಮಾಡುತ್ತಾ, ಸ್ಥಳೀಯರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ.

ಭಾರತದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ. ಸಣ್ಣ ಹವಳದ ಚೂರುಗಳ ಸಂಗ್ರಹದಂತಿರುವ ಈ ದ್ವೀಪದಲ್ಲಿ ಮುಸ್ಲಿಮ್ ಧರ್ಮೀಯರು ಬಹುಸಂಖ್ಯಾತರಾಗಿದ್ದಾರೆ., ಆದರೆ ತಮ್ಮ ಬದುಕಿನಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಶ್ರಮ ಜೀವಿಗಳು. ಮೀನುಗಾರಿಕೆ, ತೆಂಗಿನ ಕೃಷಿ, ವ್ಯಾಪಾರ ಇವುಗಳ ಮೂಲಕ ಯಾವುದೇ ಅತಿ ಆಸೆಗಳಿಲ್ಲದೆ ತಣ್ಣಗೆ ಈ ದ್ವೀಪದಲ್ಲಿ ತಾವಾಯಿತು ತಮ್ಮ ಬದುಕಾಯಿತು ಎಂದು ಜೀವಿಸುತ್ತಾ ಬಂದವರು. ಕಳೆದ ಡಿಸೆಂಬರ್ 5ರಂದು ಆಡಳಿತಾಧಿಕಾರಿಯಾಗಿ ಗುಜರಾತ್‌ನ ಪ್ರಫುಲ್ ಖೋಡಾ ಪಟೇಲ್ ಅವರು ನೇಮಕಗೊಂಡ ಬಳಿಕ ಲಕ್ಷದ್ವೀಪದ ಜನರ ಶಾಂತ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೊಳ್ಳುತ್ತಿರುವ ಅನಗತ್ಯ ಕಾನೂನುಗಳು ಇಲ್ಲಿನ ಜನರನ್ನು ಗಾಬರಿ ಬೀಳಿಸಿವೆ. ಅವರ ಬದುಕಾಗಿರುವ ಮೀನುಗಾರಿಕೆಗೂ ಇಲ್ಲಿನ ಆಡಳಿತ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ತಮ್ಮ ಸಂಕಟಗಳನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ತಮ್ಮಿಳಗೆ ಮರುಗುತ್ತಿದ್ದಾರೆ ಲಕ್ಷದ್ವೀಪದ ಜನರು.

ಕೇರಳದಲ್ಲೇ ಜಾರಿಯಾಗದ ಗೋಮಾಂಸ ನಿಷೇಧವನ್ನು ಈ ಲಕ್ಷದ್ವೀಪದಲ್ಲಿ ಜಾರಿಗೊಳಿಸಲು ಈ ಆಡಳಿತಾಧಿಕಾರಿ ಮುಂದಾಗಿದ್ದಾರೆ ಎನ್ನುವುದೇ ಈತನ ನಿಜವಾದ ಬಣ್ಣವನ್ನು ತೆರೆದಿಡುತ್ತದೆ. ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಲಕ್ಷದ್ವೀಪದಲ್ಲಿ ತುರ್ತಾಗಿ ಗೋಮಾಂಸ ನಿಷೇಧಕ್ಕೆ ಮುಂದಾಗಲು ಇರುವ ಸಾಮಾಜಿಕ, ಆರ್ಥಿಕ ಕಾರಣಗಳು ಯಾವುವು? ಗೋವಾ, ಕೇರಳ, ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸವನ್ನು ಬಿಜೆಪಿ ಬೆಂಬಲಿಸುತ್ತಿದೆ. ಇಲ್ಲಿ ಜಾರಿಗೊಳಿಸಲು ಹಿಂಜರಿಯುವ ಕಾನೂನನ್ನು ಅಮಾಯಕ ದ್ವೀಪವಾಸಿಗಳ ಮೇಲೆ ಹೇರುವುದರ ಹಿಂದಿರುವ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. ಆಡಳಿತಾಧಿಕಾರಿಯ ಸರ್ವಾಧಿಕಾರಿ ನೀತಿ ಇಲ್ಲಿಗೇ ಮುಗಿಯುವುದಿಲ್ಲ. ಇಡೀ ದೇಶಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವುದು ಲಕ್ಷದ್ವೀಪದಲ್ಲಿ. ಇಲ್ಲಿನ ಜೈಲು ಅಪರಾಧಿಗಳಿಲ್ಲದೆ ಬಣಗುಟ್ಟುತ್ತಿವೆ. ಇಂತಹ ಪ್ರದೇಶದಲ್ಲಿ ಏಕಾಏಕಿ ಗೂಂಡಾಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಇದು ಭವಿಷ್ಯದಲ್ಲಿ ಈ ದ್ವೀಪದಲ್ಲಿ ಸರಕಾರದ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಸಂಘರ್ಷವೊಂದರ ಸೂಚನೆಯನ್ನು ನೀಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಆಡಳಿತಾಧಿಕಾರಿ ಜಾರಿಗೊಳಿಸಿರುವ ಕಾಯ್ದೆಯು, ಭವಿಷ್ಯದಲ್ಲಿ ಖಾಸಗಿಯವರಿಗೆ ಭೂಮಿಯನ್ನು ಒಪ್ಪಿಸುವುದಕ್ಕೆ ಆಡಳಿತಾಧಿಕಾರಿಗೆ ಹೆಚ್ಚು ಅಧಿಕಾರವನ್ನು ನೀಡುತ್ತದೆ. ಈ ಅಭಿವೃದ್ಧಿಯ ವ್ಯಾಖ್ಯೆ ಎಷ್ಟು ವಿಶಾಲವಾಗಿದೆಯೆಂದರೆ, ಕಲ್ಲುಗಣಿಗಾರಿಕೆ, ಬೆಟ್ಟಗಳನ್ನು ಕೊರೆಯುವುದು, ಕಟ್ಟಡ ನಿರ್ಮಾಣ, ಭೂಮಿಯ ಕೊರೆತ...ಹೀಗೆ ಶಾಂತವಾಗಿರುವ ದ್ವೀಪವನ್ನು ಅಸ್ತವ್ಯಸ್ತಗೊಳಿಸುವ ಎಲ್ಲ ಹುನ್ನಾರಗಳನ್ನೂ ಹೊಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯರ ಭೂಮಿಯನ್ನು ವಶಪಡಿಸಿಕೊಳ್ಳುವ ಎಲ್ಲ ಅಧಿಕಾರವನ್ನೂ ಈ ಕಾನೂನು ತನ್ನದಾಗಿಸಿಕೊಂಡಿದೆ. ಸರಕಾರದ ಮೂಗಿನ ನೇರಕ್ಕಿರುವ ಈ ಅಭಿವೃದ್ಧಿಯನ್ನು ಜನರು ಪ್ರಶ್ನಿಸಲು ತೊಡಗಿದಾಗ ಬಳಸುವುದಕ್ಕೆಂದೇ, ಮುಂಜಾಗೃತೆಯಾಗಿ ಗೂಂಡಾಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಲಕ್ಷದ್ವೀಪದ ಇನ್ನೊಂದು ವಿಶೇಷವೆಂದರೆ, ಮದ್ಯ ನಿಷೇಧಿತ ವಲಯ. ಲಕ್ಷದ್ವೀಪದಲ್ಲಿ ಅಪರಾಧ ಪ್ರಕರಣ ತೀರಾ ಕಡಿಮೆಯಾಗಲು ಇದೂ ಒಂದು ಕಾರಣವಾಗಿತ್ತು. ಆದರೆ ಪಟೇಲ್ ಆಗಮಿಸಿದ್ದೇ ತಡ ದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಒಂದೆಡೆ ಜನರ ಆಹಾರವಾಗಿರುವ ಗೋಮಾಂಸವನ್ನು ಕಿತ್ತುಕೊಂಡು, ಅವರ ಕೈಗೆ ಮದ್ಯದ ಬಾಟಲುಗಳನ್ನು ಕೊಡಲು ಹೊರಟಿದೆ ಕೇಂದ್ರ ಸರಕಾರ. ಮದ್ಯ ಮಾರಾಟಕ್ಕೆ ಲಕ್ಷದ್ವೀಪ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡದ್ದೇ ಆದರೆ, ಲಕ್ಷದ್ವೀಪದ ಪತನ ಆರಂಭವಾಯಿತೆಂದೇ ಅರ್ಥ. ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಬೇಕಾದರೆ ಮದ್ಯಕ್ಕೆ ಅನುಮತಿ ನೀಡಲೇಬೇಕು. ಹಾಗೆಯೇ ಶ್ರಮಜೀವಿಗಳಾಗಿರುವ ಸ್ಥಳೀಯರನ್ನು ಒಳಗೊಳಗೇ ನಾಶಗೊಳಿಸಲೂ ಆಡಳಿತಕ್ಕೆ ಮದ್ಯ ಅನಿವಾರ್ಯ.

ಭವಿಷ್ಯದಲ್ಲಿ ಲಕ್ಷದ್ವೀಪವನ್ನು ಇನ್ನೊಂದು ಗೋವಾ ಆಗಿಸುವ ದೂರದೃಷ್ಟಿಯೂ ಪಟೇಲ್ ಅವರದಾಗಿದೆ. ಇದರ ಜೊತೆಗೇ ಎರಡು ಮಕ್ಕಳಿಗಿಂತ ಅಧಿಕ ಇರುವವರಿಗೆ ಪಂಚಾಯತ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡದೆ ಇರುವುದೂ ಇಲ್ಲಿನ ಜನರನ್ನು ಆಕ್ರೋಶಕ್ಕೀಡು ಮಾಡಿದೆ. ದಕ್ಷಿಣ ಭಾರತದಲ್ಲೇ ಇರದ ಕಾನೂನೊಂದನ್ನು ಇಲ್ಲಿ ಜಾರಿಗೊಳಿಸುವ ಹುನ್ನಾರವೇ, ಇಲ್ಲಿರುವ ಸ್ಥಳೀಯರ ಸಂಖ್ಯೆಯನ್ನು ಇಳಿಸಿ ಅವರಿಂದ ದ್ವೀಪವನ್ನು ಕಿತ್ತುಕೊಂಡು ಕಾರ್ಪೊರೇಟ್ ವಲಯಕ್ಕೆ ನೀಡುವುದು. ಹಾಗೆಯೇ ಕರಾವಳಿ ರಕ್ಷಣಾ ಕಾಯ್ದೆಯ ಹೆಸರಿನಲ್ಲಿ ಮೀನುಗಾರರ ಶೆಡ್‌ಗಳನ್ನು ನಾಶ ಪಡಿಸಲಾಗಿದೆ ಮಾತ್ರವಲ್ಲ, ಮೀನುಗಾರರಿಗೆ ವಿವಿಧ ರೀತಿಯ ಕಿರುಕುಳಗಳನ್ನು ಆಡಳಿತ ನೀಡುತ್ತಿದೆ. ಕಲ್ಲಿಕೋಟೆಯ ಬೇಫೂರ್ ಬಂದರು ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಇದೀಗ ಮಂಗಳೂರಿನ ಬಂದರಿನ ಜೊತೆಗೆ ಮಾತ್ರ ಸಂಪರ್ಕ ಹೊಂದಬೇಕಾದ ಸ್ಥಿತಿಯಲ್ಲಿದ್ದಾರೆ ಇಲ್ಲಿನ ವ್ಯಾಪಾರಿಗಳು. ವಿವಿಧ ಸರಕಾರಿ ಉದ್ಯೋಗಿಗಳನ್ನು ಅನಿರೀಕ್ಷಿತವಾಗಿ ಕಿತ್ತು ಹಾಕಲಾಗಿದೆ ಮಾತ್ರವಲ್ಲ, ಅಂಗನವಾಡಿಗಳನ್ನು ಮುಚ್ಚಲಾಗಿದೆ.

ಶಾಲೆಯ ಬಿಸಿಯೂಟಕ್ಕೆ ನೀಡಲಾಗುತ್ತಿದ್ದ ಮಾಂಸಾಹಾರವನ್ನೂ ಸ್ಥಗಿತಗೊಳಿಸಲಾಗಿದೆ. ಪ್ರಫುಲ್ ಪಟೇಲ್‌ನ ಅತಿ ದೊಡ್ಡ ಹೆಗ್ಗಳಿಕೆಯೆಂದರೆ, ಕೊರೋನವನ್ನು ಈ ದ್ವೀಪಕ್ಕೂ ಹರಡಿದ್ದು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಈ ದ್ವೀಪದಲ್ಲಿ ಒಂದೇ ಒಂದು ಕೊರೋನ ಸೋಂಕು ಪ್ರಕರಣವಿರಲಿಲ್ಲ. ಲಕ್ಷದ್ವೀಪಕ್ಕೆ ಆಗಮಿಸಬೇಕಾದರೆ ಕಠಿಣ ಕ್ವಾರಂಟೈನ್ ಪಾಲಿಸಬೇಕು ಎನ್ನುವ ನಿಯಮವೇ ಇದಕ್ಕೆ ಮುಖ್ಯ ಕಾರಣ. ಪಟೇಲ್ ಆಗಮಿಸಿದವರೇ ಈ ಕಠಿಣ ನಿಯಮಗಳನ್ನು ಸಡಿಲಿಸಿದರು. ಪರಿಣಾಮವಾಗಿ, ಇಂದು ಲಕ್ಷದ್ವೀಪದಲ್ಲಿ 6,000ಕ್ಕೂ ಅಧಿಕ ಮಂದಿ ಕೊರೋನ ಸೋಂಕಿತರಿದ್ದಾರೆ. ಪಟೇಲ್ ಅವರನ್ನು ಕೇಂದ್ರ ಸರಕಾರ ತಕ್ಷಣ ವಾಪಸ್ ಕರೆಸಿಕೊಳ್ಳದೇ ಇದ್ದರೆ, ದಕ್ಷಿಣ ಭಾರತದ ಸ್ವರ್ಗವೆಂದೇ ಕರೆಯಲ್ಪಡುವ ಲಕ್ಷದ್ವೀಪ ಶೀಘ್ರದಲ್ಲೇ ನರಕವಾಗಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯ ಜನರ ಬದುಕು ಮತ್ತು ಅಲ್ಲಿನ ಪ್ರಕೃತಿ ಜೊತೆ ಜೊತೆಯಾಗಿ ನಾಶವಾಗಲಿವೆ.ಆದುದರಿಂದ ಲಕ್ಷದ್ವೀಪಕ್ಕಾಗಿ ಕೇರಳ ಮಾತ್ರವಲ್ಲ, ಅಳಿದುಳಿದ ಪ್ರಕೃತಿಯನ್ನು ಪ್ರೀತಿಸುವ, ಉಳಿಸಿಕೊಳ್ಳ ಬಯಸುವ ಪ್ರತಿಯೊಬ್ಬನೂ ಧ್ವನಿಯೆತ್ತಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News