ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗೆ ಇಂದು ಆರು ತಿಂಗಳು ಪೂರ್ಣ: ರೈತರಿಂದ 'ಕಪ್ಪು ದಿನ' ಆಚರಣೆ

Update: 2021-05-26 06:21 GMT
photo: ANI

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು  ನಡೆಸುತ್ತಿರುವ ಪ್ರತಿಭಟನೆಗೆ ಬುಧವಾರ ಮೇ 26ಕ್ಕೆ ಆರು ತಿಂಗಳು ಪೂರ್ಣಗೊಂಡಿದೆ. ಕೃಷಿ ಕಾನೂನುಗಳನ್ನು ಹಿಂಪಡೆಯದ ಸರಕಾರದ ವಿರುದ್ಧ  ರೈತರು ಮೇ 26 ಅನ್ನು 'ಕಪ್ಪು ದಿನ' ವಾಗಿ  ಆಚರಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಮೇ 26 ಅನ್ನು ಕಪ್ಪು ದಿನವನ್ನಾಗಿ ಆಚರಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆ ಎಂ) ಈಗಾಗಲೇ ಘೋಷಿಸಿದೆ.

ಕಳೆದ ವಾರ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡ ಪಕ್ಷಗಳು, ಎಸ್ಪಿ, ಎನ್‌ಸಿಪಿ ಹಾಗೂ  ಡಿಎಂಕೆ ಸೇರಿದಂತೆ ಹನ್ನೆರಡು ಪ್ರಮುಖ ವಿರೋಧ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದವು.

ಕೋವಿಡ್ -19 ಪರಿಸ್ಥಿತಿಯಿಂದಾಗಿ ಪಂಜಾಬ್, ಹರಿಯಾಣ ಹಾಗೂ ದಿಲ್ಲಿಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ  ಈ ಎಲ್ಲ ರಾಜ್ಯಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.

ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನ ಮುಂದುವರಿಸಿರುವ ರೈತರು ಘಾಝಿಯಾಬಾದ್ ಗಡಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ  'ಕಪ್ಪು ದಿನ' ಆಚರಿಸುತ್ತಿದ್ದಾರೆ.

ಎಸ್‌ಕೆಎಂ ಪ್ರಕಟಣೆಯ ಹಿನ್ನೆಲೆಯಲ್ಲಿ ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹಾಗೂ  ರಾಷ್ಟ್ರ ರಾಜಧಾನಿಯಲ್ಲಿನ ಕೊರೋನವೈರಸ್ ಪರಿಸ್ಥಿತಿಯಿಂದಾಗಿ ಜನರು ತಮ್ಮ ಮನೆಗಳಿಂದ ಹೊರಗೆ ಬಂದು ಅನಗತ್ಯವಾಗಿ ಒಟ್ಟುಗೂಡಬಾರದು ಎಂದು ದಿಲ್ಲಿ ಪೊಲೀಸರು ಮಂಗಳವಾರ ಜನರನ್ನು ಒತ್ತಾಯಿಸಿದರು

ಇಂದು ಪ್ರತಿಭಟನಾ ನಿರತ ರೈತರು 'ಕಪ್ಪು ದಿನ' ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಿಂಘು ಗಡಿಯಲ್ಲಿ (ದಿಲ್ಲಿ-ಹರ್ಯಾಣ ಗಡಿ) ಭದ್ರತಾ ನಿಯೋಜನೆ ಮಾಡಲಾಗಿದೆ.

“ಜನರು ತಮ್ಮ ಮನೆಗಳ ಹೊರಗೆ, ತಮ್ಮ ವಾಹನಗಳ ಮೇಲೆ ಕಪ್ಪು ಧ್ವಜಗಳನ್ನು ಹಾಕುವ ಮೂಲಕ ಪ್ರತಿಭಟನೆ ನಡೆಸುವಾಗ ನಾವು ಸರಕಾರದ ಪ್ರತಿಕೃತಿಯನ್ನು ಸುಡುತ್ತೇವೆ. ಕಪ್ಪು ಧ್ವಜ ಹಾಕುವುದು ಅಪರಾಧವೇ? ನಾವು ಯಾರೊಂದಿಗಾದರೂ ಅಸಮಾಧಾನ ಹೊಂದಿದ್ದರೆ ನಾವು ಕಪ್ಪುಧ್ವಜವನ್ನು (ಪ್ರತಿಭಟನೆಯ) ಸಂಕೇತವಾಗಿ ಬಳಸುತ್ತಿದ್ದೇವೆ. ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದು ಕೊಳ್ಳದಿದ್ದಕ್ಕಾಗಿ ಸರಕಾರವನ್ನು ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಬುಧವಾರ 'ಕಪ್ಪು ದಿನ' ಆಚರಿಸಲಿದೆ ಎಂದು ಅದರ ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ.

ಕೇಂದ್ರವು ಅಂಗೀಕರಿಸಿದ 3 ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷದ ನವೆಂಬರ್ 26 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News