ನ್ಯಾಯ,ನಿಷ್ಠುರತೆಯ ದೊರೆ

Update: 2021-05-27 06:02 GMT

2018ರ ಮೇ, ಜೂನ್ ತಿಂಗಳು ಇರಬೇಕು. ಮಧುಗಿರಿಯಲ್ಲಿ ಅದೇ ತಾನೆ ಇಲೆಕ್ಷನ್ನು ಮುಗಿಸಿ ನ್ಯಾಯಾಲಯದ ಕೆಲಸ ಪ್ರಾರಂಭಿಸುತ್ತಿದ್ದೆವು. ಪಾವಗಡ ತಾಲೂಕಿನ ಗ್ರಾಮವೊಂದರ ರೈತರೊಬ್ಬರು ವಿಶಿಷ್ಟ ಕೇಸು ದಾಖಲಿಸಿದ್ದರು. ಪಹಣಿಯ ಕಾಲಂನಲ್ಲಿ ಭೂದಾನ ಎಂದು ನಮೂದಿಸಲಾಗಿದೆ, ಅದನ್ನು ತೆಗೆಯಬೇಕು ಎಂಬ ಕೇಸು ಅದು. ನಮ್ಮ ಕಂದಾಯ ಇಲಾಖೆಯ ಕಾನೂನುಗಳಲ್ಲಿ ಹೆಚ್ಚಾಗಿ ಪರಿಚಯವಿಲ್ಲದ ಸಮಸ್ಯೆ. ಭೂದಾನಕ್ಕೆ ಸಂಬಂಧಿಸಿದ ಪ್ರಕರಣ ಎಂಬುದೇನೋ ಖಾತ್ರಿಯಾಗಿತ್ತು. ಆದರೆ ಅದನ್ನು ವಿಲೇವಾರಿ ಮಾಡುವುದು ಹೇಗೆ ಎಂಬುದು ಸಮಸ್ಯೆಯಾಗಿ ಕೂತಿತ್ತು. ಪ್ರಕರಣ ಸುಮಾರು 15 ವರ್ಷ ಹಳೆಯದು. ಸಾಮಾನ್ಯವಾಗಿ ಐಎಎಸ್ ಪ್ರೊಬೇಷನರುಗಳೇ ಕೆಲಸ ಮಾಡುತ್ತಿದ್ದ ಉಪವಿಭಾಗ ಮಧುಗಿರಿ. ಅವರಲ್ಲಿ ಕೆಲವರಿಗಾದರೂ ಭೂದಾನ ಚಳವಳಿಯ ಕುರಿತು ಸಣ್ಣ ಅರಿವು ಇದ್ದಿರಬಹುದು. ಆದರೆ ಕಾನೂನು ಸ್ಪಷ್ಟವಾಗಿ ಹೇಳದ ಪ್ರಕರಣವನ್ನು ಇತ್ಯರ್ಥ ಮಾಡುವುದು ಹೇಗೆ? ಅದಕ್ಕಾಗಿ ಕೇವಲ ಡೇಟು ಕೊಟ್ಟುಕೊಂಡು ಬಂದಿದ್ದರು. ಕೊಟ್ಟ ಡೇಟಿಗೆ ಸರಿಯಾಗಿ ಹಾಜರಾಗಿ ಮನಸ್ಸಿನಲ್ಲಿಯೇ ಬೈದುಕೊಂಡು ಹೋಗುವ ಕೆಲಸವನ್ನು ಆ ರೈತ ಮಾಡಿರಬೇಕು.

ಭೂದಾನಕ್ಕೆ ಸಂಬಂಧಿಸಿದ ಪ್ರಕರಣಗಳು ಎಷ್ಟಿವೆ ಎಂದು ಕಚೇರಿ ಹುಡುಗರಿಗೆ ಹೇಳಿ, ದಾಖಲೆಗಳನ್ನು ತೆಗೆದು ನೋಡಿದೆ. ಸುಮಾರು ಏಳೆಂಟು ಪ್ರಕರಣಗಳಿದ್ದವು. ಏನು ಮಾಡುವುದೆಂದು ತಲೆ ಕೆಡಿಸಿಕೊಂಡಾಗ ಕೂಡಲೇ ಎಚ್.ಎಸ್. ದೊರೆಸ್ವಾಮಿಯವರು ನೆನಪಾದರು. ಹಿಂದು ಮುಂದು ನೋಡದೆ ಫೋನು ಮಾಡಿದೆ. ಅವರಿಗೆ ಮೊದಲು ಗೊತ್ತಾಗಲಿಲ್ಲ. ಪರಿಚಯ ಹೇಳಿದ ಕೂಡಲೆ ‘‘ಓಹೋ ನಮ್ಮ ಏಳುಕೊಂಡಲವಾಡ’’ ಅಂದು ನಕ್ಕರು. ಜಮೀನಿನ ಪೂರ್ತಿ ಕತೆ ಹೇಳಿದೆ. ಸುಮಾರು ಒಂದು ಗಂಟೆ ಮಾತನಾಡಿದರು. ಪಾವಗಡದ ಭೂದಾನ ಚಳವಳಿಯ ಸಿಹಿ ಕಹಿ ಘಟನೆಗಳನ್ನು ವಿವರಿಸಿ, ಭೂಮಿ ಪಡೆದುಕೊಂಡ ಪ್ರತಿಯೊಬ್ಬರ ಹೆಸರು, ವಂಶವೃಕ್ಷದ ಮಾಹಿತಿಯನ್ನು ಖಚಿತವಾಗಿ ಹೇಳಿದರು. ಸುಮಾರು 50 ವರ್ಷದ ಹಿಂದೆ ಅನ್ನ ಬಡಿಸಿದವರ, ಅವಮಾನಿಸಿದವರ ಹೆಸರುಗಳನ್ನೂ ಮರೆತಿರಲಿಲ್ಲ ಅವರು. ಪಾವಗಡದ ಸಮೃದ್ಧಿ, ಈಗ ಅದರ ಪರಿಸ್ಥಿತಿಗಳ ಕುರಿತು ಮಾತನಾಡಿ ಕಡೆಗೆ ಆ ಭೂಮಿಯ ಕುರಿತು ಏನು ಮಾಡಬೇಕು, ಅದರ ದಾಖಲೆಗಳು ಎಲ್ಲಿ ಸಿಗುತ್ತವೆ, ಷರತ್ತುಗಳನ್ನು ಯಾಕೆ ವಿಧಿಸಲಾಗಿದೆ ಎಂದು ವಿವರಿಸಿದ್ದರು.ಅವರ ನೆನಪಿನ ಶಕ್ತಿಯ ಅಗಾಧತೆಗೆ ಬೆಚ್ಚಿ ಬಿದ್ದಿದ್ದೆ. ಬೆಂಗಳೂರಿಗೆ ಬಂದಾಗ ಬಾ ಅಂದಿದ್ದರು.

ಜಯನಗರದ ಸಣ್ಣ ಮನೆ ಮೊದಲು ನೋಡಿದ್ದಾಗ ಹೇಗಿತ್ತೊ ಹಾಗೆ ಇತ್ತು. ನೆಲಕ್ಕೆ ತಣ್ಣಗಿನ ಕಾವಿ ಬಣ್ಣ. ದಪ್ಪ ಗೋಡೆಗಳು. ಕುರ್ಚಿಯೂ ಬದಲಾಗಿರಲಿಲ್ಲ. ಮನೆಗೆ ಹೋದಾಗ ಕಿವಿ ಹಿಡಿದು ತುಸುವೇ ಹಿಂಡಿ ಬೆನ್ನ ಮೇಲೆ ಗುದ್ದಿದರು. ಕಾಫಿ ಕುಡಿಯಲ್ಲ ಅಂದೆ. ನಕ್ಕರು. ಅವರು ಮಾತ್ರ ಎರಡು ಸ್ಪೂನು ಸಕ್ಕರೆ ಹಾಕಿಕೊಂಡು ಕಾಫಿ ಕುಡಿಯುತ್ತಿದ್ದರು. ಕ್ವಿಂಟಾಲ್ ಗಟ್ಟಲೆ ಸಕ್ಕರೆ ತಿಂದಿರಬಹುದಾ ಅಂದೆ. ಕಾಫಿಯ ಬಗ್ಗೆ ಅನೇಕ ಸಂಗತಿಗಳನ್ನು ಹೇಳಿದರು. 42 ಕ್ಕೆ ನಿನ್ನ ತಲೆ ನೋಡಿಕೊ ಕೂದಲು ಬೆಳ್ಳಗಾಗ್ತಿದೆ. ನಿನ್ನ ವಯಸ್ಸಲ್ಲಿ ನಾನು ಹೆಂಗಿದ್ದೆ ಗೊತ್ತಾ ಎಂದು ರೇಗಿಸಿದರು.

ಎಚ್.ಎಸ್. ದೊರೆಸ್ವಾಮಿಯವರು ನನಗೆ 1994 ರಿಂದ ಪರಿಚಯವಿದ್ದರು. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಓದಿದವರಿಗೆ ಇವರ ಪರಿಚಯ ಇಲ್ಲದೆ ಇರಲು ಸಾಧ್ಯವಿಲ್ಲ. ಮೇಷ್ಟ್ರು ಎಂ.ಜಿ. ಚಂದ್ರಶೇಖರಯ್ಯನವರು ಹಲವು ಶಿಬಿರಗಳಿಗೆ ಇವರನ್ನು ಕರೆಸುತ್ತಿದ್ದರು. ಗಾಂಧೀಜಿಯ ಕುರಿತು ಉರಿ ಉರಿವ ಕೋಪ ಇದ್ದ ನಮ್ಮನ್ನು ನಿಧಾನಕ್ಕೆ ಮಾಗಿಸುವ ಪ್ರಯತ್ನ ಮಾಡಿದ್ದರು. ಭಿನ್ನಾಭಿಪ್ರಾಯಗಳನ್ನು ಅವರಷ್ಟು ಗೌರವಿಸುವ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ವಿರೋಧಿಸಬೇಕು ಅನ್ನಿಸಿದ್ದನ್ನೆಲ್ಲ ವಿರೋಧಿಸುತ್ತಿದ್ದರು. ಸಹಮತ ವ್ಯಕ್ತಪಡಿಸಬೇಕು ಅನ್ನಿಸಿದ್ದಕ್ಕೆಲ್ಲ ಸಹಮತ ವ್ಯಕ್ತ ಪಡಿಸುತ್ತಿದ್ದರು. ವ್ಯಕ್ತಿಗಳ ಆಲೋಚನೆಗಳು ಜನಪೀಡಕವಾಗಿದ್ದರೆ ವಿಷಯಾಧಾರಿತವಾಗಿ ವಿರೋಧಿಸುತ್ತಿದ್ದರೇ ಹೊರತು ವ್ಯಕ್ತಿಗಳನ್ನು ಯಾವ ಕಾರಣಕ್ಕೂ ವಿರೋಧಿಸುತ್ತಿರಲಿಲ್ಲ. ಅಂಥದೊಂದು ಉದಾತ್ತ ಗುಣ ಅವರದು. ಸಣ್ಣ ಪ್ರಾಯದ ನಮ್ಮ ಕೋಪವನ್ನು ಬಿಸಿ ಪ್ರೀತಿಯ ಮೂಲಕ ಇಲ್ಲವಾಗಿಸುತ್ತಿದ್ದರು. ಪಡೆದುಕೊಂಡು ಬಂದಂತಿದ್ದ ಆರೋಗ್ಯ, ಅಗಾಧ ನೆನಪು, ಕಡಲಿನಂಥ ಪ್ರೇಮಮಯಿ ಸ್ವಭಾವ, ನಿಷ್ಕಲ್ಮಶ ಮನಸ್ಸು, ಜೀವಂತ ಅರಣ್ಯದಂಥ ಜೀವನ ಪ್ರೇಮ ಅದೆಲ್ಲದಕ್ಕೂ ಮಿಗಿಲಾಗಿ ಮನುಷ್ಯ ಸಮಾಜವನ್ನು ತಿದ್ದಬೇಕೆಂಬ ಹಂಬಲ ಮತ್ತು ನ್ಯಾಯ ನಿಷ್ಠುರತೆಗಳು ಚರಿತ್ರೆಯೊಳಗೆ ಎಷ್ಟು ವ್ಯಕ್ತಿತ್ವಗಳಿಗಿದ್ದವು ಎಂಬುದನ್ನು ನೆನಪಿಸಿಕೊಳ್ಳಿ. ಅಂಥವರ ಸಾಲಿಗೆ ಸೇರಬಲ್ಲ ಶಕ್ತಿ ಮತ್ತು ಚೈತನ್ಯ ಎಚ್.ಎಸ್. ದೊರೆಸ್ವಾಮಿಯವರದು. ಅನೇಕ ಸಾರಿ ಇದೇನು ಇವರಿಗೆ ಖಚಿತತೆ ಇಲ್ಲವೇ? ಯಾರ ಜೊತೆ ಹೋಗಬೇಕು? ಎಂಥವರ ಜೊತೆ ಪ್ರತಿಭಟನೆಗೆ ಕೂರಬೇಕು? ಎಂಬ ಬಗ್ಗೆ ತಿಳಿವಳಿಕೆ ಬೇಡವೇ ಎಂದೆಲ್ಲ ಅನ್ನಿಸುತ್ತಿತ್ತು. ಅದರ ಕುರಿತು ತಕರಾರೆತ್ತಿದರೆ ಅವರು ಕೈಗೆತ್ತಿಕೊಂಡಿರುವ ವಿಷಯ ಮುಖ್ಯ ಎಂದು ಹೇಳಿ ಸುಮ್ಮನೆ ನಡೆದು ಹೋಗಿ ಬಿಡುತ್ತಿದ್ದರು.

ಇಂಥ ವ್ಯಕ್ತಿತ್ವವನ್ನೂ ಒಂದೂವರೆ ವರ್ಷದ ಹಿಂದೆ ಕೆಲವರು ದೇಶದ್ರೋಹಿ ಎಂದು ಅವಮಾನಿಸಿದರು. ಅವರ ಜೀವಮಾನದಲ್ಲಿ ಅಂಥ ಮಾತುಗಳನ್ನು ಅವರು ಕೇಳಿರಲಿಲ್ಲ. ನಮ್ಮ ಮಧ್ಯಮ ವರ್ಗದ ಒಂದು ಹಿಡಿಯಷ್ಟು ಜನರೂ ಅದಕ್ಕೆ ಧ್ವನಿಗೂಡಿಸಿದ್ದರು. ಬಹುಶಃ ಅಲ್ಲಿಂದಲೇ ಅವರು ಕುಗ್ಗಲು ಪ್ರಾರಂಭಿಸಿದ್ದರು. ಆ ಘಟನೆಯಾದಾಗ ಅವರನ್ನು ನಾನು ನೋಡಿದ್ದೆ. ಎದೆಗೆ ಬೆಂಕಿ ಬಿದ್ದಂತಾಗಿತ್ತು. ಹಣ್ಣು ಹಣ್ಣು ಮುದುಕನೊಬ್ಬನನ್ನು ಎದುರಿಸಲಾಗದಷ್ಟು ಹೇಡಿಯಾಗಿಬಿಟ್ಟಿತೆ ಈ ಮಧ್ಯಮ ವರ್ಗ? ಎದುರಿಸಲಾರದೆ ನಿಂದನೆಯ ಭಾಷೆಯನ್ನು ಬಳಸತೊಡಗಿತೆ? ಅಥವಾ ತಮ್ಮ ಪಾಪ ಪ್ರಜ್ಞೆಗಳನ್ನು ಎದುರಿಸಲಾಗದೆ ಅಂಥ ಮಾತುಗಳನ್ನು ಬಳಸಿತೆ? ಗೊತ್ತಿಲ್ಲ. ಅಂತೂ ಮಧ್ಯಮ ವರ್ಗದ ಕೆಲ ಜನರ ನಾಲಿಗೆ ನರಕಕ್ಕೆ ಬಿದ್ದಿತ್ತು. ಜೀವನ ಪೂರ್ತಿ ಸಮಾಜದ ಒಳಿತಿಗಾಗಿ ದುಡಿದ ವ್ಯಕ್ತಿತ್ವಕ್ಕೆ ಆ ಮಾತು ಕೇಳಿದ ರಾತ್ರಿ ನಿದ್ದೆ ಬಂದಿತ್ತೊ ಇಲ್ಲವೊ ತಿಳಿಯದು.

ಎರಡನೆಯದಾಗಿ ಅವರ ಪತ್ನಿಯವರಾದ ಲಲಿತಮ್ಮನವರ ಅಗಲಿಕೆ ಕೂಡ ಬೇಸರ ಹುಟ್ಟಿಸಿರಬಹುದು. ಕಡೆಯ ದಿನಗಳಲ್ಲಿ ಅವರ ನಿಕಟ ಸಂಪರ್ಕದಲ್ಲಿದ್ದ ಡಾ. ವಾಸು ಅವರು ಹೇಳುವ ಪ್ರಕಾರ ಬದುಕಿದ್ದು ಸಾಕು ಎಂಬ ನಿಲುವಿಗೆ ಬಂದಿದ್ದರಂತೆ. ಕೋವಿಡ್ ಬಂದು ಅಡ್ಮಿಟ್ ಆಗಿದ್ದಾಗ ತನ್ನನ್ನು ಡಿಸ್ಚಾರ್ಜ್ ಮಾಡಿ ಸಣ್ಣ ವಯಸ್ಸಿನವರಿಗೆ ಬೆಡ್ ಕೊಡಿ ಎಂದು ಒಂದೇ ಸಮ ಹಠ ಹಿಡಿದಿದ್ದರಂತೆ.

ಅಂತೂ ಇಂದು ನಾಡನ್ನು ಆತ್ಮಸಾಕ್ಷಿ ಇರುವ ಜನರ ಸುಪರ್ದಿಗೆ ಬಿಟ್ಟು ಹೊರಟು ಹೋದರು. ಕಣ್ಣ ಮುಂದೆ ಇದ್ದ ಭೀಷ್ಮ ಸ್ವರೂಪಿ ಧೈರ್ಯ ಪರ್ವತವೊಂದು ಇದ್ದಕಿದ್ದಂತೆ ಮುಳುಗಿ ಹೋದಂತೆ ಅನ್ನಿಸುತ್ತಿದೆ. ಸರಳವಾಗಿ, ಸಮೃದ್ಧವಾಗಿ, ಭೂಮಿಗೆ ಭಾರವಾಗದೆ ಬದುಕಿದ ದೊರೆಸ್ವಾಮಿಯವರು ಮಧ್ಯಮವರ್ಗಕ್ಕೆ ಸಣ್ಣಮಟ್ಟದ್ದಾದರೂ ಗಿಲ್ಟು ಹುಟ್ಟಿಸಿ ಹೋಗಿದ್ದಾರೆ. ಆ ಗಿಲ್ಟು ಮುಂದೆ ಆರೋಗ್ಯವಂತ ದೇಶ ಕಟ್ಟಲು ನೆರವಾದರೆ ಈ ದೇಶದ ಉದಾತ್ತ ಪರಂಪರೆಗೆ ಶಕ್ತಿ ಬಂದಂತಾಗುತ್ತದೆ.

ಗಾಂಧಿ ಭವನಕ್ಕೆ ಪ್ರಬಂಧ ಬರೆಯಲು ಹೋಗಿದ್ದ ಪ್ರೇಮ ಮತ್ತು ನನಗೆ ಒಂದು ಜಹಂಗೀರನ್ನು ಹೆಚ್ಚಾಗಿ ನೀಡಿ ಕಿವಿ ಹಿಂಡಿದ್ದ ಉದ್ದನೆಯ ಬೆರಳ ಬಿಸಿಯನ್ನು ಮೆದುಳಿನ ಯಾವುದೋ ಕೋಶ ಈಗ ತಾನೆ ಹಿಂಡಿದರೇನೋ ಅನ್ನಿಸುವಂತೆ ನೆನಪಿಸುತ್ತಿದೆ.

Writer - ಡಾ. ವೆಂಕಟೇಶ ನೆಲ್ಲುಕುಂಟೆ

contributor

Editor - ಡಾ. ವೆಂಕಟೇಶ ನೆಲ್ಲುಕುಂಟೆ

contributor

Similar News