ನಿರ್ದಿಷ್ಟ ರೂಪದಲ್ಲಿ ಸರಕಾರವನ್ನು ಬಿಂಬಿಸಲು ‘ರಾಜಕೀಯ ಪ್ರಯತ್ನ’: ವಿದೇಶ ಸಚಿವ ಎಸ್. ಜೈಶಂಕರ್ ಆರೋಪ

Update: 2021-05-27 16:02 GMT

ನ್ಯೂಯಾರ್ಕ್, ಮೇ 27: ಭಾರತದ ಪ್ರಸಕ್ತ ಸರಕಾರವನ್ನು ನಿರ್ದಿಷ್ಟ ರೀತಿಯಲ್ಲಿ ಬಿಂಬಿಸಲು ‘ರಾಜಕೀಯ ಪ್ರಯತ್ನ’ವೊಂದು ನಡೆಯುತ್ತಿದೆ ಎಂದು ಭಾರತದ ವಿದೇಶ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಆದರೆ, ಸೃಷ್ಟಿಸಲಾಗುತ್ತಿರುವ ರಾಜಕೀಯ ಚಿತ್ರಣ ಮತ್ತು ಅಲ್ಲಿರುವ ವಾಸ್ತವಿಕ ಆಡಳಿತದ ನಡುವೆ ವ್ಯತ್ಯಾಸವಿದೆ ಎಂದು ಅವರು ನುಡಿದರು.

ಹೂವರ್ ಇನ್ಸ್ಟಿಟ್ಯೂಶನ್ ಬುಧವಾರ ಏರ್ಪಡಿಸಿದ ‘ಭಾರತ: ರಕ್ಷಣಾ ಭಾಗೀದಾರಿಕೆಯ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಮೇಲಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅವರೊಂದಿಗೆ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್ಮಾಸ್ಟರ್ ಸಂವಾದದಲ್ಲಿ ಭಾಗವಹಿಸಿದರು.

ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಭಾರತ ಇಂದು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದೆ ಎಂದು ಜೈಶಂಕರ್ ಹೇಳಿದರು.

‘ವಾಸ್ತವಿಕವಾಗಿ ನಾವು ಉಚಿತ ಆಹಾರವನ್ನು ನೀಡುತ್ತಿದ್ದೇವೆ. ಕಳೆದ ವರ್ಷ ಹಲವು ತಿಂಗಳುಗಳ ಕಾಲ ಉಚಿತ ಆಹಾರ ನೀಡಿದ್ದೆವು. ಈಗ ಕೊರೋನ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಉಚಿತ ಆಹಾರ ನೀಡುವುದನ್ನು ನಾವು ಮತ್ತೆ ಆರಂಭಿಸಿದ್ದೇವೆ. 80 ಕೋಟಿ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 40 ಕೋಟಿ ಜನರ ಬ್ಯಾಂಕ್ ಖಾತೆಗಳಿಗೆ ನಾವು ಹಣ ಹಾಕುತ್ತಿದ್ದೇವೆ’’ ಎಂದರು.

ರವಿವಾರ ನ್ಯೂಯಾರ್ಕ್ಗೆ ಆಗಮಿಸಿದ ಜೈಶಂಕರ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ರನ್ನು ಭೇಟಿಯಾದರು. ಬಳಿಕ ಅವರು ಬುಧವಾರ ವಾಶಿಂಗ್ಟನ್ಗೆ ಪ್ರಯಾಣಿಸಿದ್ದಾರೆ. ಅವರು ಅಲ್ಲಿ ಅಮೆರಿಕ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ರನ್ನು ಭೇಟಿಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News