ಪತಂಜಲಿ ರಾಮ್‌ದೇವ್: ಸರಕಾರವೇ ಸಾಕಿದ ಹದ್ದು

Update: 2021-05-28 05:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆಯುರ್ವೇದ, ಸಂಸ್ಕೃತಿ, ಯೋಗ ಇತ್ಯಾದಿಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ಮಂಕು ಮರುಳು ಮಾಡಿ, ಸರಕಾರದ ಸಕಲ ಸವಲತ್ತುಗಳನ್ನು ತನ್ನದಾಗಿಸಿಕೊಂಡು ಬೃಹತ್ ಉದ್ಯಮಿಯಾಗಿ ಬೆಳೆದು ನಿಂತಿರುವ ಕಾವಿ ವೇಷಧಾರಿ ಬಾಬಾ ರಾಮ್‌ದೇವ್ ಅವರ ಅಸಲಿ ಬಣ್ಣ ಬಯಲಾಗುತ್ತಿದೆ. ಹಿಂದೆಂದೂ ಕಂಡರಿಯದ ಸಂಕಷ್ಟಕ್ಕೆ ಸಿಕ್ಕಿ ದೇಶ ಒದ್ದಾಡುತ್ತಿರುವಾಗ, ವೈದ್ಯಕೀಯ ರಂಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಈ ಸಂಕಷ್ಟದ ವಿರುದ್ಧ ಹೋರಾಡುತ್ತಿರುವಾಗ ಬಾಬಾ ರಾಮ್‌ದೇವ್ ತಿರುಗಿ ಬಿದ್ದಿದ್ದಾರೆ. ವೈಯಕ್ತಿಕ ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಡಲು ಹಿಂಜರಿಯಲಾರೆ ಎನ್ನುವ ಅವರ ಮನಸ್ಥಿತಿ ಬಹಿರಂಗವಾಗಿದೆ. ಕೊರೋನ ವಿರುದ್ಧ ದೇಶ ಅಕ್ಷರಶಃ ಯುದ್ಧ ನಡೆಸುತ್ತಿರುವ ಸಂದರ್ಭದಲ್ಲೇ, ರಾಮ್‌ದೇವ್ ದೇಶಕ್ಕೆ ಹಿಂದಿನಿಂದ ಇರಿದಿದ್ದಾರೆ. ಜನರ ತೆರಿಗೆಯ ಹಣವನ್ನು ವಿವಿಧ ಸಬ್ಸಿಡಿಗಳ ಹೆಸರಿನಲ್ಲಿ ತಿಂದು ಕೊಬ್ಬಿದ ಈ ಹದ್ದು, ಈಗ ದೇಶವನ್ನೇ ಕುಕ್ಕುವುದಕ್ಕೆ ಕೊಕ್ಕು ಮಸೆಯುತ್ತಿದೆ.

ದೇಶವನ್ನು ಈವರೆಗೆ ಕಾಪಾಡಿಕೊಂಡ ಬಂದ, ಈಗ ಕಾಪಾಡುತ್ತಿರುವ ವೈದ್ಯರ ಕುರಿತಂತೆ ವದಂತಿಗಳನ್ನು ಹರಡುತ್ತಾ, ಜನರನ್ನು ದಾರಿ ತಪ್ಪಿಸುತ್ತಿರುವ ರಾಮ್‌ದೇವ್‌ರ ವಿರುದ್ಧ ಯಾವ ರೀತಿಯ ಕ್ರಮವನ್ನೂ ತೆಗೆದುಕೊಳ್ಳಲಾಗದೆ ಸರಕಾರ ಕೈ ಹಿಸುಕಿಕೊಳ್ಳುತ್ತಿದೆ. ರಾಮ್‌ದೇವ್ ಅವರ ಯೋಗದಿಂದ ಅಥವಾ ಅವರ ಪತಂಜಲಿ ಸಂಸ್ಥೆಯಿಂದ ಈ ದೇಶಕ್ಕೆ ಯಾವ ರೀತಿಯಲ್ಲಿ ಒಳಿತಾಗಿದೆ ಎನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಇಂದು ಅವರ ಉದ್ಯಮ ಆರೋಗ್ಯ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಬಟ್ಟೆ ಉದ್ಯಮ, ಸೆಕ್ಯೂರಿಟಿ ಗಾರ್ಡ್, ರೆಸಾರ್ಟ್ ಸಹಿತ ಹಲವು ವಾಣಿಜ್ಯ ಕ್ಷೇತ್ರಗಳಿಗೂ ‘ಸ್ವದೇಶಿ’ ಮುಖವಾಡದಲ್ಲಿ ಕಾಲಿಟ್ಟಿದ್ದಾರೆ ಮತ್ತು ಸರಕಾರದಿಂದ ಅದಕ್ಕಾಗಿ ಭಾರೀ ಪ್ರಮಾಣದ ಸವಲತ್ತುಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆಯುಷ್‌ಗೆ ಸರಕಾರ ನೀಡಿದ ಹಲವು ಸೌಲಭ್ಯಗಳ ಪ್ರಧಾನ ಫಲಾನುಭವಿ ರಾಮ್‌ದೇವ್. ಈ ದೇಶದ ಸೇನಾ ವಲಯದೊಳಗೂ ಪತಂಜಲಿ ಒಪ್ಪಂದ ಮಾಡಿಕೊಂಡಿದೆ ಎಂದ ಮೇಲೆ, ಅವರು ತಮ್ಮ ವಾಣಿಜ್ಯ ಬೇರುಗಳನ್ನು ಎಷ್ಟು ಆಳವಾಗಿ ಇಳಿಸಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಸೇನೆಗೂ ಕಳಪೆ ಆಹಾರ ವಿತರಿಸಿದ ಹೆಗ್ಗಳಿಕೆಯನ್ನು ರಾಮ್‌ದೇವ್ ಸಂಸ್ಥೆ ಹೊಂದಿದೆ. ಅವರ ಉತ್ಪನ್ನಗಳ ಗುಣಮಟ್ಟ ಪ್ರಶ್ನೆಗೊಳಗಾಗಿದೆೆ.

ಪತಂಜಲಿಯ ಆಮ್ಲಾ ಜ್ಯೂಸ್ ಪ್ರಯೋಗಾಲಯದಲ್ಲಿ ಕಳಪೆಯೆಂದು ಬಹಿರಂಗವಾದ ಬಳಿಕ ಸೇನೆ ಆ ಉತ್ಪನ್ನವನ್ನು ಕಸದ ಬುಟ್ಟಿಗೆ ಚೆಲ್ಲಿದೆ. ಸಂಸ್ಥೆಗೆ ಸೇನೆಯಿಂದ ಶೋಕಾಸ್ ನೋಟಿಸ್ ಕೂಡ ಹೋಗಿದೆ. ತನ್ನ ಯೋಗ ಗುರುವಿನ ನಿಗೂಢ ಸಾವಿನ ಆರೋಪವನ್ನು ಹೊತ್ತುಕೊಂಡಿರುವ ರಾಮ್‌ದೇವ್, ಋಣಾತ್ಮಕ ಕಾರಣಗಳಿಗಾಗಿಯೇ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾ ಬಂದವರು. ಸ್ವದೇಶಿ ಆಂದೋಲನದಲ್ಲಿ ಸಕ್ರಿಯರಾಗಿದ್ದ ರಾಜೀವ್ ದೀಕ್ಷಿತ್ ಅವರು ಪತಂಜಲಿಯನ್ನು ಬಲವಾಗಿ ನಂಬಿದ ಕಾರಣಕ್ಕಾಗಿಯೇ ಪ್ರಾಣ ಬಿಡಬೇಕಾಯಿತು ಎಂದು ಕೆಲವು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದವು. ದೀಕ್ಷಿತ್ ಅವರದು ಸಹಜ ಮರಣವಲ್ಲ ಎಂದೂ ಹಲವರು ಆರೋಪಿಸಿದ್ದರು. ಕೊನೆಗೆ ರಾಮ್‌ದೇವ್ ಅವರು ಈ ಬಗ್ಗೆ ಮಾಧ್ಯಮಗಳಲ್ಲಿ ಸ್ಪಷ್ಟೀಕರಣವನ್ನೂ ನೀಡಿದರು. ರಾಮ್‌ದೇವ್ ಅವರು ಆಯುರ್ವೇದ ಹೆಸರಿನಲ್ಲಿ ಅಲೋಪತಿ ಔಷಧಿಗಳನ್ನು ಮಿಶ್ರಣ ಮಾಡುತ್ತಿರುವ ಬಗ್ಗೆಯೂ ಆರೋಪಗಳಿವೆ.

ಔಷಧಿಗಳಲ್ಲಿ ಮನುಷ್ಯ ಎಲುಬುಗಳನ್ನು, ತಲೆಬುರುಡೆಗಳನ್ನು ಬಳಸುತ್ತಿರುವುದು ಯುಪಿಎ ಸರಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿತ್ತು. ರಾಮ್‌ದೇವ್ ಅವರ ರಾಜಕೀಯ ಮುಖ ಸಂಪೂರ್ಣ ಬಹಿರಂಗವಾದದ್ದು, ‘ಚೂಡಿದಾರ್ ಪ್ರಕರಣ’ದ ಮೂಲಕ. ಅಂದಿನ ಯುಪಿಎ ಸರಕಾರದ ವಿರುದ್ಧ ಪ್ರತಿಭಟನೆಯ ಹೆಸರಲ್ಲಿ ಭಾರೀ ಪ್ರಮಾಣದ ಅರಾಜಕತೆಯನ್ನು ಸೃಷ್ಟಿಸುವ ಅವರ ಸಂಚು ಬಹಿರಂಗಗೊಂಡ ಕಾರಣದಿಂದ, ಅವರನ್ನು ಬಂಧಿಸುವುದಕ್ಕೆ ಪೊಲೀಸರು ತೆರಳಿದಾಗ ಮಹಿಳೆಯ ಚೂಡಿದಾರ್ ಧರಿಸಿ ಪಲಾಯನಗೈಯಲು ಯತ್ನಿಸಿದರು. ಆದರೆ ಪೊಲೀಸರು ಅವರನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾದರು. ಇದರಿಂದ ಕೆರಳಿದ ರಾಮ್‌ದೇವ್ ‘ಸರಕಾರದ ವಿರುದ್ಧ ಸೇನೆಯನ್ನು ಕಟ್ಟುತ್ತೇನೆ’ ‘ರಾಮಲೀಲಾ ಮೈದಾನವನ್ನು ರಾವಣಲೀಲಾ ಮೈದಾನವಾಗಿಸುತ್ತೇನೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇಂದಿನ ಸರಕಾರವಾದರೆ ದೇಶದ್ರೋಹಿ ಹೇಳಿಕೆಗಾಗಿ ಶಾಶ್ವತವಾಗಿ ಅವರು ಜೈಲು ಪಾಲಾಗುತ್ತಿದ್ದರು.

ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಯೋಗ, ಪ್ರಾಚೀನ ವೈದ್ಯ ಪದ್ಧತಿ, ಆಯುರ್ವೇದ, ಗೋಮೂತ್ರ ಇತ್ಯಾದಿ ಹೆಸರುಗಳಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ರಾಮ್‌ದೇವ್ ಸಂಸ್ಥೆ ತನ್ನದಾಗಿಸಿಕೊಂಡಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ವ್ಯಯಿಸಬೇಕಾದ ಹಣ ದೊಡ್ಡ ಪ್ರಮಾಣದಲ್ಲಿ ರಾಮ್‌ದೇವ್ ಅವರ ಪತಂಜಲಿಯ ಹೆಸರಿನಲ್ಲಿ ಪೋಲಾಗಿದೆ. ಇಂದು ಕೊರೋನವನ್ನು ಎದುರಿಸಲು ಸಾಧ್ಯವಾಗದೆ ತತ್ತರಿಸಿ ಕೂತಿರುವ ಇದೇ ಉತ್ತರ ಪ್ರದೇಶ ರಾಜ್ಯ, 455 ಎಕರೆ ಪ್ರದೇಶದಲ್ಲಿ ಪತಂಜಲಿ ಪಾರ್ಕ್‌ಗೆ ಅನುಮತಿ ನೀಡಿದೆ. ಮಾತ್ರವಲ್ಲ, ಸುಮಾರು 6,000 ಕೋಟಿ ರೂ. ಸಬ್ಸಿಡಿಯನ್ನು ಈ ಪಾರ್ಕ್‌ಗಾಗಿ ನೀಡಲಾಗಿದೆ. ಒಂದು ವೇಳೆ ಇದೇ ಹಣವನ್ನು ಸರಕಾರಿ ಆಸ್ಪತ್ರೆಗಳಿಗಾಗಿ ವ್ಯಯಿಸಿದ್ದಲ್ಲಿ ಇಂದು ಕೊರೋನ ವಿರುದ್ಧ ಹೋರಾಟ ಆ ರಾಜ್ಯಕ್ಕೆ ಕಷ್ಟವಾಗುತ್ತಿರಲಿಲ್ಲ.

ಹೋಗಲಿ, ಕನಿಷ್ಠ ಕೊರೋನದ ವಿರುದ್ಧ ಹೋರಾಟದಲ್ಲಿ ಪತಂಜಲಿ ಸಂಸ್ಥೆಯ ಪಾತ್ರವೇನು ಎಂದು ಕಣ್ಣು ಹಾಯಿಸಿದರೆ ‘ಶೂನ್ಯ ಸಾಧನೆ’ಯಷ್ಟೇ ಕಾಣುತ್ತಿದೆ. ಅಷ್ಟೇ ಅಲ್ಲ, ತನ್ನ ಔಷಧಿಯನ್ನು ಮಾರುಕಟ್ಟೆಗೆ ಇಳಿಸುವ ಪ್ರಯತ್ನವಾಗಿ ಕೊರೋನದ ವಿರುದ್ಧದ ಅಲೋಪತಿ ಚಿಕಿತ್ಸೆಯ ವಿರುದ್ಧ ಸುಳ್ಳು ಆರೋಪಗಳಲ್ಲಿ ರಾಮ್‌ದೇವ್ ತೊಡಗಿದ್ದಾರೆ. ಲಸಿಕೆ ತೆಗೆದುಕೊಂಡ 10,000 ವೈದ್ಯರು ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಂಚಿ ಜನರನ್ನು ದಾರಿ ತಪ್ಪಿಸಿದ್ದಾರೆ. ಈ ಹಿಂದೆ ‘ಕೊರೋನಕ್ಕೆ ಔಷಧಿ ಕಂಡು ಹುಡುಕಿದ್ದೇನೆ’ ಎಂದು ಘೋಷಿಸಿ ವಿಶ್ವದ ಮುಂದೆ ನಗೆಪಾಟಲಿಗೀಡಾಗಿದ್ದ ರಾಮ್‌ದೇವ್, ಇದೀಗ ಕೊರೋನ ಯೋಧರ ವಿರುದ್ಧ ಹಸಿ ಸುಳ್ಳುಗಳನ್ನು ಹರಡುತ್ತಾ, ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇವರ ವಿರುದ್ಧ 1,000 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹಾಕಿದೆ ಮಾತ್ರವಲ್ಲ, ರಾಮ್‌ದೇವ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಒತ್ತಾಯಿಸಿದೆ. ಮಾಸ್ಕ್ ಹಾಕದ ಅಮಾಯಕ ವ್ಯಕ್ತಿಗಳನ್ನು ಬಂಧಿಸಿ ಅವರ ಮೇಲೆ ಇಲ್ಲದ ಪ್ರಕರಣಗಳನ್ನು ಜಡಿಯುವ ನಮ್ಮ ವ್ಯವಸ್ಥೆ ರಾಮ್‌ದೇವ್ ವಿರುದ್ಧ ಮಾತ್ರ ಜಾಣ ಕಿವುಡುತನವನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸವೇ ಸರಿ.

ಇದೀಗ ‘ಅವರ ಅಪ್ಪ ಕೂಡಾ ನನ್ನನ್ನು ಬಂಧಿಸಲು ಸಾಧ್ಯವಿಲ್ಲ’ ಎಂದು ರಾಮ್‌ದೇವ್ ಸರಕಾರಕ್ಕೆ ಸವಾಲು ಎಸೆಯುವ ವೀಡಿಯೊಗಳೂ ಹರಿದಾಡುತ್ತಿವೆ. ಸರಕಾರ ಘೋಷಿಸಿದ ಹತ್ತು ಹಲವು ಸಬ್ಸಿಡಿಗಳ ಗೋಮಾಳದಲ್ಲಿ ಮೇಯುತ್ತಾ, ಪ್ರಾಚೀನ ವೈದ್ಯಕೀಯದ ಹೆಸರಿನಲ್ಲಿ ಜನರಿಗೆ ವಂಚಿಸಿ, ಇದೀಗ ಕೊರೋನ ಕಾಲದಲ್ಲಿ ಅವರನ್ನು ದಾರಿ ತಪ್ಪಿಸಿ ಇನ್ನಷ್ಟು ಅನಾಹುತಗಳಿಗೆ ಕಾರಣರಾಗುತ್ತಿರುವ ರಾಮ್‌ದೇವ್ ವಿರುದ್ಧ ಸರಕಾರ ತಕ್ಷಣ ದೇಶದ್ರೋಹದ ಪ್ರಕರಣ ದಾಖಲಿಸಬೇಕಾಗಿದೆ. ಇಲ್ಲವಾದರೆ, ರಾಮ್‌ದೇವ್‌ರನ್ನು ಆಯುರ್ವೇದ ವೈದ್ಯನೆಂದು ನಂಬಿರುವ ಮುಗ್ಧ ಜನರು, ಲಸಿಕೆ ತೆಗೆದುಕೊಳ್ಳದೆ ಕೊರೋನ ಇನ್ನಷ್ಟು ಹರಡುವುದಕ್ಕೆ ಕಾರಣವಾಗಬಹುದು. ಪತಂಜಲಿ ಸಂಸ್ಥೆಗೆ ನೀಡಿರುವ ಎಲ್ಲ ಸಬ್ಸಿಡಿಗಳನ್ನು ವಾಪಸ್‌ ತೆಗೆದುಕೊಂಡು, ಆರೋಗ್ಯ ಕ್ಷೇತ್ರವನ್ನು ದಾರಿತಪ್ಪಿಸಿದ ಆರೋಪದಲ್ಲಿ ಅವರನ್ನು ಬಂಧಿಸಬೇಕು. ಹಾಗೆಯೇ ಸ್ವದೇಶಿ ಮುಖವಾಡದಲ್ಲಿ ಅವರು ನಡೆಸಿದ ಎಲ್ಲ ವಂಚನೆಗಳ ತನಿಖೆ ನಡೆಯಬೇಕು. ಐಎಂಎ ವಿರುದ್ಧ ಸುಳ್ಳು ಆರೋಪ ಮಾಡಿರುವ ರಾಮ್‌ದೇವ್ ಸಹಚರ ಬಾಲಕೃಷ್ಣ ಅವರನ್ನೂ ಬಂಧಿಸಿ, ಅವರ ಮೇಲೆ ಇರುವ ಈ ಹಿಂದಿನ ಕ್ರಿಮಿನಲ್ ಪ್ರಕರಣಗಳ ಮರು ತನಿಖೆಗೆ ಸರಕಾರ ಆದೇಶ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News