ಯಾಸ್ ಚಂಡಮಾರುತ: ಪ.ಬಂಗಾಳದಲ್ಲಿ ವ್ಯಾಪಕ ಹಾನಿ

Update: 2021-05-27 19:16 GMT

ಕೋಲ್ಕತಾ, ಮೇ 27: ಯಾಸ್ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಹಲವು ಅಣೆಕಟ್ಟುಗಳು ಒಡೆದಿವೆ. ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ಪ್ರವಾಹದೋಪಾದಿಯಲ್ಲಿ ನುಗ್ಗಿಬಂದ ಕಾರಣ ಕಂಗೆಟ್ಟ ಜನತೆ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವರದಿಯಾಗಿದೆ.

ಇಷ್ಟೊಂದು ಎತ್ತರದ ಸಮುದ್ರದ ಅಲೆಗಳನ್ನು ಇದುವರೆಗೆ ಕಂಡಿಲ್ಲ. ಅಲೆಗಳ ಹೊಡೆತಕ್ಕೆ ನದಿ ತೀರದಲ್ಲಿ ಹಾಕಿದ್ದ ಬಂಡೆಗಲ್ಲುಗಳು ಸಮುದ್ರದ ಒಡಲನ್ನು ಸೇರಿವೆ ಎಂದು ದಕ್ಷಿಣ 24 ಪರಗಣ ಜಿಲ್ಲೆಯ ಉಪವಿಭಾಗಕ್ಕೆ ಸೇರಿದ ಲಕ್ಷ್ಮೀಕಾಂತಪುರ ಗ್ರಾಮದ ನಿವಾಸಿಗಳು ಹೇಳಿದ್ದಾರೆ.

ಸಮುದ್ರದ ತೀರದಲ್ಲಿ ನಿರ್ಮಿಸಿರುವ ತಡೆಗೋಡೆಯ ಒಂದು ಭಾಗ ಅಲೆಗಳ ಹೊಡೆತದಿಂದ ಕುಸಿದು ಬಿದ್ದು ಸಮುದ್ರದ ನೀರು ಸಮೀಪದ ಮನೆಗೆ ನುಗ್ಗಿದೆ. ಇಲ್ಲಿನ ಬಹುತೇಕ ನಿವಾಸಿಗಳನ್ನು ಜಿಲ್ಲಾಡಳಿತ ಮೊದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಊರಲ್ಲಿ ಉಳಿದುಕೊಂಡಿರುವ ಕೆಲವರೂ ಈಗ ಮನೆ ತೊರೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
 
ಚಂಡಮಾರುತ ಅಪ್ಪಳಿಸುವ ಮೊದಲೇ ಮನೆಯಲ್ಲೇ ಉಳಿದಿದ್ದ ಕೆಲವು ಅಗತ್ಯದ ದಾಖಲೆಪತ್ರಗಳನ್ನು ಕುಟುಂಬದ ಸದಸ್ಯರ ಸಹಿತ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದೇನೆ. ಈಗ ಬೃಹದಾಕಾರದ ಅಲೆಗಳನ್ನು ನೋಡಿದಾಗ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಸ್ಥಳೀಯ ನಿವಾಸಿ ರಣಜಯ್ ಮಾಹಿ ಹೇಳಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ರಾಜ್ಯ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News