ಪತನದೆಡೆಗೆ ದೇಶದ ಆರ್ಥಿಕತೆ

Update: 2021-05-28 05:35 GMT

ಯುಪಿಎ ಸರಕಾರದ ವೈಫಲ್ಯಗಳಿಂದ ಸಾಕಷ್ಟು ನಿರಾಶರಾದ ಮತದಾರರು ಮೇ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ದಿಲ್ಲಿಯ ಗದ್ದುಗೆಯಲ್ಲಿ ನರೇಂದ್ರ ಮೋದಿಯವರನ್ನು ಸ್ಥಾಪಿಸಿದರು. ಐದು ವರ್ಷಗಳ ಆನಂತರ ಮೇ 2019ರಲ್ಲಿ ನಡೆದ ಹೊಸ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಮತದಾರರು ಮತ್ತೆ ಅಭೂತಪೂರ್ವ ಬೆಂಬಲ ನೀಡಿ ಅವರನ್ನು ಇನ್ನೊಂದು ಅವಧಿಗೆ ಚುನಾಯಿಸಿದರು.

ಇಂದು ಭಾರತದ ಸುಮಾರು 134 ಕೋಟಿ ಜನಸಂಖ್ಯೆಯಲ್ಲಿ ಶೇಕಡ 50ರಷ್ಟು ಜನರು 25 ವರ್ಷದ ಒಳಗಿನವರು. ದೇಶದ ಜನತೆಯ ಸರಾಸರಿ ವಯಸ್ಸು 29 ವರ್ಷ. ಇಷ್ಟೊಂದು ಮಂದಿ ಯುವಕರ ಆಶೋತ್ತರಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಈಡೇರಿಸುವತ್ತ ನಿರ್ದಿಷ್ಟವಾದ ಕಾರ್ಯಪ್ರಣಾಳಿಕೆಗಳನ್ನು ರೂಪಿಸಿ ಮುನ್ನಡೆಯಲು ಏಳು ವರ್ಷದ ಅವಧಿ ಸಾಕಷ್ಟು ದೀರ್ಘವೇ. ಈ ಗುರಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವುಗಳನ್ನು ಸಾಧಿಸಲು ಅನುಸರಿಸುವ ದಾರಿ. ಚುನಾಯಿತ ಸರಕಾರವು ತನ್ನ ನೀತಿಯನ್ನು ದೇಶದ ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯಗತಗೊಳಿಸಬೇಕು. ಈ ಹಿನ್ನೆಲೆಯಲ್ಲಿ 2014- 2021ರ ನರೇಂದ್ರ ಮೋದಿಯವರ ಏಳು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ಬದಲಾವಣೆಗಳನ್ನು ಸಮೀಕ್ಷಿಸಬೇಕು.

ಸರಕಾರದ ಮೌಲ್ಯಮಾಪನಕ್ಕೆ ಮೂರು ಆಯಾಮಗಳನ್ನು ಬಳಸಲಾಗಿದೆ: ದೇಶದ ಆರ್ಥಿಕತೆ, ಪ್ರಜಾತಂತ್ರದ ಮೌಲ್ಯಗಳು ಮತ್ತು ಸಾಮಾಜಿಕ ಐಕಮತ್ಯ.

► ಭಾರತದ ಆರ್ಥಿಕತೆ -1

ಯಾವುದೇ ದೇಶದ ಸಮಗ್ರ ವಿಕಾಸಕ್ಕೆ ಸ್ಥಿರವಾದ ಅರ್ಥವ್ಯವಸ್ಥೆ ಅತೀ ಅಗತ್ಯ. ಆರ್ಥಿಕತೆ ಅಂದರೆ ಶೇಕಡಾವಾರು, ಸರಾಸರಿ ಮುಂತಾದ ಅಂಕೆ ಸಂಖ್ಯೆಗಳಷ್ಟೇ ಅಲ್ಲ. ಕೃಷಿ, ಕೈಗಾರಿಕೆ, ಸಾಗಣೆ, ವ್ಯಾಪಾರ ಮತ್ತು ರಸ್ತೆ, ರೈಲು, ಆಕಾಶ, ಮತ್ತು ಜಲಯಾನಗಳು, ಸೇವಾ ಕ್ಷೇತ್ರಗಳು, ವಿದೇಶ ವ್ಯಾಪಾರ ಮುಂತಾದ ರಂಗಗಳ ವ್ಯವಹಾರಗಳು ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾಗುತ್ತವೆ. ಅವುಗಳ ವ್ಯವಹಾರ ಹೆಚ್ಚಿದಂತೆ ಉದ್ಯೋಗಗಳು ಮತ್ತು ಸಂಪಾದನೆ ಹೆಚ್ಚಿ ಜನರ ಜೀವನಕ್ರಮ ಸುಧಾರಿಸುತ್ತದೆ, ಆರ್ಥಿಕ ಅಸಮಾನತೆಗಳು ಕಡಿಮೆಯಾಗುತ್ತವೆ. ಜೀವನದ ಮಟ್ಟ ಏರಿದಂತೆ ವಿದ್ಯೆ ಮತ್ತು ಆರೋಗ್ಯದ ಕಡೆಗೆ ಗಮನ ಹೆಚ್ಚಿ ಸುಸ್ಥಿರ ಸಮಾಜದ ಬೆಳವಣಿಗೆ ತನ್ನಿಂದ ತಾನೇ ಸಾಗುತ್ತದೆ. ಈ ಕಾರಣಕ್ಕಾಗಿ ಜನತಂತ್ರವಿರುವ ದೇಶಗಳಲ್ಲಿ ಆರ್ಥಿಕತೆಯ ಬಗ್ಗೆ ವಿಶೇಷ ಒತ್ತು ನೀಡಲಾಗುತ್ತದೆ. ಈ ತತ್ವದ ಹಿನ್ನೆಲೆಯಲ್ಲಿ 2014-21ರ ಅವಧಿಯಲ್ಲಿ ಭಾರತದ ಅರ್ಥವ್ಯವಸ್ಥೆ ಯಾವ ದಿಕ್ಕಿನತ್ತ ಸಾಗಿದೆ ಎಂಬುದನ್ನು ವಿಶ್ಲೇಷಿಸಬೇಕು.

ಮೋದಿಯವರು ಅಧಿಕಾರಕ್ಕೆ ಬಂದಾಗ, ಯುಪಿಎ ಸರಕಾರದ ಎರಡನೆಯ ಅವಧಿಯಲ್ಲಿ ಮುಗ್ಗರಿಸಿದ ಆರ್ಥಿಕತೆಯನ್ನು ಸರಿಪಡಿಸಲು ಹೊಸದಾದ ಯೋಚನೆಗಳ ತುರ್ತು ದಿಗಂತದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಯಾವುದೇ ಬಿಕ್ಕಟ್ಟನ್ನು ಬಗೆಹರಿಸುವಾಗ ಮೂರು ಹಂತಗಳಲ್ಲಿ ಪರಿಹಾರಗಳನ್ನು ಕಲ್ಪಿಸಬೇಕಾಗುತ್ತದೆ: ಹ್ರಸ್ವಾವಧಿಯಲ್ಲಿ ಅದರಿಂದಾಗುತ್ತಿರುವ ದುಷ್ಪರಿಣಾಮಗಳ ಉಪಶಮನಕ್ಕೆ ದಾರಿ; ಮಧ್ಯಮಾವಧಿಯಲ್ಲಿ ಬಿಕ್ಕಟ್ಟಿನ ಕಾರಣಗಳಿಗೆ ಪರಿಹಾರ ಮತ್ತು ದೀರ್ಘಾವಧಿಯಲ್ಲಿ ಆ ತರದ ಬಿಕ್ಕಟ್ಟು ಮರುಕಳಿಸದಂತೆ ತಡೆಯುವ ಯೋಜನೆಗಳು.

ಮೋದಿ ಸರಕಾರ ಈ ಸನ್ನಿವೇಶವನ್ನು ಹೇಗೆ ಎದುರಿಸಿತು? 2014-19ರ ಅವಧಿಯಲ್ಲಿ, ಆರ್ಥಿಕ ಬಿಕ್ಕಟ್ಟಿನ ಕಾರಣಗಳನ್ನು ನಿವಾರಿಸುವ ಬದಲಾಗಿ ಸಮಸ್ಯೆಗಳ ಲಕ್ಷಣಗಳನ್ನು ಪರಿಹರಿಸುವ ಪ್ರಯತ್ನಗಳಿಗೆ ಸರಕಾರವು ಪ್ರಾಶಸ್ತ್ಯವನ್ನು ನೀಡಿತು. ನನೆಗುದಿಗೆ ಬಿದ್ದಿದ್ದ ಬೃಹತ್ ಕೈಗಾರಿಕಾ ಸ್ಥಾವರಗಳ ನಿರ್ಮಾಣವನ್ನು ಬೇಗನೇ ಪೂರ್ಣಗೊಳಿಸಲು ಮತ್ತು ಅವುಗಳಿಗೆ ಅಗತ್ಯವಾಗಿದ್ದ ಸಂಪನ್ಮೂಲಗಳನ್ನು ಜೋಡಿಸಲು ಸ್ಪಷ್ಟವಾದ ಯೋಜನೆಗಳನ್ನು ಸರಕಾರ ರೂಪಿಸಲಿಲ್ಲ. ಹೊಸ ಉದ್ಯೋಗಗಳ ಸೃಷ್ಟಿಗೆ ಘೋಷಣೆಗಳ ಹೊರತಾದ ಕಾರ್ಯಕ್ರಮಗಳು ಕಂಡು ಬರಲಿಲ್ಲ. ನಷ್ಟ ಅನುಭವಿಸುತ್ತಿದ್ದ ಉದ್ದಿಮೆಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಲು ಉದ್ಯೋಗಗಳಲ್ಲಿ ಕಡಿತವನ್ನು ಆರಂಭಿಸಿದವು. ಕಾರ್ಮಿಕರನ್ನು ಉದ್ಯೋಗದಿಂದ ತೆಗೆದು ಹಾಕಲು ಅಗತ್ಯವಾದ ಕಾರ್ಮಿಕ ಶಾಸನಗಳ ತಿದ್ದುಪಡಿಗೆ ಉದ್ಯೋಗಪತಿಗಳು ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದರು. ಸರಕಾರಿ ರಂಗದ ಬ್ಯಾಂಕುಗಳ ಕೆಟ್ಟ ಸಾಲದ ಹೊರೆಯನ್ನು ಇಳಿಸಿ ದಕ್ಷತೆ ಹೆಚ್ಚಿಸಲು ಅಗತ್ಯವಾದ ಕ್ರಮಗಳು ಸ್ಪಷ್ಟವಾಗಲಿಲ್ಲ. ಲಘು ಮತ್ತು ಸಣ್ಣ ಕೈಗಾರಿಕಾ ಉದ್ದಿಮೆಗಳಿಗೆ ಅಗತ್ಯವಾದ ಉತ್ತೇಜನ ಲಭಿಸಲಿಲ್ಲ. ಕೃಷಿರಂಗದಲ್ಲಿಯೂ ಉತ್ಪಾದನಾ ವೆಚ್ಚ ಮತ್ತು ಉತ್ಪನ್ನಗಳಿಗೆ ಲಭಿಸುವ ಬೆಲೆಯನ್ನು ಸಮತೋಲನಗೊಳಿಸಿ ರೈತರಿಗೆ ಕನಿಷ್ಠ ಸಂಪಾದನೆಯಾಗಲು ಅಗತ್ಯವಾದ ಸುಧಾರಣೆಗಳು ಘೋಷಣೆಗೇ ಸೀಮಿತವಾದವು.

ಇದರ ಜೊತೆಗೆ ಎರಡು ಮಹತ್ವಪೂರ್ಣವಾದ ನಿರ್ಧಾರಗಳನ್ನು ಮೋದಿ ಸರಕಾರ ಈ ಅವಧಿಯಲ್ಲಿ ಕೈಗೊಂಡಿತು.

► ನೋಟು ರದ್ದತಿ ಮತ್ತು ಜಿಎಸ್‌ಟಿ

ನವೆಂಬರ್ 2016ರಲ್ಲಿ ರೂ.1000 ಮತ್ತು 500 ಮುಖಬೆಲೆಯ ನೋಟುಗಳನ್ನು ಸರಕಾರ ಮುನ್ಸೂಚನೆ ಇಲ್ಲದೆ ರದ್ದುಗೊಳಿಸಿತು. ಈ ನಿರ್ಧಾರದ ಘೋಷಿತ ಉದ್ದೇಶಗಳು ಸ್ವಾಗತಾರ್ಹ - ಕಪ್ಪು ಹಣವನ್ನು ಹೊರ ತರುವುದು, ಭ್ರಷ್ಟಾಚಾರಕ್ಕೆ ನಿಯಂತ್ರಣವನ್ನು ಹೇರುವುದು ಮತ್ತು ದೇಶದ ಗಡಿಯಲ್ಲಿಯೂ ಕೆಲವು ರಾಜ್ಯಗಳಲ್ಲಿಯೂ ಹಾನಿಯುಂಟುಮಾಡುತ್ತಿದ್ದ ಉಗ್ರವಾದಿಗಳಿಗೆ ಹಣ ಲಭಿಸದಂತೆ ಮಾಡುವುದು. ಆದರೆ ಚಲಾವಣೆಯಲ್ಲಿದ್ದ ಹಣದ ಶೇಕಡಾ 86 ರಷ್ಟು ಮೌಲ್ಯದ ನೋಟುಗಳು ಅಮಾನ್ಯವೆಂದು ಏಕಾಏಕಿ ಘೋಷಿಸಿದಾಗ ಅದು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ತೀವ್ರವಾದ ಆಘಾತವನ್ನು ನೀಡಿತು. ತಮ್ಮದೇ ಉಳಿತಾಯದ ಖಾತೆಗಳಿಂದ ಹಣವನ್ನು ಪಡೆದುಕೊಳ್ಳಲು ಅನೇಕ ನಿರ್ಬಂಧಗಳನ್ನು ಹೇರಲಾಯಿತು. ರದ್ದಾದ ನೋಟುಗಳನ್ನು ಬದಲಾಯಿಸಲು ಬ್ಯಾಂಕುಗಳ ಮುಂದೆ ಉದ್ದುದ್ದ ‘ಕ್ಯೂ’ಗಳು ಬೆಳೆದವು. ಯಾವತ್ತೂ ನಗದು ವ್ಯವಹಾರದಲ್ಲಿ ತೊಡಗಿಸಿಕೊಂಡ ಸಣ್ಣ ಉದ್ದಿಮೆಗಳು, ಬಡ ರೈತರು, ದಿನಗೂಲಿ ಕಾರ್ಮಿಕರು ಅಪಾರ ನಷ್ಟ ಅನುಭವಿಸಿದರು. ಸಾವಿರಗಟ್ಟಲೆ ಸಣ್ಣ ಉದ್ದಿಮೆಗಳು ಬಾಗಿಲು ಹಾಕಿದವು. ಹೊಸ ಉದ್ಯೋಗಗಳು ಸೃಷ್ಟಿಯಾಗುವ ಬದಲು ಇದ್ದ ಉದ್ಯೋಗಗಳು ನಷ್ಟವಾದವು.

ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯ ಸುಧಾರಣೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಯುಪಿಎ ಸರಕಾರ ದೇಶಕ್ಕೆ ಒಂದೇ ತೆರಿಗೆಯನ್ನು ರೂಪಿಸುವ ಉದ್ದೇಶದಿಂದ ಹೊಸ ಸರಕು ಮತ್ತು ಸೇವಾ ತೆರಿಗೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಸರಕುಗಳ ಸಾಗಣೆ, ಅವುಗಳ ಮೇಲೆ ಕೇಂದ್ರ ಮಾರಾಟ ತೆರಿಗೆ, ಪ್ರತೀ ಒಂದು ರಾಜ್ಯದಲ್ಲಿ ಕೊಡಬೇಕಾದ ಪ್ರತ್ಯಪ್ರತ್ಯೇಕ ಮಾರಾಟ ತೆರಿಗೆ, ಸಲ್ಲಿಸಬೇಕಾದ ದಾಖಲೆಗಳು ಮತ್ತು ಫಾರಂಗಳು ಮುಂತಾದವುಗಳನ್ನು ಸರಳಗೊಳಿಸಿ ಇಡೀ ದೇಶಕ್ಕೆ ಸರಕು ಮತ್ತು ಸೇವೆಗಳ ಮೇಲೆ ಒಂದೇ ದರದ ತೆರಿಗೆಯನ್ನು ವಿಧಿಸುವ ಉದ್ದೇಶಗಳು ಈ ಸುಧಾರಣೆಗೆ ಇತ್ತು. ಆಗ ಅದಕ್ಕೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಸೇರಿದಂತೆ ಬೇರೆ ಬೇರೆ ರಾಜ್ಯಗಳು ತಮ್ಮ ಸ್ವಾಯತ್ತತೆಗೆ ಧಕ್ಕೆಯಾಗುತ್ತದೆಂಬ ಆಕ್ಷೇಪಗಳನ್ನು ಎತ್ತಿದ್ದವು. 2017ರಲ್ಲಿ ಮೂಲ ಕರಡಿನಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ತಂದು ಹೊಸ ‘ಗೂಡ್ಸ್ ಆ್ಯಂಡ್ ಸರ್ವಿಸಸ್ ಟ್ಯಾಕ್ಸ್ ಆ್ಯಕ್ಟ್’ (ಜಿಎಸ್‌ಟಿ ಕಾನೂನು) ಅನ್ನು ಮೋದಿ ಸರಕಾರ ಜಾರಿಗೊಳಿಸಿತು.

ಈ ಹೊಸ ಕಾನೂನನ್ನು ಅನುಷ್ಠಾನಗೊಳಿಸುವಾಗ ಸರಕಾರ ಎಡವಿತು. ಒಂದೇ ದರದ ತೆರಿಗೆಯ ಬದಲಾಗಿ ಹಲವು ಹಂತದ ದರಗಳನ್ನು ಸರಕಾರ ನಿಗದಿ ಮಾಡಿತು. ಈ ಹಿಂದೆ 9ಶೇ. ತೆರಿಗೆ ನೀಡುತ್ತಿದ್ದ ಸಣ್ಣ ಉದ್ದಿಮೆಗಳು ಈಗ 18ಶೇ. ತೆರಿಗೆ ಕೊಡಬೇಕಾಗಿ ಬಂತು. ಕಚ್ಚಾ ವಸ್ತುಗಳ ಮೇಲೆ ತೆರಿಗೆ ಕೊಡುವುದಲ್ಲದೆ ಅವುಗಳಿಂದ ತಯಾರಾಗುವ ಅಂತಿಮ ಉತ್ಪನ್ನದ ಮೇಲೆ ಪುನಃ ತೆರಿಗೆ ಕೊಡಬೇಕಾಗಿ ಬಂತು. ಈ ಸಮಸ್ಯೆಗೆ ಪರಿಹಾರವಾಗಿ ‘ಮೂಲವಸ್ತುಗಳ ಕರ ವಾಪಸಾತಿ’ (ಇನ್ಪುಟ್ ಟ್ಯಾಕ್ಸ್ ರಿಫಂಡ್) ಕ್ರಮವನ್ನು ಆರಂಭಿಸಲಾಯಿತು. ಆದರೆ ಅರ್ಜಿ ಸಲ್ಲಿಸಿ ಕರ ಮರುಪಾವತಿ ಬರಲು ಉದ್ದಿಮೆಗಳು ತಿಂಗಳುಗಟ್ಟಳೆ ಕಾಯಬೇಕಾಗುವ ಸನ್ನಿವೇಶ ಉದ್ಭವಿಸಿತು. ಅಗತ್ಯದ ದಾಖಲೆಗಳನ್ನು ಜೋಡಿಸಿ, ಸರಿಯಾಗಿ ಲೆಕ್ಕವನ್ನು ಪರಿಶೀಲಿಸಿ ಆ ಬಳಿಕ ‘ರಿಟರ್ನ್’ನ್ನು ತೆರಿಗೆ ಅಧಿಕಾರಿಗೆ ಸಲ್ಲಿಸುವ ಕೆಲಸ ಕ್ಲಿಷ್ಟವಾದುದರಿಂದ ಚಿಕ್ಕಪುಟ್ಟ ಉದ್ದಿಮೆದಾರರೂ ತಜ್ಞ ಲೆಕ್ಕಪರಿಶೋಧಕರನ್ನು ನೇಮಿಸಿಕೊಳ್ಳಬೇಕಾಯಿತು. ಅತ್ಯಂತ ಕಡಿಮೆ ಲಾಭಾಂಶವಿರುವ ಸಣ್ಣ-ಸಣ್ಣ ಉದ್ದಿಮೆಗಳು, ತಾವು ಮೂಲ ವಸ್ತುಗಳನ್ನು ಖರೀದಿಸುವಾಗ ಕೊಟ್ಟ ಕರದ ವಾಪಸಾತಿಯೂ ಆಗದೆ, ಸಿದ್ಧ ವಸ್ತು ಅಥವಾ ಸೇವೆಯ ಮೇಲೆ 18ಶೇ. ಕರ ನೀಡಬೇಕಾಗಿ ಬಂದು ಇಕ್ಕಟ್ಟಿಗೆ ಸಿಲುಕಿದವು.

ರಾಜ್ಯ ಮಾರಾಟ ತೆರಿಗೆ ರದ್ದಾಗಿ ರಾಜ್ಯ ಸರಕಾರಗಳ ಸಂಪನ್ಮೂಲಗಳಿಗೆ ಉಂಟಾಗುವ ಕಡಿತವನ್ನು ಭರ್ತಿ ಮಾಡಲು ಕೇಂದ್ರವು ಜಿಎಸ್‌ಟಿ ಸಂಗ್ರಹದಿಂದ ರಾಜ್ಯಗಳಿಗೆ ಕಾಲಕಾಲಕ್ಕೆ ಹಣವರ್ಗಾವಣೆ ಮಾಡುವ ಪದ್ಧತಿಯನ್ನು ಆರಂಭಿಸಲಾಯಿತು. ಈ ವರ್ಗಾವಣೆಯು ನಡೆಯುವುದು, ಹೊಸತಾಗಿ ರಚಿಸಲ್ಪಟ್ಟ ಕೇಂದ್ರ ಜಿಎಸ್‌ಟಿ ಮಂಡಳಿಯ ಮೂಲಕ. ಆ ಮಂಡಳಿಯಲ್ಲಿ ಪ್ರತೀ ರಾಜ್ಯಕ್ಕೆ ಪ್ರತಿನಿಧಿತ್ವ ಇದೆ; ಅದು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸಂಪನ್ಮೂಲದ ವರ್ಗಾವಣೆ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕು. ಆದರೆ, ಮಂಡಳಿಯ ಸಭೆ ತಿಂಗಳುಗಟ್ಟಳೆ ಆಗುವುದೇ ಇಲ್ಲ. 2020ರ ಅಕ್ಟೋಬರ್ ತಿಂಗಳಿನಲ್ಲಿ ಸಭೆ ಆದ ಬಳಿಕ ಇದೇ ಮೇ ತಿಂಗಳಲ್ಲಿ ಮತ್ತೆ ಜಿಎಸ್ ಟಿ ಮಂಡಳಿ ಸೇರಲಿದೆ! ಮಂಡಳಿಯ ದಾರ ಕೇಂದ್ರ ಸರಕಾರದ ಕೈಯಲ್ಲಿರುವ ಕಾರಣ ಕೇಂದ್ರದ ಕೃಪಾಕಟಾಕ್ಷಕ್ಕೆ ರಾಜ್ಯಸರಕಾರಗಳು ಓಲೈಸಬೇಕಾದ ಪರಿಸ್ಥಿತಿ ಉಂಟಾಯಿತು. ಈ ಕಾರಣದಿಂದಾಗಿ ಹೋದ ಮೂರು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲ ವರ್ಗಾವಣೆಯ ವಿಷಯದಲ್ಲಿ ಘರ್ಷಣೆಗಳು ಆಗುತ್ತಾ ಇವೆ.

ಕೇಂದ್ರ ಸರಕಾರವು ಹೊಸ ಹೊಸ ಉದ್ದೇಶಗಳಿಗೆ ಅಗತ್ಯ ಎಂದು ಜಿಎಸ್ ಟಿಯ ಹೊರತಾಗಿ ಉಪಕರ (ಸೆಸ್)ಗಳನ್ನು ಆರಂಭಿಸಿತು; ಮಾತ್ರವಲ್ಲ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹಳೆಯ ಪದ್ಧತಿಯನ್ನೇ ಮುಂದುವರಿಸಿತು. ದೇಶದಾದ್ಯಂತ ಒಂದೇ ತೆರಿಗೆ ಎಂದು ಘೋಷಿಸಿದರೂ ಗ್ರಾಹಕರು ಅಂತಿಮವಾಗಿ ತೆರಬೇಕಾದ ಬೆಲೆಗಳು ಕಡಿಮೆಯಾಗಲಿಲ್ಲ. ಬದಲಾಗಿ ದೈನಂದಿನ ಉಪಯೋಗದ ಸರಕು ಮತ್ತು ಸೇವೆಗಳ ಬೆಲೆ ಏರುತ್ತಾ ಹೋಯಿತು. ಈ ಎಲ್ಲಾ ಕಾರಣಗಳಿಂದಾಗಿ ಉತ್ತಮ ಉದ್ದೇಶ ಹೊಂದಿದ ಒಂದು ಸುಧಾರಣಾ ಕ್ರಮ ದೇಶದ ಅರ್ಥವ್ಯವಸ್ಥೆಗೆ ಮಾರಕ ಹೊಡೆತವನ್ನು ನೀಡಿತು.

► ಹೊಸ ದಿವಾಳಿ ವಿಧಿ ಮತ್ತು ಬ್ಯಾಂಕುಗಳ ವಿಲೀನ

ಯುಪಿಎ ಸರಕಾರ ಕಾಲದಲ್ಲಿ ಹಿಂಜರಿತಕ್ಕೆ ಬಲಿಯಾಗಿದ್ದ ಬೃಹತ್ ಉದ್ದಿಮೆಗಳು, ಕಟ್ಟಡ ನಿರ್ಮಾಣ ಕಂಪೆನಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಪುನಶ್ಚೇತನಗೊಳಿಸಲು ರಚನಾತ್ಮಕ ಕ್ರಮಗಳ ಅಗತ್ಯವಿತ್ತು. ಅವುಗಳ ಬದಲು, ನಷ್ಟ ಅನುಭವಿಸುವ ಕಂಪೆನಿಗಳ ದಿವಾಳಿಯ ಪ್ರಕ್ರಿಯೆಗೆ ಅನುಕೂಲವಾಗಲೆಂದು ‘ಭಾರತೀಯ ದಿವಾಳಿ ವಿಧಿ’ (Indian Bankruptcy Code-IBC)ಯನ್ನು ಅನುಷ್ಠಾನಗೊಳಿಸಿತು. ಅದು ಆರ್ಥಿಕತೆಗೆ ಎರಡು ರೀತಿಯಲ್ಲಿ ಹೊಡೆತವನ್ನು ಉಂಟುಮಾಡಿತು. ಅರ್ಧಕ್ಕೆ ನಿಂತ ಚಟುವಟಿಕೆಗಳು ಸ್ತಬ್ದವಾಗಿ, ಅಲ್ಲಿರುವ ಉದ್ಯೋಗಗಳು ನಷ್ಟವಾದವು. ಆರ್ಥಿಕತೆಯ ಅನಿಶ್ಚಿತತೆಯಿಂದಾಗಿ ಹೊಸ ಉದ್ದಿಮೆಗಳ ಆರಂಭವೂ ಆಗಲಿಲ್ಲ.

ಈಗಾಗಲೇ ನಷ್ಟ ಅನುಭವಿಸುತ್ತಿದ್ದ ಸರಕಾರಿ ಕ್ಷೇತ್ರದ ಬ್ಯಾಂಕುಗಳ ಸುಧಾರಣೆಯ ಗೋಜಿಗೆ ಹೋಗದೆ ಅವುಗಳ ವಿಲೀನೀಕರಣದ ಪ್ರಕ್ರಿಯೆಯನ್ನು ಮೋದಿ ಸರಕಾರ 2017-18ರಲ್ಲಿ ಆರಂಭಿಸಿ ಮಾರ್ಚ್ 2020ಕ್ಕೆ ಅವುಗಳ ಸಂಖ್ಯೆಯನ್ನು 25 ರಿಂದ 11ಕ್ಕೆ ಇಳಿಸಿತು. ವಿಲೀನೀಕರಣಕ್ಕೆ ಒಳಗಾದ ಬ್ಯಾಂಕುಗಳ ಉದ್ಯೋಗಿಗಳು ಭಿನ್ನ-ಭಿನ್ನ ತಂತ್ರಜ್ಞಾನ ಮತ್ತು ಆಂತರಿಕ ಪದ್ಧತಿಗಳ ಹೊಂದಾಣಿಕೆ ಹಾಗೂ ವೃತ್ತಿಸಂಸ್ಕೃತಿಗಳ ಸಮನ್ವಯಕ್ಕೆ ಒತ್ತು ಕೊಡಬೇಕಾಗಿ ಬಂತು; ಸಾಲ ನೀಡುವಿಕೆಗೆ ಮತ್ತು ಸಂಪನ್ಮೂಲಗಳ ಕ್ರೋಡೀಕರಣದತ್ತ ಗಮನ ಹರಿಸಲು ವಿಫಲರಾದರು. ಮಾತ್ರವಲ್ಲ, ಕಾಲಕಾಲಕ್ಕೆ ಆಗಬೇಕಾದ ಸಾಲ ಖಾತೆಗಳ ಪರಿಶೀಲನೆ ಹಿಂದೆ ಬಿತ್ತು.

ಇವೆಲ್ಲ ಬೆಳವಣಿಗೆಯ ಜೊತೆಗೆ ಕೃಷಿಕ್ಷೇತ್ರಕ್ಕೆ ಸರಕಾರ ಆದ್ಯತೆ ನೀಡಲು ಹಿಂದೇಟು ಹಾಕಿತು. ಕೃಷಿ ಉತ್ಪನ್ನ್ನಗಳಿಗೆ ಸರಕಾರ ನೀಡಬೇಕಾಗಿದ್ದ ಬೆಂಬಲ ಬೆಲೆಗಳನ್ನು ಕಾಲಕಾಲಕ್ಕೆ ಪರಾಮರ್ಶಿಸುವ, ರೈತರ ಸಾಲದ ಹೊರೆಗಳನ್ನು ಕಡಿಮೆ ಮಾಡಲು ಅಗತ್ಯವಾದ ಕ್ರಮಗಳಲ್ಲಿ ಸರಕಾರ ಆಸಕ್ತಿ ತೋರಿಸಲಿಲ್ಲ. 2014ರಿಂದ 2019ರ ತನಕವೂ ದೇಶದ ವಿವಿಧೆಡೆಗಳಲ್ಲಿ ಆಗುತ್ತಿದ್ದ ರೈತ ಪ್ರತಿಭಟನೆಗಳು ಈ ನಿರ್ಲಕ್ಷ್ಯವನ್ನು ಎತ್ತಿ ಹೇಳುತ್ತಿದ್ದವು. 2020ರಲ್ಲಿ ಕೊರೋನ ಸಾಂಕ್ರಾಮಿಕದಿಂದ ಆರ್ಥಿಕತೆ ಜರ್ಜರಿತವಾಗಿದ್ದಾಗ ರೈತ ಸಂಘಗಳ ಆಕ್ಷೇಪಗಳನ್ನು ಕಡೆಗಣಿಸಿ ಮೂರು ಹೊಸ ಕೃಷಿ ಕಾನೂನುಗಳನ್ನು ಆತುರದಿಂದ ಊರ್ಜಿತಗೊಳಿಸಿತು. ಈ ಹೊಸ ಕಾನೂನುಗಳ ರದ್ದತಿಗೋಸ್ಕರ ಇಡೀ ರೈತ ಸಮುದಾಯವು ದೇಶದಾದ್ಯಂತ ಹೋರಾಟವನ್ನು ಆರಂಭಿಸಿತು.

(ಮುಂದುವರಿಯುವುದು)

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News