"ಅವರು ಕೇವಲ ಮಕ್ಕಳು": ಗಾಝಾದಲ್ಲಿ ಮೃತಪಟ್ಟ ಮಕ್ಕಳ ಕುರಿತು ವಿಶೇಷ ಮುಖಪುಟ ವರದಿ ಪ್ರಕಟಿಸಿದ ನ್ಯೂಯಾರ್ಕ್‌ ಟೈಮ್ಸ್‌

Update: 2021-05-29 14:09 GMT

ನ್ಯೂಯಾರ್ಕ್:‌ ಫೆಲೆಸ್ತೀನ್‌ ವಿರುದ್ಧ ಇಸ್ರೇಲ್‌ ನಡೆಸಿದ  ವಾಯುದಾಳಿಯಲ್ಲಿ ಇದುವರೆಗೆ 67 ಮಂದಿ ಮಕ್ಕಳು ಸಹಿತ ಹಲವರು ಮೃತಪಟ್ಟಿದ್ದಾರೆ. ಗಾಝಾದಿಂದ ಹಮಾಸ್‌ ನಡೆಸಿದ್ದ ರಾಕೆಟ್  ದಾಳಿಯಲ್ಲಿ ಒಂದು ಮಗು ಮೃತಪಟ್ಟಿದೆ. ಈ ಕುರಿತು  ಪ್ರತಿಷ್ಠಿತ ನ್ಯೂಯಾರ್ಕ್‌ ಟೈಮ್ಸ್‌ ದೈನಿಕ  ಸಮಗ್ರ ವರದಿಯೊಂದನ್ನು ಪ್ರಕಟಿಸಿದೆ. ಮೊನಾ ಎಲ್‌   ನಗ್ಗರ್‌, ಆಡಮ್‌ ರಸ್ಗೋನ್‌ ಹಾಗೂ ಮೋನಾ ಬೊಶ್ನಾಕ್‌ ಈ ವಿಶೇಷ ಸಚಿತ್ರ  ವರದಿಯನ್ನು ತಯಾರಿಸಿದ್ದಾರೆ. ‌

ಮೇ 28, 2021 ರ ನ್ಯೂ ಯಾರ್ಕ್ ಟೈಮ್ಸ್ ನ ಮುಖಪುಟದಲ್ಲಿ 64 ಮಕ್ಕಳ ಫೋಟೋ ಪ್ರಕಟಿಸಿ ಒಳಗಿನ ಪುಟಗಳಲ್ಲಿ   ಮೃತಪಟ್ಟ ಮಕ್ಕಳ ಹಿನ್ನೆಲೆ, ಅವರ ಕುಟುಂಬಸ್ಥರ ಪ್ರತಿಕ್ರಿಯೆ ಮುಂತಾದವುಗಳಿರುವ ವಿವರವಾದ ವರದಿಯನ್ನು ಪ್ರಕಟಿಸಲಾಗಿದೆ. 

Photo: Newyork Times

"ಈ ದಾಳಿಗಳನ್ನು ಮತ್ತು ನಿಮಗಾಗಿರುವ ನಷ್ಟಗಳ ಕುರಿತು ನೀವೇನು ಹೇಳುತ್ತೀರಿ ಎಂದು ಪ್ರತಿಯೊಂದು ಹೆತ್ತವರಲ್ಲಿ ಕೇಳಿದಾಗ, ಇದೆಲ್ಲವೂ ದೈವೇಚ್ಛೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ.  ಅವರ ಮಗು ಡಾಕ್ಟರ್‌ ಆಗಬೇಕಿತ್ತು, ಇಂಜಿನಿಯರ್‌ ಆಗಬೇಕಿತ್ತು, ಕಲಾವಿದ  ಆಗುವ ಕನಸು ಕಂಡಿದ್ದ  ಎಂದು ಮೆಲುದನಿಯಲ್ಲಿ ಹೇಳುತ್ತಾರೆ ಎಂದು ವರದಿ ಹೇಳಿದೆ ಉಲ್ಲೇಖಿಸಿದೆ.

ʼನಾನು ಸದ್ಯ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆʼ ಎಂದು ಜಬಾಲಿಯಾದ ಟ್ಯಾಕ್ಸಿ ಚಾಲಕ ಸಾದ್‌ ಅಸಾಲಿಯ ಹೇಳುತ್ತಾರೆ. ಅವರ 10 ವರ್ಷದ ಪುತ್ರಿ ರಾಕೆಟ್‌ ದಾಳಿಗೆ ಬಲಿಯಾಗಿದ್ದಳು. "ಇದೆಲ್ಲವೂ ದೈವೇಚ್ಛೆ ಎಂದುಕೊಂಡು ನಾನು ನನ್ನನ್ನೇ ಸಮಾಧಾನಪಡಿಸಲು ಯತ್ನಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.

Photo: Newyork Times

ಇಸ್ರೇಲ್‌ ಮತ್ತು ಹಮಾಸ್‌ ನಡುವೆ 11 ದಿನಗಳ ಕಾಲ ನಡೆದ ಸಂಘರ್ಷದಲ್ಲಿ 18 ವರ್ಷದ ಕೆಳಗಿನ 67 ಮಕ್ಕಳು ಗಾಝಾದಲ್ಲೂ, ಇಬ್ಬರು ಮಕ್ಕಳು ಇಸ್ರೇಲ್‌ ನಲ್ಲಿ ಮೃತಪಟ್ಟಿದ್ದಾರೆ.

ಇಲ್ಲಿ ಮೃತಪಟ್ಟಿರುವ ಬಹುತೇಕ ಮಕ್ಕಳು ಫೆಲೆಸ್ತೀನ್‌ ಗೆ ಸೇರಿದವರಾಗಿದ್ದಾರೆ. ಗಾಝಾದಲ್ಲಿ ಯವಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಕೆಲವೊಂದು ಸಲ ಒಂದೇ ಸ್ಫೋಟದಲ್ಲಿ ಸಂಪೂರ್ಣ ಕುಟುಂಬವೇ ನಾಶವಾದದ್ದೂ ಇದೆ ಎಂದು ವರದಿ ತಿಳಿಸಿದೆ. ಗಾಝಾದಲ್ಲಿ ಒಂದೊಂದು ಮಕ್ಕಳೂ   ಭಯ, ಬಡತನ ಮತ್ತು ನಷ್ಟದ ನಡುವೆಯೇ ಬೆಳೆಯುತ್ತಾರೆ . ಅಲ್ಲಿ ಬಡತನ ಮತ್ತು ನಿರುದ್ಯೋಗ ಬಹಳ  ಹೆಚ್ಚಾಗಿದೆ. ಗಾಝಾದ ಜನರಿಗೆ ಬೇರೆ ಯಾವುದೇ ಪ್ರದೇಶಕ್ಕೆ ಉದ್ಯೋಗ ನಿಮಿತ್ತ ತೆರಳಲು ಇಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ವಿಧಿಸಿರುವ  ನಿರ್ಬಂಧಗಳ ಕಾರಣ ಸಾಧ್ಯವಿಲ್ಲ. ಓರ್ವ 15 ವರ್ಷದ ಬಾಲಕ 4 ಯುದ್ಧಗಳನ್ನು ಕಂಡಿದ್ದಾನೆ ಎಂದೂ ಅಲ್ಲಿನ ಜನರನ್ನು ಉಲ್ಲೇಖಿಸಿ ವರದಿ ಹೇಳುತ್ತದೆ. 

Photo: Newyork Times

"ಯುದ್ಧದಲ್ಲಿ ಮೃತಪಟ್ಟ ಮಕ್ಕಳ ಕುರಿತು ನಾನು ಯೋಚಿಸುವಾಗ ಯುದ್ಧದಲ್ಲಿ ಬದುಕುಳಿದ ಮಕ್ಕಳ ಕುರಿತಾದಂತೆಯೂ ಆಲೋಚಿಸಬೇಕಾಗುತ್ತದೆ. ಯುದ್ಧದ ಅವಶೇಷಗಳ ನಡುವೆ ಸಿಲುಕಿ ಬಚಾವಾಗಿ ಬಂದವರ ಕುರಿತೂ ಯೋಚಿಸಬೇಕಾಗುತ್ತದೆ. ಕೈ, ಕಾಲು. ದೇಹದ ಅಂಗಗಳನ್ನು ಕಳೆದುಕೊಂಡ ಮಕ್ಕಳ ಕುರಿತು, ಶಾಲೆಗೆ ಮರಳಿದ ವೇಳೆ ತನ್ನ ಆತ್ಮೀಯ ಸೇಹಿತ ಮೃತಪಟ್ಟಿದ್ದಾನೆ ಎಂದು ಅರಿತು ಸಂಕಟಪಡುವವರ ಕುರಿತೂ ಆಲೋಚಿಸಬೇಕಾಗುತ್ತದೆ" ಎಂದು ಗಾಝಾದ ಕ್ಕಳ ಮನಶಾಸ್ತ್ರಜ್ಞ ಒಲಾ ಅಬು ಹಸಬಲ್ಲಾ ಹೇಳಿದ್ದಾಗಿ ವರದಿ ತಿಳಿಸಿದೆ.

Photo: Newyork Times

ಇನ್ನು ಇಸ್ರೇಲ್‌ ವಿರುದ್ಧ ಹಮಾಸ್‌ ನಡೆಸಿದ್ದ ವಾಯುದಾಳಿಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳಲ್ಲಿ  ಓರ್ವ ಬಾಲಕಿ  ಫೆಲೆಸ್ತೀನ್‌ ಗೆ ಸೇರಿದವಳಾಗಿದ್ದಾಳೆ. ಮಧ್ಯ ಇಸ್ರೇಳ್‌ ನ ಅರಬ್‌ ಗ್ರಾಮವಾಗಿದ್ದ ದಹ್ಮಾಶ್‌ ನಲ್ಲಿ ಅವರು ವಾಸಿಸುತ್ತಿದ್ದರು. ನದೈನ್‌ ಅವಾದ್‌ ಎಂಬ ಬಾಲಕಿ ಶಬ್ಧ ಕೇಳಿದ ಕಡೆಗೆ ತನ್ನ ತಂದೆಯನ್ನು ಹಿಂಬಾಲಿಸಿ ತೆರಳಿದ್ದಳು. ಈ ವೇಳೆ ರಾಕೆಟ್‌ ಅಪ್ಪಳಿಸಿ ಅವರಿಬ್ಬರೂ ಮೃತಪಟ್ಟಿದ್ದರು. "ರಾಕೆಟ್‌ ಗೆ ಆತ ಅರಬ್ಬನೋ, ಯಹೂದಿಯೋ ಎಂದೇನು ಗೊತ್ತು, ಶಬ್ಧ ಕೇಳಿ ತಂದೆಯನ್ನು ಹಿಂಬಾಲಿಸಿದವಳು ಈಗ ಗೋರಿಯವರೆಗೂ ತಂದೆಯನ್ನು ಹಿಂಬಾಲಿಸಿದ್ದಾಳೆ" ಎಂದು ಬಾಲಕಿಯ ಚಿಕ್ಕಪ್ಪ ಇಸ್ಮಾಯೀಲ್‌ ಅರಫಾತ್‌ ಹೇಳುತ್ತಾರೆ.

ಈದ್‌ ದಿನಕ್ಕಿಂತ ಮುಂಚೆ ತಮ್ಮ ಕೂದಲು ಕತ್ತರಿಸಲೆಂದು ಸೆಲೂನ್‌ ಗೆ ತನ್ನ 10 ವರ್ಷ ಪ್ರಾಯದ ಸಹೋದರ ಅಮ್ಮಾರ್‌ ಎಲ್‌ ಎಮೂರ್‌ ನೊಂದಿಗೆ ತೆರಳಿದ್ದ ಹಮಾದಾ ಅಲ್‌ ಎಮೂರ್‌ ಎಂಬ 13 ವರ್ಷದ ಬಾಲಕನೂ ರಾಕೆಟ್‌ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ನಾಲ್ವರು ಮಕ್ಕಳು ಇಸ್ರೇಲ್‌ ನ ರಾಕೆಟ್‌ ದಾಳಿಯಲ್ಲಿ ಮೃತಪಟ್ಟಿದ್ದು, "ನಮ್ಮ ನೋವನ್ನು ಹೇಳಲು ಸಾಧ್ಯವಿಲ್ಲ" ಎಂದಷ್ಟೇ ಕುಟುಂಬಸ್ಥರು ಉತ್ತರಿಸಿದ್ದಾಗಿ ವರದಿ ತಿಳಿಸಿದೆ.

Photo: Newyork Times

ಮುಹಮ್ಮದ್‌ ತ್ವಲ್ಬೆ ಎಂಬ 12ರ ಹರೆಯದ ಬಾಲಕ ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಎಂದು ಆತನ ತಂದೆ ಹಾಮಿದ್‌ ತ್ವಲ್ಬೆ ಹೇಳುತ್ತಾರೆ. ಆತ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು. ಮೆಕ್ಯಾನಿಕಲ್‌ ಇಂಜಿನಿಯರ್‌ ಆಗಬೇಕೆಂದುಕೊಂಡಿದ್ದ. ಮನೆಯಲ್ಲಿ ನಮಗೆಲ್ಲರಿಗೂ ಸಹಕಾರಿಯಾಗಿದ್ದ. ಮಕ್ಕಳಿಗೆ ಸಣ್ಣಪುಟ್ಟ ಆಹಾರಗಳನ್ನು ತಯಾರಿಸುತ್ತಿದ್ದ. ಮನೆಗೆಲಸದಲ್ಲಿ ನಮಗೆಲ್ಲಾ ನೆರವಾಗುತ್ತಿದ್ದ. ಆತ ನಮ್ಮ ಕುಟುಂಬಕ್ಕೆ ಬೆನ್ನೆಲುಬಿನಂತಿದ್ದ, ಆತನಿಗೆ ಉತ್ತಮ ಭವಿಷ್ಯವಿತ್ತು, ಅದು ಆತನೊಂದಿಗೆ ಗೋರಿಯಲ್ಲಿ ಮಣ್ಣಾಗಿದೆ" ಎಂದು ಅವರು ಭಾವುಕರಾಗಿ ಹೇಳುತ್ತಾರೆ. ಇಂತಹಾ ಹಲವಾರು ಪ್ರಕರಣಗಳನ್ನು ನ್ಯೂಯಾರ್ಕ್‌ ಟೈಮ್ಸ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Photo: Newyork Times

ಕೊಲ್ಲಲ್ಪಟ್ಟ ಮಕ್ಕಳ ಗುರುತುಗಳು, ಅವರ ಛಾಯಾಚಿತ್ರಗಳು ಮತ್ತು ಅವರ ಸಾವಿನ ಸಂದರ್ಭಗಳು, ಅವರ ಪೋಷಕರು ಮತ್ತು ಇತರ ಸಂಬಂಧಿಕರು, ಗಾಝಾ ಮತ್ತು ಇಸ್ರೇಲ್‌ನ ಶಿಕ್ಷಕರು ಮತ್ತು ಶಾಲೆಗಳು, ಅಂತರರಾಷ್ಟ್ರೀಯ ಹಕ್ಕುಗಳ ಸಂಸ್ಥೆಗಳು, ಫೆಲೆಸ್ತೀನಿ ಅಧಿಕಾರಿಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಗಾಝಾ, ಇಸ್ರೇಲ್‌ನ ಸುದ್ದಿ ಸಂಸ್ಥೆಗಳಿಂದ ದೊರೆತ ಮಾಹಿತಿಗಳಾಗಿದ್ದು, ಎಲ್ಲವನ್ನೂ ದೃಢೀಕರಿಸಲಾಗಿದೆ ಎಂದು NEW YORK TIMES ತನ್ನ ವರದಿಯಲ್ಲಿ ತಿಳಿಸಿದೆ.

Photo: Newyork Times

ಮೇ 28 ರ ನ್ಯೂ ಯಾರ್ಕ್ ಟೈಮ್ಸ್ ನ ಮುಖಪುಟ ಇಲ್ಲಿದೆ. ಇಂಗ್ಲೀಷ್ ನಲ್ಲಿರುವ  ಸಂಪೂರ್ಣ ವರದಿಯನ್ನು ಈ ಲಿಂಕ್‌ ಕ್ಲಿಕ್ಕಿಸುವುದರ ಮೂಲಕ ನ್ಯೂ ಯಾರ್ಕ್ ಟೈಮ್ಸ್ ವೆಬ್ ಸೈಟ್ ನಲ್ಲಿ  ಓದಬಹುದು.

ನ್ಯೂಯಾರ್ಕ್‌ ಟೈಮ್ಸ್‌ ವರದಿ ಲಿಂಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News