ಸಾವಿರ ದಿನಗಳು ಕಳೆಯಿತು, ಇನ್ನೆಷ್ಟು ದಿನ ಈ ಕಾಶ್ಮೀರಿ ಪತ್ರಕರ್ತ ಜೈಲಿನಲ್ಲೇ ಕೊಳೆಯಬೇಕು?

Update: 2021-05-30 11:10 GMT
Photo: Twitter

ಶ್ರೀನಗರ,ಮೇ 29: ಪೊಲೀಸರಿಂದ ಬಂಧಿಸಲ್ಪಟ್ಟಿರುವ ಪ್ರಶಸ್ತಿ ಪುರಸ್ಕೃತ ಕಾಶ್ಮೀರಿ ಪತ್ರಕರ್ತ ಆಸಿಫ್ ಸುಲ್ತಾನ್ (33) ಅವರು ಮೇ 25ರಂದು ಸಾವಿರ ದಿನಗಳ ಜೈಲುವಾಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಸದ್ಯೋಭವಿಷ್ಯದಲ್ಲಿ ಜೈಲಿನಿಂದ ಬಿಡುಗಡೆಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. 

2018,ಆ.27ರಂದು ಶ್ರೀನಗರದಲ್ಲಿರುವ ಆಸಿಫ್ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮತ್ತು ಅರೆಮಿಲಿಟರಿ ಪಡೆಗಳ ಜಂಟಿ ತಂಡವು ಹಲವು ಗಂಟೆಗಳ ಶೋಧ ಕಾರ್ಯಾಚರಣೆಯ ಬಳಿಕ ಅವರನ್ನು ಬಂಧಿಸಿತ್ತು. ಅವರ ಫೋನ್ ಮತ್ತು ಲ್ಯಾಪ್ ಟಾಪ್‌ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆಗಿನಿಂದಲೂ ಆಸಿಫ್‘ಉಗ್ರವಾದಿಗಳಿಗೆ ನೆರವಾಗಿದ್ದ ’ಆರೋಪದಲ್ಲಿ ಶ್ರೀನಗರ ಸೆಂಟ್ರಲ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಈ ಆರೋಪವನ್ನು ಅವರ ಕುಟುಂಬವು ಸಾರಾಸಗಟಾಗಿ ನಿರಾಕರಿಸಿದೆ. ‘ನನ್ನ ಮಗನಿಗೆ ಉಗ್ರವಾದಿಗಳ ನಂಟು ಇರಲೇ ಇಲ್ಲ. ಆತ ಮಾಡುತ್ತಿದ್ದ ಕೆಲಸಕ್ಕಾಗಿ ಆತನನ್ನು ಬಂಧಿಸಲಾಗಿದೆ ’ಎನ್ನುತ್ತಾರೆ ಆಸಿಫ್ ತಂದೆ ಮುಹಮ್ಮದ್ ಸುಲ್ತಾನ್.

ಬಂಧನಕ್ಕೆ ಮುನ್ನ ಆಸಿಫ್ ತಾನು ಕೆಲಸ ಮಾಡುತ್ತಿದ್ದ ಸಾಪ್ತಾಹಿಕಕ್ಕಾಗಿ ‘ರೈಸ್ ಆಫ್ ಬುರ್ಹಾನ್(ಬುರ್ಹಾನ್ ನ ಉಗಮ)’ಎಂಬ ಲೇಖನವನ್ನು ಬರೆದಿದ್ದರು. ಈ ಲೇಖನ ವರದಿಯಾದ ಬಳಿಕ ಆಸಿಫ್ ಗೆ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳಿಂದ ಪೋನ್ ಕರೆಗಳು ಬರತೊಡಗಿದ್ದವು.

‘ನಿನ್ನ ಬರಹಗಳ ಮೂಲಕ ಭೀತಿವಾದವನ್ನು ವೈಭವೀಕರಿಸುತ್ತಿರುವೆ ಎಂದು ಅವರು ಆಸಿಫ್ ಗೆ ಹೇಳಿದ್ದರು ’ಎಂದು ಸುಲ್ತಾನ್ ನೆನಪಿಸಿಕೊಂಡರು. ಆದರೆ ಇದು ಆಸಿಫ್ ಬಂಧನಕ್ಕೆ ಕಾರಣವೆಂದು ಪೊಲೀಸರು ಯಾವುದೇ ದಾಖಲೆಯಲ್ಲಿ ಉಲ್ಲೇಖಿಸಿಲ್ಲ. ‘ಉಗ್ರವಾದ ಸಂಬಂಧಿತ ಚಟುವಟಿಕೆಗಳಿಗಾಗಿ ’ಆಸಿಫ್ ರನ್ನು ಬಂಧಿಸಲಾಗಿದೆ ಎಂದೇ ಅವರು ಪ್ರತಿಪಾದಿಸುತ್ತಿದ್ದಾರೆ. 

ಪ್ರಕರಣದ ಹಿನ್ನೆಲೆ
 
2018,ಆಗಸ್ಟ್ ನಲ್ಲಿ ಆಸಿಫ್ ನಿವಾಸದ ನೆರೆಕರೆಯ ಮನೆಯೊಂದರಲ್ಲಿ ಉಗ್ರಗಾಮಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿತ್ತು. ಆದರೆ ಉಗ್ರಗಾಮಿಗಳು ಪರಾರಿಯಾಗುವಲ್ಲಿ ಸಫಲರಾಗಿದ್ದರು. ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮನೆ ಮಾಲಿಕನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು. ಪೊಲೀಸ್ ಅಧಿಕಾರಿಯೋರ್ವರು ತಿಳಿಸಿರುವಂತೆ ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಉಗ್ರರಿಗೆ ಆಹಾರ, ವಸತಿ ಇತ್ಯಾದಿ ನೆರವುಗಳನ್ನು ಒದಗಿಸುತ್ತಿದ್ದ ಮಹಿಳೆಯೋರ್ವಳ ಬಗ್ಗೆ ಬಾಯಿಬಿಟ್ಟಿದ್ದ. ಸದ್ರಿ ಮಹಿಳೆ ವಿಚಾರಣೆ ಸಂದರ್ಭದಲ್ಲಿ ಆಸಿಫ್ ರ ಹೆಸರು ಹೇಳಿದ್ದಳು.

ಆಸಿಫ್ ಮನೆಯ ಮೇಲೆ ದಾಳಿ ಸಂದರ್ಭದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನ ಲೆಟರ್ ಹೆಡ್ ಗಳನ್ನು ತಾವು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳುತ್ತಾರೆ. ಆಸಿಫ್ ರ ಫೇಸ್ಬುಕ್ ಖಾತೆ ನಿಷ್ಕ್ರಿಯಗೊಂಡಿದೆ.
ಆಸಿಫ್ ಪರ ವಕೀಲ ಆದಿಲ್ ಅಬ್ದುಲ್ಲಾ ಅವರು ಪೊಲೀಸರ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಇವೆಲ್ಲ ಕಪೋಲಕಲ್ಪಿತ ಆರೋಪಗಳು. ಗುಂಡಿನ ಕಾಳಗ ನಡೆದಿದ್ದ ಸ್ಥಳದಲ್ಲಿ ಆಸಿಫ್ ಇರಲೇ ಇಲ್ಲ ಎಂದು ಅವರು ಹೇಳಿದರು.
ಪೊಲೀಸರು ಆಸಿಫ್ ವಿರುದ್ಧ ಐಪಿಸಿಯಡಿ ಕೊಲೆ, ಸರಕಾರದ ವಿರುದ್ಧ ಸಂಚು ಇತ್ಯಾದಿಗಳ ಜೊತೆಗೆ ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆಯಡಿಯೂ ಆರೋಪಗಳನ್ನು ಹೊರಿಸಿದ್ದಾರೆ.

ಲಾಕ್ಡೌನ್ ವಿಳಂಬ

ಆಸಿಫ್ ಬಂಧನವಾಗಿ ಸಾವಿರ ದಿನಗಳು ಕಳೆದಿದ್ದರೂ ಪ್ರಕರಣದಲ್ಲಿ ಹೇಳುವಂತಹ ಯಾವುದೇ ಪ್ರಗತಿಯಾಗಿಲ್ಲ. 2019 ಆಗಸ್ಟ್ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಮತ್ತು 2020ರಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹೇರಲಾಗಿದ್ದ ಹಲವಾರು ಲಾಕ್ಡೌನ್ ಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಬಂಧನದ ಎರಡು ತಿಂಗಳುಗಳ ಬಳಿಕ 2018,ನ.13ರಂದು ಆಸಿಫ್ ರನ್ನು ಮೊದಲ ಬಾರಿಗೆ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಆ ಬಳಿಕ ಪ್ರಕರಣದಲ್ಲಿ ಸುಮಾರು 30 ವಿಚಾರಣಾ ದಿನಾಂಕಗಳು ನಿಗದಿಯಾಗಿದ್ದರೂ ನ್ಯಾಯಾಲಯಗಳು ಮುಚ್ಚಿದ್ದರಿಂದ ಅವು ನಡೆದಿರಲಿಲ್ಲ ಎಂದು ಅಬ್ದುಲ್ಲಾ ತಿಳಿಸಿದರು.
 
ಬಿಡುಗಡೆಗೆ ಕರೆ

ನ್ಯೂಯಾರ್ಕ್ ನ ಎನ್ ಜಿಒ ‘ ದಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಆಸಿಫ್ ಬಿಡುಗಡೆಗೆ ಆಗ್ರಹಿಸಿ 2020,ಆ.27ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿತ್ತು. ಎನ್.ರಾಮ್, ಕರಣ್ ಥಾಪರ್,‌ ಮಣಿಶಂಕರ ಅಯ್ಯರ್, ಹರ್ಷ ಮಂದರ್ ಮತ್ತು ಮೀನಲ್ ಬಗೇಲ್ ಸೇರಿದಂತೆ 397 ಪತ್ರಕರ್ತರು ಮತ್ತು ನಾಗರಿಕ ಸಮಾಜದ ಗಣ್ಯರು ಈ ಪತ್ರಕ್ಕೆ ಅಂಕಿತ ಹಾಕಿದ್ದರು.
2019ರಲ್ಲಿ ಅಮೆರಿಕದ ನ್ಯಾಷನಲ್ ಪ್ರೆಸ್ ಕ್ಲಬ್ ನ ವಾರ್ಷಿಕ ಜಾನ್ ಅಬುಚಾನ್ ಪ್ರೆಸ್ ಫ್ರೀಡಂ ಆವಾರ್ಡ್ ಸೇರಿದಂತೆ ವಿಶ್ವಾದ್ಯಂತದ ಹಲವಾರು ಪತ್ರಕರ್ತರ ಸಂಘಗಳ ಪ್ರಶಸ್ತಿಗಳಿಗೆ ಆಸಿಫ್ ಭಾಜನರಾಗಿದ್ದಾರೆ.
 
ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರಕ್ಕೆ ಬೆದರಿಕೆಯೊಡ್ಡಿರುವ 10 ಅತ್ಯಂತ ತುರ್ತು ಪ್ರಕರಣಗಳಲ್ಲಿ ಒಂದಾಗಿ ಆಸಿಫ್ ಟೈಮ್ ಮ್ಯಾಗಝಿನ್ ನ 2019 ಮೇ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು.

photo/twitter

ಪರದಾಡುತ್ತಿರುವ ಕುಟುಂಬ

ಆಸಿಫ್ ಬಂಧನದ ನಂತರದ ಸಾವಿರ ದಿನಗಳಲ್ಲಿ ಸುಲ್ತಾನ್ ರ ಆರೋಗ್ಯ ತೀವ್ರ ಹದಗೆಟ್ಟಿದೆ. ಇತ್ತೀಚಿನ ಶಸ್ತ್ರಚಿಕಿತ್ಸೆಯ ಸಂದರ್ಭ ಬಂಧುಗಳು ಅವರನ್ನು ನೋಡಿಕೊಂಡಿದ್ದರು. ತನ್ನ ಕೊನೆಗಾಲದಲ್ಲಿ ಮಗ ಬಳಿಯಲ್ಲಿರಬೇಕು ಎನ್ನುವುದು ಈ ಹಿರಿಯ ಜೀವದ ಆಸೆ. ಆದರೆ ಅದು ಈಡೇರುವುದೇ?

ಆಸಿಫ್ ರನ್ನು ಬಂಧಿಸಿದಾಗ ಅವರ ಪುತ್ರಿ ಅರೀಬಾ ಇನ್ನೂ ಹಸುಗೂಸು. ಈಗ ಮೂರು ವರ್ಷ ಪ್ರಾಯವಾಗಿರುವ ಅರೀಬಾ ತಂದೆಯ ಪ್ರೀತಿಯಿಂದ ವಂಚಿತಳಾಗಿದ್ದರೆ, ಆಕೆಯ ತಾಯಿಗೆ ಪತಿಯ ಆಸರೆ ಇಲ್ಲದಂತಾಗಿದೆ. ಅರೀಬಾ ತಂದೆಯನ್ನು ಕೇವಲ ಎರಡು ಸಲ ನೋಡಿದ್ದಾಳೆ, ಅದು ನ್ಯಾಯಾಲಯದಲ್ಲಿ....ಕೈಗೆ ಬಿಗಿದ ಸರಪಳಿಗಳೊಂದಿಗೆ.
 
 ತನ್ನ ಮಗ ಪತ್ರಕರ್ತನಾಗಿದ್ದಕ್ಕೆ ಆತನನ್ನು ಬಂಧಿಸಲಾಗಿದೆ ಎನ್ನುತ್ತಾರೆ ಸುಲ್ತಾನ್. ‘ಅವರು(ಸರಕಾರ) 2019ರ ಆ.5ಕ್ಕಾಗಿ ಯೋಜನೆಯನ್ನು ಹಾಕಿಕೊಂಡಿದ್ದರು ಮತ್ತು ಪತ್ರಕರ್ತ ಸಮುದಾಯದ ಧ್ವನಿಯನ್ನಡಗಿಸಲು ಬಯಸಿದ್ದರು. ನನ್ನ ಮಗನ ಬಂಧನ ಈ ಯೋಜನೆಯ ಭಾಗವಾಗಿದೆ ’ಎಂದು ಅವರು ಹೇಳಿದರು. ಆಸಿಫ್ ರ ಪ್ರಕರಣವನ್ನು ಇಷ್ಟು ಕಾಲ ಎಳೆದಿರುವುದೇ ಒಂದು ಶಿಕ್ಷೆಯಾಗಿದೆ ಎಂದ ಹಿರಿಯ ಪತ್ರಕರ್ತ ಗೌಹರ್ ಗೀಲಾನಿ, ಆಸಿಫ್ ವಾಸ್ತವ ಸ್ಥಿತಿಯನ್ನು ವರದಿ ಮಾಡುತ್ತಿದ್ದರು ಮತ್ತು ವರದಿಗಾರಿಕೆ ಅಪರಾಧವಲ್ಲ ಎಂದರು.

ಕೃಪೆ: thewire.in

Writer - ಉಮರ್‌ ಮುಖ್ತಾರ್‌ (thewire.in)

contributor

Editor - ಉಮರ್‌ ಮುಖ್ತಾರ್‌ (thewire.in)

contributor

Similar News