ಆಸ್ಪತ್ರೆಯಿಂದ ವಾಪಸ್ಸಾಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ

Update: 2021-05-31 04:41 GMT

ಗುವಾಹತಿ: ಕೋವಿಡ್-19 ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದ ಮಹಿಳೆಗೆ ವಾಪಾಸ್ಸಾಗಲು ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಅಸ್ಸಾಂನ ಚರೈಡಿಯೊ ಜಿಲ್ಲೆಯಿಂದ ವರದಿಯಾಗಿದೆ.

ಬುಡಕಟ್ಟು ಜನಾಂಗಕ್ಕೆ ಸೇರಿದ ಸಂತ್ರಸ್ತೆ ಮಹಿಳೆ ತನ್ನ ಪುತ್ರಿ ಜತೆ ನಡೆದುಕೊಂಡು ಹೋಗುತ್ತಿದ್ದಾಗ, ಇಬ್ಬರು ಆಕೆಯನ್ನು ಅಪಹರಿಸಿ ಪಕ್ಕದ ಚಹಾ ತೋಟಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಘಟನೆ ಮೇ 27ರಂದು ನಡೆದಿರುವುದಾಗಿ ಅವರು ವಿವರಿಸಿದ್ದಾರೆ.

"ಕೆಲ ದಿನಗಳ ಹಿಂದೆ ನಮ್ಮ ಕುಟುಂಬದಲ್ಲಿ ಕೆಲವರಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿತ್ತು. ನಾವು ವಾರದ ಕಾಲ ಹೋಮ್ ಐಸೊಲೇಶನ್‌ನಲ್ಲಿದ್ದೆವು. ತಂದೆ ಹಾಗೂ ತಾಯಿಯ ಆರೋಗ್ಯ ಹದಗೆಟ್ಟ ಬಳಿಕ ನಮ್ಮನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು" ಎಂದು ಸಂತ್ರಸ್ತೆಯ ಪುತ್ರಿ ವಿವರ ನೀಡಿದ್ದಾರೆ.

"ಕೋವಿಡ್ ನೆಗೆಟಿವ್ ಬಂದ ಬಳಿಕ ಆಸ್ಪತ್ರೆಯಿಂದ ನಮ್ಮನ್ನು ಮನೆಗೆ ತೆರಳಲು ಸಿಬ್ಬಂದಿ ಸೂಚಿಸಿದರು. ನಾವು ಮನೆಗೆ ಮರಳಲು ಆ್ಯಂಬುಲೆನ್ಸ್ ಕೋರಿದಾಗ ನಿರಾಕರಿಸಿದರು. ಮಧ್ಯಾಹ್ನ 2.30ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆಯಾಯಿತು. ಕರ್ಫ್ಯೂ ಇದ್ದ ಕಾರಣದಿಂದ ಆಸ್ಪತ್ರೆಯಲ್ಲೇ ಒಂದು ರಾತ್ರಿ ಉಳಿಯಬಹುದೇ ಎಂದು ಕೇಳಿದ್ದಕ್ಕೂ ಆಸ್ಪತ್ರೆ ಅಧಿಕಾರಿಗಳು ನಿರಾಕರಿಸಿದರು" ಎಂದು ಹೇಳಿದ್ದಾರೆ.

"ಅನಿವಾರ್ಯವಾಗಿ ನಾವು ನಡೆದುಕೊಂಡು ಹೊರಟಾಗ ಒಬ್ಬ ವ್ಯಕ್ತಿ ನಮ್ಮನ್ನು ಹಿಂಬಾಲಿಸುತ್ತಿದ್ದ. ನಾವು ಓಡಲು ಆರಂಭಿಸಿದಾಗ ಆತ ತಾಯಿಯನ್ನು ಹಿಡಿದು ಅಪಹರಿಸಿದ. ನಾನು ಓಡಿಹೋಗಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದೆ. ಎರಡು ಗಂಟೆ ಬಳಿಕ ತಾಯಿ ಪತ್ತೆಯಾದರು" ಎಂದು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಅವರ ಗ್ರಾಮಕ್ಕೆ 25 ಕಿಲೋಮೀಟರ್ ದೂರವಿದೆ.

ಕೋವಿಡ್ ನೆಗೆಟಿವ್ ರೋಗಿಗಳಿಗೂ ಮನೆಗೆ ವಾಪಸ್ಸಾಗಲು ಆ್ಯಂಬುಲೆನ್ಸ್ ಸೌಲಭ್ಯ  ಕಲ್ಪಿಸಬೇಕು ಎಂದು ಆರೋಗ್ಯ ಸಚಿವ ಕೇಶಬ್ ಮಹಾಂತ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News