ದಶಕದ ಸಿರಿಯ ಅಂತರ್ಯುದ್ಧಕ್ಕೆ ಈವರೆಗೆ ಒಟ್ಟು 5 ಲಕ್ಷ ಮಂದಿ ಬಲಿ

Update: 2021-06-01 16:49 GMT
photo: twitter

ಬೈರೂತ್,ಜು.1: ಕಳೆದ ಒಂದು ದಶಕದಿಂದ ಸಿರಿಯದಲ್ಲಿ ನಡೆಯುತ್ತಿರುವ ಆಂತರ್ಯುದ್ಧದಲ್ಲಿ ಸುಮಾರು 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟನ್ನಿಂದ ಕಾರ್ಯಾಚರಿಸುತ್ತಿರುವ ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆ ತಿಳಿಸಿದೆ. 2011ರಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸಲ್ಪಟ್ಟ ಬಳಿಕ ಸಿರಿಯದಲ್ಲಿ ಭುಗಿಲೆದ್ದಿರುವ ಅಂತರ್ಯುದ್ಧದಲ್ಲಿ ಈವರೆಗೆ 4,98.438 ಮಂದಿ ಸಾವನ್ನಪ್ಪಿದ್ದಾರೆಂದು ವರದಿ ತಿಳಿಸಿದೆ.

ಈ ವರ್ಷದ ಮಾರ್ಚ್ ನಲ್ಲಿ ಇದೇ ಸಂಘಟನೆಯು ಪ್ರಕಟಿಸಿದ ವರದಿಯೊಂದರಲ್ಲಿ ಸಿರಿಯ ಯುದ್ಧದಲ್ಲಿ 3.88 ಲಕ್ಷ ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿತ್ತು.    
ಆದರೆ ಸಿರಿಯದಿಂದ ಕಾರ್ಯಾಚರಿಸುತ್ತಿರುವ ಮಾಹಿತಿ ಮೂಲಗಳಿಂದ ಲಭ್ಯವಾದ ದಾಖಲೆಗಳು ಆಧಾರದಲ್ಲಿ ಹೆಚ್ಚುವರಿಯಾಗಿ 1,05,015 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿರುವುದರಿಂದ ಸಾವಿನ ಸಂಖ್ಯೆಯನ್ನು 4,98,434ಕ್ಕೇರಿಸಿರುವುದಾಗಿ ಆಬ್ಸರ್ವೇಟರಿ ತಿಳಿಸಿದೆ.

ಸಿರಿಯ ಸಂಘರ್ಷದಲ್ಲಿ 2012ರ ಕೊನೆಯಲ್ಲಿ ಹಾಗೂ ನವೆಂಬರ್ 2015ರ ತಿಂಗಳ ನಡುವೆ ಅತ್ಯಧಿಕ ಸಂಖ್ಯೆಯ ಸಾವುಗಳು ಸಂಭವಿಸಿದ್ದವು ಎಂದು ಆಬ್ಸರ್ವೇಟರಿಯ ವರಿಷ್ಠ ರಾಮಿ ಅಬ್ದೆಲ್ ರಹ್ಮಾನ್ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
  
ಸಂಘರ್ಷದಲ್ಲಿ 1,59,774 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ನಾಗರಿಕ ಸಾವುಗಳಲ್ಲಿ ಹೆಚ್ಚಿನವರು ಸಿರಿಯ ಸೇನೆ ಹಾಗೂ ಅದರ ಮಿತ್ರಪಡೆಗಳ ದಾಳಿಯಿಂದಾಗಿ ಮೃತಪಟ್ಟಿದ್ದಾರೆಂದು ವರದಿ ಹೇಳಿದೆ. ಅಂತರ್ಯುದ್ಧದಲ್ಲಿ 1,68,326 ಮಂದಿ ಸಿರಿಯ ಸೈನಿಕರು ಹಾಗೂ ಮಿತ್ರಪಡೆಗಳು ಮಡಿದಿದ್ದಾರೆ. ಘರ್ಷಣೆಯಲ್ಲಿ 68,393 ಮಂದಿ ಉಗ್ರರು ಹತರಾಗಿದ್ದು, ಅವರಲ್ಲಿ ಹೆಚ್ಚಿನವರು ಅಲ್‌ ಖೈದಾ, ಐಸಿಸ್ ಗೆ ನಿಷ್ಠವಾದ ಗುಂಪುಗಳಿಗೆ ಸೇರಿದವರಾಗಿದ್ದಾರೆ ಹಾಗೂ ಇತರ 79,844 ಮಂದಿ ಬಂಡುಕೋರರೆಂದು ವರದಿ ಹೇಳಿದೆ.
   
ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ನೇತೃತ್ವದ ಸಿರಿಯ ಸರಕಾರವು ಪ್ರಸಕ್ತ ದೇಶದ ಮೂರನೆ ಎರಡರಷ್ಟು ಭಾಗದ ಮೇಲೆ ನಿಯಂತ್ರಣ ಹೊಂದಿದೆ. 2015ರಿಂದೀಚೆಗೆ ಸಿರಿಯ ಸರಕಾರಿ ಪಡೆಗಳು ರಶ್ಯ ಪಡೆಗಳ ಬೆಂಬಲದೊಂದಿಗೆ ಬಂಡುಕೋರರ ವಿರುದ್ದ ಗೆಲುವು ಸಾಧಿಸುವಲ್ಲಿ ಸಫಲವಾಗಿವೆ.
  
ಸಿರಿಯ ಅಂತರ್ಯುದ್ಧದಿಂದಾಗಿ ಲಕ್ಷಾಂತರ ಮಂದಿ ನಾಗರಿಕರು ಸುರಕ್ಷಣೆಗಾಗಿ ತಮ್ಮ ಮನೆಮಾರು ತೊರೆದು ಪರಾರಿಯಾಗಿದ್ದಾರೆ ಎಂದು ವರದಿ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News