ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದೆಯೇ?

Update: 2021-06-02 05:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಿಬಿಎಸ್‌ಇ ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ರಾಜ್ಯದಲ್ಲಿಯೂ ಪಿಯುಸಿ ಪರೀಕ್ಷೆಗಳು ರದ್ದಾಗುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಇದೇ ಹೊತ್ತಿನಲ್ಲಿ ಜೂನ್ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ ಎಂದು ರಾಜ್ಯದಲ್ಲಿ ಘೋಷಿಸಲಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳು ಸೋಂಕಿತರಾಗುವ ಸಾಧ್ಯತೆ ಅಧಿಕ ಎಂದು ಈಗಾಗಲೇ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸುದ್ದಿಗಳು ಹರಡಿರುವುದರಿಂದ, ಶಾಲೆಗಳು ತೆರೆಯುವುದು ಅನುಮಾನ. ತೆರೆದರೂ ಅಷ್ಟೇ ವೇಗದಲ್ಲಿ ಆ ಶಾಲೆಗಳನ್ನು ಮುಚ್ಚಿಸುವ ಶಕ್ತಿ ಇಂದಿನ ಮಾಧ್ಯಮಗಳಿಗಿದೆ. ಆದುದರಿಂದ ಈ ವರ್ಷವೂ ವಿದ್ಯಾರ್ಥಿಗಳ ಪಾಲಿಗೆ ತಿಳಿವಿನ ಬಾಗಿಲು ಮುಚ್ಚಲಿದೆ. ಲಾಕ್‌ಡೌನ್‌ನಿಂದಾಗಿ ಕಳೆದುಕೊಂಡ ಉದ್ಯೋಗಗಳ ಸಂಖ್ಯೆ, ಇಳಿಕೆಯಾದ ಜಿಡಿಪಿ, ಹೆಚ್ಚಿದ ಬಡತನ, ಇಳಿಕೆಯಾದ ತಲಾದಾಯ ಇವೆಲ್ಲವು ಬಹಿರಂಗವಾಗಿ ಚರ್ಚೆಯಾಗುತ್ತಿವೆ. ದೇಶ ಸುಮಾರು 40 ವರ್ಷ ಹಿಂದಕ್ಕೆ ಚಲಿಸಿದೆ ಎಂದು ಆರ್ಥಿಕ ತಜ್ಞರು ಈಗಾಗಲೇ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ, ಎರಡು ವರ್ಷಗಳ ಕಾಲ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿರುವ ವಿದ್ಯಾರ್ಥಿಗಳ ಸ್ಥಿತಿಗತಿ, ಅದು ಭವಿಷ್ಯದಲ್ಲಿ ಬೀರಲಿರುವ ದುಷ್ಪರಿಣಾಮಗಳ ಕುರಿತಂತೆ ಯಾರೂ ಚರ್ಚಿಸುತ್ತಿಲ್ಲ. ಜೂ. 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎನ್ನುವ ಸರಕಾರವೂ, ಆನ್‌ಲೈನ್ ಮೂಲಕವೇ ಶಿಕ್ಷಣವನ್ನು ಮುಂದುವರಿಸುವ ಸಿದ್ಧತೆಯಲ್ಲಿದೆ. ಶೈಕ್ಷಣಿಕ ವರ್ಷವನ್ನು ಘೋಷಿಸುವ ಮುನ್ನ ಸರಕಾರ ಅದಕ್ಕಾಗಿ ಎಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ, ಕಳೆದ ವರ್ಷದ ಆನ್‌ಲೈನ್ ಶಿಕ್ಷಣದ ವೈಫಲ್ಯಗಳಿಂದ ಸರಕಾರ ಎಷ್ಟರಮಟ್ಟಿಗೆ ಪಾಠ ಕಲಿತಿದೆ? ಎಂಬ ಪ್ರಶ್ನೆಗಳಿಗೆ ಸಿಗುವ ಉತ್ತರ ವೌನ ಮಾತ್ರ.

ಕೊರೋನ ಎರಡನೇ ಅಲೆಯನ್ನು ಎದುರಿಸಲು ಭಾರತ ಸಿದ್ಧಗೊಂಡಿರಲಿಲ್ಲ ಎನ್ನುವುದನ್ನು ಈಗಾಗಲೇ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಕೊರೋನವನ್ನು ತೊಲಗಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಸರಕಾರದೊಳಗಿರುವವರೇ ನಿರ್ಧಾರಕ್ಕೆ ಬಂದಿದ್ದರು. ಆ ಧೈರ್ಯದಿಂದಲೇ ಪಶ್ಚಿಮಬಂಗಾಳದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲೇ ಬೃಹತ್ ರ್ಯಾಲಿಗಳು ನಡೆದಿರುವುದು. ಕುಂಭಮೇಳಕ್ಕೆ ಅನುಮತಿ ನೀಡಿರುವುದೂ ಅದೇ ಕಾರಣಕ್ಕೆ. ಪರಿಣಾಮವಾಗಿ ಕೊರೋನ ಉಲ್ಬಣಿಸಿತು. ಆದರೆ ಅದನ್ನು ಎದುರಿಸಲು ಆಸ್ಪತ್ರೆಗಳು ಸಿದ್ಧವಿರಲಿಲ್ಲ. ಅಗತ್ಯಕ್ಕೆ ತಕ್ಕ ಆಕ್ಸಿಜನ್, ವೆಂಟಿಲೇಟರ್‌ಗಳು ನಮ್ಮಲ್ಲಿರಲಿಲ್ಲ. ಯುದ್ಧಕಾಲದಲ್ಲಿ ಸರಕಾರ ಸಮರಾಭ್ಯಾಸ ನಡೆಸಿತು. ಆರೋಗ್ಯ ಕ್ಷೇತ್ರವೇ ಎರಡನೇ ಅಲೆಯನ್ನು ಎದುರಿಸಲು ಸಿದ್ಧವಾಗಿರಲಿಲ್ಲ ಎಂದ ಮೇಲೆ ಶಿಕ್ಷಣ ಕ್ಷೇತ್ರದ ಕುರಿತಂತೆ ಹೇಳುವುದೇನಿದೆ?. ಆರ್ಥಿಕವಾಗಿ ನಾಡು ಸಂಪೂರ್ಣ ನೆಲಕಚ್ಚಿರುವ ಈ ಹೊತ್ತಿನಲ್ಲಿ, ಶಿಕ್ಷಣಕ್ಕಾಗಿ ಹೆಚ್ಚುವರಿ ಹಣವನ್ನು ಹೂಡುವ ಶಕ್ತಿಯನ್ನು ಸರಕಾರ ಹೊಂದಿಲ್ಲ. ಅಂದರೆ, ಹಿಂದಿನಂತೆಯೇ ಕಾಟಾಚಾರದ ಶಿಕ್ಷಣವಷ್ಟೇ ಮುಂದುವರಿಯುತ್ತದೆ ಎಂದಾಯಿತು. ಭಾರತದಲ್ಲಿ ಉಳ್ಳವರಿಗೊಂದು ಶಿಕ್ಷಣ-ಇಲ್ಲದವರಿಗೆ ಇನ್ನ್ಡೊಂದು ಶಿಕ್ಷಣ ವ್ಯವಸ್ಥೆ ಆರಂಭವಾಗಿ ದಶಕಗಳು ಕಳೆದಿವೆ. ಆದರೆ ಕೊರೋನ ಕಾಲದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಈ ಕಂದರ ಇನ್ನಷ್ಟು ವಿಶಾಲವಾಗಿದೆ.

ಕಳೆದ ವರ್ಷ ಸರ್ವ ಅನುಕೂಲಗಳನ್ನು ಹೊಂದಿರುವ ಶ್ರೀಮಂತವರ್ಗದ ಮಕ್ಕಳಿಗಷ್ಟೇ ಶಿಕ್ಷಣವನ್ನು ತನ್ನದಾಗಿಸಲು ಸಾಧ್ಯವಾಗಿದೆ. ಬಡವರು, ಮಧ್ಯಮ ವರ್ಗದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಸ್ಥಿತಿಯಂತೂ ಚಿಂತಾಜನಕವಾಗಿತ್ತು. ಹೆಚ್ಚಿನ ಖಾಸಗಿ ಶಾಲೆಗಳು ಶುಲ್ಕವನ್ನು ವಸೂಲಿ ಮಾಡುವ ಒಂದೇ ಉದ್ದೇಶದಿಂದ ಆನ್‌ಲೈನ್ ಶಿಕ್ಷಣವನ್ನು ಜಾರಿಯಲ್ಲಿರಿಸಿದವು. ಎಷ್ಟೋ ವಿದ್ಯಾರ್ಥಿಗಳು ಮೊಬೈಲ್‌ಗಳಿಲ್ಲದೆ, ಸರಿಯಾದ ನೆಟ್‌ವರ್ಕ್ ಇಲ್ಲದೆ ಶಿಕ್ಷಣದಿಂದ ವಂಚಿತರಾಗಿದ್ದರು. ಲಾಕ್‌ಡೌನ್‌ನಿಂದಾಗಿ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಯದಲ್ಲಿ ಒಳ್ಳೆಯ ಮೊಬೈಲ್‌ಗಳಿಗಾಗಿ ವೆಚ್ಚ ಮಾಡುವ ಶಕ್ತಿ ಕುಟುಂಬಕ್ಕೆ ಇರಲಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ತರಗತಿಗಳಿಂದ ಈ ಕಾರಣದಿಂದಲೇ ಹೊರಗಿರಬೇಕಾಯಿತು. ಹಲವೆಡೆ ವಿದ್ಯಾರ್ಥಿಗಳು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾದವು. ಇದೇ ಸಂದರ್ಭದಲ್ಲಿ, ಲಾಕ್‌ಡೌನ್ ಕಾರಣದಿಂದ ಉದ್ಯೋಗವಿಲ್ಲದೆ ಶಾಲೆಯ ಶುಲ್ಕ ಕಟ್ಟಲು ಸಾಧ್ಯವಾಗದ ಎಷ್ಟೋ ಕುಟುಂಬಗಳಿದ್ದವು. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಆನ್‌ಲೈನ್‌ನಲ್ಲಿ ಶಿಕ್ಷಣ ನೀಡುವ ವ್ಯವಸ್ಥೆಯೂ ಇದ್ದಿರಲಿಲ್ಲ. ಆನ್‌ಲೈನ್ ಶಿಕ್ಷಣದಿಂದಾಗಿ ಅತಿ ಹೆಚ್ಚು ಸಂತ್ರಸ್ತರಾದವರೂ ಸರಕಾರಿ ಶಾಲೆಗಳ ವಿದ್ಯಾರ್ಥಿಗಳೇ ಆಗಿದ್ದಾರೆ.

ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನೂ ಉಳ್ಳವರು ಮತ್ತು ಇಲ್ಲದವರು ಎಂದು ವಿಭಜಿಸಲಾಯಿತು. ಅತ್ಯುತ್ತಮ ಮೊಬೈಲ್‌ಗಳಿರುವ ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೇ ಶಿಕ್ಷಣದ ಹಕ್ಕುದಾರರಾದರು. ಉಳಿದವರೆಲ್ಲ ಶಿಕ್ಷಣಕ್ಕೆ ಅನರ್ಹರಾದರು. ಈ ವಿಭಜನೆ ಭವಿಷ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ತೀವ್ರ ದುಷ್ಪರಿಣಾಮವನ್ನು ಬೀರಲಿದೆ. ಈ ದುಷ್ಪರಿಣಾಮಗಳನ್ನು ಸರಕಾರವಾಗಲಿ, ತಜ್ಞರಾಗಲಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಕಳೆದ ವರ್ಷ ಶಿಕ್ಷಣ ಕ್ಷೇತ್ರದ ಮೇಲೆ ಲಾಕ್‌ಡೌನ್ ಮತ್ತು ಕೊರೋನ ಬೀರಿದ ಪರಿಣಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಹೊಸ ಶಿಕ್ಷಣ ವರ್ಷಕ್ಕೆ ಸರಕಾರ ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ? ಕನಿಷ್ಠ ಸೂಕ್ತ ಅಂತರಗಳನ್ನು ಕಾಪಾಡಿಕೊಂಡು ಶಾಲೆಗಳನ್ನು ಆರಂಭಿಸುವ ಉದ್ದೇಶವಿದೆಯೇ? ಎಂದರೆ ಅದೂ ಇಲ್ಲ. ಹಾಗಾದರೆ ಆನ್‌ಲೈನ್ ಮೂಲಕವೇ ಈ ಬಾರಿಯೂ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಕಳೆದ ವರ್ಷ ಮೊಬೈಲ್‌ಗಳು, ಇಂಟರ್‌ನೆಟ್ ಸೌಲಭ್ಯಗಳಿಲ್ಲದೆ ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಸಮೀಕ್ಷೆಯೊಂದನ್ನು ಸರಕಾರ ಮಾಡಬೇಕಾಗಿತ್ತು.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಈ ಸೌಲಭ್ಯಗಳಿಲ್ಲದ ಅಸಹಾಯಕ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡುವುದು ಸರಕಾರದ ಕರ್ತವ್ಯ. ಯಾಕೆಂದರೆ ಶಿಕ್ಷಣವೆನ್ನುವುದು ಮೂಲಭೂತ ಅಗತ್ಯಗಳ ಸಾಲಿನಲ್ಲಿ ಬರುತ್ತದೆ. ಆನ್‌ಲೈನ್ ಶಿಕ್ಷಣದ ಹೆಸರಲ್ಲಿ ಒಬ್ಬರಿಗೆ ಶಿಕ್ಷಣ ನೀಡಿ, ಇನ್ನೊಬ್ಬರನ್ನು ಶಿಕ್ಷಣವಂಚಿತನನ್ನಾಗಿಸುವುದು ಸರಿಯಾದ ಕ್ರಮವಲ್ಲ. ಒಂದೋ ಯಾರಿಗೂ ಶಿಕ್ಷಣ ಸಿಗಬಾರದು. ಅದರಲ್ಲಾದರೂ ಒಂದು ಸಮಾನತೆಯನ್ನು ಕಾಪಾಡಿಕೊಳ್ಳಬೇಕು. ಆದುದರಿಂದ, ಈ ಬಾರಿಯ ಶೈಕ್ಷಣಿಕ ವರ್ಷ ಆರಂಭಿಸುವುದಾದರೂ, ಎಲ್ಲರಿಗೂ ಶಿಕ್ಷಣ ದಕ್ಕುವ ರೀತಿಯಲ್ಲಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಇದೇ ಸಂದರ್ಭದಲ್ಲಿ ಪದೇ ಪದೇ ಲಾಕ್‌ಡೌನ್‌ನಿಂದಾಗಿ ಪಾಲಕರು ಶುಲ್ಕವನ್ನು ಪಾವತಿಸುವ ಸ್ಥಿತಿಯಲ್ಲೂ ಇಲ್ಲ. ಇದರಿಂದಾಗಿ ಮುಖ್ಯವಾಗಿ ಬಾಲಕಿಯರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳೇ ಅಧಿಕ. ಆದುದರಿಂದ ಕನಿಷ್ಠ ಶೇ. 50ರಷ್ಟು ಶುಲ್ಕದ ಹೊಣೆಯನ್ನು ಸರಕಾರ ವಹಿಸಿಕೊಳ್ಳಬೇಕು. ಇಂದಿನ ಮಕ್ಕಳೇ ನಾಳಿನ ಭವಿಷ್ಯ. ಈಗಾಗಲೇ ಎಲ್ಲವನ್ನು ಕೈಯಾರೆ ನಾಶ ಮಾಡಿ ಕುಳಿತಿರುವಾಗ, ಇರುವ ಭವಿಷ್ಯವನ್ನಾದರೂ ಉಳಿಸಿಕೊಳ್ಳುವ ಕಡೆಗೆ ಸರಕಾರ ಯೋಚನೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News