×
Ad

2020ರಲ್ಲಿ 8700 ಮಂದಿ ರೈಲಿನಡಿಗೆ ಬಿದ್ದು ಮೃತ್ಯು: ಮೃತರಲ್ಲಿ ಬಹುತೇಕ ಮಂದಿ ವಲಸೆ ಕಾರ್ಮಿಕರು

Update: 2021-06-02 22:15 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.2: ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿದ್ದರಿಂದ ಪ್ರಯಾಣಿಕ ರೈಲು ಸೇವೆಗಳನ್ನು ವ್ಯಾಪಕವಾಗಿ ಕಡಿತಗೊಳಿಸಿದ ಹೊರತಾಗಿಯೂ 2020ರಲ್ಲಿ 8700ಕ್ಕೂ ಅಧಿಕ ಮಂದಿ ಹಳಿಗಳಲ್ಲಿ ರೈಲಿನಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರೆಂದು ರೈಲ್ವೆ ಇಲಾಖೆ ತಿಳಿಸಿದೆ.

2020ರ ಜನವರಿ ಹಾಗೂ ಡಿಸೆಂಬರ್ ನಡುವಿನ ಅವಧಿಯಲ್ಲಿ ರೈಲ್ವೆ ಹಳಿಗಳಲ್ಲಿ ಸಂಭವಿಸಿದ ಸಾವುನೋವುಗಳ ಕುರಿತ ಅಂಕಿಅಂಶಗಳನ್ನು ರೈಲ್ವೆ ಇಲಾಖೆಯು ಬಹಿರಂಗ ಪಡಿಸಿದೆ. ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ರೈಲ್ವೆ ಈ ದತ್ತಾಂಶಗಳನ್ನು ನೀಡಿದೆ.

 ‘‘2020 ಜನವರಿ ಹಾಗೂ 2020ರ ಡಿಸೆಂಬರ್ ನಡುವಿನ ಅವಧಿಯಲ್ಲಿ ರೈಲ್ವೆ ಹಳಿ ಗಳಲ್ಲಿ ಒಟ್ಟು 8733 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 805 ಮಂದಿ ಗಾಯ ಗೊಂಡಿದ್ದಾರೆ’’ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಹಳಿಗಳಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ವಸೆ ಕಾರ್ಮಿಕರಾಗಿದ್ದಾರೆ. ರಸ್ತೆ ಅಥವಾ ಹೆದ್ದಾರಿಗಳಿಗಿಂತ ರೈಲ್ವೆ ಮಾರ್ಗಗಳು ಕಡಿಮೆ ದೂರದವು ಎಂದು ಪರಿಗಣಿಸಲ್ಪಟ್ಟಿ ರುವುದರಿಂದ ಅವರು ರೈಲ್ವೆ ಹಳಿಗಳ ಮೂಲಕ ನಡೆದುಕೊಂಡು ಹೋಗಿ ಊರು ತಲುಪಲು ಅವರು ಬಯಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್ಡೌನ್ ನಿಯಮಗಳ ಉಲ್ಲಂಘನೆಗಾಗಿ ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೂ ಅವರು ರೈಲ್ವೆ ಹಳಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರು ಎಂದು ಅಧಿಕಾರಿಗಳು ಪ್ರತ್ಯೇಕವಾಗಿ ನೀಡಿದ ಇನ್ನೊಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ‘ಲಾಕ್ಡೌನ್ ಕಾರಣದಿಂದಾಗಿ ಯಾವುದೇ ರೈಲುಗಳು ಓಡಾಡುವುದಿಲ್ಲವೆಂದು ಅವರು ಭಾವಿಸಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2020ರಲ್ಲಿ ರೈಲು ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಆದರೆ ಮಾರ್ಚ್ 25ರಂದು ಕೊರೋನ ವೈರಸ್ ತಡೆಗಾಗಿ ಲಾಕ್ಡೌನ್ ಘೋಷಿಸಿದ ಬಳಿಕ ಪ್ರಯಾಣಿಕ ರೈಲು ಸೇವೆಗಳನ್ನು ನಿರ್ಬಂಧಿಸಿದ ಹೊರತಾಗಿಯೂ ಇಷ್ಟೊಂದು ಸಾವುನೋವುಗಳಾಗಿರುವುದು ಗಮನಾರ್ಹವಾಗಿದೆ.
 
ಕಳೆದ ವರ್ಷದ ಮಾರ್ಚ್ 25ರಂದು ಲಾಕ್ಡೌನ್ ಘೋಷಿಸಿದ ಬಳಿಕ ಕೇವಲ ಸರಕು ಸಾಗಣೆಯ ರೈಲುಗಳ ಮಾತ್ರ ಸಂಚರಿಸುತಿದ್ದವು. ಮೇ 2ರ ಬಳಿಕ ವಲಸೆ ಕಾರ್ಮಿಕರ ಸಾಗಾಟಕ್ಕಾಗಿ ವಿಶೇಷ ‘ಶ್ರಮಿಕ್ ರೈಲುಗಳ’ ಸೇವೆಯನ್ನು ಆರಂಭಿಸಲಾಗಿತ್ತು.
 
ಡಿಸೆಂಬರ್ ಬಳಿಕ ಹಂತ ಹಂತವಾಗಿ ಪ್ರಯಾಣಿಕ ರೈಲು ಸೇವೆಗಳನ್ನು ಪುನರಾಂಭಿಸಲಾಗಿದ್ದು, ಇದೀಗ 110 ನಿಯಮಿತ ಪ್ಯಾಸೆಂಜರ್ ರೈಲುಗಳ ಜೊತೆ ಸುಮಾರು 1100 ವಿಶೇಷ ರೈಲುಗಳು ಕಾರ್ಯಾಚರಿಸುತ್ತಿವೆ.

2016ರಿಂದ 2019ರ ಮಧ್ಯದ ಅವಧಿಯಲ್ಲಿ ದೇಶಾದ್ಯಂತ 56271 ಮಂದಿ ರೈಲಿ ನಡಿಗೆ ಬಿದ್ದು ಮೃತಪಟ್ಟಿದ್ದಾರೆ ಹಾಗೂ 5938 ಮಂದಿ ಗಾಯಗೊಂಡಿದ್ದಾರೆಂದು ರೈಲ್ವೆ ಇಲಾಖೆಯ ಅಂಕಿಅಂಶಗಳು ಬಹಿರಂಗಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News