ಫೈಝರ್ ಸಹಿತ ವಿದೇಶಿ ಲಸಿಕೆ ಸಂಸ್ಥೆಗಳು ಕೆಲವು ವಿನಾಯಿತಿ ಪಡೆಯಲು ನಮ್ಮ ಅಭ್ಯಂತರವಿಲ್ಲ: ಕೇಂದ್ರ ಸರಕಾರ
ಹೊಸದಿಲ್ಲಿ, ಜೂ.2: ವಿದೇಶಿ ಲಸಿಕೆ ತಯಾರಿಕಾ ಸಂಸ್ಥೆಗಳಾದ ಫೈಝರ್ ಮತ್ತು ಮೊಡರ್ನಾ ಸಂಸ್ಥೆಗಳು ಭಾರತದಲ್ಲಿ ಶೀಘ್ರವೇ ಲಸಿಕೆ ಉತ್ಪಾದನೆಗೆ ತೊಡಗಿಕೊಳ್ಳುವಂತಾಗಲು, ಆ ಸಂಸ್ಥೆಗಳು ಕೋರಿರುವ ಕೆಲವು ವಿನಾಯಿತಿ ನೀಡಲು ಸರಕಾರದ ಅಭ್ಯಂತರವಿಲ್ಲ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಭಾರತದಲ್ಲಿ ಪ್ರಯೋಗಾತ್ಮಕ ಪರೀಕ್ಷೆ(ಪ್ರಯೋಗ ಪೂರ್ವ ಪರೀಕ್ಷೆ)ಯ ಅಗತ್ಯವಿಲ್ಲ ಮತ್ತು ನಷ್ಟ ಪರಿಹಾರ ಹಾಗೂ ಹೊಣೆಗಾರಿಕೆ ನಿಯಮ ಅನ್ವಯಿಸುವುದಿಲ್ಲ ಎಂಬ ವಿನಾಯಿತಿಯನ್ನು ಈ ಸಂಸ್ಥೆಗಳು ಕೋರಿದ್ದವು. ಇದಕ್ಕೆ ಸರಕಾರದ ಅಭ್ಯಂರವಿಲ್ಲ ಎಂದು ಮೂಲಗಳು ಹೇಳಿವೆ.
ಈ ಸಂಸ್ಥೆಗಳು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದರೆ, ಅವರಿಗೆ ಹೊಣೆಗಾರಿಕೆಯಿಂದ ವಿನಾಯಿತಿ ನೀಡಲು ಸರಕಾರ ಸಿದ್ಧವಿದೆ. ಫೈಝರ್ ಮತ್ತು ಮೊಡರ್ನಾ ಸಂಸ್ಥೆಗಳಿಗೆ ಇತರ ದೇಶಗಳಲ್ಲಿ ನೀಡಿರುವಂತೆಯೇ, ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗುವುದು ಎಂದು ಮೂಲಗಳು ಹೇಳಿವೆ. ಜೊತೆಗೆ, ಈಗಾಗಲೇ ಕೆಲವು ನಿರ್ಧಿಷ್ಟ ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿರುವ ವಿದೇಶಿ ಲಸಿಕೆಗಳಿಗೆ ಏಶ್ಯ-ಪೆಸಿಫಿಕ್ ವಲಯದಲ್ಲಿ ಪ್ರಯೋಗಾತ್ಮಕ ಪರೀಕ್ಷೆ ನಡೆಸಬೇಕು ಎಂಬ ನಿಯಮದಿಂದ ವಿನಾಯಿತಿ ನೀಡಲೂ ನಿರ್ಧರಿಸಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಹೇಳಿದೆ.
ಭಾರತದಲ್ಲಿ ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಲಸಿಕೆಯ ಬಲ ತುಂಬುವುದು ಈ ನಿರ್ಧಾರದ ಹಿಂದಿರುವ ಉದ್ದೇಶವಾಗಿದೆ. ಆದರೆ ಇಷ್ಟೆಲ್ಲಾ ವಿನಾಯಿತಿ ನೀಡಿದರೂ, ಲಸಿಕೆಗೆ ಜಾಗತಿಕವಾಗಿ ಭಾರೀ ಬೇಡಿಕೆ ಇರುವುದರಿಂದ ಫೈಝರ್ ಮತ್ತು ಮೊಡರ್ನಾ ಸಂಸ್ಥೆಗಳು ಭಾರತದಲ್ಲಿ ಲಸಿಕೆ ಉತ್ಪಾದನೆ ತಕ್ಷಣದಿಂದ ಆರಂಭಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಜುಲೈಯಿಂದ ಅಕ್ಟೋಬರ್ ಅವಧಿಯಲ್ಲಿ ಭಾರತಕ್ಕೆ 5 ಕೋಟಿ ಡೋಸ್ ಲಸಿಕೆ ಒದಗಿಸಲು ಸಿದ್ಧ ಎಂದು ಹೇಳಿರುವ ಫೈಝರ್ ಸಂಸ್ಥೆ, ಹೊಣೆಗಾರಿಕೆ, ಪ್ರಯೋಗಾತ್ಮಕ ಪರೀಕ್ಷೆ ಮತ್ತಿತರ ವಿನಾಯಿತಿ ಕೋರಿತ್ತು.
ಫೈಝರ್ ಸಂಸ್ಥೆಯ ಲಸಿಕೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮವಾದರೆ ಕಾನೂನು ಕ್ರಮ ಎದುರಿಸುವುದಕ್ಕೆ ಅಮೆರಿಕದಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ ಭಾರತದಲ್ಲಿ ಇದುವರೆಗೆ ಯಾವುದೇ ಸಂಸ್ಥೆಗಳಿಗೆ ಈ ವಿನಾಯಿತಿ ನೀಡಿಲ್ಲ. ಪೈಝರ್ನೊಂದಿಗೆ ಸಂಪರ್ಕದಲ್ಲಿದ್ದು ಅವರು ಜುಲೈ ತಿಂಗಳಿಂದ ನಿರ್ಧಿಷ್ಟ ಪ್ರಮಾಣದ ಲಸಿಕೆ ಪೂರೈಸುವ ಭರವಸೆ ನೀಡಿದ್ದಾರೆ. ಅವರು ಸರಕಾರದ ಕಡೆಯಿಂದ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬ ಬಗ್ಗೆ ನಾವು ಹಾಗೂ ಅವರ ಕಡೆಯಿಂದ ನಾವು ಏನನ್ನು ಅಪೇಕ್ಷಿಸುತ್ತಿದ್ದೇವೆ ಎಂಬ ಬಗ್ಗೆ ಅವರು ಗಮನ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಲಸಿಕೆ ಅಭಿಯಾನದ ಉಸ್ತುವಾರಿ ತಜ್ಞ ಸಮಿತಿಯ ಅಧ್ಯಕ್ಷ ವಿ.ಕೆ.ಪಾಲ್ ಹೇಳಿದ್ದಾರೆ.