ಲಸಿಕೆಯಲ್ಲೂ ಪಂಕ್ತಿ ಭೇದ!

Update: 2021-06-03 06:43 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ವಿರುದ್ಧ ಭಾರತ ‘ಸ್ವದೇಶಿ ಲಸಿಕೆ’ಯನ್ನು ಕಂಡು ಹಿಡಿದಾಗ ಸರಕಾರ ಅತಿ ಉತ್ಸಾಹದಿಂದ ‘ಪೌರಕಾರ್ಮಿಕರಿಗೆ ಮೊದಲ ಪ್ರಾಶಸ್ತ್ಯ’ ಎಂದು ಮಾಧ್ಯಮಗಳಲ್ಲಿ ಘೋಷಿಸಿತ್ತು. ಆದರೆ ಇದರ ವಿರುದ್ಧ ಹಲವರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಅದಾಗಲೇ ಕೋವ್ಯಾಕ್ಸಿನ್ ಕುರಿತಂತೆ ಹತ್ತು ಹಲವು ಆಕ್ಷೇಪಗಳು ಕೇಳಿ ಬಂದಿದ್ದವು. ತನ್ನ ಮೂರನೇ ಹಂತದ ಪ್ರಯೋಗದ ಫಲಿತಾಂಶ ಹೊರ ಬರುವ ಮೊದಲೇ ಲಸಿಕೆಗೆ ಅನುಮತಿ ನೀಡಲಾಗಿದೆ ಎನ್ನುವುದು ಕೋವ್ಯಾಕ್ಸಿನ್ ಮೇಲಿದ್ದ ಮುಖ್ಯ ಆರೋಪ. ಪೌರ ಕಾರ್ಮಿಕರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುವುದರ ಉದ್ದೇಶವೇ, ಅದರ ಸಾಧಕ ಬಾಧಕಗಳನ್ನು ಅವರ ಮೂಲಕ ಪರೀಕ್ಷಿಸುವುದು ಎಂದು ಹಲವು ತಜ್ಞರು ಶಂಕಿಸಿದ್ದರು. ಮೊದಲು ರಾಜಕಾರಣಿಗಳು ಮತ್ತು ಉದ್ಯಮಿಗಳು ಈ ಲಸಿಕೆಯನ್ನು ತೆಗೆದುಕೊಂಡು ಜನರಿಗೆ ಮಾದರಿಯಾಗಬೇಕು ಎಂಬ ಆಗ್ರಹಗಳು ಕೇಳಿ ಬಂದಿದ್ದವು. ಕಾರ್ಮಿಕರಿಗೆ ಮತ್ತು ತಳಹಂತದ ಆರೋಗ್ಯ ಸಿಬ್ಬಂದಿಗೆ ಬಲವಂತವಾಗಿ ಲಸಿಕೆಯನ್ನು ನೀಡಿದ ಬಳಿಕವಷ್ಟೇ ರಾಜಕಾರಣಿಗಳು ಲಸಿಕೆ ಸ್ವೀಕರಿಸಲು ಮುಂದಾದರು. ಆರಂಭದಲ್ಲಿ ಆರೋಗ್ಯ ಸಿಬ್ಬಂದಿಗಳೂ ಲಸಿಕೆ ಸ್ವೀಕರಿಸುವುದಕ್ಕೆ ಹಿಂದೇಟು ಹಾಕಿದ್ದರು. ಒಟ್ಟಿನಲ್ಲಿ, ಲಸಿಕೆಯನ್ನು ಜನರು ಆತ್ಮವಿಶ್ವಾಸದಿಂದ ಸ್ವೀಕರಿಸಲು ತೊಡಗಿದ್ದು ತಳಸ್ತರದ ಜನರ ಮೇಲೆ ಪ್ರಯೋಗ ಮಾಡಿದ ಬಳಿಕ. ಆದುದರಿಂದ, ಇಂದು ಲಸಿಕೆಯನ್ನು ಆದ್ಯತೆಯ ಮೇಲೆ ನೀಡಬೇಕಾಗಿರುವುದೂ ಈ ತಳಸ್ತರದ ಜನರಿಗೇ ಆಗಿದೆ. ದುರಂತವೆಂದರೆ, ಯಾವಾಗ ಲಸಿಕೆ ಅನಿವಾರ್ಯ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ರೂಪಗೊಂಡಿತೋ ಅಲ್ಲಿಂದ ಲಸಿಕೆಗಳು ತಳಸ್ತರದ ಬಡ ಜನರಿಗೆ ಸಿಗುವುದು ಕಷ್ಟವಾಯಿತು. ಆರಂಭದಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದ್ದ ಕೇಂದ್ರ ಸರಕಾರ, ಇಂದು ಲಸಿಕೆಗಳನ್ನು ರಾಜ್ಯಗಳಿಗೆ ಮಾರಾಟ ಮಾಡತೊಡಗಿದೆ. ಒಂದೆಡೆ ರಾಜ್ಯಗಳಿಗೆ ನೀಡಬೇಕಾದ ಅನುದಾನಗಳನ್ನು, ಜಿಎಸ್‌ಟಿ ಪರಿಹಾರ ಧನಗಳನ್ನು ಬಾಕಿ ಉಳಿಸಿ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿರುವ ಕೇಂದ್ರ ಇದೀಗ ಲಸಿಕೆಯನ್ನು ರಾಜ್ಯಗಳಿಗೆ ಮಾರಾಟಕ್ಕಿಟ್ಟಿದೆ. ಇದರಿಂದಾಗಿ ರಾಜ್ಯಗಳು ಕೊರೋನ ಕಾಲದಲ್ಲಿ ಇನ್ನಷ್ಟು ಆರ್ಥಿಕ ಹೊರೆಯನ್ನು ಹೊತ್ತುಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.

ಜನರು ಲಸಿಕೆ ತೆಗೆದುಕೊಳ್ಳಲೇ ಬೇಕಾದಂತಹ ಅನಿವಾರ್ಯ ಸೃಷ್ಟಿಸಿರುವುದು ಕೊರೋನ ಎರಡನೇ ಅಲೆ. ಈ ದೇಶದಲ್ಲಿ ತಣ್ಣಗಾಗಿದ್ದ ಕೊರೋನ ಮತ್ತೆ ಉಲ್ಬಣಿಸುವಂತಾಗಲು ಕಾರಣ ಸರಕಾರದ ಬೇಜವಾಬ್ದಾರಿ. ಧಾರ್ಮಿಕ ಮತ್ತು ಚುನಾವಣಾ ಜಾತ್ರೆಗಳಿಗೆ ಅನುಮತಿಯನ್ನು ನೀಡುವ ಮೂಲಕ ಸರಕಾರದ ನೇತೃತ್ವದಲ್ಲೇ ಕೊರೋನ ಎರಡನೆಯ ಅಲೆ ಪ್ರಾಯೋಜಿತ ಗೊಂಡಿತು. ಕೊರೋನಾ ಇನ್ನಷ್ಟು ಬೀಕರಗೊಳ್ಳಲು ದೇಶದ ದುರ್ಬಲ ಆರೋಗ್ಯ ಕ್ಷೇತ್ರ ಕಾರಣವಾಯಿತು. ಆಕ್ಸಿಜನ್, ವೆಂಟಿಲೇಟರ್ ಮೊದಲಾದ ಮೂಲಭೂತ ಸೌಕರ್ಯಗಳಿಲ್ಲದೆ ಕೊರೋನ ಸೋಂಕಿತರು ಮಾತ್ರವಲ್ಲದೆ, ಉಸಿರಾಟದ ಸಮಸ್ಯೆಗಳುಳ್ಳ ಇನ್ನಿತರ ರೋಗಿಗಳೂ ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬರುವುದು ಕಷ್ಟವಾಗ ತೊಡಗಿತು. ಸಾಲು ಸಾಲು ಹೆಣಗಳು ಜನಸಾಮಾನ್ಯರನ್ನು ದಂಗುಬಡಿಯುವಂತೆ ಮಾಡಿತು. ಆರೋಗ್ಯ ವ್ಯವಸ್ಥೆಯೇ ಬುಡಮೇಲಾಗಿರುವ ಈ ಸಂದರ್ಭದಲ್ಲಿ, ಲಸಿಕೆ ಮುಳುಗುವವನಿಗೆ ಹುಲ್ಲು ಕಡ್ಡಿಯಂತೆ ಭಾಸವಾಯಿತು. ಇಂದು ಜನರು ಲಸಿಕೆಗಾಗಿ ಮುಗಿ ಬಿದ್ದಿರುವುದು ಇದೇ ಕಾರಣಕ್ಕೆ. ಲಸಿಕೆಯನ್ನು ಜನಪ್ರಿಯಗೊಳಿಸಲು ಕೋಟ್ಯಂತರ ರೂಪಾಯಿಯನ್ನು ವ್ಯಯಿಸಿರುವ ಕೇಂದ್ರ ಸರಕಾರಕ್ಕೆ, ಜನರಿಗೆ ಬೇಕಾಗುವಷ್ಟು ಲಸಿಕೆಯನ್ನು ಪೂರೈಸುವ ಶಕ್ತಿ ಇದ್ದಿರಲಿಲ್ಲ. ಅದು ಗೊತ್ತಾಗುವಾಗ ತಡವಾಗಿದೆ. ಈ ಕಾರಣಕ್ಕೇ ಸುಪ್ರೀಂಕೋರ್ಟ್‌ನಿಂದ ಕೇಂದ್ರ ಸರಕಾರ ಪದೇ ಪದೇ ತರಾಟೆಗೊಳಗಾಗುತ್ತಿದೆ.

ವಿಪರ್ಯಾಸವೆಂದರೆ, ಲಸಿಕೆಯ ಕೊರತೆ ಎದುರಾಗುತ್ತಿದ್ದಂತೆಯೇ ಕಾಳದಂಧೆ ಆರಂಭವಾಗಿದೆ ಮತ್ತು ಇದರಲ್ಲಿ ರಾಜಕಾರಣಿಗಳೇ ನೇರ ಪಾತ್ರವಹಿಸಿರುವುದು ಬೆಳಕಿಗೆ ಬರುತ್ತಿದೆ. ಉಚಿತವಾಗಿ ಲಸಿಕೆ ನೀಡಬೇಕಾದ ಸರಕಾರದ ಭಾಗವಾಗಿರುವ ಜನಪ್ರತಿನಿಧಿಗಳೇ, ಖಾಸಗಿ ಆಸ್ಪತ್ರೆಗಳ ದುಬಾರಿ ಲಸಿಕೆಗಳನ್ನು ಕೊಳ್ಳಲು ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ. ಈ ಹಿಂದೆ ಬೆಡ್ ಬ್ಲಾಕ್‌ದಂಧೆಯಲ್ಲಿ ಗುರುತಿಸಿಕೊಂಡಿರುವ ಸಂಸದರು ಮತ್ತು ಶಾಸಕರು ಇದೀಗ ಲಸಿಕೆಗಳ ಕಾಳದಂಧೆಯಲ್ಲಿ ಶಾಮೀಲಾಗಿದ್ದಾರೆ. ಈ ಕಾಳದಂಧೆ ನಿಲ್ಲಬೇಕಾದರೆ ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುವಂತಾಗಬೇಕು. ಆದರೆ ಇಂದು ಲಸಿಕೆ ಹಂಚುವಿಕೆಯಲ್ಲಿ ಹೊಸತೊಂದು ಪಂಕ್ತಿ ಭೇದವನ್ನು ಸೃಷ್ಟಿಸಲಾಗಿದೆ. ಬ್ರಾಹ್ಮಣರಿಗೊಂದು ಪಂಕ್ತಿ, ದುಡ್ಡುಳ್ಳವರಿಗೆ ಇನ್ನೊಂದು ಪಂಕ್ತಿ, ಬಿಜೆಪಿಯ ವಿವಿಧ ನಾಯಕರಿಗೆ ಮಗದೊಂದು ಪಂಕ್ತಿ. ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾದ ಲಸಿಕೆಗಳಿಗಾಗಿ ಸರದಿಯಲ್ಲಿ ನಿಂತ ಈ ದೇಶದ ದೊಡ್ಡ ಸಂಖ್ಯೆ ಬಡವರು ಲಸಿಕೆ ಸಿಗದೇ ಕಂಗಾಲಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಲಸಿಕೆ ನೀಡಿರುವ ಪ್ರಕರಣ ಇದೀಗ ಸುದ್ದಿಯಲ್ಲಿದೆ. ಕೊರೋನ ಸಂಕಟ ಕಾಲದಲ್ಲಿ ಜನರು ಜಾತಿ ಭೇದ ಮರೆತು ಒಂದಾಗಿದ್ದರು. ಹಿಂದೂಗಳ ಹೆಣಗಳನ್ನು ಮುಸ್ಲಿಮರು, ಮುಸ್ಲಿಮರ ಹೆಣಗಳನ್ನು ಮುಸ್ಲಿಮೇತರರು ಅಂತ್ಯ ಸಂಸ್ಕಾರ ಮಾಡಿ ಸೌಹಾರ್ದ ಮೆರೆದಿದ್ದರು. ಆದರೆ ಇದೀಗ ಲಸಿಕೆ ನೀಡುವ ಸಂದರ್ಭದಲ್ಲಿ ಮಾತ್ರ ಮೇಲ್‌ಜಾತಿಗೆ ವಿಶೇಷ ಸೌಲಭ್ಯ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಾಡಿನ ಪೌರ ಕಾರ್ಮಿಕರಿಗೆ ಇಂತಹದೊಂದು ಯೋಜನೆಯನ್ನು ಹಮ್ಮಿಕೊಂಡಿದ್ದರೆ ಸರಕಾರದ ಪ್ರಯತ್ನ ಶ್ಲಾಘನೀಯವಾಗುತ್ತಿತ್ತು. ಬ್ರಾಹ್ಮಣರಿಗೆ, ದೇವಸ್ಥಾನದ ಅರ್ಚಕರಿಗೆ ಆದ್ಯತೆಯ ಮೇಲೆ ಪ್ರತ್ಯೇಕವಾಗಿ ಲಸಿಕೆ ನೀಡಿರುವುದು ಯಾವ ಕಾರಣಕ್ಕಾಗಿ? ದೇವಸ್ಥಾನದ ಅರ್ಚಕರು ಮತ್ತು ಬ್ರಾಹ್ಮಣ ಸಮುದಾಯದ ಜನರನ್ನು ಕೊರೋನ ವಾರಿಯರ್ ಎಂದು ಸರಕಾರ ಭಾವಿಸಿದೆಯೇ? ಆರೋಗ್ಯ ಕ್ಷೇತ್ರಕ್ಕಾಗಲಿ, ಕೊರೋನ ನಿರ್ವಹಣೆಯ ಸಂದರ್ಭದಲ್ಲಾಗಲಿ ಇವರ ಕೊಡುಗೆಯೇನು? ರಾಮ್‌ದೇವ್‌ರಂತಹ ನಕಲಿ ವೈದ್ಯನನ್ನು ತಲೆಯ ಮೇಲೆ ಹೊತ್ತು, ಅಲೋಪಥಿಯನ್ನು ನಿಂದಿಸುತ್ತಾ ಕಾಲ ಕಳೆಯುವ ಈ ವರ್ಗಕ್ಕೆ ಪ್ರತ್ಯೇಕವಾಗಿ ಲಸಿಕೆ ನೀಡಿರುವುದು, ಲಸಿಕೀಕರಣದಲ್ಲೂ ಸರಕಾರ ಪಂಕ್ತಿ ಭೇದವನ್ನು ಹಮ್ಮಿಕೊಂಡಿರುವುದು ಬೆಳಕಿಗೆ ಬಂದಂತಾಗಿದೆ. ಅಷ್ಟೇ ಅಲ್ಲ, ಲಸಿಕೆ ಹಾಕಿಕೊಳ್ಳಲು ಆಗಮಿಸಿದ ದಲಿತರನ್ನು ಜಾತಿ ಕಾರಣ ಮುಂದೊಡ್ಡಿ ವಾಪಾಸ್ ಕಳುಹಿಸಲಾಗಿದೆ. ಈ ಪಂಕ್ತಿ ಭೇದ ಇನ್ನೂ ಬೇರೆ ಬೇರೆ ರೂಪಗಳಲ್ಲಿ ಹರಡಿಕೊಂಡಿದೆ. ನೀವು ರಾಜಕಾರಣಿಗಳಿಗೆ ಆಪ್ತರಾಗಿದ್ದರೆ, ಅವರ ಶಿಫಾರಸನ್ನು ಪಡೆಯಲು ಶಕ್ತಿಯುಳ್ಳವರಾಗಿದ್ದರೆ ನಿಮಗೆ ಲಸಿಕೆ ಪಡೆಯಲು ಹಲವು ಮಾರ್ಗಗಳಿವೆ. ಹಾಗೆಯೇ ನೀವು ಶ್ರೀಮಂತರಾಗಿದ್ದರೂ ಸುಲಭವಾಗಿ ಲಸಿಕೆಯನ್ನು ಪಡೆದುಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳು ನಿಮ್ಮನ್ನು ರಾಜಹಾಸು ಹಾಸಿ ಸ್ವಾಗತಿಸುತ್ತವೆೆ. ಆದರೆ ಕೈಯಲ್ಲಿ ಮೊಬೈಲ್ ಇಲ್ಲದ, ಆನ್‌ಲೈನ್ ಮೂಲಕ ಬುಕಿಂಗ್ ಮಾಡುವುದಕ್ಕೆ ಅರಿಯದ, ಲಾಕ್‌ಡೌನ್‌ನಿಂದ ತುತ್ತು ಅನ್ನಕ್ಕೂ ಪರದಾಡುತ್ತಿರುವ ಜನರಿಗೆ ಲಸಿಕೆ ಹಾಕಿಸಿಕೊಳ್ಳುವ ಅವಕಾಶವೇ ಇಲ್ಲ.

ವಿಪರ್ಯಾಸವೆಂದರೆ, ಲಸಿಕೆ ಹಾಕಿಕೊಂಡಾಕ್ಷಣ ಅವರು ಅಮರರೇನೂ ಅಲ್ಲ. ಕೊರೋನ ಅವರಿಗೆ ಹರಡುವುದಿಲ್ಲ ಎಂದೂ ಹೇಳುವಂತಿಲ್ಲ. ಶೇ.50ರಷ್ಟು ಮಂದಿ ಲಸಿಕೆ ಹಾಕಿ, ಉಳಿದವರು ಆರ್ಥಿಕ ಮತ್ತು ಇನ್ನಿತರ ಕಾರಣಗಳಿಂದ ಲಸಿಕೆ ಹಾಕದೇ ಉಳಿದರೆ ಅದರ ದುಷ್ಪರಿಣಾಮವನ್ನು ಲಸಿಕೆ ಹಾಕಿಸಿಕೊಂಡವರೂ ಅನುಭವಿಸಬೇಕಾಗುತ್ತದೆ. ಎಲ್ಲಿಯವರೆಗೆ ಶೇ. 90ರಷ್ಟು ಮಂದಿ ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕೊರೋನವನ್ನು ದೇಶ ಸಂಪೂರ್ಣ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಕೋಟ್ಯಂತರ ರೂಪಾಯಿ ವ್ಯಯಿಸಿದ ಬಳಿಕವೂ ಲಸಿಕೆಯ ಉದ್ದೇಶ ವಿಫಲವಾಗಬಹುದು. ಇಂದು ದೇವಸ್ಥಾನಗಳಲ್ಲಿ, ಪಕ್ಷದ ಕಚೇರಿಗಳಲ್ಲಿ, ಜಾತಿ ಸಂಘಟನೆಗಳ ಕಚೇರಿಗಳಲ್ಲಿ ನಿರ್ದಿಷ್ಟ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ದೇಶದಲ್ಲಿ ಕೊರೋನಾಕ್ಕಿಂತಲೂ ಭೀಕರವಾಗಿ ಹರಡಿಕೊಂಡಿರುವ ಜಾತಿ ಮತ್ತು ವರ್ಗ ವೈರಸ್‌ಗಳನ್ನು ಇದು ಬೆಳಕಿಗೆ ತಂದಿದೆ. ಭಾರತ ಕೊರೋನಾ ಮುಕ್ತವಾಗಬೇಕಾದರೆ ಲಸಿಕೆ ಎಲ್ಲರಿಗೂ ಎಲ್ಲೆಡೆಯೂ ಸಿಗುವಂತಾಗಬೇಕು. ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆಗಳನ್ನು ನೀಡಬಾರದು. ಸಾರ್ವಜನಿಕ ಆಸ್ಪತ್ರೆಗಳೇ ಲಸಿಕೆ ನೀಡುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಮುಖ್ಯವಾಗಿ ಉಚಿತವಾಗಿ ಲಸಿಕೆ ಸಿಗುವಂತಾಗಬೇಕು. ಇದಕ್ಕಾಗಿ ದೇಶಾದ್ಯಂತ ಒಂದು ಆಂದೋಲನವನ್ನೇ ಆರಂಭಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News