ಇಸ್ರೇಲ್: ಶೀಘ್ರದಲ್ಲೇ ನೂತನ ಮೈತ್ರಿ ಸರಕಾರ?

Update: 2021-06-03 14:47 GMT

ಜೆರುಸಲೇಮ್, ಜೂ. 3: ಇಸ್ರೇಲ್‌ನಲ್ಲಿ ಸಮ್ಮಿಶ್ರ ಸರಕಾರವೊಂದನ್ನು ರಚಿಸುವ ಸಾಮರ್ಥ್ಯವನ್ನು ನಾನು ಹೊಂದಿದ್ದೇನೆ ಎಂದು ಪ್ರತಿಪಕ್ಷ ನಾಯಕ ಯಾಯಿರ್ ಲ್ಯಾಪಿಡ್ ದೇಶದ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಅವರು ಇದರಲ್ಲಿ ಯಶಸ್ವಿಯಾದರೆ 12 ವರ್ಷಗಳ ಕಾಲ ಅಧಿಕಾರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆಳಗಿಳಿಯಲಿದ್ದಾರೆ.

ಇಸ್ರೇಲ್‌ನಲ್ಲಿ ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ನಾಲ್ಕು ಸಂಸದೀಯ ಚುನಾವಣೆಗಳು ನಡೆದಿವೆ. ಪ್ರತಿ ಬಾರಿಯೂ ಅತಂತ್ರ ಸಂಸತ್ತು ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಪದೇ ಪದೇ ಚುನಾವಣೆಗಳು ನಡೆದಿವೆ. ಇತ್ತೀಚೆಗೆ ನಡೆದಿರುವ ಚುನಾವಣೆಯಲ್ಲೂ ಯಾವುದೇ ಮಿತ್ರಕೂಟಕ್ಕೆ ಸರಳ ಬಹುಮತ ಲಭಿಸಿಲ್ಲ. ಹಾಗಾಗಿ, ಸರಕಾರ ರಚಿಸಲು ಪ್ರಯತ್ನಿಸುವಂತೆ ಅಧ್ಯಕ್ಷ ರೋವೆನ್ ರಿವ್ಲಿನ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಆಹ್ವಾನ ನೀಡಿದ್ದರು. ಆದರೆ, ಅವರು ಈ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ, ಬಳಿಕ ಸರಕಾರ ರಚನೆಯ ಹೊಣೆಯನ್ನು ಯೇಸ್ ಅತಿಡ್ ಪಕ್ಷದ ನಾಯಕ ಲ್ಯಾಪಿಡ್ ಗೆ ವಹಿಸಿದ್ದರು.

ಮೈತ್ರಿ ಸರಕಾರವೊಂದನ್ನು ರಚಿಸುವ ಪ್ರಸ್ತಾವವನ್ನು ಅಧ್ಯಕ್ಷ ರಿವ್ಲಿನ್ ಮುಂದೆ ಇಟ್ಟಿರುವುದಾಗಿ ಲ್ಯಾಪಿಡ್ ಬುಧವಾರ ಟ್ವಿಟರ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮಾಜಿ ಟಿವಿ ನಿರೂಪಕ ಹಾಗೂ ಜಾತ್ಯತೀತ ಧೋರಣೆಯ ಮಧ್ಯಪಂಥೀಯನಾಗಿರುವ ಲ್ಯಾಪಿಡ್ ತೀವ್ರವಾದಿ ಧಾರ್ಮಿಕ-ರಾಷ್ಟ್ರೀಯವಾದಿ ನಫ್ಟಾಲಿ ಬೆನೆಟ್‌ರ ಬೆಂಬಲದೊಂದಿಗೆ ಮೈತ್ರಿ ಸರಕಾರವೊಂದನ್ನು ರಚಿಸಲಿದ್ದಾರೆ. ಕೋಟ್ಯಧೀಶ ತಂತ್ರಜ್ಞಾನ ಉದ್ಯಮಿಯಾಗಿರುವ ನಫ್ಟಾಲಿ, ಬೆಂಜಮಿನ್ ನೆತನ್ಯಾಹು ಸರಕಾರದಲ್ಲಿ ರಕ್ಷಣಾ ಖಾತೆ ಸೇರಿದಂತೆ ಹಲವಾರು ಖಾತೆಗಳನ್ನು ನಿರ್ವಹಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಅವರ ನಡುವೆ ರವಿವಾರ ಒಪ್ಪಂದವಾಗಿದೆಯೆನ್ನಲಾಗಿದೆ. ಈ ಒಪ್ಪಂದದ ಪ್ರಕಾರ, ಪ್ರಧಾನಿ ಹುದ್ದೆಯನ್ನು ನಫ್ಟಾಲಿ ಮತ್ತು ಲ್ಯಾಪಿಡ್ ಹಂಚಿಕೊಳ್ಳಲಿದ್ದಾರೆ. ಮೊದಲ ಎರಡು ವರ್ಷ ನಫ್ಟಾಲಿ ಪ್ರಧಾನಿಯಾದರೆ, ಕೊನೆಯ ಎರಡು ವರ್ಷ ಲ್ಯಾಪಿಡ್ ಪ್ರಧಾನಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News