ಉಚಿತ ಅಂತ್ಯ ಸಂಸ್ಕಾರ ಭಾಗ್ಯ!

Update: 2021-06-04 06:37 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ


Full View

ಒಂದು ಕಾಲವಿತ್ತು. ಜೂನ್ ತಿಂಗಳ ಹೊತ್ತಿಗೆ ನದಿ, ಜಲಾಶಯಗಳು ತುಂಬಿಕೊಂಡರೆ ರಾಜಕಾರಣಿಗಳು ಸಂಭ್ರಮದಿಂದ ಬಾಗಿನ ಬಿಟ್ಟು, ಪೋಟೊ ಹೊಡೆಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದ್ದರು. ‘ಬಾಗಿನ ಬಿಡುವುದು’ ಎನ್ನುವುದು ಪರಂಪರಾಗತವಾಗಿ ಬಂದ ನಂಬಿಕೆ. ನದಿಗಳು ತುಂಬಿದರೆ ಕೃಷಿ ಕಾರ್ಯಗಳೂ ಯಶಸ್ವಿಯಾಗಿ ನಡೆಯುತ್ತವೆ. ಕೃಷಿ ಚಟುವಟಿಕೆಗಳು ಸುಸೂತ್ರವಾಗಿ ನಡೆದರೆ ನಾಡು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ, ಚೆನ್ನಾಗಿ ಮಳೆಯಾದಾಗ ಅದನ್ನೊಂದು ಹೆಗ್ಗಳಿಕೆಯಂತೆ ಸಂಭ್ರಮಿಸುವುದರಲ್ಲಿ ಅರ್ಥವಿದೆ. ಆದರೆ, ಈ ಬಾರಿಯ ಕೊರೋನ ಸಂಕಟ ಕಾಲದಲ್ಲಿ ನದಿಗಳಿಗೆ ಬಾಗಿನ ಬಿಡುವ ಬದಲು, ಜನರ ಅಸ್ಥಿಗಳನ್ನು ಬಿಡುವ ನೇತೃತ್ವವನ್ನು ರಾಜಕಾರಣಿಗಳು ವಹಿಸಿಕೊಳ್ಳುತ್ತಿದ್ದಾರೆ ಮತ್ತು ಹಾಗೆ ಅಸ್ಥಿಗಳನ್ನು ಬಿಡುವುದು ತಮಗೆ ದೊರಕಿದ ಭಾಗ್ಯ ಎಂದು ಮಾಧ್ಯಮಗಳಲ್ಲಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಕೊರೋನಗೆ ಜೀವ ಕಳೆದುಕೊಂಡವರ ಬಂಧು ಬಾಂಧವರ ಅವಕೃಪೆಯಿಂದಾಗಿ ಗೌರವಯುತವಾಗಿ ಸಂಸ್ಕಾರದ ಭಾಗ್ಯವೂ ಇಲ್ಲದ ಸಾವಿರಕ್ಕೂ ಅಧಿಕ ಅನಾಥ ಮೃತದೇಹಗಳ ಅಸ್ಥಿಗಳನ್ನು ಕಂದಾಯ ಸಚಿವರ ಆರ್. ಅಶೋಕ್ ನೇತೃತ್ವದಲ್ಲಿ ಕಾವೇರಿ ಮಡಿಲಿಗೆ ಅರ್ಪಿಸಲಾಯಿತು. ಮಾಧ್ಯಮಗಳಲ್ಲೂ ಇದು ವರದಿಯಾಯಿತು. ಇದನ್ನೊಂದು ಹೆಮ್ಮೆಯ ವಿಷಯವಾಗಿ ಸಚಿವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಹಂಚಿಕೊಂಡರು.

‘ಜಗತ್ತಿನಲ್ಲಿ ಯಾರೂ ಅನಾಥರಲ್ಲ , ಎಲ್ಲವೂ ವಿಧಿಯಲೀಲೆ. ಅವರೆಲ್ಲರ ಅಸ್ಥಿಗಳನ್ನು ವಿಸರ್ಜಿಸುವ ಭಾಗ್ಯ ನನ್ನದಾಗಿದೆ. ಇದೊಂದು ಪುಣ್ಯದ ಕೆಲಸ’ ಎಂದೂ ಅವರು ಹೇಳಿಕೆ ನೀಡಿದರು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರಕಾರವೊಂದು ಈ ನಾಡಿನ ಸಾವಿರಾರು ಬಡ ಜನರ ಅಸ್ಥಿಗಳನ್ನು ವಿಸರ್ಜಿಸಿ, ಅದನ್ನು ಸಾಧನೆಯಾಗಿ ಹೇಳಿಕೊಳ್ಳುತ್ತಿದೆ. ಇತ್ತೀಚೆಗೆ, ಸ್ಮಶಾನಗಳಲ್ಲಿ ಮೃತದೇಹಗಳು ತುಂಬಿ ತುಳುಕಿ, ಸುಡುವುದಕ್ಕೆ ಕಷ್ಟವಾದಾಗಲೂ ಸರಕಾರ ಇಂತಹದೇ ಅಸೂಕ್ಷ್ಮತೆಯನ್ನು ಪ್ರದರ್ಶಿಸಿತ್ತು. ‘ಹೆಚ್ಚು ಸ್ಮಶಾನಗಳನ್ನು ವ್ಯವಸ್ಥೆ ಮಾಡುವ’ ಭರವಸೆಯನ್ನು ಸರಕಾರ ನೀಡಿತು. ಇದು ತೀವ್ರ ಟೀಕೆಗಳಿಗೆ ಕಾರಣವಾಯಿತು. ರಾಜ್ಯದಲ್ಲಿ ಹೆಚ್ಚಿಸಬೇಕಾದುದು ಸ್ಮಶಾನಗಳನ್ನಲ್ಲ, ಆಸ್ಪತ್ರೆಗಳಿಗೆ ಬೇಕಾದ ಸವಲತ್ತುಗಳನ್ನು ಎಂದು ಜನಸಾಮಾನ್ಯರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರಕಾರದಲ್ಲಿ ಭಾಗಿಯಾಗಿರುವ ಮುಖಂಡರ ಪೋಟೊಗಳನ್ನು ಹಾಕಿ, ಸ್ಮಶಾನದಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಬಗ್ಗೆ ಬ್ಯಾನರ್ ಒಂದು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಯಿತು. ಕೊರೋನ ಮತ್ತು ಆಸ್ಪತ್ರೆಗಳ ಅವ್ಯವಸ್ಥೆಯಿಂದಾಗಿ ಜನರು ಸಾಲು ಸಾಲಾಗಿ ಸಾಯುತ್ತಿರುವಾಗ ಅವರಿಗೆ ಹೆಚ್ಚುವರಿ ಸ್ಮಶಾನಗಳನ್ನು ವ್ಯವಸ್ಥೆ ಮಾಡುವ ಪರಿಸ್ಥಿತಿಗಾಗಿ ಸರಕಾರ ನಾಚಿಕೊಳ್ಳಬೇಕು. ಸ್ಮಶಾನದಲ್ಲಿ ಅಂತಹ ಒತ್ತಡಗಳು ಸೃಷ್ಟಿಯಾಗಲು ಕಾರಣವೇನು? ಅದಕ್ಕೆ ಸರಕಾರ ಎಷ್ಟರಮಟ್ಟಿಗೆ ಕಾರಣ ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಬೇಕು. ಸ್ಮಶಾನದಲ್ಲಿ ಜನರು ಮೃತದೇಹಗಳನ್ನು ಇಟ್ಟು ಕಾಯುತ್ತಿರುವುದು ಸ್ಮಶಾನದ ಅವ್ಯವಸ್ಥೆಯನ್ನು ಹೇಳುತ್ತಿಲ್ಲ. ಬದಲಿಗೆ ಆರೋಗ್ಯ ಕ್ಷೇತ್ರದ ವೈಫಲ್ಯಗಳನ್ನು ಹೇಳುತ್ತಿದೆ. ಆದುದರಿಂದ ಸರಕಾರ ಸೌಲಭ್ಯಗಳನ್ನು ಹೆಚ್ಚಿಸಬೇಕಾದುದು ಆರೋಗ್ಯ ಕ್ಷೇತ್ರದಲ್ಲಿ. ಸ್ಮಶಾನಗಳ ಸಂಖ್ಯೆಗಳನ್ನು ಹೆಚ್ಚಿಸುವುದೇನೋ ಸರಿ, ಆದರೆ ಅದನ್ನು ಮಾಧ್ಯಮಗಳಲ್ಲಿ ಹಂಚಿಕೊಂಡು ಸರಕಾರದ ಸಾಧನೆಯೆಂಬಂತೆ ಬಿಂಬಿಸುವುದು ನಮ್ಮ ನಾಯಕರ ಮನಸ್ಸು ಎಷ್ಟರ ಮಟ್ಟಿಗೆ ಜಡವಾಗಿ ಬಿಟ್ಟಿದೆ ಎನ್ನುವುದನ್ನು ಹೇಳುತ್ತದೆ. ಇದೀಗ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

‘ಉಚಿತ ಅಂತ್ಯ ಸಂಸ್ಕಾರ ಭಾಗ್ಯ’ ವನ್ನು ಜನರಿಗೆ ನೀಡಲು ಮುಂದಾಗಿದೆ. ಆಸ್ಪತ್ರೆಗಳಲ್ಲಿ ಅನಾಥವಾಗಿರುವ ಮೃತದೇಹಗಳ ಅಂತಿಮ ಸಂಸ್ಕಾರ ಹೊಸತೇನೂ ಅಲ್ಲ. ಅದನ್ನು ಆಯಾ ಆಸ್ಪತ್ರೆಗಳೇ ನೆರವೇರಿಸುತ್ತಾ ಬರುತ್ತಿವೆ. ಕೊರೋನ ಕಾಲದಲ್ಲಿ ಅನಾಥ ಮೃತದೇಹಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಇದಕ್ಕಾಗಿ ಕೊರೋನವನ್ನಷ್ಟೇ ಹೊಣೆ ಮಾಡುವಂತಿಲ್ಲ. ಆಸ್ಪತ್ರೆಗಳ ಅವ್ಯವಸ್ಥೆಗಳೂ ಈ ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಹೀಗೆ ಅನಾಥವಾದ ಶವಗಳನ್ನು ವಿವಿಧ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಜಾತಿ, ಧರ್ಮ ಭೇದಗಳನ್ನು ನೋಡದೆ ಸಂಸ್ಕಾರ ಮಾಡಿದ ಉದಾಹರಣೆಗಳೂ ಇವೆ. ಇದೀಗ ಸಚಿವರೇ ಮುಂದೆ ನಿಂತು ಒಂದು ಸಾವಿರಕ್ಕೂ ಅಧಿಕ ಮೃತದೇಹಗಳ ಅಸ್ಥಿಗಳನ್ನು ಕಾವೇರಿ ನದಿಗೆ ಅರ್ಪಿಸಿ, ಅದನ್ನು ಸರಕಾರದ ಸಾಧನೆಯಾಗಿಸಲು ಹೊರಟಿರುವುದು ಮಾತ್ರ ವಿಪರ್ಯಾಸ. ಜಿಲ್ಲಾಡಳಿತ ನಡೆಸಬೇಕಾದ ಕೆಲಸ ಸಚಿವರ ನೇತೃತ್ವದಲ್ಲಿ ನಡೆದದ್ದು ಹೇಗೆ? ಈ ಸಂದರ್ಭದಲ್ಲಿ ವೈದಿಕ ಸಂಸ್ಕಾರಕ್ಕೆ ಅನುಗುಣವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು ಎಂದು ಮಾಧ್ಯಮಗಳು ಬರೆದುಕೊಂಡಿವೆ. ಹಲವು ಧರ್ಮಗಳಿಗೆ ಸೇರಿದ ಅನಾಥ ಶವಗಳನ್ನು, ವೈದಿಕ ಆಚರಣೆಯ ಪ್ರಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಸಚಿವರಿಗೆ ಸಮ್ಮತಿ ನೀಡಿದವರು ಯಾರು? ಇಷ್ಟೂ ಅನಾಥ ಮೃತದೇಹಗಳನ್ನು ಒಟ್ಟಾಗಿ ಸುಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಸರಕಾರದ ಪಾಲಿನ ದೌರ್ಭಾಗ್ಯವಾಗಿದೆ. ಆದರೆ ಸಚಿವ ಅಶೋಕರು ಇದನ್ನು ‘ನನಗೆ ಸಿಕ್ಕಿದ ಭಾಗ್ಯ’ ಎಂದು ಹೇಳಿಕೊಂಡಿದ್ದಾರೆ. ಅನಾಥ ಮೃತದೇಹಗಳಲ್ಲಿ ಬಹುತೇಕ ಬಡವರದೇ ಆಗಿದೆ. ಈ ಜನರಿಗೆ ಇಂತಹ ಸ್ಥಿತಿಯನ್ನು ತಂದಿಟ್ಟದ್ದಾಗಿ ಮರುಗಬೇಕಾಗಿದ್ದ ಸಚಿವರು, ಭಾಗ್ಯವಾಗಿ ಸ್ವೀಕರಿಸಿದ್ದು ವಿಪರ್ಯಾಸ.

ಬಡಜನರ ಬದುಕು ಅನಾಥ ಶವವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳುವುದು ಸಚಿವರ ಕೆಲಸ. ಕುಟುಂಬ ಮೃತದೇಹವನ್ನು ಅನಾಥವಾಗಿ ಬಿಟ್ಟು ಹೋದ ಮೇಲೆ, ಅದನ್ನು ನಿರ್ವಹಿಸುವುದಕ್ಕೆ ಜಿಲ್ಲಾಡಳಿತದಲ್ಲಿ ಅದರದೇ ವ್ಯವಸ್ಥೆಗಳಿವೆ. ಅದನ್ನು ಅವರಿಗೆ ನಿರ್ವಹಿಸಲು ಬಿಡಬೇಕು. ಧರ್ಮಾತೀತವಾಗಿ ಅವುಗಳನ್ನು ಅಂತ್ಯ ಸಂಸ್ಕಾರ ನಡೆಸುವುದು ಜಿಲ್ಲಾಡಳಿತದ ಹೊಣೆಗಾರಿಕೆ. ಒಂದು ವೇಳೆ, ಕುಟುಂಬಸ್ಥರೇ ಇಂತಹ ವಿಧಿ ವಿಧಾನದ ಮೂಲಕ ನೆರವೇರಿಸಿ ಎಂದಾಗ ಜಿಲ್ಲಾಡಳಿತ ಅದಕ್ಕೆ ಸ್ಪಂದಿಸಬಹುದೇನೋ. ಜನರಿಗೆ ತಕ್ಷಣ ಸಿಗಬೇಕಾಗಿದ್ದ ಆಸ್ಪತ್ರೆ ಬೆಡ್‌ಗಳನ್ನು ಮುಚ್ಚಿಟ್ಟು ಅದನ್ನು ಕಾಳ ದಂಧೆಯಾಗಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೆ, ತಮ್ಮ ಕೆಲಸವನ್ನು ಸಚಿವರು ಸ್ಮಶಾನಕ್ಕೆ ಸೀಮಿತವಾಗಿಸಿರುವುದು ರಾಜ್ಯದ ಇಂದಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇಂದು ಲಸಿಕೆ ಹಂಚುವುದರಲ್ಲೂ ಜಾತಿಯನ್ನು ಮುಂದೆ ತಂದು, ಸರಕಾರ ನಾಚಿಕೆೆಗೀಡಾಗಿದೆ.

ಬ್ರಾಹ್ಮಣರಿಗಷ್ಟೇ ಲಸಿಕೆಗಳನ್ನು ಹಂಚುವ ವ್ಯವಸ್ಥೆ ಮಾಡಿ, ಅಲ್ಲಿ ಲಸಿಕೆಗಾಗಿ ಸರದಿಯಲ್ಲಿ ನಿಂತ ಫಲಾನುಭವಿಯನ್ನು ದಲಿತ ಎನ್ನುವ ಕಾರಣಕ್ಕೆ ಹೊರ ಹಾಕಿದ ಸರಕಾರ, ಅನಾಥ ಮೃತದೇಹಗಳಿಗೆ ವೈದಿಕ ವಿಧಿವಿಧಾನದಲ್ಲಿ ಅಂತ್ಯ ಸಂಸ್ಕಾರ ನಡೆಸುವುದೇ ಒಂದು ತಮಾಷೆ. ‘ಅರ್ಚಕರಿಗೆ ಲಸಿಕೆ ನೀಡಬಾರದೆ, ಅವರಿಗೆ ಲಸಿಕೆ ಪಡೆದುಕೊಳ್ಳುವ ಹಕ್ಕಿಲ್ಲವೇ?’ ಎಂದು ಉಪಮುಖ್ಯಮಂತ್ರಿ ಕೇಳುತ್ತಾರೆ. ಅರ್ಚಕರಿಗೆ ಮಾತ್ರವಲ್ಲ, ಈ ನಾಡಿನ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಪಡೆದುಕೊಳ್ಳುವ ಹಕ್ಕಿದೆ. ಅರ್ಚಕರಿಗೆ ವಿಶೇಷ ಆದ್ಯತೆಯಲ್ಲಿ ಯಾಕೆ ಲಸಿಕೆ ನೀಡಲಾಯಿತು? ಅಲ್ಲಿ ಲಸಿಕೆ ಹಾಕಿಕೊಳ್ಳಲು ಬಂದ ದಲಿತರ ಜಾತಿ ಕೇಳಿ, ಅವರನ್ನು ಯಾಕೆ ಹಿಂದಕ್ಕೆ ಕಳುಹಿಸಲಾಯಿತು? ಬ್ರಾಹ್ಮಣರಿಗೆ ಲಸಿಕೆ ಹಾಕಿಸಿಕೊಳ್ಳುವ ಹಕ್ಕಿದೆಯಾದರೆ ದಲಿತರಿಗೇಕಿಲ್ಲ? ಅನಾಥ ಶವಗಳಿಗೆ ವೈದಿಕರನ್ನು ಕರೆಸಿ ವಿಧಿ ವಿಧಾನ ನೆರವೇರಿಸುವ ಸಚಿವ ಅಶೋಕ್ ಅವರು, ದಲಿತರು ಮತ್ತು ಬಡವರಿಗೆ ಉಚಿತ ಲಸಿಕೆ ಒದಗಿಸುವ ನೇತೃತ್ವವನ್ನು ವಹಿಸಿಕೊಳ್ಳಬೇಕು. ಒಂದು ಸರಕಾರದ ಭಾಗವಾಗಿ ಅವರು ಮಾಡಬೇಕಾದ ತುರ್ತು ಕೆಲಸವದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News