ಕೇಂದ್ರದ ಲಸಿಕೆ ನೀತಿಗೆ ಸುಪ್ರೀಂ ಚಾಟಿ

Update: 2021-06-05 11:42 GMT
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ Full View

ಕೇಂದ್ರ ಸರಕಾರದ ವಿವೇಚನಾರಹಿತ, ನಿರಂಕುಶ ಲಸಿಕೆ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೆಲ ಪ್ರಶ್ನೆಗಳನ್ನೂ ಸರಕಾರಕ್ಕೆ ಕೇಳಿದೆ. 2021-22ನೇ ಸಾಲಿನ ಮುಂಗಡ ಪತ್ರದಲ್ಲಿ ಲಸಿಕೆ ಅಭಿಯಾನಕ್ಕಾಗಿ ಮೀಸಲಾಗಿರಿಸಿದ 35 ಸಾವಿರ ಕೋಟಿ ರೂಪಾಯಿಗಳನ್ನು ಯಾವ ರೀತಿ ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಲೆಕ್ಕ ಕೊಡಬೇಕು ಎಂದು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡರ ನೇತೃತ್ವದ ಮೂವರು ಸದಸ್ಯರ ಪೀಠ ಕೇಂದ್ರ ಸರಕಾರವನ್ನು ಕೇಳಿದೆ. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ವ್ಯಕ್ತಪಡಿಸಿದ ಆಕ್ಷೇಪಣೆಗಳು ನ್ಯಾಯ ಸಮ್ಮತವಾಗಿವೆ. ಕೋಟ್ಯಂತರ ಜನರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. 45 ವರ್ಷಕ್ಕಿಂತ ಮೇಲಿನವರಿಗೆ ಉಚಿತ ಲಸಿಕೆ ಹಾಕಲಾಗುತ್ತಿದೆ. 18ರಿಂದ 45 ವಯೋಮಾನದವರು ಲಸಿಕೆಗೆ ಹಣ ನೀಡಬೇಕಂತೆ, ಇದೆಂತಹ ಲಸಿಕೆ ನೀತಿ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡದ್ದು ಸರಿಯಾಗಿದೆ. 18ರಿಂದ 45 ವಯೋಮಾನದವರಿಗೇಕೆ ಬಜೆಟ್‌ನಲ್ಲಿ ಮೀಸಲಿಟ್ಟ ಉಚಿತ ಲಸಿಕೆ ಸವಲತ್ತು ಅನ್ವಯವಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಬೇಕಾಗಿದೆ.

ಇದಲ್ಲದೆ ಹಲವಾರು ಸ್ಪಷ್ಟನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ಮೊದಲ ಮತ್ತು ಎರಡನೇ ಡೋಸ್ ಪಡೆದವರ ವಿವರ ನೀಡಬೇಕು, ಗ್ರಾಮೀಣ ಭಾಗಕ್ಕೆ ಎಷ್ಟು ಲಸಿಕೆ ತಲುಪಿದೆ ಎಂಬ ಪ್ರತ್ಯೇಕ ಮಾಹಿತಿ ಹಾಗೂ ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್ ಲಸಿಕೆಗಳ ಖರೀದಿಯ ಬಗ್ಗೆ ಸಮಗ್ರ ವರದಿ, ಲಸಿಕೆ ಆರ್ಡರ್ ನೀಡಿದ ದಿನಾಂಕ, ಎಷ್ಟು ಲಸಿಕೆಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು, ಎಷ್ಟು ಲಸಿಕೆ ಪೂರೈಕೆಯಾಯಿತು? ಇನ್ನಷ್ಟು ಆಗಬೇಕು? ಎಂಬ ಬಗ್ಗೆ ಮಾಹಿತಿಯನ್ನು ನ್ಯಾಯಾಲಯ ಕೇಳಿರುವುದು ಸಮಂಜಸವಾಗಿದೆ. ವರ್ಷಾಂತ್ಯಕ್ಕೆ ಎಲ್ಲ ಅರ್ಹ ನಾಗರಿಕರಿಗೆ ಲಸಿಕೆ ನೀಡುವ ಭರವಸೆ ಕೊಟ್ಟಿರುವ ಸರಕಾರ ಅದಕ್ಕಾಗಿ ರೂಪಿಸಿಕೊಂಡ ಕಾರ್ಯತಂತ್ರದ ವಿವರಣೆ ಕೇಳಿದೆ. ಇಷ್ಟೇ ಅಲ್ಲ ಉಚಿತವಾಗಿ ಲಸಿಕೆ ಹಾಕಿಸುವಿಕೆಯ ಬಗ್ಗೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎರಡು ವಾರದಲ್ಲಿ ಪ್ರತಿಕ್ರಿಯೆ ನೀಡಬೇಕಾಗಿದೆ.

ಇಡೀ ದೇಶಕ್ಕೆ ಬಹುದೊಡ್ಡ ಸವಾಲಾಗಿ ಬಂದಿರುವ ಹಾಗೂ ಅಪಾರ ಪ್ರಮಾಣದ ಸಾವು ನೋವುಗಳಿಗೆ ಕಾರಣವಾಗಿರುವ ಈ ಶತಮಾನದ ಅತ್ಯಂತ ಗಂಭೀರವಾದ ಬಿಕ್ಕಟ್ಟು ಎಂದು ವರ್ಣಿಸಲಾಗುತ್ತಿರುವ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಆರಂಭದಿಂದ ಎಡವಿರುವುದು ಸುಳ್ಳೇನಲ್ಲ. ವೈದ್ಯಕೀಯ ಪರಿಣಿತರು ಮತ್ತು ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದರೂ ಸರಕಾರ ಸೂಕ್ತ ಸಮಯದಲ್ಲಿ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟು ಉಲ್ಬಣಿಸುತ್ತಿರಲಿಲ್ಲ. ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವ ಪ್ರಸಂಗವೂ ಬರುತ್ತಿರಲಿಲ್ಲ. ಈ ಬಗ್ಗೆ ಆಮ್ಲಜನಕ ಹಂಚಿಕೆ ಹಾಗೂ ಇತ್ಯಾದಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

 ಇಷ್ಟೆಲ್ಲ ಆದ ನಂತರ ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ಚುನಾವಣೆ ಪ್ರಚಾರ ಮುಗಿಸಿದ ಪ್ರಧಾನ ಮಂತ್ರಿಯವರು ಜಿಲ್ಲಾಧಿಕಾರಿಗಳ ಜೊತೆ ನೇರ ಸಭೆಗಳನ್ನು ನಡೆಸಿದರು. ಈ ಸಭೆಗಳಲ್ಲಿ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತಾಡಲು ಅವಕಾಶ ನೀಡಲಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಕ್ಷೇಪ ವ್ಯಕ್ತಪಡಿಸಿದರು. ಕೋವಿಡ್ ಪರಿಸ್ಥಿತಿಯನ್ನು ವಿಚಾರಿಸುವುದಕ್ಕಾಗಿ ದೂರವಾಣಿ ಕರೆ ಮಾಡಿದ ಪ್ರಧಾನಿ ತಮ್ಮ ಮನದ ಮಾತನ್ನು ಮಾತ್ರ ಹೇಳಿದರು ನಮ್ಮ ಮಾತನ್ನು ಕೇಳಲಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಅಂತಲೇ ಕೇಂದ್ರ ಸರಕಾರದ ವರ್ತನೆ ನಿರಂಕುಶವಾದುದು ಎಂದು ಸುಪ್ರೀಂ ಕೋರ್ಟ್ ಸರಿಯಾಗಿ ಹೇಳಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. ಸರಕಾರದ ಲೋಪಗಳನ್ನು ಪ್ರಶ್ನಿಸುವುದು ತಪ್ಪಲ್ಲ. ಆದರೆ ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಟೀಕೆಗಳ ಬಗ್ಗೆ ತೀವ್ರ ಅಸಹನೆಯನ್ನು ಹೊಂದಿರುವುದು ಸುಳ್ಳಲ್ಲ. ನಮ್ಮ ದೇಶದ ಮಕ್ಕಳಿಗೆ ಸಿಗಬೇಕಾದ ಲಸಿಕೆಯನ್ನು ವಿದೇಶಗಳಿಗೆ ನೀಡಿದ್ದು ಏಕೆ ಎಂದು ಪ್ರಶ್ನಿಸಿದವರನ್ನೇ ಜೈಲಿಗೆ ಕಳಿಸಿದ ಸರಕಾರದ ನೀತಿಯೇ ಅದು ನಿರಂಕುಶ ಎಂಬುದಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಸಾಮಗ್ರಿಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದ ವಿಷಯದಲ್ಲೂ ಕೇಂದ್ರ ಸರಕಾರ ತಾರತಮ್ಯ ನೀತಿ ಅನುಸರಿಸಿರುವುದು ನ್ಯಾಯಾಲಯದ ಗಮನಕ್ಕೂ ಬಂದಿದೆ. ಕರ್ನಾಟಕ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿದ್ದರೂ ಆಮ್ಲಜನಕ ಮತ್ತು ಇತರ ಸಾಮಗ್ರಿಗಳನ್ನು ಪಡೆಯಲು ಕರ್ನಾಟಕ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂಬುದು ವಿಷಾದದ ಸಂಗತಿಯಾಗಿದೆ.

ಕೇಂದ್ರದ ಬಿಜೆಪಿ ಸರಕಾರ ಭಾರತವನ್ನು ತನ್ನ ಪಾಳೇಗಾರಿಕೆ ಎಂದು ತಿಳಿಯಬಾರದು. ಸಂವಿಧಾನದ ಪ್ರಕಾರ ಭಾರತ ರಾಜ್ಯಗಳ ಒಕ್ಕೂಟ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ ಕೇಂದ್ರ ಸರಕಾರ ನಡೆದುಕೊಳ್ಳಬೇಕು. ಭಾರತ ಎಂಬುದು ಬಹುಭಾಷೆಗಳ, ಸಂಸ್ಕೃತಿ ಗಳ, ಜನ ಸಮುದಾಯಗಳನ್ನು ಒಳಗೊಂಡಿದೆ. ಅದನ್ನು ಕಾಪಾಡಿಕೊಳ್ಳುವ ಹೊಣೆ ಕೇಂದ್ರದ ಮೇಲೆ ಇದೆ. ಕೋವಿಡ್ ಭಯಾನಕ ಸ್ವರೂಪ ತಾಳಿರುವ ಈ ಆತಂಕದ ಸನ್ನಿವೇಶದಲ್ಲಿ ಕೇಂದ್ರ ಸರಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ಕಿವಿ ಹಿಂಡಿ ಹೇಳುವವರೆಗೆ ಕಾಯಬಾರದಿತ್ತು.

ಬಹುಮುಖಿ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಆಹಾರ ಪದ್ಧ್ದತಿಗಳನ್ನು ಮತ್ತು ಅಸ್ಮಿತೆಗಳನ್ನಾಧರಿಸಿ ಪ್ರಾದೇಶಿಕ ಪಕ್ಷಗಳು ಕೆಲ ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಸಹಜ. ಕೇಂದ್ರ ಸರಕಾರ ರಾಜ್ಯಗಳ ಜೊತೆ ಸೌಹಾರ್ದ ಸಂಬಂಧ ಹೊಂದಿರಬೇಕೇ ಹೊರತು ದೊಡ್ಡಣ್ಣನ ನೀತಿಯನ್ನು ಅನುಸರಿಸಬಾರದು. ಅದರಲ್ಲೂ ಕೋವಿಡ್‌ನಂತಹ ವಿಪತ್ತಿನ ಸಂದರ್ಭದಲ್ಲಿ ನಿರಂಕುಶವಾಗಿ ಮತ್ತು ಪಕ್ಷಪಾತದಿಂದ ವರ್ತಿಸುವುದು ಅಮಾನವೀಯ ಮಾತ್ರವಲ್ಲ, ಸಂವಿಧಾನದ ಒಕ್ಕೂಟ ತತ್ವಕ್ಕೆ ಮಾಡುವ ಅಪಚಾರವಾಗಿದೆ. ಒಂದೇ ಪಕ್ಷಕ್ಕೆ ಸೇರಿದ್ದರೂ ಗುಜರಾತ್ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಬಗ್ಗೆ ತೋರುತ್ತಿರುವ ತಾರತಮ್ಯದ ನೀತಿ ಕೇಂದ್ರ ಸರಕಾರಕ್ಕೆ ಶೋಭೆ ತರುವುದಿಲ್ಲ.

ಇನ್ನು ಮುಂದಾದರೂ ಕೇಂದ್ರ ಸರಕಾರ ತನ್ನ ಏಕಪಕ್ಷೀಯ ನಿರಂಕುಶ ನೀತಿಯನ್ನು ಕೈ ಬಿಟ್ಟು ಭಾರತದ ಎಲ್ಲ ರಾಜ್ಯಗಳ ಬಗ್ಗೆ ತಾರತಮ್ಯ ರಹಿತವಾಗಿ ವರ್ತಿಸಲಿ. ಅಲ್ಲದೆ ಸುಪ್ರೀಂ ಕೋರ್ಟ್ ಹೇಳಿದಂತೆ ಲಸಿಕೆ ನೀತಿ ಪಾರದರ್ಶಕವಾಗಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News